ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ಬಂದ್: ಸಚಿವ ಶಿವರಾಜ್ ತಂಗಡಗಿ
ಲಿಂಕ್ ನಕಲಿಸಲಾಗಿದೆ ✓
ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 200 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಮುಂದುವರಿಯಲಿದ್ದು, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಯೋಜನೆಗಳಿಗೆ ಕತ್ತರಿ ಬೀಳಲಿದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗಿವೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರಿಗೆ ಆರ್ಥಿಕ ಬಲ ನೀಡುವುದರ ಜೊತೆಗೆ ಅವರ ಜೀವನಮಟ್ಟ ಸುಧಾರಣೆಗೂ ಕಾರಣವಾಗಿವೆ. ರಾಜ್ಯದ ಮನೆಮನೆಗಳಲ್ಲಿ ಆರ್ಥಿಕ ನೆಮ್ಮದಿ ಮೂಡಿಸುವಲ್ಲಿ ಈ ಯೋಜನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರು ಮತಯಾಚನೆಗಾಗಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ ಜನಸಾಮಾನ್ಯರಿಗಾಗಿ ಜಾರಿಗೆ ತಂದ ಯೋಜನೆಗಳೇನು ಎಂಬುದನ್ನು ಮಹಿಳೆಯರು ಪ್ರಶ್ನಿಸಬೇಕು. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿ ಬೆಂಬಲಿಗರ ಕುಟುಂಬಗಳಿಗೂ ಅವುಗಳ ಪ್ರಯೋಜನ ತಲುಪುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಸಚಿವರು, ಅಧಿಕಾರಕ್ಕೆ ಬರುವ ಮುನ್ನ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವ ಭರವಸೆ ನೀಡಲಾಗಿತ್ತು. ಈ ನಿರೀಕ್ಷೆಯಲ್ಲಿ ಜನರು ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ತೆರೆದಿದ್ದರು. ಆದರೆ ಭರವಸೆಯಂತೆ ಹಣ ಜಮೆಯಾಗಿಲ್ಲ ಎಂದು ಆರೋಪಿಸಿದರು.
Peepal Media Desk
Peepal Media · ರಾಜಕೀಯ ವಿಭಾಗ