ವಂದೇ ಭಾರತ್ಗೆ ಆದ್ಯತೆ, 14 ಸಾಮಾನ್ಯ ರೈಲುಗಳ ವೇಳಾಪಟ್ಟಿಗೆ ಕತ್ತರಿ! 18 ಸಾವಿರ ಪ್ರಯಾಣಿಕರಿಗೆ ತೊಂದರೆ
ಲಿಂಕ್ ನಕಲಿಸಲಾಗಿದೆ ✓
ದೇಶದಲ್ಲಿ ವೇಗದ ರೈಲು ಸಂಚಾರ ಮತ್ತು ಆಧುನಿಕ ಪ್ರಯಾಣದ ಹೆಸರಿನಲ್ಲಿ ಪರಿಚಯಿಸಲಾಗುತ್ತಿರುವ “ವಂದೇ ಭಾರತ್ ರೈಲು”ಗಳ ಸಂಚಾರಕ್ಕೆ ಆದ್ಯತೆ ನೀಡುವ ಕ್ರಮ ಇದೀಗ ಕರ್ನಾಟಕದ ರೈಲು ಪ್ರಯಾಣಿಕರಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈಗಾಗಲೇ ಸಂಚರಿಸುತ್ತಿರುವ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸುವ ಪರಿಸ್ಥಿತಿ ಎದುರಾಗಿದೆ.
ಇನ್ನೂ ಕೆಲವು ಕಡೆ ಹಳೆಯ ವೇಳಾಪಟ್ಟಿ ಇದ್ದರೂ ಗಂಟೆಗಟ್ಟಲೆ ರೈಲ್ವೆ ಪ್ಲಾಟ್ ಫಾರಂ ಮತ್ತು ರೈಲಿನಲ್ಲಿ ಕೂತು ಸಮಯ ವ್ಯರ್ಥ ಮಾಡುವ ಮಟ್ಟಕ್ಕೆ ರೈಲು ಪ್ರಯಾಣ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ.
ಅದರಲ್ಲೂ ಬೆಂಗಳೂರು–ಮಂಗಳೂರು–ಗೋವಾ ರೈಲು ಮಾರ್ಗದಲ್ಲಿ ಸಂಚರಿಸುವ 13 ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದ್ದು, ಸುಮಾರು 18 ಸಾವಿರ ಪ್ರಯಾಣಿಕರಿಗೆ ಇದರ ಪರಿಣಾಮ ತಟ್ಟಲಿದೆ ಎಂದು ವರದಿಯಾಗಿದೆ.
ಯಶವಂತಪುರದಿಂದ ಗೋವಾದ ಮಡಗಾಂವ್ಗೆ ಮಂಗಳೂರು ಮಾರ್ಗವಾಗಿ ಹೊಸ ವಂದೇ ಭಾರತ್ ರೈಲು ಪರಿಚಯಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. 26655 ಮತ್ತು 26656 ಸಂಖ್ಯೆಯ ಈ ರೈಲು ವಾರದಲ್ಲಿ ಆರು ದಿನ ಸಂಚರಿಸುವಂತೆ ಯೋಜಿಸಲಾಗಿದೆ. ಯಶವಂತಪುರದಿಂದ ಬೆಳಗ್ಗೆ 7.35ಕ್ಕೆ ಹೊರಡುವ ರೈಲು ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್ನಿಂದ ಬೆಳಗ್ಗೆ 8.20ಕ್ಕೆ ಹೊರಟು ರಾತ್ರಿ 9.15ಕ್ಕೆ ಯಶವಂತಪುರ ತಲುಪುವ ವೇಳಾಪಟ್ಟಿ ರೂಪಿಸಲಾಗಿದೆ.
ಆದರೆ ಈ ಹೊಸ ರೈಲಿನ ಸಂಚಾರಕ್ಕೆ ಆದ್ಯತೆ ಕಲ್ಪಿಸುವುದರಿಂದ ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ವ್ಯಾಪಕ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ನವೆಂಬರ್ 5ರಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಟಿಸಿದ್ದು, 13 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಉಲ್ಲೇಖಿಸಿದೆ.
ಗೊಮ್ಮಟೇಶ್ವರ ಎಕ್ಸ್ಪ್ರೆಸ್ಗೆ ದೊಡ್ಡ ಹೊಡೆತ
ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿದ್ದ 16576 ಸಂಖ್ಯೆಯ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಸಂಜೆ 4.30ಕ್ಕೆ ಯಶವಂತಪುರ ತಲುಪುತ್ತಿದ್ದ ಈ ರೈಲು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮಂಗಳೂರಿನಿಂದ ಬೆಳಗ್ಗೆ 11.40ಕ್ಕೆ ಹೊರಟು ರಾತ್ರಿ 10.15ಕ್ಕೆ ಯಶವಂತಪುರ ತಲುಪುವಂತೆ ಬದಲಾಯಿಸುವ ಪ್ರಸ್ತಾವವಿದೆ.
ಇದರಿಂದ ಸಂಜೆ ವೇಳೆಗೆ ಬೆಂಗಳೂರಿಗೆ ತಲುಪಬೇಕೆಂದು ಈ ರೈಲನ್ನು ಅವಲಂಬಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ರೈಲಿನಲ್ಲಿರುವ ವಿಸ್ಟಾಡೋಮ್ ಬೋಗಿಯ ಮೂಲಕ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಬಯಸುವ ಪ್ರವಾಸಿಗರ ಪ್ರಯಾಣದ ಅನುಕೂಲಕ್ಕೂ ವೇಳಾಪಟ್ಟಿ ಬದಲಾವಣೆ ಪರಿಣಾಮ ಬೀರಬಹುದು.
ಇದೇ ರೀತಿ 16516 ಸಂಖ್ಯೆಯ ಕಾರವಾರ–ಯಶವಂತಪುರ ಎಕ್ಸ್ಪ್ರೆಸ್ ರೈಲು ಪ್ರಸ್ತುತ ರಾತ್ರಿ 8.50ಕ್ಕೆ ಬೆಂಗಳೂರಿಗೆ ತಲುಪುತ್ತಿದ್ದು, ಪರಿಷ್ಕೃತ ವೇಳಾಪಟ್ಟಿಯಲ್ಲಿ ರಾತ್ರಿ 10.15ಕ್ಕೆ ತಲುಪುವಂತೆ ಬದಲಾವಣೆಯಾಗುವ ಸಾಧ್ಯತೆಯಿದೆ. ಅಂದರೆ ಸುಮಾರು 85 ನಿಮಿಷಗಳಷ್ಟು ತಡವಾಗಿ ಬೆಂಗಳೂರು ತಲುಪಲಿದೆ.
ಇದಲ್ಲದೆ 22679 ಸಂಖ್ಯೆಯ ಯಶವಂತಪುರ–ಹಾಸನ ಸೂಪರ್ಫಾಸ್ಟ್ ರೈಲಿನ ಸರಾಸರಿ ವೇಗ ಗಂಟೆಗೆ 55 ಕಿ.ಮೀ.ಗಿಂತ ಕಡಿಮೆಯಾಗುವ ಸಾಧ್ಯತೆಯನ್ನೂ ವರದಿ ಉಲ್ಲೇಖಿಸಿದೆ. ಮಾರ್ಗದ ಇತರ ರೈಲುಗಳಿಗೂ ಸಂಚಾರದ ಮಧ್ಯೆ 10ರಿಂದ 25 ನಿಮಿಷಗಳವರೆಗೆ ನಿಯಂತ್ರಣ ವಿಧಿಸುವ ಸಾಧ್ಯತೆಯಿದೆ.
ಇದರ ಜೊತೆಗೆ ಬೆಳಿಗ್ಗೆ 9.15 ಕ್ಕೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಹೊರಡುವ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ವಂದೇ ಭಾರತ್ ರೈಲಿಗೆ ಟ್ರಾಕ್ ಬಿಟ್ಟು ಕೊಡುವ ಉದ್ದೇಶದಿಂದ ಬೆಳಿಗ್ಗೆ 10.30 ರ ನಂತರ ಹೊರಡುತ್ತಿದ್ದು, ಇದೇ ರೈಲನ್ನು ನಂಬಿ ಬರುವ ಪ್ರಯಾಣಿಕರು ಗಂಟೆಗಟ್ಟಲೆ ರೈಲ್ವೆ ನಿಲ್ದಾಣದಲ್ಲೇ ಕಾಯುವ ಸ್ಥಿತಿ ಎದುರಾಗಿದೆ. ಈ ಅದ್ವಾನ ಕಳೆ ಒಂದು ತಿಂಗಳಿನಿಂದಲೂ ನಡೆಯುತ್ತಿದೆ ಎಂದು ಪ್ರಯಾಣಿಕರು ರೈಲ್ವೆ ಇಲಾಖೆಗೆ ಪ್ರಶ್ನಿಸುವಂತಾಗಿದೆ.
ಘಟ್ಟ ಪ್ರದೇಶದಲ್ಲಿ ವಂದೇ ಭಾರತ್ಗೆ ಆದ್ಯತೆ
ಹೊಸ ವಂದೇ ಭಾರತ್ ರೈಲು ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ ಪಶ್ಚಿಮ ಘಟ್ಟಗಳ ಸುಮಾರು 55 ಕಿ.ಮೀ. ಉದ್ದದ ಕಠಿಣ ಮಾರ್ಗದಲ್ಲಿ ಸಂಚರಿಸಲಿದೆ. ಈ ಭಾಗದಲ್ಲಿ ಭೌಗೋಳಿಕ ಪರಿಸ್ಥಿತಿ ಮತ್ತು ಸುರಕ್ಷತಾ ಕಾರಣಗಳಿಂದ ಎಲ್ಲಾ ರೈಲುಗಳಿಗೂ ಗರಿಷ್ಠ ಗಂಟೆಗೆ 30 ಕಿ.ಮೀ. ವೇಗದ ಮಿತಿ ವಿಧಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಹೊಸ ವಂದೇ ಭಾರತ್ ರೈಲಿನ ಸಂಚಾರಕ್ಕೆ ಆದ್ಯತೆ ನೀಡಲು ಇತರ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮತ್ತು ಸಂಚಾರ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ.
ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಈ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ವಂದೇ ಭಾರತ್ ರೈಲಿನ ಒಟ್ಟು ಪ್ರಯಾಣದ ಅವಧಿಯೇ ಸುಮಾರು 13 ಗಂಟೆ 20 ನಿಮಿಷಗಳಾಗಿದೆ. ಸರಾಸರಿ ವೇಗವೂ ಗಂಟೆಗೆ 53ರಿಂದ 54 ಕಿ.ಮೀ. ಆಸುಪಾಸಿನಲ್ಲಿರಲಿದೆ. ಅಂದರೆ, ವಂದೇ ಭಾರತ್ ಹೆಸರಿನ ವೇಗದ ರೈಲಿಗೂ ಘಟ್ಟ ಪ್ರದೇಶದ ಭೌಗೋಳಿಕ ಮತ್ತು ಸುರಕ್ಷತಾ ನಿರ್ಬಂಧಗಳು ಅನ್ವಯಿಸುತ್ತವೆ.
Read More:
ಹಿಂದೆಯೂ ಕೇಳಿಬಂದಿತ್ತು ಪ್ರಯಾಣಿಕರ ದೂರು
ವಂದೇ ಭಾರತ್ ರೈಲುಗಳಿಗೆ ಆದ್ಯತೆ ನೀಡುವ ವಿಚಾರದಲ್ಲಿ ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಯಾಣಿಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಬೆಂಗಳೂರು–ಮೈಸೂರು–ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ರೈಲಿಗೆ ಹಾದಿ ಕಲ್ಪಿಸುವ ಸಲುವಾಗಿ ಇತರ ಸ್ಥಳೀಯ ರೈಲುಗಳನ್ನು ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಕಡಿಮೆ ದರದಲ್ಲಿ ಪ್ರಯಾಣಿಸುವ ಉದ್ಯೋಗಿಗಳು ಮತ್ತು ದಿನನಿತ್ಯದ ಪ್ರಯಾಣಿಕರು ತಡವಾಗಿ ತಮ್ಮ ಗಮ್ಯಸ್ಥಾನ ತಲುಪುವಂತಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು.
2023ರಲ್ಲಿ ‘ದಿ ಫೆಡರಲ್’ ಪ್ರಕಟಿಸಿದ ವರದಿಯಲ್ಲಿ, ಮೈಸೂರು–ಬೆಂಗಳೂರು–ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ಸಂಚಾರದ ಹಿನ್ನೆಲೆಯಲ್ಲಿ ಇತರ ರೈಲುಗಳನ್ನು ಸ್ಥಳೀಯ ನಿಲ್ದಾಣಗಳಲ್ಲಿ ತಡೆಹಿಡಿಯಲಾಗುತ್ತಿದೆ ಎಂದು ಪ್ರಯಾಣಿಕರು ಮತ್ತು ರೈಲ್ವೆ ಅಧಿಕಾರಿಗಳ ಅಭಿಪ್ರಾಯಗಳನ್ನು ಉಲ್ಲೇಖಿಸಲಾಗಿತ್ತು. ಉದ್ಯೋಗಕ್ಕೆ ತೆರಳುವವರು ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳ ತಲುಪಲು ಸಾಧ್ಯವಾಗದೆ ಬಸ್ಗಳ ಮೊರೆ ಹೋಗುತ್ತಿರುವ ಉದಾಹರಣೆಗಳನ್ನೂ ವರದಿ ದಾಖಲಿಸಿತ್ತು.
ಇದು ಹೊಸದಾಗಿ ಎದುರಾಗಿರುವ ಸಮಸ್ಯೆಯಲ್ಲ ಎಂಬುದನ್ನು ಈ ಹಿಂದಿನ ವರದಿಗಳು ಸೂಚಿಸುತ್ತವೆ. ಆದರೆ ಇಂತಹ ವಿಳಂಬಗಳು ಎಷ್ಟು ಬಾರಿ ಸಂಭವಿಸಿವೆ, ಎಷ್ಟು ರೈಲುಗಳು ಮತ್ತು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂಬುದರ ಸಮಗ್ರ ಅಧಿಕೃತ ಅಂಕಿ-ಅಂಶಗಳು ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ.
ರೈಲ್ವೆ ಇಲಾಖೆಯ ನಿಲುವೇನು?
ಇನ್ನೊಂದೆಡೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ನೀಡಿರುವ ಉತ್ತರದ ಪ್ರಕಾರ, ವಂದೇ ಭಾರತ್ ಸೇರಿದಂತೆ ಎಲ್ಲಾ ಪ್ರಯಾಣಿಕ ರೈಲುಗಳನ್ನು ನಿಗದಿತ ವೇಳಾಪಟ್ಟಿ ಹಾಗೂ ರೈಲುಗಳ ಆದ್ಯತೆಯ ಸಾಮಾನ್ಯ ನಿಯಮಗಳ ಅನ್ವಯ ಸಂಚರಿಸಲಾಗುತ್ತದೆ. ಇತರ ರೈಲುಗಳ ಸಂಚಾರಕ್ಕೆ ಧಕ್ಕೆಯಾಗದಂತೆ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಲಾಗುತ್ತದೆ ಎಂಬುದು ಸಚಿವಾಲಯದ ನಿಲುವಾಗಿದೆ.
ಆದರೆ ಹೊಸ ರೈಲುಗಳ ಪರಿಚಯದ ಸಂದರ್ಭದಲ್ಲಿ ಹಳೆಯ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ಈ ನಿಲುವಿನ ಕಾರ್ಯರೂಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೇಗದ ರೈಲುಗಳ ಅಭಿವೃದ್ಧಿ, ಸಾಮಾನ್ಯ ಪ್ರಯಾಣಿಕರ ಸಮಯಕ್ಕೆ ಬೆಲೆ ಇಲ್ಲವೇ?
ಆಧುನಿಕ ರೈಲುಗಳು ಮತ್ತು ವೇಗದ ಸಂಪರ್ಕ ವ್ಯವಸ್ಥೆ ದೇಶದ ಸಾರಿಗೆ ಅಭಿವೃದ್ಧಿಗೆ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹೊಸ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಾಗ ಈಗಾಗಲೇ ಸಾವಿರಾರು ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ರೈಲುಗಳ ಅನುಕೂಲವನ್ನು ಕಡೆಗಣಿಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆ ಎದುರಾಗಿದೆ.
ವಿಶೇಷವಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು ಮತ್ತು ದಿನನಿತ್ಯ ರೈಲುಗಳನ್ನು ಅವಲಂಬಿಸಿರುವ ಮಧ್ಯಮ ಹಾಗೂ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ರೈಲಿನ ಸಮಯಪಾಲನೆ ಅತ್ಯಂತ ಮುಖ್ಯವಾಗಿದೆ. ಒಂದು ರೈಲಿಗೆ ಆದ್ಯತೆ ನೀಡುವ ಕಾರಣಕ್ಕೆ ಮತ್ತೊಂದು ರೈಲಿನ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ, ರೈಲ್ವೆ ಇಲಾಖೆಯ ಆದ್ಯತೆಯ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ.
ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳಿಗೆ ಹಾದಿ ಕಲ್ಪಿಸುವ ಸಲುವಾಗಿ ಕಳೆದ ಕೆಲವು ವರ್ಷಗಳಲ್ಲಿ ಎಷ್ಟು ರೈಲುಗಳನ್ನು ನಿಲ್ದಾಣಗಳಲ್ಲಿ ತಡೆಹಿಡಿಯಲಾಗಿದೆ? ಎಷ್ಟು ರೈಲುಗಳ ವೇಳಾಪಟ್ಟಿ ಬದಲಿಸಲಾಗಿದೆ? ಇದರಿಂದ ಒಟ್ಟು ಎಷ್ಟು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ? ಎಂಬ ಪ್ರಶ್ನೆಗಳಿಗೆ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.
ವೇಗದ ರೈಲುಗಳ ಪರಿಚಯದ ಜೊತೆಗೆ ಸಾಮಾನ್ಯ ಪ್ರಯಾಣಿಕರ ಸಮಯ, ಅನುಕೂಲ ಮತ್ತು ಸುರಕ್ಷಿತ ಪ್ರಯಾಣಕ್ಕೂ ಸಮಾನ ಆದ್ಯತೆ ದೊರೆಯಬೇಕಿದೆ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
Peepal Media Desk
Peepal Media · ರಾಜ್ಯ ವಿಭಾಗ