ಭಾರತದ ಸಂವಿಧಾನ ; ಸಮಾನತೆಯ ಋತುಗಾನ
ಲಿಂಕ್ ನಕಲಿಸಲಾಗಿದೆ ✓
‘..ಸಂವಿಧಾನವನ್ನು ಗೌರವಿಸುವುದೆಂದರೆ ಅದರ ಮೌಲ್ಯಗಳನ್ನು ಪ್ರಶ್ನಾತೀತವಾಗಿ ಹೊಗಳುವುದಲ್ಲ; ಅದರ
ಆಶಯಗಳಿಗೆ ವಿರುದ್ಧವಾಗಿ ನಡೆಯುವ ಅನ್ಯಾಯವನ್ನು ಗುರುತಿಸಿ, ಕಾನೂನುಬದ್ಧವಾಗಿ ಪ್ರಶ್ನಿಸುವುದೂ
ಸಂವಿಧಾನಾತ್ಮಕ ನಾಗರಿಕತೆಯ ಭಾಗವಾಗಿದೆ.’ ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ
“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ,
ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸಂವಿಧಾನ ಸಭೆಯಲ್ಲಿ 1949ರ ನವೆಂಬರ್ 26ನೇ ದಿನದಂದು ಅಂಗೀಕರಿಸಿ
ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ” ಎನ್ನುವುದಕ್ಕೆ ಈ 77 ವರ್ಷಗಳು ತುಂಬಿವೆ. ಪ್ರತಿವರ್ಷ ನವೆಂಬರ್ 26
ರಂದು “ಭಾರತದ ಸಂವಿಧಾನ ದಿನ”ವನ್ನಾಗಿ (Constitution Day) ಆಚರಿಸಿ ಗೌರವಿಸುತ್ತಾ ಬರಲಾಗಿದೆ.
ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ಸಂವಿಧಾನ. ದೇಶದ ಆಡಳಿತ ವ್ಯವಸ್ಥೆ, ನಾಗರಿಕರ ಹಕ್ಕುಗಳು,
ಕರ್ತವ್ಯಗಳು, ನ್ಯಾಯಾಂಗದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳಿಗೆ ಸಂವಿಧಾನ
ದಿಕ್ಕು ತೋರಿಸುತ್ತದೆ. ಹೀಗಾಗಿ “ಸಂವಿಧಾನ್ ದಿನ”ವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನ
ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ನೆನಪಿಸುವ ಮಹತ್ವದ ದಿನವಾಗಿದೆ. ಭಾರತದ ಸಂವಿಧಾನವನ್ನು
ಅಂಗೀಕರಿಸಿದ ಆ ಐತಿಹಾಸಿಕ ಕ್ಷಣವನ್ನು ಸ್ಮರಿಸುತ್ತಾ, ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂತೆ
ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಮತ್ತು ಮಾಡಲೇಬೇಕಿದೆ. ಆ ಪ್ರಯತ್ನದ
ಭಾಗವೇ ಈ ಲೇಖನ.
ಹಿನ್ನೆಲೆ :
ಸ್ವಾತಂತ್ರ್ಯ ಬಂದ ನಂತರ ಭಾರತಕ್ಕೆ ತನ್ನದೇ ಆದ ಸಂವಿಧಾನದ ಅಗತ್ಯವಿತ್ತು. 1946ರಲ್ಲಿ ಸಂವಿಧಾನ
ಸಭೆಯನ್ನು (Constituent Assembly) ರಚಿಸಲಾಯಿತು. ಡಾ. ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿದ್ದರು.
ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ
ಅನೇಕ ಮಹಾನ್ ನಾಯಕರು ಭಾಗವಹಿಸಿದ್ದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್.
ಅಂಬೇಡ್ಕರ್ ಅವರನ್ನು ನೇಮಿಸಲಾಯಿತು. ಸುಮಾರು 2 ವರ್ಷ, 11 ತಿಂಗಳು, 18 ದಿನಗಳ ಕಾಲ (ಒಟ್ಟು 165 ದಿನ)
ಸುದೀರ್ಘ ಚರ್ಚೆ ನಡೆದ ನಂತರ, 1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಭಾರತದ
ಸಂವಿಧಾನವನ್ನು ಅಂಗೀಕರಿಸಿತು. ಮೂಲ ಸಂವಿಧಾನದಲ್ಲಿ ಪೀಠಿಕೆ, 395 ವಿಧಿಗಳು (22 ಭಾಗಗಳಲ್ಲಿ) ಮತ್ತು 8
ಅನುಸೂಚಿಗಳಿದ್ದವು.
ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. ಆ ದಿನವನ್ನು ಗಣರಾಜ್ಯೋತ್ಸವವಾಗಿ
ಆಚರಿಸಲಾಗುತ್ತದೆ. ಏಕೆಂದರೆ 1930ರ ಜನವರಿ 26ರಂದು ಕಾಂಗ್ರೆಸ್ ಪೂರ್ಣ ಸ್ವರಾಜ್ ಘೋಷಣೆಯನ್ನು
ಮಾಡಿತ್ತು. ಹೀಗಾಗಿ ಅಂಗೀಕಾರದ ದಿನವಾದ ನವೆಂಬರ್ 26ನ್ನು ಪ್ರತ್ಯೇಕವಾಗಿ ಸ್ಮರಿಸಲು
ನಿರ್ಧರಿಸಲಾಯಿತು. 2015ರಲ್ಲಿ ಡಾ. ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷದಲ್ಲಿ ಭಾರತ ಸರ್ಕಾರವು
ನವೆಂಬರ್ 26ನ್ನು ಅಧಿಕೃತವಾಗಿ “ಸಂವಿಧಾನ ದಿನ” ಎಂದು ಘೋಷಿಸಿತು. ಅದಕ್ಕೂ ಮೊದಲು ಇದನ್ನು
ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸುತ್ತಿದ್ದರು.
- 1946ರ ಡಿಸೆಂಬರ್ 9: ಸಂವಿಧಾನ ಸಭೆಯ ಮೊದಲ ಸಭೆ ನಡೆಯಿತು.
- 1946ರ ಡಿಸೆಂಬರ್ 11: ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿ
ಆಯ್ಕೆಯಾದರು. - 1947ರ ಆಗಸ್ಟ್ 29: ಸಂವಿಧಾನದ ಕರಡು ರಚನಾ ಸಮಿತಿ (Drafting Committee) ರಚಿಸಲಾಯಿತು.
- 1949ರ ನವೆಂಬರ್ 26: ಭಾರತದ ಸಂವಿಧಾನವನ್ನು ಸಂವಿಧಾನ ಸಭೆಯು ಅಂಗೀಕರಿಸಿತು.
- 1950ರ ಜನವರಿ 26: ಭಾರತದ ಸಂವಿಧಾನ ಜಾರಿಗೆ ಬಂತು. ಭಾರತವು ಗಣರಾಜ್ಯವಾಯಿತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್
ಭಾರತದ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅತ್ಯಂತ ಮಹತ್ವದ್ದು.
ಅವರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಕಾನೂನು ವ್ಯವಸ್ಥೆಗಳು,
ಪ್ರಜಾಪ್ರಭುತ್ವದ ತತ್ವಗಳು, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳು ಮತ್ತು ಸಮಾನತೆಯ
ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ರಾಜಕೀಯ ಸ್ವಾತಂತ್ರ್ಯ ಮಾತ್ರ ಸಾಕಾಗುವುದಿಲ್ಲ. ಸಮಾಜದಲ್ಲಿ ಜಾತಿ,
ವರ್ಗ, ಲಿಂಗ ಮತ್ತು ಆರ್ಥಿಕ ಅಸಮಾನತೆಗಳು ಮುಂದುವರಿದಿದ್ದರೆ ನಿಜವಾದ ಸ್ವಾತಂತ್ರ್ಯ ಸಾಧ್ಯವಿಲ್ಲ.
ಆದ್ದರಿಂದ ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದೊಂದಿಗೆ
ಬೆಸೆದುಕೊಂಡಿರಬೇಕು ಎಂಬುದು ಅವರ ಆಶಯವಾಗಿತ್ತು. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ
ಘನತೆಯಿಂದ ಬದುಕುವ ಅವಕಾಶ ನೀಡಬೇಕು, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರಬೇಕು ಹಾಗೂ
ಶೋಷಿತ ಮತ್ತು ದುರ್ಬಲ ವರ್ಗಗಳಿಗೆ ನ್ಯಾಯ ದೊರಕಿಸಬೇಕು ಎಂಬ ತತ್ವಗಳಿಗೆ ಸಂವಿಧಾನದಲ್ಲಿ
ಅಂಬೇಡ್ಕರ್ ರವರು ಮಹತ್ವ ನೀಡಿದರು.
ಸಂವಿಧಾನದ ಪೀಠಿಕೆ :
ಭಾರತದ ಸಂವಿಧಾನದ ಪ್ರಸ್ತಾವನೆ (Preamble) ಸಂವಿಧಾನದ ಆತ್ಮ ಮತ್ತು ಮೂಲ ಆಶಯಗಳನ್ನು
ಪ್ರತಿಬಿಂಬಿಸುತ್ತದೆ. ಇದು ಭಾರತದ ಆಡಳಿತ ವ್ಯವಸ್ಥೆಯ ಗುರಿ ಹಾಗೂ ನಾಗರಿಕ ಸಮಾಜ ನಿರ್ಮಾಣದ ಕನಸನ್ನು
ವ್ಯಕ್ತಪಡಿಸುತ್ತದೆ.ಈ ಪ್ರಸ್ತಾವನೆಯಲ್ಲಿ ಭಾರತವನ್ನು, ಸಾರ್ವಭೌಮ (Sovereign), ಸಮಾಜವಾದಿ (Socialist),
ಧರ್ಮನಿರಪೇಕ್ಷ (Secular), ಪ್ರಜಾಪ್ರಭುತ್ವ (Democratic), ಗಣರಾಜ್ಯ (Republic) ಎಂದು ಘೋಷಿಸಲಾಗಿದೆ.
ಅಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ:
- ನ್ಯಾಯ – ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ
- ಸ್ವಾತಂತ್ರ್ಯ – ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ
- ಸಮಾನತೆ – ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ
- ಭ್ರಾತೃತ್ವ – ವ್ಯಕ್ತಿಯ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಅಖಂಡತೆ
ಇವುಗಳನ್ನು ಒದಗಿಸುವುದು ಸಂವಿಧಾನದ ಮೂಲ ಆಶಯವಾಗಿದೆ.
ಸಂವಿಧಾನ ದಿನದ ಪ್ರಸ್ತುತತೆ
ಸಂವಿಧಾನವು ಕೇವಲ ನ್ಯಾಯಾಲಯಗಳಲ್ಲಿ ಬಳಸುವ ಕಾನೂನು ಪುಸ್ತಕವಲ್ಲ; ಅದು ಸಮಾಜದ ಪ್ರತಿಯೊಂದು
ಕ್ಷೇತ್ರದಲ್ಲಿಯೂ ಮಾರ್ಗದರ್ಶಕವಾಗಿರುವ ಸಜೀವ ದಾಖಲೆಯಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ, ಸಾಮಾಜಿಕ
ನ್ಯಾಯ ಮತ್ತು ಸಮಾನತೆ, ಮೂಲಭೂತ ಹಕ್ಕುಗಳ ಅರಿವು, ಧರ್ಮನಿರಪೇಕ್ಷತೆ ಮತ್ತು ಬಹುತ್ವದ ರಕ್ಷಣೆ
ಸಂವಿಧಾನದ ಪ್ರಮುಖ ಆಶಯವಾಗಿದೆ.
ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು, ಸಂವಿಧಾನಾತ್ಮಕ ಪರಿಹಾರದ ಹಕ್ಕು ಗಳನ್ನು ಭಾರತದ ನಾಗರಿಕರಿಗೆ
ಸಂವಿಧಾನವು ನೀಡಿದೆ. ಈ ಹಕ್ಕುಗಳ ಅರಿವು ಪ್ರತಿಯೊಬ್ಬ ನಾಗರಿಕನಿಗೂ ಇರಬೇಕು. ಹಕ್ಕುಗಳ ಅರಿವಿಲ್ಲದ
ನಾಗರಿಕನು ಅನ್ಯಾಯ, ಶೋಷಣೆ ಮತ್ತು ಅಧಿಕಾರ ದುರುಪಯೋಗದ ವಿರುದ್ಧ ಪರಿಣಾಮಕಾರಿಯಾಗಿ
ಹೋರಾಡಲು ಸಾಧ್ಯವಾಗುವುದಿಲ್ಲ. ಜನರಲ್ಲಿ ಆ ಅರಿವು ಮೂಡಿಸುವ ಕೆಲಸವನ್ನು “ಸಂವಿಧಾನ ದಿನ”ದಂದು
ಕೈಗೊಳ್ಳಬೇಕಾಗಿದೆ.
ಭಾರತವು ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜಾತಿಗಳು ಮತ್ತು ಜನಾಂಗಗಳ ಜನರು ವಾಸಿಸುವ
ದೇಶ. ಇಂತಹ ವೈವಿಧ್ಯಮಯ ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಕಾಪಾಡಲು ಸಂವಿಧಾನವು
ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಾನ ನಾಗರಿಕತ್ವದ ತತ್ವಗಳನ್ನು ಪ್ರತಿಪಾದಿಸುತ್ತದೆ. ಸಂವಿಧಾನ ದಿನವು
ಧರ್ಮ, ಭಾಷೆ ಅಥವಾ ಸಂಸ್ಕೃತಿಯ ಆಧಾರದ ಮೇಲೆ ದ್ವೇಷ ಮತ್ತು ತಾರತಮ್ಯವನ್ನು ಬೆಳೆಸದೆ,
ವೈವಿಧ್ಯತೆಯನ್ನು ಗೌರವಿಸುವ ನಾಗರಿಕ ಮನೋಭಾವ ಬೆಳೆಸಬೇಕೆಂದು ಕರೆ ನೀಡುತ್ತದೆ.
ಅಧಿಕಾರದ ದುರುಪಯೋಗದ ವಿರುದ್ಧ ಸಂವಿಧಾನ
ಸಂವಿಧಾನವು ಸರ್ಕಾರದ ಎಲ್ಲಾ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಅಧಿಕಾರ
ನೀಡುವುದರ ಜೊತೆಗೆ ಅವುಗಳ ಕಾರ್ಯವ್ಯಾಪ್ತಿಗೂ ಮಿತಿಗಳನ್ನು ವಿಧಿಸುತ್ತದೆ. ಯಾವುದೇ ಸರ್ಕಾರ, ಅಧಿಕಾರಸ್ಥ
ವ್ಯಕ್ತಿ ಅಥವಾ ಸಂಸ್ಥೆಯು ಕಾನೂನಿಗಿಂತ ಮೇಲಲ್ಲ. ಅಧಿಕಾರವು ಜನರ ಹಿತಕ್ಕಾಗಿ ಬಳಕೆಯಾಗಬೇಕು; ಜನರ
ಹಕ್ಕುಗಳನ್ನು ಕಸಿದುಕೊಳ್ಳಲು ಅಥವಾ ದಮನಿಸಲು ಅಲ್ಲ. ಹೀಗಾಗಿ ಸಂವಿಧಾನ ದಿನವು ಅಧಿಕಾರಕ್ಕಿಂತ
ಕಾನೂನು ದೊಡ್ಡದು, ವ್ಯಕ್ತಿಗಿಂತ ಸಂಸ್ಥೆಗಳು ಮತ್ತು ಸಂವಿಧಾನಾತ್ಮಕ ನಿಯಮಗಳು ಮುಖ್ಯ ಎಂಬ ತತ್ವವನ್ನು
ನೆನಪಿಸುತ್ತದೆ.
ಸಂವಿಧಾನ ಮತ್ತು ನಾಗರಿಕರ ಕರ್ತವ್ಯ
ಸಂವಿಧಾನವು ನಾಗರಿಕರಿಗೆ ಹಕ್ಕುಗಳನ್ನು ನೀಡಿದಂತೆ, ನಾಗರಿಕರಿಂದ ಕೆಲವು ಕರ್ತವ್ಯಗಳನ್ನೂ ನಿರೀಕ್ಷಿಸುತ್ತದೆ.
ಹಕ್ಕುಗಳು ಮತ್ತು ಕರ್ತವ್ಯಗಳು ಒಂದಕ್ಕೊಂದು ಪೂರಕವಾಗಿವೆ. ಹಕ್ಕುಗಳ ಬಗ್ಗೆ ಮಾತ್ರ ಮಾತನಾಡಿ
ಕರ್ತವ್ಯಗಳನ್ನು ಮರೆತರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಲು ಸಾಧ್ಯವಿಲ್ಲ.
ಸಂವಿಧಾನದ 51Aನೇ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯಗಳ ಆಶಯದಂತೆ ನಾಗರಿಕರು:
* ಸಂವಿಧಾನವನ್ನು ಗೌರವಿಸಬೇಕು ಹಾಗೂ ಅದರ ಆದರ್ಶ, ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು
ರಾಷ್ಟ್ರಗೀತೆಯನ್ನು ಗೌರವಿಸಬೇಕು.
* ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಯನ್ನು ಕಾಪಾಡಬೇಕು.
* ಧರ್ಮ, ಭಾಷೆ, ಪ್ರದೇಶ ಮತ್ತು ವರ್ಗಗಳ ನಡುವಿನ ಭಿನ್ನತೆಗಳನ್ನು ಮೀರಿ ಸಾಮರಸ್ಯ ಬೆಳೆಸಬೇಕು.
* ಮಹಿಳೆಯರ ಘನತೆಗೆ ಧಕ್ಕೆ ತರುವ ಆಚರಣೆಗಳನ್ನು ತ್ಯಜಿಸಬೇಕು.
* ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು.
* ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವಿಚಾರಶೀಲತೆಯನ್ನು ಬೆಳೆಸಿಕೊಳ್ಳಬೇಕು.
* ಪರಿಸರ ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕು.
* ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸಂವಿಧಾನ ದಿನವು ಈ ಕರ್ತವ್ಯಗಳನ್ನು ಕೇವಲ ಓದುವ ದಿನವಲ್ಲ, ಅವುಗಳನ್ನು ಜೀವನದಲ್ಲಿ ಪಾಲಿಸುವ
ಸಂಕಲ್ಪದ ದಿನವಾಗಬೇಕು.
ಸಂವಿಧಾನದ ಆಶಯ ಮತ್ತು ವಾಸ್ತವ :
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಪ್ರಜಾಪ್ರಭುತ್ವದ
ಯಶಸ್ಸು ಕೇವಲ ಸಂವಿಧಾನವನ್ನು ಹೊಂದಿರುವುದರಲ್ಲಿ ಅಥವಾ ಚುನಾವಣೆಗಳನ್ನು ನಡೆಸುವುದರಲ್ಲಿ ಮಾತ್ರ
ಅಡಗಿಲ್ಲ. ಸಂವಿಧಾನವು ಪ್ರತಿಪಾದಿಸಿರುವ ಮೌಲ್ಯಗಳು ನಿಜವಾದ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗಿವೆ
ಎಂಬುದರ ಮೇಲೆ ಅದರ ಯಶಸ್ಸು ಅವಲಂಬಿತವಾಗಿದೆ.
ಇಂದಿಗೂ ಸಮಾಜದಲ್ಲಿ ಜಾತಿ ತಾರತಮ್ಯ, ಧಾರ್ಮಿಕ ದ್ವೇಷ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ
ಅಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ಆತಂಕಗಳು, ಅಧಿಕಾರದ ದುರುಪಯೋಗ ಹಾಗೂ ಸಾಮಾಜಿಕ
ಅನ್ಯಾಯದ ಹಲವು ಸಮಸ್ಯೆಗಳು ಕಂಡುಬರುತ್ತಿವೆ.
ಸಂವಿಧಾನದ ಆಶಯ ಮತ್ತು ವಾಸ್ತವದ ನಡುವಿನ ಅಂತರ:
ಆರ್ಥಿಕ ಅಸಮಾನತೆ: ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ವಿಸ್ತರಿಸುತ್ತಿದೆ. ಮೇಲ್ಪಂಕ್ತಿಯ 10% ಜನರು
ರಾಷ್ಟ್ರೀಯ ಆದಾಯದ ಬಹುಭಾಗವನ್ನು ಹೊಂದಿದ್ದಾರೆ. ಅವಕಾಶಗಳ ಸಮಾನತೆ ಇನ್ನೂ ಸಂಪೂರ್ಣವಾಗಿ
ಸಾಧ್ಯವಾಗಿಲ್ಲ.
ಸಾಮಾಜಿಕ ನ್ಯಾಯ: ಜಾತಿ ಆಧಾರಿತ ತಾರತಮ್ಯ, ಮಹಿಳೆಯರ ವಿರುದ್ಧ ಹಿಂಸೆ, ಧಾರ್ಮಿಕ ಧ್ರುವೀಕರಣ ಮತ್ತು
ಸಾಮುದಾಯಿಕ ಉದ್ವೇಗಗಳು ಭ್ರಾತೃತ್ವವನ್ನು ದುರ್ಬಲಗೊಳಿಸುತ್ತಿವೆ.
ನ್ಯಾಯ ವ್ಯವಸ್ಥೆ: ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಳು ಬಾಕಿ ಉಳಿದಿರುವುದು, ಬಡವರಿಗೆ ನ್ಯಾಯ
ದುರ್ಗಮವಾಗಿರುವುದು ಇನ್ನೂ ದೊಡ್ಡ ಸಮಸ್ಯೆ.
ಸ್ವಾತಂತ್ರ್ಯ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೆಲವೊಮ್ಮೆ ನಿರ್ಬಂಧಗಳು, ನಾಗರಿಕರ ಮೇಲೆ ದಬ್ಬಾಳಿಕೆ ಮತ್ತು
ಸಂಸ್ಥೆಗಳ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತ ಬಹಳ
ಹಿಂದುಳಿದಿದೆ.
ಅನುಷ್ಠಾನದ ಸಮಸ್ಯೆ: ಮೂಲಭೂತ ಹಕ್ಕುಗಳು ಮತ್ತು ಅವುಗಳ ಅನುಷ್ಠಾನಗಳ ಬಹಳಷ್ಟು ವ್ಯಾತ್ಯಾಸಗಳಿದ್ದು
ಅವುಗಳ ನಡುವೆ ಸಮತೋಲನ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಅನೇಕ ಕಲ್ಯಾಣ ಯೋಜನೆಗಳು ಇದ್ದರೂ ನೆಲದ
ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪದೇ ಜನರ ಜೀವನ ಮಟ್ಟ ಸುಧಾರಿಸುತ್ತಿಲ್ಲವಾಗಿದೆ. ಜಾಗತಿಕ ಹಸಿವಿನ
ಸೂಚ್ಯಂಕದಲ್ಲೂ ಭಾರತ ಹಿನ್ನಡೆ ಪಡೆದಿದೆ.
ಪರಿಹಾರಗಳೇನು ?
ಸಂವಿಧಾನದ ಆಶಯಗಳು ಕೇವಲ ಕಾಗದದ ಮೇಲಿನ ಮಾತುಗಳಾಗಬಾರದು. ಅವು ಪ್ರತಿಯೊಬ್ಬ ನಾಗರಿಕನ
ಜೀವನದಲ್ಲಿ ಅನುಭವಕ್ಕೆ ಬರಬೇಕು. ಪ್ರಜಾಪ್ರಭುತ್ವ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ಮತ್ತು
ನ್ಯಾಯಾಂಗಗಳು ಸಂವಿಧಾನದ ಮಾರ್ಗಸೂಚಿಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮಾಡದೇ ಇದ್ದಲ್ಲಿ
ಜನರು ಜನಾಂದೋಲನಗಳ ಮೂಲಕ ಒತ್ತಾಯಿಸಬೇಕು.
* ವಿಳಂಬ ಧೋರಣೆಯ ನ್ಯಾಯ ವ್ಯವಸ್ಥೆಯನ್ನು ವೇಗಗೊಳಿಸಬೇಕು.
* ಎಲ್ಲರಿಗೂ ಉಚಿತ ಮತ್ತು ಸಮಾನ ಶಿಕ್ಷಣವನ್ನು ಸರಕಾರವೇ ಒದಗಿಸಬೇಕು.
* ಪ್ರತಿಯೊಬ್ಬರಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸವಲತ್ತುಗಳನ್ನು ವ್ಯವಸ್ಥೆ ಮಾಡಬೇಕು.
* ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವ ನೀತಿಗಳನ್ನು ಜಾರಿಗೆ ತರಬೇಕು.
* ಜಾತಿ ಧಾರ್ಮಿಕ ದ್ವೇಷಗಳಿಗೆ ಕಡಿವಾಣ ಹಾಕಿ ಸಾಮಾಜಿಕ ಸಾಮರಸ್ಯವನ್ನು ಬೆಳೆಸಬೇಕು.
* ನಾಗರಿಕರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ಕರ್ತವ್ಯಗಳನ್ನು ನಿರ್ವಹಿಸಬೇಕು.
* ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ನಿಲ್ಲಬೇಕು.
ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಘನತೆ ಮತ್ತು ನ್ಯಾಯಯುತ ಬದುಕಿನ ಭರವಸೆ ನೀಡಿದ್ದರೂ, ಆ
ಭರವಸೆ ಎಲ್ಲರಿಗೂ ಸಮಾನವಾಗಿ ತಲುಪಿದೆಯೇ ಎಂಬ ಪ್ರಶ್ನೆ ಸದಾ ಪ್ರಸ್ತುತವಾಗಿರುತ್ತದೆ. ಸಮಾಜದಲ್ಲಿ
ಅಸಮಾನತೆ, ಅನ್ಯಾಯ, ಶೋಷಣೆ ಮತ್ತು ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ನ್ಯಾಯಾಂಗ,
ಸಾರ್ವಜನಿಕ ಸಂಸ್ಥೆಗಳು ಹಾಗೂ ನಾಗರಿಕರು ನಿರಂತರವಾಗಿ ಕಾರ್ಯನಿರ್ವಹಿಸಬೇಕು.
ಸಂವಿಧಾನವನ್ನು ಗೌರವಿಸುವುದೆಂದರೆ ಅದರ ಮೌಲ್ಯಗಳನ್ನು ಪ್ರಶ್ನಾತೀತವಾಗಿ ಹೊಗಳುವುದಲ್ಲ; ಅದರ
ಆಶಯಗಳಿಗೆ ವಿರುದ್ಧವಾಗಿ ನಡೆಯುವ ಅನ್ಯಾಯವನ್ನು ಗುರುತಿಸಿ, ಕಾನೂನುಬದ್ಧವಾಗಿ ಪ್ರಶ್ನಿಸುವುದೂ
ಸಂವಿಧಾನಾತ್ಮಕ ನಾಗರಿಕತೆಯ ಭಾಗವಾಗಿದೆ.
ಆದರೆ ಸಂವಿಧಾನದ ನಿಜವಾದ ಯಶಸ್ಸು ಅದರ ಪುಟಗಳಲ್ಲಿ ಮಾತ್ರವಲ್ಲ; ಅದು ಜನರ ಬದುಕಿನಲ್ಲಿ ಎಷ್ಟರ
ಮಟ್ಟಿಗೆ ಅನುಭವಕ್ಕೆ ಬರುತ್ತದೆ ಎಂಬುದರಲ್ಲಿ ಅಡಗಿದೆ. ಬಡವರಿಗೆ ನ್ಯಾಯ ದೊರಕಿದಾಗ, ಶೋಷಿತರಿಗೆ ಧ್ವನಿ
ಸಿಕ್ಕಾಗ, ಮಹಿಳೆಯರಿಗೆ ಸಮಾನ ಅವಕಾಶ ದೊರೆತಾಗ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ತಾರತಮ್ಯ
ನಿಂತಾಗ, ಅಧಿಕಾರವು ಜನರ ಮುಂದೆ ಜವಾಬ್ದಾರಿಯಾದಾಗ ಮತ್ತು ಪ್ರತಿಯೊಬ್ಬ ನಾಗರಿಕನ ಘನತೆ
ರಕ್ಷಿಸಲ್ಪಟ್ಟಾಗ ಸಂವಿಧಾನದ ಆಶಯಗಳು ನಿಜವಾಗಿಯೂ ಜೀವಂತವಾಗುತ್ತವೆ.
ಆದ್ದರಿಂದ ಸಂವಿಧಾನ ದಿನವು ಕೇವಲ ಒಂದು ದಿನದ ಆಚರಣೆಯಾಗದೆ, ಸಂವಿಧಾನದ ಮೌಲ್ಯಗಳನ್ನು ಪ್ರತಿದಿನ
ಪಾಲಿಸುವ ಸಂಕಲ್ಪವಾಗಬೇಕು. ಸಂವಿಧಾನವನ್ನು ಪುಸ್ತಕದಲ್ಲಿ ಓದುವುದಷ್ಟೇ ಅಲ್ಲ, ನಮ್ಮ ನಡೆ-ನುಡಿ,
ಸಾಮಾಜಿಕ ಸಂಬಂಧಗಳು ಮತ್ತು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಸಂವಿಧಾನ ದಿನದ
ನಿಜವಾದ ಅರ್ಥ ಮತ್ತು ಪ್ರಸ್ತುತತೆ. ಸಂವಿಧಾನವು ಕೇವಲ ಅಧಿಕಾರವನ್ನು ನೀಡುವ ಗ್ರಂಥವಲ್ಲ; ಅಧಿಕಾರಕ್ಕೆ
ಮಿತಿ ವಿಧಿಸುವ, ನಾಗರಿಕರಿಗೆ ಘನತೆ ನೀಡುವ ಮತ್ತು ಸಮಾಜಕ್ಕೆ ನ್ಯಾಯದ ದಾರಿ ತೋರಿಸುವ ಮಹತ್ವದ
ಒಪ್ಪಂದವಾಗಿದೆ. ಸಂವಿಧಾನವು ನಮಗೆ ನೀಡಿರುವುದು ಒಂದು ದಾರಿದೀಪ. ಅದನ್ನು ಅನುಸರಿಸುವುದು ಮತ್ತು ಅದರ
ಆಶಯಗಳನ್ನು ವಾಸ್ತವವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ. ಸಂವಿಧಾನ ದಿನವು ಕೇವಲ
ಆಚರಣೆಯಾಗದೆ, ಆತ್ಮಾವಲೋಕನ ಮತ್ತು ಬದ್ಧತೆಯ ದಿನವಾಗಬೇಕು.
-ಶಶಿಕಾಂತ ಯಡಹಳ್ಳಿ
(26-11-2026)
ಇದನ್ನೂ ನೋಡಿ:
Peepal Media
Peepal Media · ಅಂಕಣ ವಿಭಾಗ