ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿ
ಲಿಂಕ್ ನಕಲಿಸಲಾಗಿದೆ ✓
“..ಅಡ್ಡಂಡ ಎಂಬ ದಂಡಪಿಂಡನು ಟಿಪ್ಪು ಸುಲ್ತಾನರ ವಿರುದ್ದ ನಾಟಕ ಮಾಡಲು ಹೋಗಿ ಉರಿಗೌಡ ನಂಜೇಗೌಡ ಪಾತ್ರಗಳನ್ನು ಸೃಷ್ಟಿಸಿ ಬಿಜೆಪಿಯವರನ್ನೇ ನಂಬಿಸಿ ಯಾಮಾರಿಸಿದ್ದು ಜನಜನಿತವಾಗಿದೆ..” ವಿಮರ್ಶಕ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ
ಈ ಅಡ್ಡಂಡ ಕಾರ್ಯಪ್ಪ ಎನ್ನುವ ಸಂಘಿ ಸಂತಾನಿ ರಂಗಭೂಮಿಯನ್ನು ಸನಾತನಿ ಮನುವಾದಿಗಳ ಪರವಾಗಿ ಬಳಸಿಕೊಳ್ಳುತ್ತಲೇ ಬಂದಿದ್ದು ಕನ್ನಡ ರಂಗಭೂಮಿಗೆ ಪೀಡೆಯಾಗಿ ಒಕ್ಕರಿಸಿದ್ದನ್ನು ಸಹಿಸಲಾಗದು.
ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಈ ರಂಗವಿರೋಧಿ ಸಂಘಿಯನ್ನು ರಂಗಾಯಣದ ನಿರ್ದೇಶಕನನ್ನಾಗಿ ಮಾಡಲಾಗಿತ್ತು. ಬಿ.ವಿ.ಕಾರಂತರು ಕಟ್ಟಿ ಬೆಳೆಸಿದ ಮೈಸೂರು ರಂಗಾಯಣವನ್ನು ಕೇಸರಿಕರಣಗೊಳಿಸಿ ಕಳಂಕ ತರುವ ಹುನ್ನಾರವನ್ನು ಮಾಡಿದ್ದು, ಸಮಸ್ತ ರಂಗಭೂಮಿಯವರಿಂದ ಬೈಸಿಕೊಂಡಿದ್ದು ರಂಗ ಇತಿಹಾಸದಲ್ಲಿ ಕರಾಳ ಪುಟವಾಗಿ ದಾಖಲಾಗಿದೆ.
ಈ ಅಡ್ಡಂಡ ಎಂಬ ದಂಡಪಿಂಡನು ಟಿಪ್ಪು ಸುಲ್ತಾನರ ವಿರುದ್ದ ನಾಟಕ ಮಾಡಲು ಹೋಗಿ ಉರಿಗೌಡ ನಂಜೇಗೌಡ ಪಾತ್ರಗಳನ್ನು ಸೃಷ್ಟಿಸಿ ಬಿಜೆಪಿಯವರನ್ನೇ ನಂಬಿಸಿ ಯಾಮಾರಿಸಿದ್ದು ಜನಜನಿತವಾಗಿದೆ. ಈ ಮತಾಂಧನ ಮಾತನ್ನೇ ನಂಬಿದ ಸಿ.ಟಿ.ರವಿ ಎನ್ನುವ ಬಿಜೆಪಿ ಕೋಮುವಾದಿ ನಾಯಕ ಉರೀಗೌಡ ನಂಜೇಗೌಡರ ಸ್ಮರಣೆಯಲ್ಲಿ ಹೆದ್ದಾರಿಯಲ್ಲಿ ಕಮಾನು ಕಟ್ಟಿಸುವುದಾಗಿ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದೂ ಈಗ ಚರಿತ್ರೆ. ಯಾವಾಗ ಒಕ್ಕಲಿಗರ ಮಹಾಸ್ವಾಮಿಗಳಾದ ನಿರ್ಮಾನಂದಸ್ವಾಮಿಯವರು ಗೌಡರನ್ನು ಅವಮಾನಿಸಿದ್ದಕ್ಕೆ ಸಿಟ್ಟಿಗೆದ್ದರೋ ಆಗ ಸಿ.ಟಿ.ರವಿ ತಲೆಮರೆಸಿಕೊಳ್ಳಬೇಕಾಯ್ತು, ಉರಿಗೌಡ ನಂಜೇಗೌಡರ ಪಿತಾಮಹ ಅಡ್ಡಂಡ ಬಾಲ ಮುದುರಿಕೊಂಡು ಅವೆರಡೂ ಕಾಲ್ಪನಿಕ ಪಾತ್ರಗಳು ಎಂದು ಒಪ್ಪಿಕೊಳ್ಳಬೇಕಾಯ್ತು. ಈ ಅಡ್ಡಂಡ ತನ್ನ ಆ ವಿಭಜನಕಾರಿ ಮತಾಂಧ ನಾಟಕವನ್ನು ಪೊಲೀಸರ ರಕ್ಷಣೆಯಲ್ಲಿ ಪ್ರದರ್ಶಿಸುವಂತಾಗಿತ್ತು.
ಈಗ ಮತ್ತೆ ಈ ಕಾರ್ಯಪ್ಪ ತನ್ನ ವಿಷವನ್ನು ಹೊರಹಾಕಲು ಮತ್ತೊಂದು ವಿವಾದಾತ್ಮಕ ನಾಟಕವನ್ನು ರಚಿಸಿ ನಿರ್ದೇಶಿಸುವುದರ ಮೂಲಕ ಕಾರಿಕೊಂಡಿದ್ದು ಮತ್ತೊಂದು ಅನಗತ್ಯ ಆತಂಕಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಟಾರ್ಗೆಟ್ ಮಾಡಿ ನಾಗಾಪುರದ ನಾಗರಗಳನ್ನು ಮೆಚ್ಚಿಸುವ ಹುಚ್ಚುತನ ಪ್ರದರ್ಶಿಸಿದ್ದು ಖಂಡಿತಾ ಅಸಹನೀಯ.
“ಗಾಂಧಿ ಹತ್ಯೆಯ ಸತ್ಯ” ಎನ್ನುವ ಹೆಸರಿನ ನಾಟಕವನ್ನು ರಚಿಸಿ ತನ್ನದೇ ತಂಡಕ್ಕೆ ನಿರ್ದೇಶಿಸಿದ ಈ ವಿಕೃತ ಮನಸ್ಸಿನ ಅಸ್ವಸ್ಥನ ನಾಟಕ ಅಕ್ಟೋಬರ್ 31 ರಂದು ಸುಚಿತ್ರಾ ಅಕಾಡೆಮಿಯ ರಂಗಮಂದಿರದಲ್ಲಿ ಪ್ರದರ್ಶಿಸಲಾಯ್ತು.ಈ ನಾಟಕಕ್ಕೆ ಮೈಸೂರಿನಲ್ಲಿ ಸಂಘ ಪರಿವಾರದ ಅಂಗಾಂಗಗಳಿಗೆ ಟಿಕೇಟ್ ವಿತರಿಸಲಾಗಿತ್ತು.

ಯಾವಾಗ ಈ ನಾಟಕದಲ್ಲಿ ಇತಿಹಾಸವನ್ನು ವಿಕೃತವಾಗಿ ತಿರುಚಿ ಗಾಂಧೀಜಿಯವರನ್ನು ಖಳನಾಯಕನನ್ನಾಗಿ ಚಿತ್ರಿಸಲಾಗಿತ್ತೋ, ಆಗ ಪ್ರೇಕ್ಷಕರಲ್ಲಿ ಕೆಲವರ ಸಹನೆಯ ಕಟ್ಟೆ ಒಡೆಯಿತು, ಈ ನಿರ್ದೇಶಕನ ಮೇಲೆ ಸಿಟ್ಟು ತಾರಕಕ್ಕೇರಿತು. ನಾಟಕ ನಡೆಯುತ್ತಿದ್ದಾಗಲೇ ಅಡ್ಡಂಡನನ್ನು ಹಿಡಿದು ತಂದು ತಳ್ಳಾಡಿ ರಂಗವೇದಿಕೆಯ ಮೇಲೆ ಮುಖಕ್ಕೆ ಮಸಿ ಬಳಿಯಲಾಯ್ತು. ಆತನ ವಿರುದ್ಧ ಘೋಷಣೆ ಕೂಗಲಾಯ್ತು. ಗಾಂಧಿ ವಿರೋಧಿ ನಾಟಕ ಮಾಡಿದ್ದಕ್ಕೆ ಎಚ್ಚರಿಕೆಯನ್ನೂ ಕೊಡಲಾಯ್ತು. ಇದನ್ನೆಲ್ಲಾ ನಿರೀಕ್ಷಿಸದೇ ಇದ್ದ ಕಾರ್ಯಪ್ಪ ಕಕ್ಕಾಬಿಕ್ಕಿಯಾಗಬೇಕಾಯ್ತು. ಈ ಗಲಾಟೆ ಬಿಡಿಸಲು ಪೊಲೀಸರೇ ಬರಬೇಕಾಯ್ತು. ಯಾವಾಗ ಪೊಲೀಸರು ಬಂದರೋ ಆಗ ಈ ಕಾರ್ಯಪ್ಪ ಕೀರು ದ್ವನಿಯಲ್ಲಿ ‘ಕಾಂಗ್ರೆಸ್ ಚೇಲಾಗಳಿಗೆ ದಿಕ್ಕಾರ’ ಅಂತಾ ಕಿರುಚ ತೊಡಗಿತು. ಅಚ್ಚರಿ ಎಂದರೆ ಬಹುತೇಕ ಸಂಘಿ ಮನಸ್ಥಿತಿಯ ಪ್ರೇಕ್ಷಕರಿದ್ದರೂ ಯಾರೂ ಕಾರ್ಯಪ್ಪನ ರಕ್ಷಣೆಗೂ ಬರಲಿಲ್ಲಾ, ಸಮರ್ಥನೆಯನ್ನೂ ಮಾಡಿಕೊಳ್ಳಲಿಲ್ಲ. ಯಾಕೆಂದರೆ ಗಾಂಧೀಜಿಯನ್ನು ಅಷ್ಟು ಸುಲಭಕ್ಕೆ ಸಾಮಾನ್ಯ ಸಂಘಿಗಳೂ ದ್ವೇಷಿಸಲು ಸಾಧ್ಯವಿಲ್ಲ.
ನಾಟಕವೆನೋ ಅರ್ಧಕ್ಕೆ ಅಂತ್ಯವಾಯ್ತು. ಆದರೆ ಅಡ್ಡಂಡನ ಒಳಗಿದ್ದ ನಾಗಾಪುರದ ವಿಷನಾಗ ಬುಸುಗುಡತೊಡಗಿತು. ಮಸಿ ಬಳೆದವರ ವಿರುದ್ದವೇ ಪೊಲೀಸ್ ಸ್ಟೇಶನ್ನಿನಲ್ಲಿ ದೂರು ಕೊಟ್ಟಾಯಿತು. ಆದರೆ ಹಾರ್ಡಕೋರ್ ಸಂಘಿಗಳನ್ನು ಹೊರತು ಪಡಿಸಿ ಇಡೀ ದೇಶವೇ ಅರಾಧಿಸಿ ಗೌರವಿಸುವ ಮಹಾತ್ಮಾ ಗಾಂಧಿಯವರ ವಿರುದ್ದ ನಾಟಕ ಮಾಡಿ ಗಾಂಧಿಯವರ ಅಭಿಮಾನಿ ಹಾಗೂ ಅನುಯಾಯಿಗಳ ಭಾವನೆಗಳಿಗೆ ದಕ್ಕೆ ತಂದಿರುವುದಕ್ಕೆ ಮೊದಲು ಈ ಅಡ್ಡಂಡನ ವಿರುದ್ದ ಪೊಲೀಸ್ ದೂರು ದಾಖಲಿಸಿ ಬಂಧಿಸಬೇಕಾಗಿದೆ. ಗಾಂಧಿ ಇಲ್ಲದೇ ಇದ್ದಿದ್ದರೆ ಬ್ರಿಟೀಷರ ಬೂಟು ನೆಕ್ಕುತ್ತಾ ದೇಶದ್ರೋಹದ ಕೆಲಸ ಮಾಡುತ್ತಿದ್ದ ಈ ಸಂಘಿ ಸಂತಾನಗಳು ಇನ್ನೂ ಬ್ರಿಟೀಷರ ಗುಲಾಮಗಿರಿಯಲ್ಲೇ ಬದುಕುತ್ತಿದ್ದರು.
ಇದೆಲ್ಲವನ್ನೂ ಮರೆತಿರುವ ಈ ಅಡ್ಡಂಡ ಎನ್ನುವ ರಂಗಪೀಡೆ ತನ್ನದು ಸಂವಿಧಾನದ ಕಲಂ 19 ರ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದೆ. ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯ ನಾಯಕತ್ವ ವಹಿಸಿಕೊಳ್ಳದೇ ಇದ್ದರೆ, ಅಂಬೇಡ್ಕರ್ ರವರಿಗೆ ಸಂವಿಧಾನ ಬರೆಯಲು ಅನುವು ಮಾಡಿ ಕೊಡದಿದ್ದರೆ, ಈ ಅಡ್ಡಂಡನಂತಹ ಅಡ್ನಾಡಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳಿಕೊಳ್ಳಲೂ ಆಗುತ್ತಿರಲಿಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವ ಅದೇ ಸಂವಿಧಾನದಲ್ಲಿ ಮತ್ತೊಬ್ಬರ ಭಾವನೆಗಳಿಗೆ ದಕ್ಕೆ ತರುವಂತಹ ನಿಂದನೆ ಮಾಡುವುದನ್ನು ನಿಷೇಧಿಸುವ ವಿಧಿಯನ್ನೂ ವಿಧಿಸಿರುವುದು ಕೋಮುವಾದಿ ಕಾರ್ಯಪ್ಪನಂತವರಿಗೆ ಅರ್ಥವಾಗದ ಸತ್ಯ.
ಏನೇ ಆದರೂ ನಡೆಯುತ್ತಿದ್ದ ನಾಟಕವನ್ನು ಅರ್ಧಕ್ಕೆ ನಿಲ್ಲಿಸುವುದಾಗಲೀ ಇಲ್ಲವೇ ರಂಗವೇದಿಕೆಯ ಮೇಲೆ ನಿರ್ದೇಶಕನ ಮುಖಕ್ಕೆ ಮಸಿ ಬಳಿದು ಹಲ್ಲೆ ಮಾಡುವುದಾಗಲೀ ಖಂಡಿತಾ ಸಮರ್ಥನೀಯವಲ್ಲ. ಅಹಿಂಸಾವಾದಿಯಾಗಿದ್ದ ಗಾಂಧೀಜಿಯವರ ಅಭಿಮಾನಿಗಳು ಹೀಗೆ ಕೆರಳಿ ಹಿಂಸೆಗಿಳಿಯುವುದನ್ನು ಸಮರ್ಥಿಸುವುದೂ ಸರಿಯಲ್ಲ. ಭಾವನೆಗಳಿಗೆ ದಕ್ಕೆಯಾಗಿದ್ದರೆ ಪ್ರತಿಭಟಿಸುವ ಹಕ್ಕು ಇದ್ದೇ ಇದೆ. ಆದರೆ ಅದು ಅಹಿಂಸಾತ್ಮಕವಾಗಿರಬೇಕು. ನಾಟಕದ ಬಗ್ಗೆ ತೀವ್ರ ಭಿನ್ನಾಭಿಪ್ರಾಯವಿದ್ದರೆ ಪ್ರದರ್ಶನ ಮುಗಿದ ಮೇಲೆ ತಮ್ಮ ಪ್ರತಿರೋಧವನ್ನು ಹೇಳಬಹುದಾಗಿತ್ತು. ನಾಟಕದಲ್ಲಿ ಹೇಳಲಾದ ತಿರುಚಲ್ಪಟ್ಟ ಸನ್ನಿವೇಶಗಳಿಗೆ ಐತಿಹಾಸಿಕ ಸಾಕ್ಷಿ ಪುರಾವೆ ಕೇಳಬಹುದಾಗಿತ್ತು. ನಾಟಕ ನಡೆಯುವ ಮುನ್ನ ಇಲ್ಲವೇ ನಂತರ ರಂಗಮಂದಿರದ ಮುಂದೆ ಹಿಂಸಾತ್ಮಕವಲ್ಲದ ರೀತಿಯಲ್ಲಿ ಧರಣಿ ಸತ್ಯಾಗ್ರಹ ಮಾಡಬಹುದಾಗಿತ್ತು. ಇಂತಹ ಗಾಂಧಿ ವಿರೋಧಿ ನಾಟಕ ಪ್ರದರ್ಶಿಸಲು ಹೇಗೆ ಅನುಮತಿ ಕೊಟ್ಟಿದ್ದೀರಿ ಎಂದು ರಂಗಮಂದಿರದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಳ್ಳಬಹುದಾಗಿತ್ತು. ಇಲ್ಲವೇ ಭಾವನೆಗೆ ದಕ್ಕೆ ಎಂದು ಪೊಲೀಸ್ ಕಂಪ್ಲೇಂಟ್ ಕೊಡಬಹುದಾಗಿತ್ತು. ಆದರೆ ಗಾಂಧೀ ಹೇಳಿಕೊಟ್ಟ ಅಹಿಂಸಾತ್ಮಕ ಪ್ರತಿಭಟನೆಯ ದಾರಿಯನ್ನು ಬಿಟ್ಟು, ಗಾಂಧೀಜಿ ಸಮರ್ಥನೆಗಾಗಿ ಹಿಂಸಾತ್ಮಕ ಮಾರ್ಗವನ್ನು ಗಾಂಧಿ ಅಭಿಮಾನಿಗಳು ಅನುಸರಿಸಿದ್ದು ಖಂಡಿತಾ ಅನುಕರಣೀಯವಲ್ಲ.
ಅಡ್ಡಂಡ ಕಾರ್ಯಪ್ಪನಂತಹ ವಿಕ್ಷಿಪ್ತ ವ್ಯಕ್ತಿಗೆ ಇಂತಹುದೇ ಗಲಾಟೆ ಬೇಕಾಗಿತ್ತು. ನಾಗಾಪುರದ ಸಂಘಿಗಳನ್ನು ಮೆಚ್ಚಿಸಲು ಗಾಂಧಿ ವಿರೋಧಿತನ ತೋರಿ ಪ್ರಚಾರ ಗಿಟ್ಟಿಸಲು ಇದೆಲ್ಲಾ ಕಾರ್ಯಪ್ಪನ ತಂತ್ರಗಾರಿಕೆಯಾಗಿತ್ತು. ಈಗ ಅಡ್ಡಂಡ ಮತ್ತೆರಡು ದಿನ ಅದೇ ನಾಟಕವನ್ನು ಅದೇ ರಂಗಮಂದಿರದಲ್ಲಿ ಪ್ರದರ್ಶಿಸಲು ಮುಂದಾಗಿದ್ದು, ಅದರಿಂದ ಹೆಚ್ಚು ಪ್ರಚಾರ ಪಡೆಯಲು ಬಯಸಿದ್ದು ಅವರ ಹಿಡನ್ ಅಜೆಂಡಾ ಆಗಿದೆ.
ಈ ಹಿಂದೆ ಟಿಪ್ಪು ನಾಟಕ ನಿರ್ದೇಶಿಸಿ ಉರಿಗೌಡ ನಂಜೇಗೌಡ ಪಾತ್ರಗಳನ್ನು ಟಿಪ್ಪು ಕೊಂದವರು ಎಂಬ ರೀತಿಯಲ್ಲಿ ಬಿಂಬಿಸಿದ ಇದೇ ಅಡ್ಡಂಡ ಬಿಜೆಪಿ ನಾಯಕರ ಕಣ್ಮಣಿ ಆಗಿ ಹೊರಹೊಮ್ಮಿದ್ದ. ಆದರೆ ಐತಿಹಾಸಿಕ ನಾಟಕದಲ್ಲಿ ಕಾಲ್ಪನಿಕ ಹುಸಿ ಪಾತ್ರಗಳ ಸೃಷ್ಟಿಯನ್ನು ಸತ್ಯವೆಂದು ನಂಬಿ ಸಮರ್ಥಿಸಿಕೊಂಡಿದ್ದ ಬಿಜೆಪಿ ಪಡೆಗೆ ಮುಖಭಂಗವಾಗಿತ್ತು. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಈ ಕಾರ್ಯಪ್ಪನನ್ನು ದೂರವೇ ಇಟ್ಟಿದ್ದರು. ಆದರೆ ಈಗ ಆರೆಸ್ಸೆಸ್ ನಾಯಕರನ್ನು ಮೆಚ್ಚಿಸಲು ಸಂಘಿಗಳು ವಿರೋಧಿಸುವ ಗಾಂಧಿಯವರನ್ನು ಖಳನಾಯಕನನ್ನಾಗಿಸುವ ನಾಟಕ ಪ್ರದರ್ಶಿಸುವ ಮೂಲಕ ಆರೆಸ್ಸೆಸ್ ನಾಯಕರ ಒಲವು ಗಳಿಸುವ ಪ್ರಯತ್ನವನ್ನು ಅಡ್ಡಂಡ ಮಾಡಿದ್ದಾರೆ.
ತನ್ನ ಸ್ವಾರ್ಥಕ್ಕೆ ಈ ಕಾರ್ಯಪ್ಪ ರಂಗಭೂಮಿಯನ್ನು ಬಳಸಿಕೊಂಡಿದ್ದು ಖಂಡಿತಾ ಖಂಡನಾರ್ಹ. ಬೇಕಾದರೆ ಆರೆಸ್ಸೆಸ್ ಶಾಖೆಗೆ ಸೇರಿಕೊಂಡು ಖಾಕಿ ಚೆಡ್ಡಿ ಹಾಕಿಕೊಂಡು ದೊಣ್ಣೆ ಹಿಡಿದು ಪತಸಂಚಲನ ಮಾಡಲಿ ಬೇಡ ಎನ್ನುವವರು ಯಾರು? ಆದರೆ ಯಾವಾಗ ತನ್ನ ಮತಾಂಧತೆ ಹಾಗೂ ಕೋಮುವ್ಯಾಧಿಯನ್ನು ರಂಗದಂಗಳದಲ್ಲಿ ಕಾರ್ಯಪ್ಪ ಕಾರಿಕೊಂಡನೋ ಆಗ ಅದು ರಂಗಭೂಮಿಗೆ ಮಾಡಿದ ಅವಮಾನವಾಗಿದೆ.
ಇದೇ ನಾಟಕದ ಮರು ಪ್ರದರ್ಶನವನ್ನು ನವೆಂಬರ್ 1 ರಂದು ಪೋಲೀಸ್ ಸೆಕ್ಯುರಿಟಿಯಲ್ಲಿ ನಡೆಸಲಾಯ್ತು. ಪೊಲೀಸರು ರಿಸರ್ವ್ ಪೋಲೀಸರನ್ನೇ ಕರೆಸಬೇಕಾಯ್ತು. ಮೂರು ವ್ಯಾನಗಳ 200 ಕ್ಕೂ ಹೆಚ್ಚು ಅಂದರೆ ನೂರು ಪ್ರೇಕ್ಷಕರ ಕುರ್ಚಿಗಳಿರುವ ಸಭಾಂಗಣಕ್ಕಿಂತಲೂ ದುಪ್ಪಟ್ಟು ಪೊಲೀಸರ ಕಣ್ಗಾವಲಿನಲ್ಲಿ ನಾಟಕ ಮಾಡಿಸಬೇಕಾಯ್ತು. ನಾಟಕವೊಂದಕ್ಕೆ ಇಂತಹ ಪರಿಸ್ಥಿತಿ ಬೇಕಾಗಿತ್ತಾ? ಎಲ್ಲರೂ ಮೆಚ್ಚುವ ಗಾಂಧಿಯವರನ್ನು ದೇಶದ್ರೋಹಿ ಎಂದು ಬಿಂಬಿಸುವ ದುಸ್ಸಾಹಸ ಮಾಡುವ ಅಗತ್ಯವಿತ್ತಾ? ರಂಗಮಂದಿರವನ್ನು ರಣರಂಗವಾಗುವಂತೆ ಪ್ರೇರೇಪಣೆ ಕೊಡುವ ದುಷ್ಕೃತ್ಯದ ಸಂಘಿ ಸಿದ್ದಾಂತದ ನಾಟಕವೇ ಬೇಕಿತ್ತಾ? ಹಿಂದುತ್ವದ ರಣಕಹಳೆ ಊದಲು ನಾಟಕವೇ ಆಗಬೇಕಿತ್ತಾ? ಗಾಂಧಿ ಎನ್ನುವ ಸೂರ್ಯನಿಗೆ ಈ ನರಿಗಳು ಉಗಿದರೆ ಆ ಉಗುಳು ಅವುಗಳ ಮುಖಕ್ಕೆ ಬಿದ್ದು ಅವಮಾನ ಅಸಹ್ಯಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವ ಕನಿಷ್ಟ ಪ್ರಜ್ಞೆಯು ಅಡ್ಡಂಡನಂತಹ ಕೋಮು ಕ್ರಿಮಿಗೆ ಇರಲಿಲ್ವಾ?

ಕನ್ನಡ ರಂಗಭೂಮಿಯಲ್ಲೂ ಹಿಂದುತ್ವದ ಪರ ಒಲವಿರುವ ರಂಗಕರ್ಮಿಗಳಿದ್ದಾರೆ. ನಾಗಾಭರಣ, ಸೇತುರಾಂ, ರಾಜಾರಾಂ ಮುಂತಾದವರು ಆ ಪಟ್ಟಿಯಲ್ಲಿದ್ದಾರೆ. ಆದರೆ ಇವರು ಯಾರೂ ನೇರವಾಗಿ ಸಂಘಿ ಹಿಂದುತ್ವ, ಮತಾಂಧತೆಯನ್ನು ನಾಟಕದ ಮೂಲಕ ಪ್ರಚಾರ ಮಾಡಿದ್ದೇ ಇಲ್ಲ. ಆದರೆ ಈ ಅಡ್ಡಂಡ ಮಾತ್ರ ಹಾರ್ಡಕೋರ್ ಸಂಘಿ ಮತಾಂಧನಾಗಿದ್ದು ರಂಗಮಾಧ್ಯಮವನ್ನು ಸಂಘಿ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾನೆ. ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಪೋಸ್ಟರಿನ ಕೊನೆಯಲ್ಲಿ ‘ಇದು ಹಿಂದುತ್ವದ ರಣಕಹಳೆ’ ಎಂದು ಮುದ್ರಿಸಿ ತನ್ನ ವೈದಿಕಶಾಹಿ ಹಿಂದುತ್ವದ ಮುಖವನ್ನು ಅನಾವರಣಗೊಳಿಸಿದ್ದು ರಂಗಭೂಮಿಯ ಮೂಲ ಆಶಯಕ್ಕೆ ಮಾರಕವಾಗಿದೆ.
ರಂಗಭೂಮಿ ಎನ್ನುವುದು ಮೊದಲಿನಿಂದಲೂ ಪ್ರತಿಭಟನಾತ್ಮಕ ಮಾಧ್ಯಮವಾಗಿದೆ. ಸಮಾಜದ ನ್ಯೂನ್ಯತೆಗಳನ್ನು ರಂಗದ ಮೇಲೆ ತೋರಿಸಿ ಪ್ರೇಕ್ಷಕರ ಮನಪರಿವರ್ತನೆ ಮಾಡುವ ಸಾಧನವಾಗಿದೆ. ಆದರೆ ಯಾವಾಗ ಅಂತಹ ಜನಪರ, ಜೀವಪರ ಮಾಧ್ಯಮವನ್ನು ಸಮಾಜ ವಿಭಜಿಸಲು, ಮತಾಂಧತೆಯ ದ್ವೇಷದ ಬೀಜಗಳನ್ನು ಬಿತ್ತಲು, ಜನರ ಭಾವನೆಗಳನ್ನು ಛಿದ್ರಮಾಡಲು, ಅಸಹನೆಯನ್ನು ಹುಟ್ಟುಹಾಕಲು, ಸಮಾಜಸುಧಾರಕರನ್ನು ಹೀಯಾಳಿಸಲು ಬಳಸಿಕೊಳ್ಳಲಾಗುತ್ತದೋ ಅದು ರಂಗದ್ರೋಹದ ಕೃತ್ಯವಾಗುತ್ತದೆ. ಇಂತಹ ರಂಗದ್ರೋಹಿ ಅಡ್ಡಂಡ ಕಾರ್ಯಪ್ಪನಂತಹ ವಿಕ್ಷಿಪ್ತ ವ್ಯಕ್ತಿಯನ್ನು ಇಡೀ ಕನ್ನಡ ರಂಗಭೂಮಿ ವಿರೋಧಿಸಬೇಕಿದೆ. ಇಂತಹ ರಂಗದ್ರೋಹಿಯ ನಾಟಕಗಳನ್ನು ಭಹಿಷ್ಕರಿಸಬೇಕಿದೆ. ಇಂತಹ ಅಪಸವ್ಯದ ನಾಟಕ ಪ್ರದರ್ಶನಕ್ಕೆ ರಂಗಮಂದಿರಗಳೇ ಸಿಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಗಾಂಧಿ ವಿರುದ್ದ ನಾಟಕ ಮಾಡಿದ ಈ ನೀಚ ಮುಂದೆ ಬುದ್ದ ಬಸವಾದಿ ಸಮಾಜ ಸುಧಾರಕರ ವಿರುದ್ದವೂ ರಂಗಭೂಮಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ರಂಗಭೂಮಿ ಸದಾ ಸಮಾಜ ವಿರೋಧಿತನಗಳ ವಿರುದ್ದದ ದ್ವನಿಯಾಗಬೇಕೇ ಹೊರತು ಸಮಾಜ ಸುಧಾರಕರ ಚಾರಿತ್ರ್ಯ ಹರಣ ಮಾಡುವ ಅನೈತಿಕ ಮಾರ್ಗವಾಗಬಾರದು.
Peepal Media Desk
Peepal Media · ಅಂಕಣ ವಿಭಾಗ