ರಂಗಪ್ರಯೋಗ ವಿಮರ್ಶೆ : ‘ಮಿಸ್ಟರ್ ಮನುಜ’ದಲ್ಲಿ ಹುಚ್ಚು ಮನಸ್ಸಿನ ಹತ್ತಾರು ಮುಖಗಳ ಅನಾವರಣ
ಲಿಂಕ್ ನಕಲಿಸಲಾಗಿದೆ ✓
“..ಈ ರಂಗಭೂಮಿ ಅನ್ನೋದೇ ಹೀಗೆ, ಸದಾ ವಿಭಿನ್ನ ಪ್ರಯೋಗಗಳ ಸರಮಾಲೆ. ಏನಾದರೊಂದು ವಿಭಿನ್ನವಾಗಿ ಮಾಡಬೇಕೆನ್ನುವ ತುಡಿತ, ಕ್ರಿಯಾಶೀಲತೆಯ ಮಿಡಿತಗಳು ಸೃಜನಶೀಲ ರಂಗಕರ್ಮಿಯಲ್ಲಿ ಒಳ ಒತ್ತಡ ಹೆಚ್ಚಿಸಿದಾಗ ಮಿಸ್ಟರ್ ಮನುಜ ದಂತಹ ರಂಗಪ್ರಯೋಗ ಪ್ರಯತ್ನಗಳು ಸಂಭವಿಸುತ್ತವೆ..” ವಿಮರ್ಶಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ
ರಂಗ ಕಲಾವಿದ ಪ್ರದೀಪ್ ತಿಪಟೂರ ಅಂತಹ ವಿಭಿನ್ನ ಪ್ರಯತ್ನವೊಂದನ್ನು ತಾವೇ ರಚಿಸಿದ ಮಿಸ್ಟರ್ ಮನುಜ ಎನ್ನುವ ಏಕವ್ಯಕ್ತಿ ನಾಟಕದಲ್ಲಿ ಮಾಡಿದ್ದು, ತಮ್ಮನ್ನು ತಾವೇ ನಿರ್ದೇಶಿಸಿಕೊಂಡು ತಮ್ಮ ಅಭಿನಯ ಸಾಮರ್ಥ್ಯದ ಬಹುಮುಖಿ ಆಯಾಮಗಳನ್ನು ಸಾಬೀತುಪಡಿಸಿದ್ದಾರೆ. ನವೆಂಬರ್ 7 ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಈ ನಾಟಕವು ನೋಡುಗರಲ್ಲಿ ತಲ್ಲಣ ತಳಮಳ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.
ಯಾಕೆಂದರೆ.. ಮನುಷ್ಯ ತನ್ನ ಬದುಕಿನ ವಿವಿಧ ಕಾಲಮಾನದಲ್ಲಿ ಅನುಭವಿಸುವ ನೋವು ನಿರಾಸೆ, ಸಂಕಟ ಹತಾಶೆ, ಹಿಂಸೆಯಿಂದ ಪರದಾಟ, ಪ್ರೀತಿಗಾಗಿ ಹುಡುಕಾಟಗಳ ಪ್ರಾತ್ಯಕ್ಷಿಕತೆಯನ್ನು ಪ್ರದರ್ಶಿಸುವ ಈ ಪ್ರಯೋಗವು ವಿಕ್ಷಿಪ್ತ ಮನಸ್ಸಿನ ಪ್ರತಿಬಿಂಬವೆನಿಸುತ್ತದೆ. ಹುಚ್ಚು ಮನಸ್ಸಿನ ಹತ್ತಾರು ರೂಪ ಕುರೂಪಗಳನ್ನು ರಂಗದಂಗಳದಲ್ಲಿ ಅನಾವರಣ ಮಾಡುತ್ತದೆ.

ಇದು ಹೇಳಿ ಕೇಳಿ ಅಸಂಗತ ನಾಟಕ. ಇಲ್ಲಿ ಯಾವುದಕ್ಕೂ ನೇರವಾದ ನಿರೂಪಣೆ ಇಲ್ಲ. ಒಂದಕ್ಕಿನ್ನೊಂದು ಸಂಬಂಧವು ಇಲ್ಲ. ಅಸಲಿಗೆ ಸೂತ್ರಬದ್ದ ಕಥೆಯೂ ಇಲ್ಲ, ಕಥಾನಕದ ಹಂದರವೂ ಇಲ್ಲ. ಚಿತ್ತ ಬಂದತ್ತ ದಿಕ್ಕು ದೆಸೆಯಿಲ್ಲದೇ ಸುತ್ತುವ ವ್ಯಕ್ತಿಯೊಬ್ಬನ ಅಸ್ತವ್ಯಸ್ತ ಮನಸ್ಸಿನ ಮಾನಸಿಕ ತೊಳಲಾಟ ಮಾತ್ರ ನೋಡುಗರಲ್ಲೂ ತಳಮಳ ಹುಟ್ಟಿಸುತ್ತದೆ.
ಯಾಕೆಂದರೆ ಇದು ಅಸಂಗತ ಮಾದರಿಯಲ್ಲೇ ಅಸಂಗತ. ತಲೆ ಬುಡವಿಲ್ಲದ ಈ ವಿಚಿತ್ರ ನಾಟಕದಲ್ಲಿ ವಿಕ್ಷಿಪ್ತ ಭಾವನೆಗಳ ತಾಕಲಾಟಗಳಿವೆ. ಚದುರಿ ಚಿದ್ರವಾದ ಒಡಕಲು ಬಿಂಬಗಳನ್ನು ಹಸಿಹಸಿಯಾಗಿ ತೋರಿಸುವ ಹಂಬಲಗಳಿವೆ. ಕೊಲ್ಯಾಜ್ ಮಾದರಿಯ ಅಬಸ್ಟ್ರ್ಯಾಕ್ಟ್ ಪೇಂಟಿಂಗನ್ನು ಪ್ರದರ್ಶನಕ್ಕಿಟ್ಟು ಸಿಕ್ಕಷ್ಟು ದಕ್ಕಿಸಿಕೊ ಎಂದು ನೋಡುಗರಿಗೆ ಸವಾಲೆಸೆಯುವಂತಿದೆ.
ಮಹಾಯುದ್ದಗಳ ಧಾರುಣ ಸಮಯದಲ್ಲಿ, ಬದುಕಿನ ಭರವಸೆ ಕಳೆದುಕೊಂಡ ಮನುಷ್ಯರ ಹತಾಶ ಪರಿಸ್ಥಿತಿಯಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿಕೊಂಡಿದ್ದು ಈ ಅಸಂಗತ ಮಾದರಿಯ ನಾಟಕಗಳು. ಅಂತಹುದೇ ಪಾಶ್ಚಾತ್ಯ ನಾಟಕದ ಮಾದರಿಯೊಂದನ್ನು ಇಟ್ಟುಕೊಂಡು ಈ “ಮಿ.ಮನುಜ” ಏಕವ್ಯಕ್ತಿ ಅವತಾರದಲ್ಲಿ ಕನ್ನಡೀಕರಣಗೊಂಡು ಆಕಾರ ತಾಳಿದೆ. ಇಂತಹ ನಾಟಕದ ಪ್ರಸ್ತುತತೆಯ ಬಗ್ಗೆ ಪ್ರಶ್ನೆಗಳಿವೆಯಾದರೂ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ವ್ಯಕ್ತಿಗಳ ಭಾವತಲ್ಲಣಗಳ ಪ್ರತಿಫಲನವೇ ಈ ನಾಟಕವಾಗಿದೆ.
ಕಾಲದ ಕುಲುಮೆಯಲ್ಲಿ ಬೆಂದು, ಹಸಿವು ಬಡತನದ ಬೇಗೆಯಲ್ಲಿ ನೊಂದ ಬಾಲಕನೊಬ್ಬನ ಬದುಕಿನ ದುಸ್ಥಿತಿಯನ್ನು ಹೇಳುತ್ತಲೇ, ಬೆಳೆದು ದೊಡ್ಡವನಾದ ಯುವಕನ ಹತಾಶೆಯನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ಇಲ್ಲಿ ನಾಯಿಮರಿಯ ದುರಂತ ಸಾವು, ಜೇನು ಹುಳುಗಳ ದಾಳಿಗಳು ನೋವಿಗೆ ರೂಪಕಗಳಾಗಿ ಪಲ್ಲವಿಸಿವೆ.
ರಂಗ ಶಿಕ್ಷಕರೂ ಆಗಿರುವ ಪ್ರದೀಪರವರು ತಮ್ಮ ತರಬೇತಿ ಶಾಲೆಯ ಕಲಿಕೆಯ ತಂತ್ರಗಾರಿಕೆಯನ್ನು ಪ್ರೇಕ್ಷಕರಿಗೂ ವಿಸ್ತರಿಸಿದ್ದಾರೆ. ಇಮ್ಯಾಜಿನೇಶನ್ ಥಿಯರಿಯನ್ನು ಪ್ರ್ಯಾಕ್ಟಿಕಲ್ ಆಗಿ ಮಾಡಲು ಪ್ರೇಕ್ಷಕರಿಗೂ ಟಾಸ್ಕ ಕೊಟ್ಟು ಸಮ್ಮೋಹಿನಿ ಆದೇಶಗಳನ್ನು ಕೊಡುತ್ತಾ ಹೋಗುತ್ತಾರೆ. ಪ್ರೇಕ್ಷಕರೆಲ್ಲಾ ಕಣ್ಣು ಮುಚ್ಚಿ ನಟನು ಹೇಳಿದಂತೆ ಊಹೆ ಮಾಡುತ್ತಾ ಮನೋರಂಗದಲ್ಲಿ ಪಿಕ್ಚರೈಜೇಶನ್ ಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ. ಇದು ಒಂದು ರೀತಿ ಮನೋವೈಜ್ಞಾನಿಕ ತಂತ್ರವಾಗಿದ್ದು ಕನ್ನಡ ರಂಗಭೂಮಿಗೆ ಹೊಸ ರೀತಿಯ ವಿನ್ಯಾಸವಾಗಿದೆ. ಆದರೆ ನೋಡುಗರು ಕಣ್ಣುಮುಚ್ಚಿ ಹತ್ತಾರು ನಿಮಿಷಗಳ ಕಾಲ ಮನೋಯಾನದಲ್ಲಿದ್ದರೆ ರಂಗದ ಮೇಲೆ ನಟನ ಅಭಿನಯ ನೋಡುವುದಾದರೂ ಹೇಗೆ? ನಾಟಕದ ಆರಂಭದಲ್ಲೂ ಹತ್ತು ನಿಮಿಷ ಕತ್ತಲೆಯಲ್ಲಿ ನಟನ ಮಾತುಗಳನ್ನು ಮಾತ್ರ ಕೇಳಿಸಿಕೊಂಡ ಪ್ರೇಕ್ಷಕರು ಮತ್ತೆ ಕಣ್ಮುಚ್ಚಿ ಸಂಗೀತದಲ್ಲಿ ಲೀನವಾಗಬೇಕಾಯ್ತು. ನಾಟಕ ನೋಡಲು ಬಂದವರ ಮೇಲೆಯೇ ಪ್ರಯೋಗ ಮಾಡುವ ಪ್ರಯತ್ನ ಮೆಚ್ಚಬಹುದಾದರೂ ಜನರನ್ನು ಕತ್ತಲಲ್ಲಿಟ್ಟು ಅಭಿನಯಿಸುವ ನಟ / ನಿರ್ದೇಶಕನ ಉದ್ದೇಶ ಪ್ರಶ್ನಾರ್ಹವಾಗಿದೆ. ಕೊನೆಗೆ ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದೊಯ್ದು ರಂಗದ ಮೇಲೆ ಕೂಡಿಸಿ ನಟ ನಿರ್ಗಮಿಸುವುದು ಅರ್ಥವಾಗದ ರೂಪಕವಾಗಿದೆ.
ರಂಗದ ಮೇಲೆ ಸಿಮೆಂಟ್ ಕಲ್ಲು ಕಡಿಗಳಿಂದ ಆವೃತವಾದ ವೃತ್ತ ಕೆಲವೊಮ್ಮೆ ರೂಪಕವಾಗಿಯೂ ಮತ್ತೆ ಹಲವೊಮ್ಮೆ ಅನಗತ್ಯವಾಗಿಯೂ ಗೋಚರವಾಗುವಂತಿದೆ. ನಟ ತನ್ನ ಮಾತುಗಾರಿಕೆ ಹಾಗೂ ಆಂಗಿಕಾಭಿನಯವನ್ನೇ ಅತೀ ಹೆಚ್ಚು ಪ್ರದರ್ಶಿಸಿದ್ದು, ಸಂದರ್ಭೋಚಿತವಾಗಿ ಪರಿಕರಗಳನ್ನು ಬಳಸಿದ್ದರೆ ನಾಟಕ ಇನ್ನೂ ಕಳೆಗಟ್ಟುತ್ತಿತ್ತು. ನಟ ಕೊನೆಯವರೆಗೂ ಒಮ್ಮೆಯೂ ಉಪಯೋಗಿಸದ ರಂಗದ ಮೇಲಿದ್ದ ಆ ಖುರ್ಚಿ ಅನುಪಯುಕ್ತ ಪರಿಕರವೆನಿಸಿತು. ಆಗಾಗ ಬೆಳಕೂ ಸಹ ನಾಟಕದ ಪಾತ್ರವಾಗಿ ಪ್ರೇಕ್ಷಕರಿಗೆ ಶಾಕ್ ನೀಡುವ ಅನುಭವ ಕೊಟ್ಟಿತು. ಸಮ್ಮೋಹನದ ಸಂದರ್ಭದಲ್ಲಿ ಬಳಸಲಾದ ಹಿನ್ನಲೆ ಸಂಗೀತ ಕಣ್ಮುಚ್ಚಿ ಕುಳಿತ ಪ್ರೇಕ್ಷಕರನ್ನು ಊಹಾ ಲೋಕಕ್ಕೆ ಕರೆದೊಯ್ಯುವಂತಿತ್ತು.
ಸ್ವಲ್ಪ ದೀರ್ಘ ಕಾಲಾವಧಿಯ ಈ ಏಕವ್ಯಕ್ತಿ ನಾಟಕವನ್ನು ಇನ್ನಷ್ಟು ಎಡಿಟ್ ಮಾಡಿ ಒಂದು ಗಂಟೆಯ ಕಾಲಾವಾಧಿಗೆ ಸೀಮಿತಗೊಳಿಸಿದರೆ, ಪ್ರೇಕ್ಷಕರ ಮೇಲೆ ಮಾಡಲಾದ ಪ್ರಯೋಗವನ್ನು ಕಡಿತ ಗೊಳಿಸಿದರೆ, ಅನಗತ್ಯ ಪರಿಕರಗಳನ್ನು ತೆಗೆದು, ಅಗತ್ಯ ಪರಿಕರಗಳನ್ನು ನಟನು ಸಮರ್ಪಕವಾಗಿ ಬಳಸಿದರೆ, ರಂಗ ವಿನ್ಯಾಸವನ್ನು ಮರುಪರಿಶೀಲಿಸಿದರೆ, ಏಕತಾನತೆ ಎನಿಸುವ ರೀತಿಯ ಸಂಭಾಷಣೆಯಲ್ಲಿ ಏರಿಳಿತಗಳನ್ನು ರೂಢಿಸಿಕೊಂಡಿದ್ದರೆ.. ಈ ನಾಟಕ ಇನ್ನೂ ಹೆಚ್ಚು ಗಮನಾರ್ಹವೆನಿಸುವಲ್ಲಿ ಸಂದೇಹವಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಒಂದೂವರೆ ಗಂಟೆಗಳ ಕಾಲ ತನ್ನ ಹುಚ್ಚು ಮನಸ್ಸಿನ ಹತ್ತಾರು ಅವತಾರಗಳನ್ನು ಅಭಿನಯದ ಮೂಲಕ ಅಭಿವ್ಯಕ್ತಿಸಿದ ಪ್ರದೀಪರವರ ನಟನೆ ಗಮನ ಸೆಳೆಯುವಂತಿದೆ. ಪ್ರೇಕ್ಷಕರ ಗ್ರಹಿಕೆಗೆ ಇಡಿಯಾಗಿ ದಕ್ಕದ, ವಿಮರ್ಶಕರ ಹಿಡಿತಕ್ಕೂ ಸರಿಯಾಗಿ ಸಿಕ್ಕದ ಈ ವಿಕ್ಷಿಪ್ತ ನಾಟಕ ಆನೆಯ ಭಾಗಗಳನ್ನು ಮುಟ್ಟಿ ಇದೇ ಆನೆ ಎಂದು ಭ್ರಮಿಸುವ ಕುರುಡರಂತೆ ಭಾಸವಾಯ್ತು. ಇಂತಹ ಪಾಶ್ಚಾತ್ಯ ಮಾದರಿ ಕಲ್ಪನೆಗಳ ನಾಟಕವನ್ನು ಅರ್ಥೈಸಿಕೊಳ್ಳಲು ನೋಡುಗರಿಗೂ ಸಿದ್ದತೆ ಬೇಕೆನಿಸುತ್ತದೆ. ಮಾಡುಗರಿಗೂ ಪ್ರೇಕ್ಷಕರ ಗ್ರಹಿಕೆಯ ಮಿತಿ ಅರ್ಥವಾಗಬೇಕಿದೆ. ಇಂತಹ ಸಂಕೀರ್ಣ ಕಲಸುಮೆಲೋಗರ ವಸ್ತು ವಿಷಯವನ್ನು ಪ್ರೇಕ್ಷಕರ ಗ್ರಹಿಕೆಗೆ ದಕ್ಕುವಂತೆ ನಿರ್ದೇಶಕರು ಪ್ರಯತ್ನಿಸಬೇಕಿದೆ.
ಏನೇ ಆಗಲಿ ತನ್ನ ಪ್ರಯೋಗಶೀಲತೆಗೆ ಹೆಸರಾಗಿರುವ ಕನ್ನಡ ರಂಗಭೂಮಿಯಲ್ಲಿ ಇಂತಹ ಪ್ರಯತ್ನಗಳೂ ಆಗಾಗ ಆಗಬೇಕಿವೆ. ವಿಭಿನ್ನ ಆಯಾಮಗಳ ಮೂಲಕ ರಂಗಭೂಮಿಯ ಜೀವಂತಿಕೆಯನ್ನು ಹೆಚ್ಚಿಸಬೇಕಿದೆ. ಅಂತಹ ಪ್ರಯತ್ನವನ್ನು ಮಾಡಿದ ಯುವ ರಂಗಕರ್ಮಿ ರಂಗಧರ್ಮದ ಪ್ರದೀಪ ತಿಪಟೂರರವರನ್ನು ಅಭಿನಂದಿಸಲೇ ಬೇಕಿದೆ.
Peepal Media Desk
Peepal Media · ಅಂಕಣ ವಿಭಾಗ