ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾ ಉಪಗ್ರಹಗಳಿಂದ ನಿಗಾ? 37 ಬಾರಿ ಕಕ್ಷೆ ಬದಲಾವಣೆ ಪತ್ತೆ
ಲಿಂಕ್ ನಕಲಿಸಲಾಗಿದೆ ✓
ದಾಳಿಗೆ ಆರು ದಿನಗಳ ಮೊದಲೇ ಉಪಗ್ರಹಗಳ ಕಕ್ಷೆ ಬದಲಾವಣೆ ಆರಂಭ; ಬೆಂಗಳೂರಿನ ದಿಗಂತಾರ ಸಂಸ್ಥೆಯ ವಿಶ್ಲೇಷಣೆಯಲ್ಲಿ ಅಸಾಮಾನ್ಯ ಚಲನವಲನ ಪತ್ತೆ
ಕಳೆದ ವರ್ಷ ಏಪ್ರಿಲ್ 22ರಂದು ನಡೆದ ಭೀಕರ ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾದ ಭೂ ವೀಕ್ಷಣಾ ಉಪಗ್ರಹಗಳು ಪಹಲ್ಗಾಂ ಪ್ರದೇಶದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಸುಮಾರು 37 ಅಸಾಮಾನ್ಯ ಕಕ್ಷೆ ಬದಲಾವಣೆಗಳನ್ನು ಮಾಡಿಕೊಂಡಿದ್ದವು. ದಾಳಿಯ ದಿನವೂ ಎರಡು ಉಪಗ್ರಹಗಳು ಆ ಪ್ರದೇಶದ ಮೇಲೆ ಹೆಚ್ಚು ಬಾರಿ ಹಾದುಹೋಗುವಂತೆ ತಮ್ಮ ಕಕ್ಷೆಗಳನ್ನು ಬದಲಾಯಿಸಿಕೊಂಡಿದ್ದವು ಎಂದು ಬಾಹ್ಯಾಕಾಶ ಕಣ್ಗಾವಲು ಸ್ಟಾರ್ಟ್ಅಪ್ ಡಿಗಂತಾರ ನಡೆಸಿದ ವಿಶ್ಲೇಷಣೆ ತಿಳಿಸಿದೆ. ಈ ವರದಿಯನ್ನು ದಿ ಪ್ರಿಂಟ್ ವಿಶೇಷವಾಗಿ ಪಡೆದುಕೊಂಡಿದೆ.
ಬೆಂಗಳೂರಿನ ದಿಗಂತಾರ ಸಂಸ್ಥೆ ನಡೆಸಿದ ಬಾಹ್ಯಾಕಾಶ ವಲಯದ ಅರಿವು (Space Domain Awareness – SDA) ವಿಶ್ಲೇಷಣೆಯ ಪ್ರಕಾರ, 2025ರ ಏಪ್ರಿಲ್ 15ರಿಂದ 30ರವರೆಗೆ ಚೀನಾದ ಉಪಗ್ರಹಗಳು ಒಟ್ಟು 37 ಪೂರ್ವಯೋಜಿತ ಕಕ್ಷೆ ಬದಲಾವಣೆಗಳನ್ನು ಮಾಡಿಕೊಂಡಿದ್ದವು. ಇದರಿಂದ ಪಹಲ್ಗಾಂ ಪ್ರದೇಶದ ಮೇಲೆ ಅವು ಹಾದುಹೋಗುವ ಸಂದರ್ಭಗಳು ಹೆಚ್ಚಾಗಿದ್ದವು. ಈ ಬದಲಾವಣೆಗಳು ಅವುಗಳ ಸಾಮಾನ್ಯ ಕಕ್ಷೆಯ ಚಲನೆಯಿಂದ ಭಿನ್ನವಾಗಿದ್ದವು. ದಾಳಿಗೂ ಮುನ್ನವೇ ಈ ಕಕ್ಷೆ ಬದಲಾವಣೆಗಳನ್ನು ಯೋಜಿಸಿರಬಹುದು ಎಂದು ಡಿಗಂತಾರದ ವಿಜ್ಞಾನಿಗಳು ಹೇಳಿದ್ದಾರೆ.
ಈ ಅಸಾಮಾನ್ಯ ಚಟುವಟಿಕೆಗಳು ಉಗ್ರ ದಾಳಿಗೆ ಕನಿಷ್ಠ ಆರು ದಿನಗಳ ಮೊದಲೇ ಆರಂಭವಾಗಿದ್ದವು. ಏಪ್ರಿಲ್ 16ರಂದು ಯಾವೋಗಾನ್-35 01ಎ ಉಪಗ್ರಹ ತನ್ನ ಕಕ್ಷೆಯನ್ನು ಬದಲಾಯಿಸಿಕೊಂಡಿತ್ತು. ಇದರಿಂದ ಪಹಲ್ಗಾಂ ಪ್ರದೇಶದ ಮೇಲೆ ಅದು ಹಾದುಹೋಗುವ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿತ್ತು.
ದಾಳಿ ನಡೆದ ದಿನವಾದ ಏಪ್ರಿಲ್ 22ರಂದು ಯಾವೋಗಾನ್-39 01ಬಿ ಮತ್ತು ಯಾವೋಗಾನ್-39 01ಸಿ ಎಂಬ ಎರಡು ಉಪಗ್ರಹಗಳು ಕೂಡ ತಮ್ಮ ಕಕ್ಷೆಗಳನ್ನು ಬದಲಾಯಿಸಿಕೊಂಡಿದ್ದವು. ಈ ಬದಲಾವಣೆಗಳು ಸಂಜೆ 5.14 ಮತ್ತು 5.59ಕ್ಕೆ ನಡೆದಿದ್ದವು. ಪಹಲ್ಗಾಂನಲ್ಲಿ ಹತ್ಯೆಗಳು ನಡೆದ ಬಳಿಕ ಈ ಕಕ್ಷೆ ಬದಲಾವಣೆಗಳು ಸಂಭವಿಸಿದ್ದವು.
ಈ ಕಕ್ಷೆ ಬದಲಾವಣೆಗಳಿಗೂ ಉಗ್ರ ದಾಳಿಗೂ ಇರುವ ಸಂಬಂಧವನ್ನು ವರದಿ ದೃಢಪಡಿಸಿಲ್ಲ. ಆದರೆ, ಭದ್ರತಾ ಪಡೆಗಳ ಚಲನವಲನವನ್ನು ಗಮನಿಸಲು ಅಥವಾ ಉಗ್ರರು ತಪ್ಪಿಸಿಕೊಳ್ಳಬಹುದಾದ ಮಾರ್ಗಗಳನ್ನು ಅಂದಾಜಿಸಲು ಉಪಗ್ರಹಗಳ ಮೂಲಕ ಆ ಪ್ರದೇಶವನ್ನು ವೀಕ್ಷಿಸಿರಬಹುದು ಎಂಬ ಸಾಧ್ಯತೆಯನ್ನು ಮೂಲಗಳು ಪ್ರಸ್ತಾಪಿಸಿವೆ. ಆದರೆ, ಇದು ಇನ್ನೂ ದೃಢಪಡದ ಊಹೆ ಮಾತ್ರವಾಗಿದೆ.
ಈ ಉಪಗ್ರಹಗಳಲ್ಲಿ ಅತ್ಯಾಧುನಿಕ ಚಿತ್ರಣ ಮತ್ತು ಕಣ್ಗಾವಲು ತಂತ್ರಜ್ಞಾನವಿದ್ದು, ಅವುಗಳನ್ನು ಸೇನಾ ವಿಚಕ್ಷಣ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆಗೆ ಬಳಸಬಹುದು.
ದಾಳಿಯ ಬಳಿಕವೂ ಈ ಉಪಗ್ರಹಗಳ ಮೇಲಿನ ಗಮನ ಕಡಿಮೆಯಾಗಿರಲಿಲ್ಲ. ಏಪ್ರಿಲ್ 29 ಮತ್ತು 30ರಂದು ಅವುಗಳ ಕಕ್ಷೆ ಬದಲಾವಣೆ ಚಟುವಟಿಕೆ ಮತ್ತೆ ಗರಿಷ್ಠ ಮಟ್ಟ ತಲುಪಿತ್ತು. ಆಯ್ದ ಪ್ರದೇಶವನ್ನು ಹೆಚ್ಚು ಹತ್ತಿರದಿಂದ ಮತ್ತು ಸ್ಪಷ್ಟವಾಗಿ ವೀಕ್ಷಿಸಲು ಅನುಕೂಲವಾಗುವ ಕೆಳ ಭೂ ಕಕ್ಷೆಯಲ್ಲಿರುವ ಚೀನಾದ ಉಪಗ್ರಹಗಳು ಏಪ್ರಿಲ್ 29ರಂದು 37 ಬಾರಿ ಹಾಗೂ ಏಪ್ರಿಲ್ 30ರಂದು 31 ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿದ್ದವು.
ಉಪಗ್ರಹದ ಕಕ್ಷೆ ಬದಲಾವಣೆ ಎಂದರೆ, ಭೂಮಿಯ ಮೇಲೆ ಅದು ಯಾವ ಸ್ಥಳದ ಮೇಲೆ ಮತ್ತು ಯಾವ ಸಮಯದಲ್ಲಿ ಹಾದುಹೋಗುತ್ತದೆ ಎಂಬುದನ್ನು ಬದಲಾಯಿಸುವ ಉದ್ದೇಶದಿಂದ ಅದರ ಕಕ್ಷೆ, ದಿಕ್ಕು ಅಥವಾ ವೇಗದಲ್ಲಿ ನಿಯಂತ್ರಿತ ಬದಲಾವಣೆ ಮಾಡುವುದು. ಸಾಮಾನ್ಯವಾಗಿ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಗಳಿಂದ ಕಳುಹಿಸುವ ಆದೇಶಗಳ ಮೂಲಕ ಉಪಗ್ರಹದ ಥ್ರಸ್ಟರ್ಗಳನ್ನು ಚಾಲನೆಗೊಳಿಸಿ ಇಂತಹ ಬದಲಾವಣೆಗಳನ್ನು ಮಾಡಲಾಗುತ್ತದೆ.
ಈ ಕಕ್ಷೆ ಹೊಂದಾಣಿಕೆಗಳಿಂದ ಉಪಗ್ರಹಗಳು ಪಹಲ್ಗಾಂ ಪ್ರದೇಶದ ಮೇಲೆ ಹೆಚ್ಚು ಬಾರಿ ಹಾದುಹೋಗಲು ಸಾಧ್ಯವಾಯಿತು. ಇದರಿಂದ ಆ ಪ್ರದೇಶವನ್ನು ವೀಕ್ಷಿಸಲು ಅವುಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಿದವು.
ವರದಿಯಲ್ಲಿ ಹೀಗೆ ಹೇಳಲಾಗಿದೆ:
“ಸಂಭವನೀಯ ಎಲೆಕ್ಟ್ರಾನಿಕ್ ಗುಪ್ತಚರ ಸಾಮರ್ಥ್ಯ ಹೊಂದಿರುವ ಯಾವೋಗಾನ್-39 ಸರಣಿಯ ಮೂರು ಉಪಗ್ರಹಗಳಲ್ಲಿ ಯಾವೋಗಾನ್-39 01ಬಿ ಮತ್ತು ಯಾವೋಗಾನ್-39 01ಸಿ ದಾಳಿಯ ದಿನವೇ ಕಕ್ಷೆ ಬದಲಾವಣೆ ಮಾಡಿಕೊಂಡಿದ್ದವು. ಇದರ ಪರಿಣಾಮವಾಗಿ ನಿರ್ದಿಷ್ಟ ಗಮನದ ಪ್ರದೇಶದ (AOI) ಮೇಲೆ ಅವು ಹಾದುಹೋಗುವ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.”
ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ನಾಗರಿಕರು, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು, ಮೃತಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದೂ ಒಂದಾಗಿತ್ತು. ಈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು.
ಉಗ್ರ ದಾಳಿ ನಡೆದ ಒಂದು ತಿಂಗಳ ಬಳಿಕ ದಿ ಪ್ರಿಂಟ್ ಪ್ರಕಟಿಸಿದ ಸರಣಿ ವಿಶೇಷ ವರದಿಗಳಲ್ಲಿ, ಅಮೆರಿಕ ಮೂಲದ ಉಪಗ್ರಹ ಸಂಸ್ಥೆಯೊಂದಕ್ಕೆ ಪಹಲ್ಗಾಂ ಪ್ರದೇಶದ ಉಪಗ್ರಹ ಚಿತ್ರಗಳಿಗಾಗಿ ಬಂದಿದ್ದ ಮನವಿಗಳ ಸಂಖ್ಯೆ ದಾಳಿಗೂ ಕೆಲವು ವಾರಗಳ ಮುನ್ನವೇ ಹೆಚ್ಚಾಗಿದ್ದ ಸಂಗತಿ ಬಹಿರಂಗವಾಗಿತ್ತು. ದಾಳಿಯನ್ನು ಯೋಜಿಸಲು ಮತ್ತು ದಾಳಿಯ ಬಳಿಕ ಉಗ್ರರು ತಪ್ಪಿಸಿಕೊಳ್ಳಲು ಈ ಚಿತ್ರಗಳನ್ನು ಬಳಸಿರುವ ಸಾಧ್ಯತೆಯನ್ನೂ ಆ ವರದಿಗಳು ಪ್ರಸ್ತಾಪಿಸಿದ್ದವು.
2025ರಲ್ಲಿ ಪಾಕಿಸ್ತಾನ ತನ್ನ ಉಪಗ್ರಹ ಕಾರ್ಯಕ್ರಮವನ್ನು ಮತ್ತೆ ಚುರುಕುಗೊಳಿಸಿದ್ದನ್ನೂ ದಿ ಪ್ರಿಂಟ್ ಈ ಹಿಂದೆ ವರದಿ ಮಾಡಿತ್ತು. 2025ರ ಜನವರಿಯಿಂದ 2026ರ ಜೂನ್ವರೆಗಿನ 16 ತಿಂಗಳ ಅವಧಿಯಲ್ಲಿ ಪಾಕಿಸ್ತಾನ ಆರು ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಈ ಪೈಕಿ ಐದು ಉಪಗ್ರಹಗಳ ಉಡಾವಣೆಗೆ ಚೀನಾ ನೆರವು ನೀಡಿತ್ತು.
ಇದೀಗ ಪಹಲ್ಗಾಂ ಪ್ರದೇಶದ ಮೇಲೆ ಚೀನಾದ ಉಪಗ್ರಹಗಳು ನಡೆಸಿದ್ದ ಕಣ್ಗಾವಲಿನ ಕುರಿತು ಹೊಸ ಮಾಹಿತಿ ಹೊರಬಂದಿದೆ. ದಿ ಪ್ರಿಂಟ್ ವಿಶೇಷವಾಗಿ ಪಡೆದುಕೊಂಡಿರುವ ಈ ವರದಿಯಲ್ಲಿ ಒಟ್ಟು 1,332 ಚೀನಾದ ಬಾಹ್ಯಾಕಾಶ ವಸ್ತುಗಳನ್ನು ವಿಶ್ಲೇಷಿಸಲಾಗಿದೆ. ಇವುಗಳಲ್ಲಿ 190 ಬಾಹ್ಯಾಕಾಶ ವಸ್ತುಗಳು ಅಧ್ಯಯನದ ಅವಧಿಯಲ್ಲಿ ಕನಿಷ್ಠ ಒಂದು ಕಕ್ಷೆ ಬದಲಾವಣೆ ಮಾಡಿಕೊಂಡಿದ್ದವು. ಆದರೆ, ಪಹಲ್ಗಾಂ ಪ್ರದೇಶದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಸಲುವಾಗಿ ಉಪಗ್ರಹಗಳ ಸಾಮಾನ್ಯ ಚಲನೆಯನ್ನೇ ಬದಲಾಯಿಸಿದ್ದ 37 ಕಕ್ಷೆ ಬದಲಾವಣೆಗಳು ವಿಶೇಷವಾಗಿ ಗಮನ ಸೆಳೆದಿವೆ.
ಯಾವೋಗಾನ್-39 01ಬಿ ಮತ್ತು ಯಾವೋಗಾನ್-39 01ಸಿ ಉಪಗ್ರಹಗಳು ಸಾಮಾನ್ಯವಾಗಿ ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಹಿಂದೂ ಮಹಾಸಾಗರ, ಚೀನಾ ಹಾಗೂ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಂತಹ ನೆರೆಯ ದೇಶಗಳನ್ನು ಒಳಗೊಂಡ ವಿಶಾಲ ಪ್ರದೇಶವನ್ನು ವೀಕ್ಷಿಸುತ್ತವೆ. ಹೀಗಿರುವಾಗ ಪಹಲ್ಗಾಂ ಪ್ರದೇಶದ ಮೇಲೆ ಅವು ಹಾದುಹೋಗುವ ಸಂಖ್ಯೆ ಹೆಚ್ಚಾಗಿರುವುದು ವಿಶ್ಲೇಷಣೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದೆ.
ಕಕ್ಷೆ ಬದಲಾವಣೆಯ ಬಳಿಕ ಈ ಉಪಗ್ರಹಗಳು ಪಹಲ್ಗಾಂ ಮಾತ್ರವಲ್ಲದೆ ಶ್ರೀನಗರ, ಗುಲ್ಮಾರ್ಗ್, ಸೋನಮಾರ್ಗ್ ಮತ್ತು ಜಮ್ಮುವಿನ ಕೆಲವು ಭಾಗಗಳನ್ನೂ ವೀಕ್ಷಿಸಲು ಅನುಕೂಲವಾಗುವ ಸ್ಥಾನದಲ್ಲಿದ್ದವು.
ವರದಿಯಲ್ಲಿ ಹೀಗೆ ಹೇಳಲಾಗಿದೆ:
“ದಾಳಿಯ ಘಟನೆಯೊಂದಿಗೆ ಕಾರ್ಯತಂತ್ರದ ರೀತಿಯಲ್ಲಿ ಹೋಲಿಕೆ ಮಾಡಲು ವಿಶ್ಲೇಷಣೆಯ ಅವಧಿಯನ್ನು ಆಯ್ಕೆ ಮಾಡಲಾಗಿದೆ. ಪಹಲ್ಗಾಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲಿನ ಉಪಗ್ರಹಗಳ ವೀಕ್ಷಣಾ ವ್ಯಾಪ್ತಿಯನ್ನು ಹೆಚ್ಚಿಸಿದ ಅಥವಾ ಆ ಪ್ರದೇಶವನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದ ಚಟುವಟಿಕೆಗಳನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಇಂತಹ ಹೋಲಿಕೆಗಳು ಕಾರ್ಯತಂತ್ರದ ಸಂದೇಶ ರವಾನೆ ಅಥವಾ ಗುಪ್ತಚರ ಮಾಹಿತಿ ಸಂಗ್ರಹಣೆಯ ಉದ್ದೇಶಗಳ ಸಾಧ್ಯತೆಯನ್ನು ಸೂಚಿಸಬಹುದು.”
ಅಸಾಮಾನ್ಯ ಚಲನವಲನಗಳು
ಪಹಲ್ಗಾಂ ಉಗ್ರ ದಾಳಿಗೂ ಮುನ್ನದ ದಿನಗಳಲ್ಲಿ ಯಾವೋಗಾನ್ ಮತ್ತು ಗಾಫೆನ್ (Gaofen) ಸರಣಿಗಳು ಸೇರಿದಂತೆ ಚೀನಾದ ಹಲವು ಉಪಗ್ರಹಗಳು ಅಸಾಮಾನ್ಯ ಕಕ್ಷೆಯ ಚಲನವಲನಗಳನ್ನು ಪ್ರದರ್ಶಿಸಿದ್ದವು ಎಂದು ವಿಶ್ಲೇಷಣೆ ತಿಳಿಸಿದೆ.
ಉದಾಹರಣೆಗೆ, ಅಧಿಕೃತವಾಗಿ ಭೂಮಿಯ ಚಿತ್ರಣಕ್ಕಾಗಿ ಬಳಸುವ ಉಪಗ್ರಹವೆಂದು ಹೇಳಲಾಗುವ ಯಾವೋಗಾನ್-35 01ಎ, ಸಿಗ್ನಲ್ ಗುಪ್ತಚರ (SIGINT) ಅಥವಾ ಎಲೆಕ್ಟ್ರಾನಿಕ್ ಗುಪ್ತಚರ (ELINT) ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಏಪ್ರಿಲ್ 16ರಂದು ಕಕ್ಷೆ ಬದಲಾವಣೆ ಮಾಡಿಕೊಂಡ ಬಳಿಕ ಪಹಲ್ಗಾಂ ಪ್ರದೇಶದ ಮೇಲೆ ಅದು ಹಾದುಹೋಗುವ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿತ್ತು. ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸುವುದಕ್ಕೆ ಆರು ದಿನಗಳ ಮೊದಲೇ ಈ ಬದಲಾವಣೆ ನಡೆದಿತ್ತು.
ಸಿಗ್ನಲ್ ಗುಪ್ತಚರ ಅಥವಾ ಎಲೆಕ್ಟ್ರಾನಿಕ್ ಗುಪ್ತಚರ ಕಾರ್ಯಗಳನ್ನು ನಿರ್ವಹಿಸುವ ಉಪಗ್ರಹಗಳು ಭೂಮಿಯಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ಮತ್ತು ರೇಡಿಯೊ ತರಂಗಾಂತರದ (RF) ಸಂಕೇತಗಳನ್ನು ತಡೆಹಿಡಿಯಲು, ವಿಶ್ಲೇಷಿಸಲು ಹಾಗೂ ಅವುಗಳ ಮೂಲದ ಭೌಗೋಳಿಕ ಸ್ಥಳವನ್ನು ಗುರುತಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಇಂತಹ ಮಾಹಿತಿಯನ್ನು ಸೇನಾ ಮತ್ತು ಕಾರ್ಯತಂತ್ರದ ಗುಪ್ತಚರ ಉದ್ದೇಶಗಳಿಗೆ ಬಳಸಬಹುದು.
ದಾಳಿ ನಡೆದ ದಿನವೇ ಯಾವೋಗಾನ್-39 ಸರಣಿಯ ಮತ್ತೆರಡು ಉಪಗ್ರಹಗಳಾದ ಯಾವೋಗಾನ್-39 01ಬಿ ಮತ್ತು ಯಾವೋಗಾನ್-39 01ಸಿ ಸಂಜೆ 5.14 ಮತ್ತು 5.59ಕ್ಕೆ ತಮ್ಮ ಕಕ್ಷೆಗಳನ್ನು ಬದಲಾಯಿಸಿಕೊಂಡಿದ್ದವು. ಪಹಲ್ಗಾಂನಲ್ಲಿ 26 ಮಂದಿ ಮೃತಪಟ್ಟ ಸುಮಾರು ಒಂದು ಗಂಟೆಯ ಬಳಿಕ ಈ ಬದಲಾವಣೆಗಳು ನಡೆದಿದ್ದವು.
ದಾಳಿಯ ಬಳಿಕ ತಕ್ಷಣವೇ ಕಕ್ಷೆ ಬದಲಾವಣೆಗಳ ಸಂಖ್ಯೆ ಇಳಿಕೆಯಾಗಿತ್ತು ಮತ್ತು ಕೆಲವು ದಿನಗಳವರೆಗೆ ಕಡಿಮೆ ಮಟ್ಟದಲ್ಲಿಯೇ ಮುಂದುವರಿದಿತ್ತು. ಆದರೆ, ವಿಶ್ಲೇಷಣೆಯ ಅವಧಿಯ ಕೊನೆಯ ದಿನಗಳಲ್ಲಿ ಚಟುವಟಿಕೆ ಮತ್ತೆ ತೀವ್ರವಾಗಿ ಹೆಚ್ಚಾಗಿತ್ತು. ಏಪ್ರಿಲ್ 29ರಂದು ದಾಖಲಾದ 37 ಕಕ್ಷೆ ಬದಲಾವಣೆಗಳು 15 ದಿನಗಳ ಅವಧಿಯಲ್ಲೇ ಗರಿಷ್ಠವಾಗಿದ್ದವು. ಏಪ್ರಿಲ್ 30ರಂದು 31 ಬದಲಾವಣೆಗಳು ದಾಖಲಾಗಿದ್ದವು. ದಾಳಿಯ ದಿನಕ್ಕೆ ಮಾತ್ರ ಈ ಉಪಗ್ರಹಗಳ ಹೆಚ್ಚಿದ ವೀಕ್ಷಣಾ ಚಟುವಟಿಕೆ ಸೀಮಿತವಾಗಿರಲಿಲ್ಲ ಎಂಬುದನ್ನು ಈ ಮರುಚಟುವಟಿಕೆ ಸೂಚಿಸುತ್ತದೆ.
ಅಧ್ಯಯನದ ಅವಧಿಯಲ್ಲಿ ಗಮನಿಸಲಾದ ಮತ್ತೊಂದು ಅಸಾಮಾನ್ಯ ಚಟುವಟಿಕೆ ಚೀನಾದ ಪ್ರಾಯೋಗಿಕ ಸಂವಹನ ಮತ್ತು ತಂತ್ರಜ್ಞಾನ ಪರಿಶೀಲನಾ ಉಪಗ್ರಹವಾದ ಶಿಜಿಯಾನ್-20 (SJ-20)ಗೆ ಸಂಬಂಧಿಸಿದೆ. ಇದು ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹವಾಗಿದೆ.
ಏಪ್ರಿಲ್ 16ರಂದು ಶಿಜಿಯಾನ್-20 ತನ್ನ ಚಲನೆಯ ದರವನ್ನು ದಿನಕ್ಕೆ ಸುಮಾರು 0.54 ಡಿಗ್ರಿಯಿಂದ 0.047 ಡಿಗ್ರಿಗೆ ಇಳಿಸಿತ್ತು. ಇದರಿಂದ ದಕ್ಷಿಣ ಭಾರತದ ಉಪಖಂಡ ಮತ್ತು ಹಿಂದೂ ಮಹಾಸಾಗರವನ್ನು ವೀಕ್ಷಿಸಲು ಅನುಕೂಲವಾಗುವ ಸ್ಥಾನಕ್ಕೆ ಅದು ಸರಿದಿತ್ತು.
ಉಪಗ್ರಹದ ಚಲನೆಯ ದರದ ಮಾದರಿ (Drift Rate Pattern – DRP) ಎಂದರೆ, ಭೂಮಿಯ ಮೇಲಿನ ಒಂದು ಸ್ಥಿರ ಉಲ್ಲೇಖ ಬಿಂದುವಿಗೆ ಹೋಲಿಸಿದಾಗ ಉಪಗ್ರಹದ ಸ್ಥಾನವು ಕಾಲಕ್ರಮೇಣ ಎಷ್ಟು ವೇಗವಾಗಿ ಬದಲಾಗುತ್ತದೆ ಎಂಬುದನ್ನು ಸೂಚಿಸುವ ಅಳತೆ. ಈ ದರವನ್ನು ಕಡಿಮೆ ಮಾಡುವ ಮೂಲಕ ಉಪಗ್ರಹದ ರೇಖಾಂಶದ ಚಲನೆಯನ್ನು ಗಣನೀಯವಾಗಿ ಬದಲಾಯಿಸಬಹುದು. ಇದರಿಂದ ಅದು ಹೆಚ್ಚು ಸ್ಥಿರವಾದ ಕಕ್ಷೆಯ ಸ್ಥಾನಕ್ಕೆ ಹತ್ತಿರವಾಗುತ್ತದೆ. ನಿರ್ದಿಷ್ಟ ಪ್ರದೇಶವನ್ನು ನಿರಂತರವಾಗಿ ವೀಕ್ಷಿಸಲು ಇಂತಹ ಸ್ಥಾನ ಅನುಕೂಲಕರವಾಗಿರುತ್ತದೆ.
ಚೀನಾದ ತಂತ್ರಜ್ಞಾನ
ಯಾವೋಗಾನ್ ಉಪಗ್ರಹ ಸರಣಿಯನ್ನು 2006ರಲ್ಲಿ ಉಡಾವಣೆ ಮಾಡಲಾಗಿತ್ತು. ‘ಯಾವೋಗಾನ್’ ಎಂಬ ಪದಕ್ಕೆ ಸ್ಥೂಲವಾಗಿ ‘ದೂರ ಸಂವೇದಿ’ ಅಥವಾ ‘ರಿಮೋಟ್ ಸೆನ್ಸಿಂಗ್’ ಎಂಬ ಅರ್ಥವಿದೆ. ಈ ಸರಣಿಯ ಸುಮಾರು 168 ಉಪಗ್ರಹಗಳು ಪ್ರಸ್ತುತ ಕಕ್ಷೆಯಲ್ಲಿವೆ.
ಚೀನಾದ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಈ ಉಪಗ್ರಹಗಳನ್ನು ವೈಜ್ಞಾನಿಕ ಪ್ರಯೋಗಗಳು, ಭೂ ಸಂಪನ್ಮೂಲ ಸಮೀಕ್ಷೆ, ಬೆಳೆ ಇಳುವರಿ ಅಂದಾಜು, ಪರಿಸರ ಮೇಲ್ವಿಚಾರಣೆ ಮತ್ತು ವಿಪತ್ತು ತಡೆಗಟ್ಟುವ ಉದ್ದೇಶಗಳಿಗೆ ಬಳಸಲಾಗುತ್ತದೆ.
ಆದರೆ, ಭಾರತದ ಮತ್ತು ಪಾಶ್ಚಿಮಾತ್ಯ ದೇಶಗಳ ಹಲವು ರಕ್ಷಣಾ ವಿಶ್ಲೇಷಕರು ಯಾವೋಗಾನ್ ಸರಣಿಯ ಅನೇಕ ಉಪಗ್ರಹಗಳು ಚೀನಾದ ಬಾಹ್ಯಾಕಾಶ ಆಧಾರಿತ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ (ISR) ವ್ಯವಸ್ಥೆಯ ಭಾಗವಾಗಿವೆ ಎಂದು ಹೇಳಿದ್ದಾರೆ.
ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ (MP-IDSA) ಸಂಸ್ಥೆಯ ಸಹಾಯಕ ಸಂಶೋಧಕ ಅಭಿಷೇಕ್ ಕುಮಾರ್ ದರ್ಬೆ ಅವರು ತಮ್ಮ ಸಂಶೋಧನಾ ಪ್ರಬಂಧವೊಂದರಲ್ಲಿ, ಯಾವೋಗಾನ್ ಉಪಗ್ರಹ ಸರಣಿಯ ಮೂಲಕ ಚೀನಾ ಭೂಮಿಯ ಮೇಲ್ಮೈಯ ಮೂರನೇ ಒಂದು ಭಾಗದಷ್ಟು ಪ್ರದೇಶದ ಮೇಲೆ ಕಣ್ಗಾವಲು ಹೊಂದಿದೆ ಎಂದು ಹೇಳಿದ್ದಾರೆ.
ಅವರ ಸಂಶೋಧನಾ ಪ್ರಬಂಧದಲ್ಲಿ ಹೀಗೆ ಉಲ್ಲೇಖಿಸಲಾಗಿದೆ:
“ಈ ಉಪಗ್ರಹಗಳ ರೆಸಲ್ಯೂಷನ್ ದೊಡ್ಡ ಹಡಗುಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ವರ್ಗವನ್ನು ಗುರುತಿಸಲು ಸಾಕಾಗುತ್ತದೆ. ಈ ಉಪಗ್ರಹಗಳು ಹೆಚ್ಚಿನ ಸ್ಪಷ್ಟತೆಯ ಚಿತ್ರಣ ಹಾಗೂ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ, ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿಯೂ ಕಣ್ಗಾವಲು ನಡೆಸುವ ಸಾಮರ್ಥ್ಯ ಹೊಂದಿವೆ. ಮೋಡ ಕವಿದಿದ್ದರೂ ಇವು ಕಾರ್ಯನಿರ್ವಹಿಸಬಲ್ಲವು. ಯಾವೋಗಾನ್ ಸರಣಿಯ ಉಪಗ್ರಹಗಳ ಪ್ರಮುಖ ಉದ್ದೇಶಗಳಲ್ಲಿ ಸಾಗರ ಕಣ್ಗಾವಲು ಕೂಡ ಒಂದು. ಇವು ಹಡಗುಗಳು ಮತ್ತು ಮುನ್ನೆಚ್ಚರಿಕೆ ವಿಮಾನಗಳನ್ನು ಪತ್ತೆಹಚ್ಚಬಲ್ಲವು.”
ಯಾವೋಗಾನ್-39 01ಬಿ ಮತ್ತು 01ಸಿ ಉಪಗ್ರಹಗಳು ಸುಮಾರು 35 ಡಿಗ್ರಿಗಳ ಕಕ್ಷೆಯ ಇಳಿಜಾರನ್ನು ಹೊಂದಿವೆ. ಈ ಕಾರಣದಿಂದ ಲಡಾಖ್ ಮತ್ತು ಕಾರಕೋರಂ ಪ್ರದೇಶಗಳನ್ನು ಒಳಗೊಂಡ ಭಾರತದ ಅತ್ಯಂತ ಉತ್ತರದ ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭೂಭಾಗವನ್ನು ನಕ್ಷೆ ರೂಪದಲ್ಲಿ ದಾಖಲಿಸುವ ಸಾಮರ್ಥ್ಯ ಅವುಗಳಿಗಿದೆ.
ಈ ಉಪಗ್ರಹ ಸರಣಿಯಲ್ಲಿ ವಿವಿಧ ರೀತಿಯ ವಿಚಕ್ಷಣ ಉಪಗ್ರಹಗಳಿವೆ. ಅವುಗಳಲ್ಲಿ ಕೆಲವು ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ತಂತ್ರಜ್ಞಾನವನ್ನು ಹೊಂದಿವೆ. ಈ ತಂತ್ರಜ್ಞಾನವು ಭೂಮಿಯ ಕಡೆಗೆ ರೇಡಾರ್ ಸಂಕೇತಗಳನ್ನು ಕಳುಹಿಸಿ, ಅವು ಪ್ರತಿಫಲಿಸಿ ಮರಳಿದ ನಂತರ ಅವುಗಳನ್ನು ವಿಶ್ಲೇಷಿಸಿ ಚಿತ್ರಗಳನ್ನು ಸಿದ್ಧಪಡಿಸುತ್ತದೆ. ಸಾಮಾನ್ಯ ಕ್ಯಾಮೆರಾಗಳಿಗಿಂತ ಭಿನ್ನವಾಗಿ, ಎಸ್ಎಆರ್ ಉಪಗ್ರಹಗಳು ರಾತ್ರಿ ಮತ್ತು ಮೋಡ ಕವಿದ ವಾತಾವರಣದಲ್ಲಿಯೂ ಚಿತ್ರಗಳನ್ನು ಸೆರೆಹಿಡಿಯಬಲ್ಲವು.
ಈ ಸರಣಿಯ ಬಹುತೇಕ ಉಪಗ್ರಹಗಳು ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್ಗಳನ್ನೂ ಬಳಸುತ್ತವೆ. ಇವು ಹೆಚ್ಚಿನ ಸ್ಪಷ್ಟತೆಯ ಕ್ಯಾಮೆರಾಗಳಂತೆ ಕಾರ್ಯನಿರ್ವಹಿಸುತ್ತವೆ. ಗೋಚರ ಬೆಳಕು ಮತ್ತು ಅತಿಗೆಂಪು ಬೆಳಕಿನ ಮೂಲಕ ಚಿತ್ರಗಳನ್ನು ಸೆರೆಹಿಡಿಯುತ್ತವೆ.
ಪಾಕಿಸ್ತಾನ-ಚೀನಾ ಬಾಹ್ಯಾಕಾಶ ಸಹಭಾಗಿತ್ವ
ಡಿಗಂತಾರದ ಈ ವರದಿಯೊಂದೇ 2025ರ ಪಹಲ್ಗಾಂ ಉಗ್ರ ದಾಳಿಯಲ್ಲಿ ಚೀನಾದ ನೇರ ಭಾಗವಹಿಸುವಿಕೆಯನ್ನು ಸಾಬೀತುಪಡಿಸುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ಉಪಯುಕ್ತವಾಗಬಹುದಾದ ಗುಪ್ತಚರ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದ ಚೀನಾದ ಉಪಗ್ರಹಗಳ ಅಸಾಮಾನ್ಯ ಚಟುವಟಿಕೆಗಳನ್ನು ಇದು ಗುರುತಿಸಿದೆ.
ಪಾಕಿಸ್ತಾನ ಉಡಾವಣೆ ಮಾಡಿದ ಆರು ಉಪಗ್ರಹಗಳ ಪೈಕಿ ಐದು ಉಪಗ್ರಹಗಳಿಗೆ ಚೀನಾ ತಾಂತ್ರಿಕ ಮತ್ತು ಉಡಾವಣಾ ನೆರವು ನೀಡಿತ್ತು. ಚೀನಾದ ಸ್ವಂತ ಉಪಗ್ರಹಗಳ ಪೈಕಿ ಬಹುತೇಕ ಉಪಗ್ರಹಗಳು ನಾಗರಿಕ ಮತ್ತು ಸೇನಾ ಉದ್ದೇಶಗಳೆರಡಕ್ಕೂ ಬಳಸಬಹುದಾದ ದ್ವಿ-ಬಳಕೆಯ (Dual-use) ಸಾಮರ್ಥ್ಯ ಹೊಂದಿವೆ.
ಗಾಫೆನ್ ಮತ್ತು ಜಿಯುವಾನ್ (Ziyuan) ಸರಣಿಯಂತಹ ಉಪಗ್ರಹಗಳು ಭಾರತದ ಭೂಭಾಗದ ಹೆಚ್ಚಿನ ಸ್ಪಷ್ಟತೆಯ ಚಿತ್ರಣ ಮತ್ತು ಬಹುವರ್ಣೀಯ ದತ್ತಾಂಶವನ್ನು ಒದಗಿಸಬಲ್ಲವು.
Peepal Media
Peepal Media · ದೇಶ ವಿಭಾಗ