ಜಾರ್ಖಂಡ್ | ಎಸ್ಐಆರ್ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಲು ವಿಧಾನಸಭೆ ನಿರ್ಣಯ
ಲಿಂಕ್ ನಕಲಿಸಲಾಗಿದೆ ✓
ರಾಂಚಿ: ಜಾರ್ಖಂಡ್ನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.
ಬುಧವಾರ ಆರಂಭವಾದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹಣಕಾಸು ಸಚಿವ ರಾಧಾಕೃಷ್ಣ ಕಿಶೋರ್ ಮಂಡಿಸಿದ ನಿರ್ಣಯಕ್ಕೆ ಸದನ ಒಪ್ಪಿಗೆ ಸೂಚಿಸಿದೆ.
ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ, ಪಾರದರ್ಶಕತೆಗೆ ಆದ್ಯತೆ ನೀಡುವ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ರೂಪಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ ಎದುರಾಗುತ್ತಿರುವ ಕಾರ್ಯವಿಧಾನದ ಗೊಂದಲಗಳು ಹಾಗೂ ತಾಂತ್ರಿಕ ದೋಷಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವ ರಾಧಾಕೃಷ್ಣ ಕಿಶೋರ್ ಹೇಳಿದರು. ಜಾರ್ಖಂಡ್ನ ಒಟ್ಟು 2.21 ಕೋಟಿ ಮತದಾರರ ಪೈಕಿ ಶೇ.27ರಷ್ಟು ಮಂದಿಯನ್ನು ಅನುಮಾನಾಸ್ಪದ ಮತದಾರರೆಂದು ಗುರುತಿಸಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದೂ ಅವರು ಆಗ್ರಹಿಸಿದರು.
ಆದರೆ, ಈ ವಿಶೇಷ ಅಧಿವೇಶನವನ್ನು ರಾಜಕೀಯ ದ್ವೇಷ ಸಾಧನೆಗಾಗಿ ಆಯೋಜಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಬಾಬುಲಾಲ್ ಮರಾಂಡಿ ಆರೋಪಿಸಿದರು.
ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 43 ಲಕ್ಷ ಹೆಸರುಗಳ ಪೈಕಿ 7.63 ಲಕ್ಷ ಮಂದಿ ಮೃತಪಟ್ಟ ಮತದಾರರು, 15.53 ಲಕ್ಷ ಮಂದಿ ಬೇರೆ ಪ್ರದೇಶಗಳಿಗೆ ಸ್ಥಳಾಂತರಗೊಂಡವರು, 4.38 ಲಕ್ಷ ಮಂದಿ ನಕಲಿ ಅಥವಾ ದ್ವಿಪ್ರತಿ ಮತದಾರರು ಹಾಗೂ 14.50 ಲಕ್ಷ ಮಂದಿ ಪತ್ತೆಯಾಗದ ಮತದಾರರು ಎಂದು ವಿವರಿಸಲಾಗಿದೆ.
ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಯಾದವ್ ಆರೋಪಿಸಿದರು. ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆರ್ಜೆಡಿ ಶಾಸಕ ಸುರೇಶ್ ಪಾಸ್ವಾನ್ ಒತ್ತಾಯಿಸಿದರು.
Peepal Media
Peepal Media · ದೇಶ ವಿಭಾಗ