ಕನ್ನಡದ ಇಬ್ಬರು ಪ್ಯಾನ್ ಇಂಡಿಯಾ ನಟರು: ಯಶ್ ಮತ್ತು ಪ್ರಕಾಶ್ ರಾಜ್ – ಖ್ಯಾತಿ ಒಂದೇ, ಅಭಿವ್ಯಕ್ತಿಯ ಹಾದಿ ಬೇರೆ!
ಲಿಂಕ್ ನಕಲಿಸಲಾಗಿದೆ ✓
ಕನ್ನಡ ಚಿತ್ರರಂಗಕ್ಕೆ ದೇಶದ ಗಡಿಗಳನ್ನು ದಾಟಿದ ಗುರುತಿಸುವಿಕೆ ಹೊಸತಲ್ಲ. ಆದರೆ ಆ ಗುರುತಿಸುವಿಕೆಯ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗಿದೆ. ಒಂದು ಕಾಲದಲ್ಲಿ ಡಾ. ರಾಜ್ಕುಮಾರ್ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯ ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಗೌರವ ಪಡೆದಿದ್ದರು. ಅವರ ಜನಪ್ರಿಯತೆ ಕೇವಲ ಸಿನಿಮಾ ಯಶಸ್ಸಿಗೆ ಸೀಮಿತವಾಗಿರಲಿಲ್ಲ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಜನರೊಂದಿಗಿನ ಅವರ ಸಂಬಂಧವೇ ಅವರ ವ್ಯಕ್ತಿತ್ವದ ದೊಡ್ಡ ಶಕ್ತಿಯಾಗಿತ್ತು.
ಬೆಂಗಳೂರು: ಇಂದು ಇದೇ ಕನ್ನಡ ಚಿತ್ರರಂಗದಿಂದ ಎರಡು ವಿಭಿನ್ನ ರೀತಿಯಲ್ಲಿ ರಾಷ್ಟ್ರಮಟ್ಟದ ಗಮನ ಸೆಳೆದಿರುವ ಹೆಸರುಗಳು ಯಶ್ ಮತ್ತು ಪ್ರಕಾಶ್ ರಾಜ್.
ಯಶ್, ಕನ್ನಡದ ವಾಣಿಜ್ಯ ಚಿತ್ರರಂಗದ ಸಾಮರ್ಥ್ಯವನ್ನು ಭಾರತದಾದ್ಯಂತ ಪ್ರದರ್ಶಿಸಿದ ನಟ. ಕೆಜಿಎಫ್ ಸರಣಿಯ ಮೂಲಕ ಪ್ರಾದೇಶಿಕ ಭಾಷೆಯ ಸಿನಿಮಾವೊಂದು ರಾಷ್ಟ್ರಮಟ್ಟದ ಬಾಕ್ಸ್ ಆಫೀಸ್ ಮಾರುಕಟ್ಟೆಯನ್ನು ಹೇಗೆ ತಲುಪಬಹುದು ಎಂಬುದಕ್ಕೆ ಉದಾಹರಣೆಯಾದವರು.
ಪ್ರಕಾಶ್ ರಾಜ್, ಕನ್ನಡದ ಗಡಿಯನ್ನು ಬಹಳ ಹಿಂದೆಯೇ ದಾಟಿದ ನಟ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡವರು. ಆದರೆ ಅವರ ಇನ್ನೊಂದು ಗುರುತು ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಕಾರ್ಯಕರ್ತನದ್ದು.
ಇಬ್ಬರೂ ಕನ್ನಡಿಗರು. ಇಬ್ಬರೂ ಬಹುಭಾಷಾ ಚಿತ್ರರಂಗದಲ್ಲಿ ಪ್ರಭಾವ ಹೊಂದಿರುವವರು. ಇಬ್ಬರಿಗೂ ದೇಶದ ವಿವಿಧ ಭಾಗಗಳಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಸಾರ್ವಜನಿಕ ಬದುಕಿನಲ್ಲಿ ಅವರ ಆಯ್ಕೆಗಳು, ಅಭಿವ್ಯಕ್ತಿಯ ವಿಧಾನ ಮತ್ತು ರಾಜಕೀಯದೊಂದಿಗಿನ ಸಂಬಂಧ ವಿಭಿನ್ನವಾಗಿವೆ.
ಒಂದೇ ಭಾಷೆಯ ಚಿತ್ರರಂಗದಿಂದ ಹೊರಹೊಮ್ಮಿದ ಇಬ್ಬರು ರಾಷ್ಟ್ರಮಟ್ಟದ ನಟರು, ಇಂದಿನ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಇಷ್ಟೊಂದು ವಿಭಿನ್ನ ಸಾರ್ವಜನಿಕ ವ್ಯಕ್ತಿತ್ವಗಳನ್ನು ಹೇಗೆ ರೂಪಿಸಿಕೊಂಡಿದ್ದಾರೆ?
ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಅವರ ಅಭಿಮಾನಿಗಳ ಸಂಖ್ಯೆಯನ್ನಾಗಲಿ, ರಾಜಕೀಯ ನಿಲುವುಗಳನ್ನಾಗಲಿ ಅಳೆಯುವುದಕ್ಕಿಂತ, ಅವರ ಸಿನಿಮಾಗಳು, ಮಾಧ್ಯಮಗಳ ವರದಿಗಳು, ಸಾರ್ವಜನಿಕ ಹೇಳಿಕೆಗಳು ಮತ್ತು ಲಭ್ಯವಿರುವ ಅಧಿಕೃತ ಆರ್ಥಿಕ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅಗತ್ಯ.
ಯಶ್: ಕೆಜಿಎಫ್ನಿಂದ ಜಾಗತಿಕ ಸಿನಿಮಾ ಮಾರುಕಟ್ಟೆಯತ್ತ
ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ. ಮೈಸೂರಿನಲ್ಲಿ ಜನಿಸಿದ ಅವರು ಕಿರುತೆರೆ ಮತ್ತು ರಂಗಭೂಮಿಯ ಮೂಲಕ ನಟನಾ ವೃತ್ತಿ ಆರಂಭಿಸಿದರು. 2008ರಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಗಮನ ಸೆಳೆದರು. ನಂತರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಅವರನ್ನು ಕನ್ನಡದ ಪ್ರಮುಖ ವಾಣಿಜ್ಯ ನಟರ ಸಾಲಿಗೆ ತಂದು ನಿಲ್ಲಿಸಿತು.ಆದರೆ ಯಶ್ ಅವರ ವೃತ್ತಿಜೀವನದ ನಿರ್ಣಾಯಕ ತಿರುವು 2018ರ ಕೆಜಿಎಫ್: ಚಾಪ್ಟರ್ 1.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲೂ ಗಮನ ಸೆಳೆಯಿತು. 2022ರಲ್ಲಿ ಬಿಡುಗಡೆಯಾದ ಕೆಜಿಎಫ್: ಚಾಪ್ಟರ್ 2 ಕನ್ನಡ ಚಿತ್ರರಂಗದ ಅತಿದೊಡ್ಡ ವಾಣಿಜ್ಯ ಯಶಸ್ಸುಗಳಲ್ಲಿ ಒಂದಾಯಿತು.
The Hollywood Reporter India ವರದಿ ತನ್ನ 2026ರ ಭಾರತೀಯ ಚಿತ್ರರಂಗದ ಪ್ರಮುಖ ನಟರ ಪಟ್ಟಿಯಲ್ಲಿ ಯಶ್ ಅವರನ್ನು ಸೇರಿಸಿದೆ. ಅದರ ವಿಶ್ಲೇಷಣೆಯ ಪ್ರಕಾರ, ಕೆಜಿಎಫ್ ಸರಣಿಯ ಯಶಸ್ಸು ಯಶ್ ಅವರನ್ನು ಪ್ರಾದೇಶಿಕ ತಾರೆಯಿಂದ ರಾಷ್ಟ್ರಮಟ್ಟದ ತಾರೆಯನ್ನಾಗಿ ಪರಿವರ್ತಿಸಿತು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಯಶ್ ಕೇವಲ ನಟನಾಗಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಲ್ಲ. ನಿರ್ಮಾಪಕ ಮತ್ತು ಬರಹಗಾರನಾಗಿಯೂ ತಮ್ಮ ಸ್ಥಾನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆ Monster Mind Creations. ಟಾಕ್ಸಿಕ್ ಚಿತ್ರದಲ್ಲಿ ನಟಿಸುವುದರ ಜತೆಗೆ ಸಹಲೇಖಕ ಮತ್ತು ಸಹನಿರ್ಮಾಪಕರಾಗಿಯೂ ಅವರು ಕೆಲಸ ಮಾಡಿದ್ದಾರೆ. ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯಲ್ಲೂ ಪಾಲ್ಗೊಂಡಿದ್ದಾರೆ. 2026ರ ಮೇ 17ರಂದು ಪ್ರಕಟವಾದ Variety ಸಂದರ್ಶನದಲ್ಲಿ ಯಶ್ ತಮ್ಮ ಮುಂದಿನ ಸಿನಿಮಾಗಳ ಉದ್ದೇಶದ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ದೀರ್ಘಕಾಲದ ಆಶಯವೆಂಬ ಅವರ ಮಾತು ಈ ಹಂತದಲ್ಲಿ ಮಹತ್ವ ಪಡೆಯುತ್ತದೆ.
ಕೆಜಿಎಫ್ ಯಶಸ್ಸಿನ ಸೂತ್ರವನ್ನೇ ಮತ್ತೆ ಮತ್ತೆ ಬಳಸುವ ಬದಲು ಹೊಸ ಪ್ರಯೋಗಕ್ಕೆ ಮುಂದಾಗಬೇಕೆಂಬ ಅವರ ಆಲೋಚನೆಯನ್ನು ಸಂದರ್ಶನವೊಂದರಲ್ಲಿ ಹಿಂದಯೇ ಹೇಳಿದ್ದರು. ಅದಕ್ಕೆ ಅನುಗುಣವಾಗಿಯೇ ಅವರ ಸಿನೆಮಾ ಬದುಕಿನ ಪಯಣ ಹೊಸ ಹಾದಿಯನ್ನೇ ನಿರ್ಮಿಸಿಕೊಟ್ಟಿದೆ. ಇತ್ತೀಚಿನ ‘ರಾಮಾಯಣ’ ಇತ್ತೀಚಿನ ಹೆಜ್ಜೆ ಅಷ್ಟೆ. ಕನ್ನಡ ಚಿತ್ರವೊಂದು ತನ್ನ ಭಾಷೆಯನ್ನು ಬದಲಿಸದೆ ದೇಶದಾದ್ಯಂತ ದೊಡ್ಡ ಮಾರುಕಟ್ಟೆಯನ್ನು ಪಡೆಯಬಹುದು ಎಂಬುದನ್ನು ಅವರು ವಾಣಿಜ್ಯವಾಗಿ ಸಾಬೀತುಪಡಿಸಿದ್ದಾರೆ.
ಪ್ರಕಾಶ್ ರಾಜ್: ಭಾಷೆಗಳಾಚೆಗಿನ ಅಭಿನಯ, ರಾಜಕೀಯದೊಳಗಿನ ಅಭಿವ್ಯಕ್ತಿ
ಯಶ್ ಅವರ ಪಯಣ ಕನ್ನಡ ಚಿತ್ರರಂಗದಿಂದ ರಾಷ್ಟ್ರಮಟ್ಟದ ನಾಯಕನಾಗುವ ದಾರಿಯಾದರೆ, ಪ್ರಕಾಶ್ ರಾಜ್ ಅವರ ಪಯಣ ಹಲವು ಭಾಷೆಗಳ ಚಿತ್ರರಂಗಗಳಲ್ಲಿ ಪಾತ್ರಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡ ದಾರಿ.
ಪ್ರಕಾಶ್ ರಾಜ್ ಅವರ ವೃತ್ತಿಜೀವನದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳು ಪ್ರಮುಖ ಸ್ಥಾನ ಪಡೆದಿವೆ.
ಹೃದಯಂ, ಇರುವರ್, ಕಾಂಚೀವರಂ, ಸಿಂಗಂ, ವಾಂಟೆಡ್, ದಬಾಂಗ್ 2, ಪೊನ್ನಿಯಿನ್ ಸೆಲ್ವನ್ ಮುಂತಾದ ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅವರ ಪಾತ್ರಗಳು ನಾಯಕನಿಗೆ ಎದುರಾಳಿಯಾಗಿರಬಹುದು, ಕುಟುಂಬದ ಹಿರಿಯನಾಗಿರಬಹುದು ಅಥವಾ ಸಂಕೀರ್ಣ ಸಾಮಾಜಿಕ ವ್ಯಕ್ತಿತ್ವವಾಗಿರಬಹುದು. ಪಾತ್ರದ ಭಾಷೆ ಬದಲಾದರೂ ಅಭಿನಯದ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಪಡೆದಿರುವ ಅವರು ಭಾರತೀಯ ಬಹುಭಾಷಾ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು.
ಆದರೆ 2017ರ ನಂತರ ಅವರ ಸಾರ್ವಜನಿಕ ವ್ಯಕ್ತಿತ್ವದಲ್ಲಿ ರಾಜಕೀಯ ಅಭಿವ್ಯಕ್ತಿಯ ಪಾತ್ರ ಹೆಚ್ಚಾಯಿತು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿ ಅವರು ಸಾರ್ವಜನಿಕವಾಗಿ ಮಾತನಾಡಿದರು. ನಂತರ ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಕೋಮುವಾದಿ ರಾಜಕೀಯದ ಕುರಿತು ತಮ್ಮ ಟೀಕೆಗಳನ್ನು ಮುಂದುವರಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಚುನಾವಣೆಯಲ್ಲಿ ಸುಮಾರು 30 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. 2026ರ ಜುಲೈ 14ರಂದು ThePrint ಪ್ರಕಟಿಸಿದ ಸಂದರ್ಶನದಲ್ಲಿ ಪ್ರಕಾಶ್ ರಾಜ್ ತಮ್ಮ ರಾಜಕೀಯ ನಿಲುವುಗಳಿಂದ ವೃತ್ತಿಜೀವನದ ಮೇಲೆ ಉಂಟಾದ ಪರಿಣಾಮಗಳ ಬಗ್ಗೆ ಮಾತನಾಡಿದ್ದರು. “Everybody is talking about the price I am paying but you should talk about what I am getting from it.” ರಾಜಕೀಯ ಅಭಿವ್ಯಕ್ತಿಗಾಗಿ ತಾವು ನೀಡುತ್ತಿರುವ ಬೆಲೆಯಷ್ಟೇ ಅಲ್ಲ, ಅದರಿಂದ ತಮ್ಮ ಜೀವನಕ್ಕೆ ಸಿಗುತ್ತಿರುವ ಅರ್ಥವೂ ಮುಖ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು.
2026ರ ಫೆಬ್ರವರಿಯಲ್ಲಿ ಮಥುರ್ಭೂಮಿ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿಯೂ ಅವರು ಪ್ರಚಾರಾತ್ಮಕ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. The Telegraph ವರದಿಯೊಂದರ ಪ್ರಕಾರ, ಚಿತ್ರಕಥೆಯ ಆಯ್ಕೆಯಲ್ಲಿ ತಮ್ಮ ಆತ್ಮಸಾಕ್ಷಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದರು.
ಇಲ್ಲಿ ಒಂದು ವ್ಯತ್ಯಾಸವನ್ನು ಸ್ಪಷ್ಟಪಡಿಸಬೇಕು. ಯಶ್ ಅವರ ಜಾಗತಿಕ ಗುರುತಿಸುವಿಕೆ ಮುಖ್ಯವಾಗಿ ಸಿನಿಮಾ ಮಾರುಕಟ್ಟೆ, ನಿರ್ಮಾಣ ಮತ್ತು ದೊಡ್ಡ ಬಜೆಟ್ನ ಚಿತ್ರಗಳ ಮೂಲಕ ವಿಸ್ತರಿಸುತ್ತಿದೆ. ಪ್ರಕಾಶ್ ರಾಜ್ ಅವರ ಬಹುಭಾಷಾ ಗುರುತಿಸುವಿಕೆ ಅಭಿನಯದ ದೀರ್ಘ ಅನುಭವದಿಂದ ಬಂದಿದೆ; ಅವರ ಇತ್ತೀಚಿನ ಸಾರ್ವಜನಿಕ ಚರ್ಚೆಗಳಲ್ಲಿ ರಾಜಕೀಯ ಅಭಿವ್ಯಕ್ತಿಯೂ ಪ್ರಮುಖವಾಗಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳು: ಏನು ಹೇಳುತ್ತವೆ?
ಇಬ್ಬರ ಕುರಿತ ಮಾಧ್ಯಮ ವರದಿಗಳನ್ನು ಪರಿಶೀಲಿಸಿದಾಗ ಗಮನಕ್ಕೆ ಬರುವ ಅಂಶವೆಂದರೆ, ಅವರ ಸುದ್ದಿಮೌಲ್ಯ ಒಂದೇ ರೀತಿಯದ್ದಲ್ಲ. ಯಶ್ ಕುರಿತ ವರದಿಗಳು ಹೆಚ್ಚಾಗಿ ಸಿನಿಮಾದ ವ್ಯಾಪ್ತಿ, ಜಾಗತಿಕ ಮಾರುಕಟ್ಟೆ, ನಿರ್ಮಾಣ ಮತ್ತು ವಾಣಿಜ್ಯ ಸಾಮರ್ಥ್ಯದ ಮೇಲೆ ಕೇಂದ್ರೀಕೃತವಾಗಿವೆ. ಪ್ರಕಾಶ್ ರಾಜ್ ಕುರಿತ ವರದಿಗಳು ಅಭಿನಯದ ಜತೆಗೆ ರಾಜಕೀಯ ಅಭಿವ್ಯಕ್ತಿ, ವೃತ್ತಿಜೀವನದ ಮೇಲೆ ಅದರ ಪರಿಣಾಮ ಮತ್ತು ನಾಗರಿಕ ಚಟುವಟಿಕೆಗಳನ್ನು ಚರ್ಚಿಸುತ್ತವೆ.
| ಮಾಧ್ಯಮ | ನಟ | ವರದಿಯ ಮುಖ್ಯ ವಿಷಯ |
|---|---|---|
| Hollywood Reporter India, 2026 | ಯಶ್ | ಭಾರತದ ಪ್ರಮುಖ ವಾಣಿಜ್ಯ ತಾರೆಗಳ ಪಟ್ಟಿ |
| Variety, 2026 | ಯಶ್ | ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶ |
| NDTV, 2019 | ಯಶ್ | ಕೆಜಿಎಫ್ನಿಂದ ಕನ್ನಡ ಚಿತ್ರರಂಗದ ಬಗ್ಗೆ ಬದಲಾದ ದೃಷ್ಟಿಕೋನ |
| ThePrint, 2026 | ಪ್ರಕಾಶ್ ರಾಜ್ | ರಾಜಕೀಯ ಅಭಿವ್ಯಕ್ತಿ ಮತ್ತು ವೃತ್ತಿಜೀವನದ ಬೆಲೆ |
| Indian Express, 2025 | ಪ್ರಕಾಶ್ ರಾಜ್ | ಚಿತ್ರರಂಗದ ರಾಜಕೀಯ ಮೌನದ ಬಗ್ಗೆ ಟೀಕೆ |
| Telegraph, 2026 | ಪ್ರಕಾಶ್ ರಾಜ್ | ಪ್ರಚಾರಾತ್ಮಕ ಸಿನಿಮಾಗಳನ್ನು ನಿರಾಕರಿಸುವ ನಿಲುವು |
ಇಬ್ಬರೂ ತಮ್ಮದೇ ರೀತಿಯಲ್ಲಿ ಸಾರ್ವಜನಿಕ ಪ್ರಭಾವವನ್ನು ರೂಪಿಸಿಕೊಂಡಿದ್ದಾರೆ. ಒಬ್ಬರ ಪ್ರಭಾವವನ್ನು ಬಾಕ್ಸ್ ಆಫೀಸ್ ಮೂಲಕ ಅಳೆಯಬಹುದು; ಇನ್ನೊಬ್ಬರ ಪ್ರಭಾವವನ್ನು ಅಭಿನಯದ ಜತೆಗೆ ಸಾರ್ವಜನಿಕ ಚರ್ಚೆಯಲ್ಲಿನ ಭಾಗವಹಿಸುವಿಕೆಯ ಮೂಲಕವೂ ಅರ್ಥಮಾಡಿಕೊಳ್ಳಬೇಕು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸಿನಿಮಾ ತಾರೆಯರ ಪ್ರಭಾವವನ್ನು ನಿರ್ಲಕ್ಷಿಸಲಾಗದು. ಆದರೆ ಜನಪ್ರಿಯತೆ ಮತ್ತು ರಾಜಕೀಯ ಪ್ರಾತಿನಿಧ್ಯ ಎರಡೂ ಬೇರೆಬೇರೆ ಸಂಗತಿಗಳು.
ಒಂದು ಕಾಲದಲ್ಲಿ ಸಿನಿಮಾ ತಾರೆಯರು ರಾಜಕೀಯ ಪ್ರವೇಶಿಸಿದಾಗ ಅವರ ಅಭಿಮಾನಿ ಬಳಗವೇ ಚುನಾವಣಾ ಶಕ್ತಿಯಾಗಿ ಪರಿವರ್ತನೆಯಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ಎಂ.ಜಿ.ಆರ್., ಎನ್.ಟಿ. ರಾಮರಾವ್, ಜಯಲಲಿತಾ ಸೇರಿದಂತೆ ಅನೇಕರು ಇದಕ್ಕೆ ಉದಾಹರಣೆ. ಆದರೆ ಇಂದಿನ ಪರಿಸ್ಥಿತಿ ಹೆಚ್ಚು ಸಂಕೀರ್ಣವಾಗಿದೆ.
ಸಾಮಾಜಿಕ ಮಾಧ್ಯಮಗಳು ನಟರ ಹೇಳಿಕೆಗಳನ್ನು ಕ್ಷಣಾರ್ಧದಲ್ಲಿ ದೇಶಾದ್ಯಂತ ತಲುಪಿಸುತ್ತವೆ. ಅದೇ ವೇಗದಲ್ಲಿ ಅವರ ಹೇಳಿಕೆಗಳಿಗೆ ರಾಜಕೀಯ ಬಣ್ಣವೂ ಹಚ್ಚಲಾಗುತ್ತದೆ. ನಟರ ಅಭಿಪ್ರಾಯಗಳು ಅವರ ಸಿನಿಮಾಗಳ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ಚಿತ್ರರಂಗದಲ್ಲಿ ಇದೆ. ಪ್ರಕಾಶ್ ರಾಜ್ ಅವರ ಅನುಭವ ಈ ಚರ್ಚೆಗೆ ಒಂದು ನಿರ್ದಿಷ್ಟ ಉದಾಹರಣೆ. ಅವರೇ ತಮ್ಮ ರಾಜಕೀಯ ಅಭಿವ್ಯಕ್ತಿಯಿಂದ ಕೆಲವು ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ಆದರೆ ಅವರ ಅನುಭವವನ್ನೇ ಇಡೀ ಭಾರತೀಯ ಚಿತ್ರರಂಗದ ಸ್ಥಿತಿಗತಿ ಎಂದು ಸಾಮಾನ್ಯೀಕರಿಸಲಾಗದು.
ಮತ್ತೊಂದೆಡೆ, ಯಶ್ ಅವರಂತಹ ನಟರು ರಾಜಕೀಯ ವಿವಾದಗಳಿಗಿಂತ ಸಿನಿಮಾ ನಿರ್ಮಾಣ ಮತ್ತು ಜಾಗತಿಕ ಮಾರುಕಟ್ಟೆಯ ಮೇಲೆ ತಮ್ಮ ಗಮನ ಕೇಂದ್ರೀಕರಿಸುವುದನ್ನು ಆಯ್ಕೆ ಮಾಡಬಹುದು. ಅದು ಕೂಡ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ. ಪ್ರಜಾಪ್ರಭುತ್ವದಲ್ಲಿ ಒಬ್ಬ ನಟ ರಾಜಕೀಯ ಮಾತನಾಡಲೇಬೇಕು ಎಂಬ ಕಡ್ಡಾಯವಿಲ್ಲ. ಮಾತನಾಡುವ ನಟನನ್ನು ಅವರ ಅಭಿಪ್ರಾಯದ ಕಾರಣಕ್ಕೆ ವೃತ್ತಿಯಿಂದ ದೂರವಿಡುವುದೂ ಆರೋಗ್ಯಕರ ಬೆಳವಣಿಗೆಯಲ್ಲ.
ಕಲಾವಿದನಿಗೆ ಜನಪ್ರಿಯತೆ ದೊರೆಯುವುದು ಪ್ರೇಕ್ಷಕರಿಂದ. ಆದರೆ ಆ ಜನಪ್ರಿಯತೆಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಕಲಾವಿದನ ವೈಯಕ್ತಿಕ ಆಯ್ಕೆ. ಯಶ್ ತಮ್ಮ ಸಿನಿಮಾಗಳ ಮೂಲಕ ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸಲಿ. ಪ್ರಕಾಶ್ ರಾಜ್ ತಮ್ಮ ಅಭಿನಯ ಮತ್ತು ನಾಗರಿಕ ಅಭಿವ್ಯಕ್ತಿಯ ಮೂಲಕ ಚರ್ಚೆಗಳನ್ನು ಮುಂದುವರಿಸಲಿ. ಇಬ್ಬರಿಗೂ ತಮ್ಮದೇ ದಾರಿಯಲ್ಲಿ ಸಾಗುವ ಸ್ವಾತಂತ್ರ್ಯವಿರಬೇಕು.
ಅಂತಿಮವಾಗಿ, ಕನ್ನಡಿಗರು ಹೆಮ್ಮೆಪಡಬೇಕಾದದ್ದು ಒಬ್ಬ ನಟ ಇನ್ನೊಬ್ಬನಿಗಿಂತ ದೊಡ್ಡವನೆಂಬುದರಲ್ಲಿ ಅಲ್ಲ. ಕನ್ನಡದ ನೆಲದಿಂದ ಬಂದ ಕಲಾವಿದರು ದೇಶದ ವಿವಿಧ ಭಾಷೆಗಳಲ್ಲಿ, ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವುದರಲ್ಲಿ. ಅದೇ ಕನ್ನಡ ಚಿತ್ರರಂಗದ ನಿಜವಾದ ವಿಸ್ತಾರ.
ಇದನ್ನೂ ನೋಡಿ:
Murali Maluru
Peepal Media · ವಿಶೇಷ ವಿಭಾಗ
Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.