ವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆ
ಲಿಂಕ್ ನಕಲಿಸಲಾಗಿದೆ ✓
ದೊಡ್ಡಬಳ್ಳಾಪುರ: ಮನೆಯಿಂದ ಹೊರಹೋದ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ (Missing) ದೊಡ್ಡಬಳ್ಳಾಪುರದ ದಲಿತ ಮುಖಂಡ ಸಿ. ಗುರುರಾಜಪ್ಪ ಅವರು ಧರ್ಮಸ್ಥಳದಲ್ಲಿ (Dharmasthala) ಮೃತಪಟ್ಟಿರುವುದು (Crime) ಬೆಳಕಿಗೆ ಬಂದಿದೆ. ಧರ್ಮಸ್ಥಳದ ಶ್ರೀಮುಡಿ ಭವನದ ಆವರಣದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಗುರುವಾರದಿಂದ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.
ದೊಡ್ಡಬಳ್ಳಾಪುರದ (Doddaballapur) ಕಚೇರಿಪಾಳ್ಯದಲ್ಲಿ ವಾಸವಿದ್ದ ಗುರುರಾಜಪ್ಪ ಅವರು ಛಲವಾದಿ ಮಹಾಸಭಾದ ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಗಳ ಜೊತೆಗೆ ಕನ್ನಡ ಮತ್ತು ಪ್ರಗತಿಪರ ಚಳವಳಿಗಳಲ್ಲಿಯೂ ಗುರುತಿಸಿಕೊಂಡಿದ್ದರು. ಗುರುವಾರ ಬೈಕ್ನಲ್ಲಿ ಮನೆಯಿಂದ ತೆರಳಿದ್ದ ಅವರು ನಂತರ ಕುಟುಂಬದವರ ಸಂಪರ್ಕಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡಿದ್ದ ಮನೆಯವರು ಸೋಮವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲು ತೆರಳಿದ್ದರು.
ಆದರೆ, ಅದೇ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಸುದ್ದಿ ಅವರಿಗೆ ತಲುಪಿದೆ. ಮೃತದೇಹದ ಫೋಟೋವನ್ನು ಪರಿಶೀಲಿಸಿದ ಕುಟುಂಬಸ್ಥರು ಅದು ಗುರುರಾಜಪ್ಪ ಅವರದ್ದೇ ಎಂದು ಗುರುತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರು ಅನಾರೋಗ್ಯದಿಂದ ಅಥವಾ ಬೇರೆ ಯಾವುದಾದರೂ ಕಾರಣದಿಂದ ಮಲಗಿದ್ದ ಜಾಗದಲ್ಲೇ ಮೃತಪಟ್ಟಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿನ ಹಿಂದಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ