ದಕ್ಷಿಣದ 5 ರಾಜ್ಯಗಳಿಗೆ ಅಕ್ಕಿ, ಭತ್ತದ ದಾಸ್ತಾನು ಮಿತಿ ವಿಧಿಸಲು – ಕೇಂದ್ರ ಅಸ್ತು
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: ಅಕ್ಕಿ ಬೆಲೆ ಏರಿಕೆ ನಿಯಂತ್ರಣ, ಅಕ್ರಮ ದಾಸ್ತಾನು ತಡೆ ಹಾಗೂ ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಅಕ್ಕಿ ಮತ್ತು ಭತ್ತದ ಮೇಲೆ ದಾಸ್ತಾನು ಮಿತಿ ವಿಧಿಸಲು ಅನುಮತಿ ನೀಡಿದೆ. ಅಗತ್ಯವಿರುವ ಕಡೆ 2027ರ ಜನವರಿ 31ರವರೆಗೆ ಈ ಮಿತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಿಗೆ ಈ ಅನುಮತಿ ನೀಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಸಮರ್ಪಕ ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ನಿರಂತರ ನಿಗಾ ವಹಿಸಿದೆ ಎಂದು ಸಚಿವರು ಹೇಳಿದ್ದಾರೆ.
ಭಾರತ್ ರೈಸ್ ಹೆಚ್ಚುವರಿ ಹಂಚಿಕೆ
ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆ ಹೆಚ್ಚಿಸುವ ಉದ್ದೇಶದಿಂದ NAFED, NCCF ಹಾಗೂ ಕೇಂದ್ರೀಯ ಭಂಡಾರ್ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ಭಾರತ್ ರೈಸ್ ಹಂಚಿಕೆ ಮಾಡಲಾಗಿದೆ. ಗ್ರಾಹಕರಿಗೆ ಸುಲಭವಾಗಿ ಅಕ್ಕಿ ತಲುಪಿಸುವ ನಿಟ್ಟಿನಲ್ಲಿ ವಿತರಣಾ ವ್ಯವಸ್ಥೆ ವಿಸ್ತರಿಸುವಂತೆಯೂ ಸೂಚಿಸಲಾಗಿದೆ.
ಇನ್ನು 2026-27ನೇ ಸಾಲಿನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS-D) ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು 25 ಲಕ್ಷ ಮೆಟ್ರಿಕ್ ಟನ್‌ನಿಂದ 50 ಲಕ್ಷ ಮೆಟ್ರಿಕ್ ಟನ್‌ಗೆ ದ್ವಿಗುಣಗೊಳಿಸಲಾಗಿದೆ. ಅಕ್ಟೋಬರ್ 31ರವರೆಗೆ ಇ-ಹರಾಜಿನ ಮೂಲಕ 25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟ ಮಾಡಲಾಗಿದೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಪ್ರತಿ ಶುಕ್ರವಾರ ದಾಸ್ತಾನು ವಿವರ ಸಲ್ಲಿಕೆ ಕಡ್ಡಾಯ
ಅಕ್ಕಿ ಮತ್ತು ಭತ್ತ ಸಂಗ್ರಹಿಸುವ ವ್ಯಾಪಾರಿಗಳು, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಚಿಲ್ಲರೆ ಸರಪಳಿ ಸಂಸ್ಥೆಗಳು ಮತ್ತು ಅಕ್ಕಿ ಗಿರಣಿದಾರರು ತಮ್ಮ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಪ್ರತಿ ಶುಕ್ರವಾರ ದಾಸ್ತಾನು ಪ್ರಮಾಣವನ್ನು ನವೀಕರಿಸಿ ಕೇಂದ್ರದ ಫುಡ್ ಸ್ಟಾಕ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.
ಬಾಸುಮತಿ, ಪ್ರೀಮಿಯಂ ಅಕ್ಕಿ, ಸಾಮಾನ್ಯ ಅಕ್ಕಿ, ಬೇಯಿಸಿದ ಅಕ್ಕಿ, ನುಚ್ಚಕ್ಕಿ ಹಾಗೂ ಭತ್ತ ಸೇರಿದಂತೆ ಆರು ವರ್ಗಗಳಲ್ಲಿ ದಾಸ್ತಾನು ವಿವರ ಘೋಷಿಸಬೇಕಿದೆ.
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ
ದಾಸ್ತಾನು ವಿವರ ಸಲ್ಲಿಸದಿದ್ದರೆ ಅಥವಾ ನಿಗದಿಪಡಿಸಿದ ಮಿತಿಯನ್ನು ಉಲ್ಲಂಘಿಸಿದರೆ ಅಂತಹ ಸಂಸ್ಥೆಗಳ ವಿರುದ್ಧ ಅಗತ್ಯ ಸರಕುಗಳ ಕಾಯಿದೆ-1955ರ ಸೆಕ್ಷನ್ 6 ಮತ್ತು 7ರ ಅಡಿಯಲ್ಲಿ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮಾರುಕಟ್ಟೆಯಲ್ಲಿ ಅಕ್ಕಿಯ ಸಮರ್ಪಕ ಲಭ್ಯತೆ ಖಚಿತಪಡಿಸುವುದು, ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ತಡೆಯುವುದು ಮತ್ತು ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಅಕ್ಕಿ ದೊರೆಯುವಂತೆ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ