ರೇಷನ್ ಕಾರ್ಡ್ ಇ-ಕೆವೈಸಿಗೆ ಕೇವಲ 10 ದಿನ ಬಾಕಿ – 41.33 ಲಕ್ಷ ಫಲಾನುಭವಿಗಳು ಬಾಕಿ ಉಳಿಕೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರು ಮರು ಇ-ಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದ್ದು, ಬಾಕಿ ಉಳಿದಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳು ಮರು ಇ-ಕೆವೈಸಿ ಮಾಡಿಸಬೇಕಿದ್ದು, ನವೆಂಬರ್ 3ರ ವೇಳೆಗೆ 2,26,30,747 ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇನ್ನೂ 41,33,529 ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿದೆ.
ಈಗಾಗಲೇ ಇ-ಕೆವೈಸಿ ಮಾಡಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಮತ್ತಷ್ಟು ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕ ಸ್ವತಃ ಇ-ಕೆವೈಸಿ ಮಾಡಿಸಬಹುದು. ಇಲ್ಲವೇ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ‘AHARA’ ತಂತ್ರಾಂಶದ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಅನ್ನ ಸೇವೆ ಆ್ಯಪ್‌ನಲ್ಲಿ ಇ-ಕೆವೈಸಿ ವಿಧಾನ:
- ಮೊದಲು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ತೆರೆಯಿರಿ.
- ‘ಸ್ವಯಂ/ನಾಗರಿಕ’ ಆಯ್ಕೆಯನ್ನು ಆರಿಸಿಕೊಳ್ಳಿ.
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
- ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
- ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.
- ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಇ-ಕೆವೈಸಿ ಮಾಡಿಸಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಿ.
- ಸಹಾಯಕ ಆ್ಯಪ್ ಮೂಲಕ ಮುಖ ಗುರುತಿಸುವಿಕೆ (Face Recognition) ಪ್ರಕ್ರಿಯೆ ಪೂರ್ಣಗೊಳಿಸಿ.
ಪ್ರಕ್ರಿಯೆ ಯಶಸ್ವಿಯಾದ ಬಳಿಕ ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇನ್ನುಳಿದಿರುವ ಫಲಾನುಭವಿಗಳು ಕೊನೆಯ ಕ್ಷಣದವರೆಗೆ ಕಾಯದೆ ನವೆಂಬರ್ 10ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ