SIR ರದ್ದುಪಡಿಸಿ, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಲಿ: ಇಂಡಿಯಾ ಕೂಟ ಆಗ್ರಹ
ಲಿಂಕ್ ನಕಲಿಸಲಾಗಿದೆ ✓
ಮತದಾರರ ಪಟ್ಟಿಯಿಂದ ಕೋಟ್ಯಂತರ ಅರ್ಹರ ಹೆಸರು ಕೈಬಿಟ್ಟ ಆರೋಪ; ಬೆಂಗಳೂರಿನಲ್ಲಿ ‘ಮತ ಉಳಿಸಿ, ದೇಶ ಉಳಿಸಿ’ ಬೃಹತ್ ಪ್ರತಿಭಟನೆ
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಂಡಿಯಾ ಕೂಟದ ವತಿಯಿಂದ ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
‘ಮತ ಉಳಿಸಿ, ದೇಶ ಉಳಿಸಿ’ ಘೋಷವಾಕ್ಯದಡಿ ನಡೆದ ಸಮಾವೇಶದಲ್ಲಿ SIR ಪ್ರಕ್ರಿಯೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಪಕ್ಷಗಳ ನಾಯಕರು ಹಾಗೂ ಸಂಘಟನೆಗಳ ಪ್ರತಿನಿಧಿಗಳು, ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಯಾವುದೇ ಕ್ರಮ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು. ಸಮಾವೇಶದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಮತದಾರರ ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ದೇಶಾದ್ಯಂತ ಕೋಟ್ಯಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿತ್ತು. ನಿರ್ಣಯದ ಪ್ರಕಾರ, ಕರ್ನಾಟಕದಲ್ಲಿ SIR ಪ್ರಕ್ರಿಯೆಗೂ ಮುನ್ನ 5.54 ಕೋಟಿ ಮತದಾರರಿದ್ದರೆ, ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ ಸುಮಾರು 4.5 ಕೋಟಿಗೆ ಇಳಿದಿದೆ. ರಾಜ್ಯದಲ್ಲಿ ಸುಮಾರು 99.32 ಲಕ್ಷ ಮತದಾರರ ಹೆಸರುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಮೃತಪಟ್ಟವರು ಮತ್ತು ನಕಲಿ ಮತದಾರರನ್ನು ಹೊರತುಪಡಿಸಿದ ಬಳಿಕವೂ ಸುಮಾರು 76 ಲಕ್ಷ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ 5.19 ಕೋಟಿಯಷ್ಟಿದೆ. ಇಷ್ಟೊಂದು ಅರ್ಹ ವಯಸ್ಕರಿರುವ ರಾಜ್ಯದಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಕುಸಿದಿರುವುದು SIR ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಇಂಡಿಯಾ ಕೂಟ ಆಕ್ಷೇಪಿಸಿದೆ.
ಬೆಂಗಳೂರಿನಲ್ಲಿ 45 ಲಕ್ಷ ಮತದಾರರ ಹೆಸರು ನಾಪತ್ತೆ
ರಾಜಧಾನಿ ಬೆಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿನ ಕಡಿತ ಆತಂಕಕಾರಿ ಪ್ರಮಾಣದಲ್ಲಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಈ ಹಿಂದೆ ಸುಮಾರು 1.04 ಕೋಟಿ ಮತದಾರರಿದ್ದ ಬೆಂಗಳೂರಿನಲ್ಲಿ ಪರಿಷ್ಕರಣೆಯ ನಂತರ ಕೇವಲ 59.08 ಲಕ್ಷ ಹೆಸರುಗಳು ಉಳಿದಿವೆ. ಅಂದರೆ ಸುಮಾರು 45 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿವೆ.
ಉದ್ಯೋಗ, ಬದುಕು ಮತ್ತು ಜೀವನೋಪಾಯಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಜನರು ನಿರಂತರವಾಗಿ ಬೆಂಗಳೂರಿಗೆ ವಲಸೆ ಬಂದು ನೆಲೆಸುತ್ತಿದ್ದಾರೆ. ಇಂತಹ ನಗರದಲ್ಲಿ ಮತದಾರರ ಸಂಖ್ಯೆ ಸಹಜವಾಗಿ ಹೆಚ್ಚಾಗಬೇಕೇ ಹೊರತು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಬಾರದು. ವಲಸಿಗರು ಮತ್ತು ಸ್ಥಳಾಂತರಗೊಂಡವರ ಹೆಸರನ್ನು ತೆಗೆದುಹಾಕುವ ಬದಲು ಅವರ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕಿತ್ತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಫಾರಂ 6, 7 ದುರ್ಬಳಕೆಯ ಆರೋಪ
ವಾಸಸ್ಥಳ ಬದಲಿಸಿದ ಮತದಾರರಿಗೆ ನಿಯಮಾನುಸಾರ ಫಾರಂ 8 ಮೂಲಕ ವಿಳಾಸ ಬದಲಾವಣೆಗೆ ಅವಕಾಶ ನೀಡುವ ಬದಲು, ಅವರ ಹೆಸರುಗಳನ್ನು ಪಟ್ಟಿಯಿಂದಲೇ ತೆಗೆದುಹಾಕಿ ಪುನಃ ಫಾರಂ 6 ಸಲ್ಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬುದು ನಿರ್ಣಯದ ಮತ್ತೊಂದು ಪ್ರಮುಖ ಆರೋಪವಾಗಿದೆ.
ಅಲ್ಲದೆ, ಚುನಾವಣಾ ನಿಯಮಗಳಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸದ ‘ತಾರ್ಕಿಕ ವ್ಯತ್ಯಾಸ’ (Logical Discrepancies) ಎಂಬ ಮಾನದಂಡವನ್ನು ಮುಂದಿಟ್ಟುಕೊಂಡು ದೊಡ್ಡ ಸಂಖ್ಯೆಯ ಮತದಾರರನ್ನು ಅನಗತ್ಯ ಗೊಂದಲಕ್ಕೆ ಸಿಲುಕಿಸಲಾಗಿದೆ ಎಂದು ಟೀಕಿಸಲಾಗಿದೆ.
ಮತದಾರರ ಹೆಸರುಗಳನ್ನು ಅಳಿಸಲು ಬಳಸುವ ಫಾರಂ 7 ಅನ್ನು ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಸಲ್ಲಿಸಿ ದುರ್ಬಳಕೆ ಮಾಡಿಕೊಂಡಿರುವ ಘಟನೆಗಳು ಕರ್ನಾಟಕದಲ್ಲಿ ಬೆಳಕಿಗೆ ಬಂದಿವೆ. ಪಶ್ಚಿಮ ಬಂಗಾಳದಲ್ಲಿಯೂ ಸುಮಾರು 16 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಫಾರಂ 7 ಬಳಸಿ ಕೈಬಿಡಲಾಗಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ. ಇಂತಹ ಅರ್ಜಿಗಳ ಪರಿಶೀಲನೆ, ಅವುಗಳ ಹಿಂದಿರುವವರ ವಿರುದ್ಧ ಕ್ರಮ ಹಾಗೂ ಮತದಾರರ ಹಕ್ಕುಗಳ ರಕ್ಷಣೆಯಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ.
ನುಸುಳುಕೋರರ ಹೆಸರಿನಲ್ಲಿ ಮತದಾರರ ಹಕ್ಕಿಗೆ ಕತ್ತರಿ
ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಉದ್ದೇಶದಿಂದ SIR ನಡೆಸಲಾಗುತ್ತಿದೆ ಎಂಬ ಸಮರ್ಥನೆಯನ್ನೂ ಇಂಡಿಯಾ ಕೂಟ ಪ್ರಶ್ನಿಸಿದೆ. ಕರ್ನಾಟಕದಲ್ಲಿ ಪರಿಷ್ಕರಣೆಯ ವೇಳೆ ಪತ್ತೆಯಾದ ವಿದೇಶಿ ಪ್ರಜೆಗಳ ಸಂಖ್ಯೆ 1,000ಕ್ಕಿಂತ ಕಡಿಮೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ 588 ಮಂದಿ ನೇಪಾಳದ ಪ್ರಜೆಗಳಾಗಿದ್ದು, ಉಳಿದವರಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಯುರೋಪ್, ಶ್ರೀಲಂಕಾ, ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳಿದ್ದಾರೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪ್ರಜೆಗಳೆಂದು ಗುರುತಿಸಲಾದವರು ಕೇವಲ ಇಬ್ಬರು ಎಂಬ ಅಂಕಿಅಂಶವನ್ನು ಮುಂದಿಟ್ಟುಕೊಂಡು, ಅಕ್ರಮ ನುಸುಳುಕೋರರ ಪತ್ತೆಯ ಹೆಸರಿನಲ್ಲಿ ಕೈಗೊಂಡಿರುವ ಬೃಹತ್ ಪ್ರಮಾಣದ ಪರಿಷ್ಕರಣೆಯ ಉದ್ದೇಶವೇನು ಎಂದು ಪ್ರಶ್ನಿಸಲಾಗಿದೆ.
ದೇಶದಲ್ಲಿ ಮೂರು ಕೋಟಿ ಬಾಂಗ್ಲಾದೇಶಿ ಪ್ರಜೆಗಳಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೂ ಚುನಾವಣಾ ಆಯೋಗದ ಅಂಕಿಅಂಶಗಳಿಗೂ ಹೊಂದಾಣಿಕೆ ಇಲ್ಲ ಎಂದು ನಿರ್ಣಯದಲ್ಲಿ ಟೀಕಿಸಲಾಗಿದೆ. ಅಕ್ರಮ ವಲಸಿಗರ ಪತ್ತೆಗಿಂತಲೂ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ಸಂವಿಧಾನದ 326ನೇ ವಿಧಿಯ ಆಶಯಕ್ಕೆ ಧಕ್ಕೆ
ಭಾರತೀಯ ಸಂವಿಧಾನದ 326ನೇ ವಿಧಿಯು ವಯಸ್ಕ ನಾಗರಿಕರಿಗೆ ಸಾರ್ವತ್ರಿಕ ಮತದಾನದ ಹಕ್ಕನ್ನು ಖಾತರಿಪಡಿಸಿದೆ. ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ರಾಜಕೀಯ ಸಮಾನತೆಯನ್ನು ಒದಗಿಸಿರುವುದು ಈ ಹಕ್ಕಿನ ಮಹತ್ವವಾಗಿದೆ.
ದೀರ್ಘ ಹೋರಾಟಗಳ ಫಲವಾಗಿ ದೊರೆತಿರುವ ಮತದಾನದ ಹಕ್ಕನ್ನು ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲಕ ಕಸಿದುಕೊಳ್ಳಲು ಅವಕಾಶ ನೀಡಬಾರದು. ಮತದಾರರ ಪಟ್ಟಿಯ ಪರಿಷ್ಕರಣೆ ಜನರ ಹಕ್ಕುಗಳನ್ನು ರಕ್ಷಿಸುವ ಸಾಧನವಾಗಬೇಕೇ ಹೊರತು ಅವರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿಡುವ ಅಸ್ತ್ರವಾಗಬಾರದು ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.
ಐದು ಪ್ರಮುಖ ಬೇಡಿಕೆಗಳು
ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ.
- ಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಲಾದ SIR ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು.
- ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
- ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತುತ ಕಾನೂನನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ ಸೂಚನೆಯಂತೆ ನೇಮಕಾತಿ ಪ್ರಕ್ರಿಯೆಯ ಸ್ವಾಯತ್ತತೆಯನ್ನು ಖಾತರಿಪಡಿಸಬೇಕು.
- ಕರ್ನಾಟಕ ಸರ್ಕಾರವು SIR ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಬೇಕು.
- ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು SIR ಪೂರ್ವದ 2025ರ ಮತದಾರರ ಪಟ್ಟಿಯ ಆಧಾರದ ಮೇಲೆ ನಡೆಸಲು ಕ್ರಮ ಕೈಗೊಳ್ಳಬೇಕು.
ಈ ಬೇಡಿಕೆಗಳನ್ನು ರಾಜ್ಯಾದ್ಯಂತ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸುವಂತೆಯೂ ಸಮಾವೇಶ ಕರೆ ನೀಡಿದೆ. ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸುವ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ನಿರ್ಣಯದಲ್ಲಿ ವ್ಯಕ್ತಪಡಿಸಲಾಗಿದೆ.
Peepal Media Desk
Peepal Media · ರಾಜಕೀಯ ವಿಭಾಗ