ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ದೇಶಗಳ ಸರಕು ಹಡಗುಗಳ ಸಂಚಾರಕ್ಕೆ – ಇರಾನ್ ನಿಂದ ಮುಕ್ತ ಅವಕಾಶ
ಲಿಂಕ್ ನಕಲಿಸಲಾಗಿದೆ ✓
ಟೆಹ್ರಾನ್/ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳಿಂದ ಇರಾನ್ ವಿನಾಯಿತಿ ನೀಡಿದೆ. ಭಾರತ ಮಾತ್ರವಲ್ಲದೆ ಇರಾಕ್, ಕತಾರ್ ಮತ್ತು ಚೀನಾ ದೇಶಗಳ ಹಡಗುಗಳಿಗೂ ಇರಾನ್ ಹಾದಿ ಮುಕ್ತಗೊಳಿಸಿದೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್ ಮೊಖದ್ದಮ್ ಅವರು ‘ಇರಾನಿಯನ್ ಸ್ಟೂಡೆಂಟ್ಸ್ ನ್ಯೂಸ್ ಏಜೆನ್ಸಿ’ಗೆ ನೀಡಿದ ಸಂದರ್ಶನದಲ್ಲಿ ಈ ವಿನಾಯಿತಿಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. “ನಾವು ಪ್ರಸ್ತುತ ಭಾರತ, ಚೀನಾ, ಇರಾಕ್ ಮತ್ತು ಕತಾರ್ ದೇಶಗಳಿಗೆ ಹೋರ್ಮುಜ್ ಜಲಸಂಧಿಯಲ್ಲಿನ ಸಂಚಾರ ನಿರ್ಬಂಧಗಳಿಂದ ವಿನಾಯಿತಿ ನೀಡಿದ್ದೇವೆ. ಈ ದೇಶಗಳ ಹಡಗುಗಳು ಮುಕ್ತವಾಗಿ ಸಂಚರಿಸಬಹುದು ಮತ್ತು ಅಮೆರಿಕದವರು ಕೂಡ ಇವುಗಳನ್ನು ತಡೆಯುವುದಿಲ್ಲ” ಎಂದು ಅವರು ಸಂದರ್ಶನದಲ್ಲಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ನಿಂದ ಯಾಕೆ ಈ ನಿರ್ಧಾರ?
ಇತರ ದೇಶಗಳ ಹಡಗುಗಳ ಮೇಲಿನ ನಿರ್ಬಂಧಗಳು ಮುಂದುವರಿದಿದ್ದರೂ, ಆಯ್ದ ದೇಶಗಳೊಂದಿಗೆ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇರಾನ್, ಹಾರ್ಮುಜ್ ಜಲಸಂಧಿಯ ಪ್ರವೇಶಾವಕಾಶವನ್ನು ಒಂದು ಸಾಧನವಾಗಿ (leverage) ಬಳಸಿಕೊಳ್ಳುತ್ತಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಟೆಹ್ರಾನ್ಗೆ ಅಗತ್ಯವಿರುವ ಬಹುತೇಕ ಔಷಧಗಳು ಇದೇ ಹಾದಿಯ ಮೂಲಕ ಬರಬೇಕಿದೆ.
ಪ್ರಸ್ತುತ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಂದಾಗಿ ಅದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಔಷಧಿಯನ್ನು ಆಮದು ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಔಷಧ ತಯಾರಿಕಾ ರಫ್ತುದಾರ ದೇಶವಾಗಿರುವುದರಿಂದ, ಭಾರತದಿಂದ ಅತ್ಯಗತ್ಯ ವೈದ್ಯಕೀಯ ಸಾಮಗ್ರಿ ಹಾಗೂ ಔಷಧಿಗಳ ಪೂರೈಕೆಯನ್ನು ಸುಗಮಗೊಳಿಸಲು ಭಾರತೀಯ ಹಡಗುಗಳಿಗೆ ಈ ವಿನಾಯಿತಿ ನೀಡಲಾಗಿದೆ. ಇದೇ ವೇಳೆ, ಚೀನಾದ ವಿಷಯದಲ್ಲಿ ಈ ನಿರ್ಧಾರವು ಹೆಚ್ಚು ರಾಜಕೀಯ ಸ್ವರೂಪದ್ದಾಗಿದೆ ಎಂದು ತೋರುತ್ತದೆ. ಬೀಜಿಂಗ್ನ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ವಿನಾಯಿತಿ ನೀಡಲಾಗಿದೆ ಎಂದು ಮೊಕದ್ದಮ್ ತಿಳಿಸಿದ್ದಾರೆ. ವಿಶೇಷವಾಗಿ ವ್ಯಾಪಾರ ಮತ್ತು ಇಂಧನ ವಲಯದಲ್ಲಿ ಚೀನಾವು ಇರಾನ್ ನ ಪ್ರಮುಖ ಪಾಲುದಾರ ದೇಶವಾಗಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಂದ ಇರಾನ್ ಒತ್ತಡವನ್ನು ಎದುರಿಸುತ್ತಿರುವಾಗ, ಚೀನಾದ ರಾಜತಾಂತ್ರಿಕ ಬೆಂಬಲ ಸಹ ಇರಾನ್ ಗೆ ಮಹತ್ವದ್ದಾಗಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ