ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ತತ್ವಲೋಕ – ವಿ.ಸೀ. ಕಾವ್ಯ : ಬಾಳಿನ ತತ್ವಶೋಧನೆಬೊಗಸೆಗೆ ದಕ್ಕಿದ್ದು-102 : ಸರ್ವಾಧಿಕಾರಿ ಅಪಾಯದ ಗಂಟೆ ಕೇಳದಿದ್ದರೆ ನಮ್ಮಲ್ಲೇ ಗಂಭೀರ ದೋಷವಿದೆ!ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನದ ಶತ್ರುಗಳು | ಈ ಬಾರಿ ಮೀಸೆ ಇರುವ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿ ಬೆದರಿಕೆ ಆರೋಪ: ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ ತಮಿಳುನಾಡು ಸಿಎಂ ವಿಜಯ್ಕೇರಳದ ಜನರು, ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ದೂರುಭಾರತದ ಸಂವಿಧಾನ ; ಸಮಾನತೆಯ ಋತುಗಾನಅಮೆರಿಕದ ಸುಂಕ ಸಮರ: ಭಾರತದ ಮೇಲೆ ಶೇ.25 ಸುಂಕದ ಪ್ರಸ್ತಾಪ, ಮೋದಿ ರಾಜಿಯಾಗ್ತಾರಾ?ಕಾಂಗ್ರೆಸ್ ಒಬಿಸಿ ಮೀಸಲಾತಿ ಕಿತ್ತುಕೊಂಡು ಅದನ್ನು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ: ನರೇಂದ್ರ ಮೋದಿಕರ್ನಾಟಕ ಹಿಜಾಬ್ ಪ್ರಕರಣದೊಂದಿಗೆ ಮತ್ತೊಂದು ಅರ್ಜಿ ವಿಚಾರಣೆಗೆ; ಅಲಹಾಬಾದ್ ಹೈಕೋರ್ಟ್ ತೀರ್ಪು ಪೂರ್ವನಿದರ್ಶನವಲ್ಲ ಎಂದ ಸುಪ್ರೀಂ ಕೋರ್ಟ್ಸಂವಿಧಾನ ದಿನ 2026: ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತೆ ಚರ್ಚೆಯಲ್ಲಿಶಾರುಖ್ ಖಾನ್ ವಿರುದ್ಧ ತಿರುಚಿದ ರೀಲ್ಸ್ ವೈರಲ್; ಸಂಘಪರಿವಾರದ ಹಿನ್ನೆಲೆಯ ಕಂಟೆಂಟ್ ಕ್ರಿಯೇಟರ್‌ಗೆ ಲೀಗಲ್ ನೋಟಿಸ್ಆಸ್ತಿಗಾಗಿ ಅಕ್ಕನನ್ನೇ ಕೊಂದ ವಕೀಲ; ಬೆಂಗಳೂರಿನಲ್ಲಿ ಮಕ್ಕಳ ಎದುರೇ ಮಹಿಳೆಯ ಹತ್ಯೆ, ಆರೋಪಿ ಪರಾರಿನಂದಿನಿ ಮೊಸರಿನ ಬೆಲೆ ಕೆ.ಜಿಗೆ ₹2 ಇಳಿಕೆ; ನವೆಂಬರ್ 29ರಿಂದ ಹೊಸ ದರ ಜಾರಿಬಸವ ಸಂಸ್ಕೃತಿಯ ಮೇಲಿನ ದಾಳಿಗೆ ಖಂಡನೆ; ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ನೀಡಿದ ಮಠಾಧಿಪತಿಗಳುಸಾಕಾಣಿಕೆ ದರ ಕೆ.ಜಿಗೆ ₹20ಕ್ಕೆ ಹೆಚ್ಚಿಸಿ; ಕಂಪನಿಗಳ ಶೋಷಣೆ ತಡೆಯಿರಿ: ಕೋಳಿ ಸಾಕಾಣಿಕೆದಾರರಿಂದ ಮುಖ್ಯಮಂತ್ರಿಗೆ ಮನವಿಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಆರಂಭ: 1,000ಕ್ಕೂ ಹೆಚ್ಚು ಉದ್ಯೋಗಿಗಳ ನೇಮಕಕ್ಕೆ ಯೋಜನೆ; ‘ಬಿಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಬಲಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ವ್ಯಕ್ತಿ: ಒಂದು ತಿಂಗಳ ಬಳಿಕ ಸ್ವಗ್ರಾಮಕ್ಕೆ ಮೃತದೇಹ ರವಾನೆ2016ರ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆಎಸ್‌ಐಆರ್‌ ವಿವಾದ: ತಂದೆಯ ಹೆಸರು ಮತದಾರರ ಪಟ್ಟಿಯಿಂದ ತೆಗೆದಿದ್ದಕ್ಕೆ ಎರಡೂವರೆ ತಿಂಗಳ ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!

ತತ್ವಲೋಕ – ವಿ.ಸೀ. ಕಾವ್ಯ : ಬಾಳಿನ ತತ್ವಶೋಧನೆ

PPeepal Media Desk

Peepal Media Desk ಅಂಕಣ

• 5 ನಿಮಿಷದ ಓದು

ತತ್ವಲೋಕ – ವಿ.ಸೀ. ಕಾವ್ಯ : ಬಾಳಿನ ತತ್ವಶೋಧನೆ

“.. ತಮ್ಮ ಸೃಷ್ಟಿಶೀಲ ಗುಣದಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ-ಲೇಖಕರಲ್ಲಿ ವಿ.ಸೀ. ಅವರಿಗೂ ವಿಶೇಷ ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ..” ಡಾ.ಸಂಗಮೇಶ ಎಸ್ ಗಣಿ ಅವರ ಬರಹದಲ್ಲಿ

ಆಧುನಿಕ ಕನ್ನಡ ನವೋದಯ ಸಾಹಿತ್ಯದಲ್ಲಿ ತಮ್ಮ ಬಹುಮುಖ ಪ್ರತಿಭೆಯಿಂದ ಪ್ರಸಿದ್ಧರಾದ ಕವಿ-ಲೇಖಕರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಡಿವಿಜಿ. ಮಾಸ್ತಿ, ಕಾರಂತ, ಕುವೆಂಪು ಬೇಂದ್ರೆ ಮೊದಲಾದವರು ನವೋದಯದ ಮೊದಲ ಹಂತದಲ್ಲಿ ಕಾಣಿಸಿಕೊಂಡರೆ, ಅದೇ ಕಾಲಘಟ್ಟದಲ್ಲಿ ಬಾಳಿ ಬರೆದ ಅನೇಕ ಕವಿ ಲೇಖಕರು ಓದುಗ-ವಿಮರ್ಶಕರಿಂದ ದೂರವೇ ಉಳಿದಿದ್ದಾರೆ. ಕಾಲವೇ ದೂರವಿಟ್ಟಿತೊ ? ಕವಿತೆಯೇ ದೂರಮಾಡಿತೋ ? ಓದುಗ-ವಿಮರ್ಶಕರ ದೃಷ್ಟಿ-ಧೋರಣೆಯೇ ಭಿನ್ನವಾಗಿತ್ತೋ ? ಇಂಥ ಅನೇಕ ಪ್ರಶ್ನೆಗಳ ನಡುವೆಯೂ ತಮ್ಮ ಸೃಷ್ಟಿಶೀಲ ಗುಣದಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ-ಲೇಖಕರಲ್ಲಿ ವಿ.ಸೀ. ಅವರಿಗೂ ವಿಶೇಷ ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ.

ಕವಿ, ಲೇಖಕ, ಅನುವಾದಕ, ವಿಮರ್ಶಕ, ಸಂಶೋಧಕ ಹೀಗೇ ತಮ್ಮ ಸೃಜನ ಮತ್ತು ಸೃಜನೇತರ ಕೊಡುಗೆಗಳ ಮೂಲಕ ಆಧುನಿಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ವೆಂಕಟರಾಮಯ್ಯ ಸೀತಾರಾಮಯ್ಯನವರು ಕನ್ನಡದಲ್ಲಿ ವಿ.ಸೀ. ಎಂದೇ ಸುಪ್ರಸಿದ್ಧರು. ತಮ್ಮ ೬೦ ವರ್ಷಗಳ ಸಾಹಿತ್ಯಿಕ ಅವಧಿಯಲ್ಲಿ ೫೦ ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ವಿ.ಸೀ. ಅವರು ಮೂಲತಃ ಕವಿ ಎಂಬುದಕ್ಕೆ ಅವರ ಕಾವ್ಯವೇ ಬಹುದೊಡ್ಡ ಪುರಾವೆಯೊದಗಿಸುತ್ತದೆ.

ನವೋದಯ ಸಂದರ್ಭದಲ್ಲಿ ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡ ವಿ.ಸೀ. ಅವರು ನವ್ಯೋತ್ತರ ಕಾಲಮಾನದಲ್ಲೂ ಬದುಕಿ, ಬಾಳಿ, ಬರೆದವರು. ಅವರ ಕಾವ್ಯಪ್ರತಿಭೆ ಆ ಕಾಲದ ಎಲ್ಲ ವಿದ್ಯಮಾನಗಳಿಗೂ ಸಾಕ್ಷಿಯಾಗಿದೆ. ಅಲ್ಲದೇ ವಸ್ತುವಿಶೇಷ ಅನುಭವಗಳಿಗೆ ದನಿಯಾಗಿದೆ. ತುಂಬ ಜೀವನಪ್ರೀತಿಯಿಂದ ತುಂಬು ಬಾಳನ್ನು ಬಾಳಿದ ವಿ.ಸೀ. ಅವರಲ್ಲಿನ ಬಾಳಿನ ಬಗೆಗಿನ ನಿಲುವು-ನೋಟ ಮಹತ್ವವಾದುದು. ವಿ.ಸೀ. ಕಾವ್ಯದಲ್ಲಿ ಕಾಣುವ ‘ಬಾಳು’ ಕುರಿತ ಅವರ ಚಿಂತನೆಯನ್ನು ಗುರುತಿಸುವುದು ಇಲ್ಲಿನ ಮುಖ್ಯ ಉದ್ದೇಶ.

ವಿ.ಸೀ. ಕಾವ್ಯದ ಹಿನ್ನೆಲೆ
ಭಾರತದ ಸಾಮಾಜಿಕ ಜನ-ಜೀವನದಲ್ಲಿ ನವೋದಯ ಕಾಲಘಟ್ಟ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಕಾಲ. ಇದು ನಮ್ಮ ನಾಡಿನ ಜನಮನವನ್ನೂ ತೀವ್ರವಾಗಿ ಪ್ರಭಾವಿಸಿ ಹೊಸತಾದ ಪ್ರೇರಣೆಗಳಿಗೆ ಎಡೆಮಾಡಿ ಕೊಟ್ಟಿದೆ. ಶಿಕ್ಷಣ, ಸಮಾಜ, ಆರ್ಥಿಕ, ಔದ್ಯೋಗಿಕ, ಭಾಷೆ ಬದುಕು ಅನುಭವ ಅಭಿವ್ಯಕ್ತಿ ಎಲ್ಲವನ್ನೂ ಪುನರ್ ಶೋಧನೆಗೀಡು ಮಾಡಿದ ಕಾಲವದು. ರೈಲು, ಮುದ್ರಣಯಂತ್ರ, ಇಂಗ್ಲಿಷ್ ಶಿಕ್ಷಣ, ವಿದ್ಯುದ್ದೀಪ, ವಿಮಾನ ಇತ್ಯಾದಿ ವಿದ್ಯಮಾನಗಳು ಹೊಸಬಗೆಯ ವಿವೇಚನೆಗೆ ಪ್ರೇರಣೆಯಾದವು. ಹೀಗಾಗಿ ‘ನವೋದಯ’ ಎಂಬುದು ಜೀವನ-ಪುನರ್‌ಶೋಧನ ಅವಧಿ.

ವ್ಯಕ್ತಿ ಜಗತ್ತು ಜೀವನ ಮಾನವ ಬದುಕು ಇವುಗಳ ಸಕಾರಣ ಸಂಬಂಧ ಮುಂತಾದ ವಿಚಾರಗಳು ಮನದಲ್ಲಿ ಮೂಡಿ, ಆಲೋಚನೆಗಳ ಅಲೆಗಳನ್ನು ಎಬ್ಬಿಸಿದವು. ವಿಶಿಷ್ಟ ಅನುಭವಗಳಿಗೆ ಪಕ್ಕಾದ ಕವಿಮನಸ್ಸು ಅಭಿವ್ಯಕ್ತಿ ವಿಶೇಷತೆಯನ್ನೂ ಕಾಣಿಸಲು ಯತ್ನಿಸಿರುವುದು ಗಮನಾರ್ಹ. ವಿ.ಸೀ. ಅವರ ಕಾವ್ಯವೂ ಈ ಎಲ್ಲ ಅನುಭವ ವಿಶೇಷತೆಗಳೊಂದಿಗೆ ಮೈಪಡೆದುಕೊಂಡಿರುವುದನ್ನು ಗುರುತಿಸುವುದರ ಜೊತೆಗೆ ಜೀವನದ ಬಗೆಗೆ ಇದ್ದ ಅವರ ದೃಷ್ಟಿಕೋನದ ಸ್ವರೂಪ ಕುರಿತು ಇಲ್ಲಿ ವಿವೇಚಿಸಲಾಗಿದೆ.

ವಿ.ಸೀ ಕಾವ್ಯಕೃಷಿ
ಕಾವ್ಯ ಎಂಬುದನ್ನು ಬಾಳು ಎಂದು ತಿಳಿದಿದ್ದ ವಿ.ಸೀ. ಅವರು ತಮ್ಮ ಅರುವತ್ತು ವಸಂತಗಳ ಸಾಹಿತ್ಯ ಕೃಷಿಯಲ್ಲಿ ಗೀತಗಳು (೧೯೩೧), ದೀಪಗಳು (೧೯೩೩), ನೆಳಲು-ಬೆಳಕು (೧೯೩೫), ದ್ರಾಕ್ಷಿ-ದಾಳಿಂಬೆ (೧೯೪೮), ಹೆಜ್ಜೆಪಾಡು (೧೯೫೮), ಅರಲು-ಬರಲು (೧೯೭೨), ಹಗಲು-ಇರುಳು (೧೯೮೧), ನೋವು-ನಲಿವು (೧೯೯೦) ಹೀಗೆ ಏಳು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ೩೫೦ ಕವನಗಳನ್ನು ರಚಿಸಿದ್ದಾರೆ. ವಿ. ಸೀತಾರಾಮಯ್ಯನವರ ಕಾವ್ಯ ಬಾಳಿನ ಸಮೃದ್ಧತೆ, ಸೌಜನ್ಯಶೀಲತೆ, ಸೃಜನಶೀಲತೆ, ಸಂವೇದನಶೀಲ ಅನುಭವ ಸಂಪತ್ತನ್ನು ಸೂರೆಗೊಂಡಿದೆ ಎಂಬುದು ಸ್ಪಷ್ಟ.

ವಿ.ಸೀ. ಅವರ ಕಾವ್ಯದಲ್ಲಿ – ಬಾಳು
ಸರಳತೆ ಸಜ್ಜನಿಕೆ ಸೌಜನ್ಯಮೂರ್ತಿಯಾಗಿದ್ದ ವಿ.ಸೀ. ಅವರು ಬಾಳಿನುದ್ದಕ್ಕೂ ಅನುಸರಿಸಿದ ಜೀವನ ಆದರ್ಶಗಳು ಅವರನ್ನು ದೊಡ್ಡ ವ್ಯಕ್ತಿಯನ್ನಾಗಿಸಿದವು ಎಂಬುದಕ್ಕೆ ಅವರ ಬದುಕು-ಬರೆಹವೇ ಸಾಕ್ಷಿ. ಸಹ್ಯವಾದ ಬಾಳಿಗೆ ಸಗುಣವೇ ಸಂಪನ್ಮೂಲ ಎಂದು ತಿಳಿದಿದ್ದ ಅವರು ಸ್ನೇಹ-ಪ್ರೀತಿ, ವಿಶ್ವಾಸ, ದಯೆ, ಧರ್ಮ, ಕರುಣೆ, ನಂಬಿಕೆ, ವಿದ್ಯೆ ವಿನಯ ವಿದ್ವತ್ತನ್ನು ಗಳಿಸಿಕೊಂಡವರು. ಬಾಳು ಕೊಟ್ಟುದನ್ನು-ಕಸಿದುಕೊಂಡುದನ್ನೂ ಸಮಚಿತ್ತದಿಂದ ಸ್ವೀಕರಿಸಿದ ಅವರು ಸ್ಥಿತಪ್ರಜ್ಞರು. ಪಟ್ಟ ಪಾಡೆಲ್ಲವನೂ ಹಾಡಾಗಿಸುವ ಅವರ ಬಾಳ ಬಗೆಗಿನ ನಿಲುವು ನೋಟ ಅವರ ಕವಿತೆಗಳಲ್ಲಿಯೇ ಕಾಣಸಿಗುತ್ತದೆ.

ಕವಿ ವಿ.ಸೀ. ಅವರಿಗೆ ಸ್ವರ್ಗದ ಕಲ್ಪನೆ ಅಮೂರ್ತವಾದುದಲ್ಲ. ಒಟ್ಟಾಗಿ ಬಾಳುವುದರಲ್ಲಿನ ಸ್ನೇಹ ಸೌಜನ್ಯ ಸೌಹಾರ್ದವೇ ಅವರ ಪಾಲಿನ ಸ್ವರ್ಗ.
ಸ್ವರ್ಗದೊಳಗೀ ಸ್ನೇಹ ದೊರೆವುದೇನು ?
ಈ ಪರಿಯ ಸೌಹಾರ್ದ ಕೆಳೆಯ ವೈಭವವು ?
ಇಲ್ಲದಿರೆ ನನಗಿಲ್ಲೇ ನೂರು ಜನ್ಮಗಳಿರಲಿ
ಎಲ್ಲ ಪರಿ ಮಮತೆಗಳ ಸತ್ಯಜೀವನವು ೧ ಎನ್ನುವ ಕವಿ,
ಈ ಮಾಯೆ ಬಯಲಲ್ಲಿ ಸಿಂಗರದ ಖನಿಯಿಹುದು
ಬಳ್ಳಿಗಳು ಹೂವುಗಳು ಹಣ್ಣು ಪರಿಮಳವು
ಈ ಎಲ್ಲ ಹೂ ಹಣ್ಣು ಸವಿ ಕಾಂತಿಗಳ ಮೀರಿ
ಬೆಳಗುತಿದೆಯೆಲ್ಲವನು ಸ್ನೇಹ ಸುಮವು
೨ ಪ್ರಕೃತಿಯ ಎಲ್ಲ ವ್ಯಾಪಾರವನ್ನೂ ಬಾಳಿಗೆ ಅನ್ವಯಿಸಿಕೊಳ್ಳುವ ಮೂಲಕ ಸ್ನೇಹಸುಮವು ಸದಾ ಅರಳುವುದರಿಂದ ಬಾಳು ಆನಂದದಿಂದ ತುಂಬಿಕೊಳ್ಳುತ್ತದೆ ಎಂಬ ನಂಬಿಕೆ ಅವರದು. ಹುಟ್ಟು ಸಾವುಗಳ ನಡುವಿನ ಬಾಳು ನೋವು- ನಲಿವುಗಳ ಸಮ್ಮಿಶ್ರ ಭಾವಬಂಧ.
ಅತ್ತ ತೂಗುವ ಹಸುಳೆದೊಟ್ಟಿಲು
ಇತ್ತ ಉರಿಯುವ ಮಸಣದೊಟ್ಟಿಲು
ನಡುವೆ ಬಾಳಿದು ತುಂಬಿ ತುಂಬದ
ನೋವು ಕಂಬನಿ ಬಟ್ಟಲು

ಇಡೀ ಬಾಳಿನ ಮರ್ಮವನ್ನೇ ಅರಹುವ ಕವಿಗೆ ಸೋಲು ಅವಮಾನಗಳ ಕುಹಕಗಳ ಕೊಂಕುನುಡಿಗಳ ಕಂಡು ಕೇಳಿದ ಅನುಭವವಿದೆ. ಜೀವನದಲ್ಲಿ ಕಾಡುವ ಅಸಹಾಯಕತೆ ಮನುಷ್ಯನನ್ನು ದೈನ್ಯತೆಗೆ ದೂಡುತ್ತದೆ. ಈ ನಡುವೆ ಬಾಳು ಬೆಂಕಿಯೂ ಬೆಳಕೂ ಆಗಿ ತೋರುತ್ತದೆ. ಆದಾಗ್ಯೂ ಭರವಸೆ ಕಳೆದುಕೊಳ್ಳದಿರುವುದು ಇಲ್ಲಿ ಮುಖ್ಯ.
ಅಚ್ಚವಿರಲಿ ಗಾಳಿ, ನೀರಂತೆ ಹರಿಯುತಿರಲಿ
ಹೂ ಕಮ್ಮಗಿರಲಿ, ಹಣ್ಣು ಹಾಲು ಇಳೆಗೆ ತುಂಬಿ ಬರಲಿ
ಬಿಸಿಲು ಬೆಂಕಿ ಬಾಳ್ಗೆ ಕವಿಯುತಿರಲಿ
ಎಂದು ಹೇಳುವ ಮೂಲಕ ಬಾಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಕಾಣಿಸುತ್ತದೆ. ಜೀವನದಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಅಚಲ ವಿಶ್ವಾಸದಿಂದ ಎದುರುಗೊಂಡ ಕವಿಗೆ ಇಹ-ಪರಗಳಲ್ಲಿನ ನೋವು ನಿರಾಸೆಗಳನ್ನು ಮೀರುವ ತವಕ. ಉತ್ಸಾಹ ಉಲ್ಲಾಸಗಳಿಲ್ಲದ ಬಾಳು ನರಕ. ಅದಕೆಂತಲೇ ಅವರಿಗೆ ಸಂಬಂಧಗಳ ಮೇಲೆ ಬಲವಾದ ವಿಶ್ವಾಸ.
ಮಾನವನೆತ್ತರ ಆಗಸದೇರಿಗೆ
ಏರುವ ವರೆಗೂ ಏರೇವು
ಮಾನವ ಹೃದಯಕೆ ವಿಶ್ವವಿಶಾಲತೆ
ಹಾಯುವ ವರೆಗೂ ಹಾದೇವು
೫ ಎನ್ನುವ ಕವಿ ಸಖ್ಯ ಸಹನೆ ಕರುಣೆ ಒಲವಿಗೆ ಗಡಿ ನುಡಿಗಳಾವವೂ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ. ಶತಶತಮಾನಗಳಿಂದಲೂ ದ್ವೇಷಾಸೂಯೆಗಳನ್ನೇ ತುಂಬಿಕೊಂಡಿರುವ ಮನಸ್ಸಿಗೆ ಪ್ರೇಮಸಿಂಚನವಾಗಬೇಕು. ಈ ಬಾಳಿಗೆ ಪ್ರೇಮದಿಂದಲೇ ಪರಿಶುದ್ಧತೆ ಪ್ರಾಪ್ತವಾಗುತ್ತದೆ.
ಇಹದಲಿ ಒಪ್ಪಲು ಆಗದ ಪರವನು
ಬಯಕೆಯು ಕರೆವುದೆ ಕೈಚಾಚಿ ?
ಬಾಳನು ಶೋಧಿಸಿ ಶುಚಿಯೆ ಬೆಳೆದರೆ
ಇಹವೇ ಅರಳದೇ ಪರವಾಗಿ?
೬ ಎಂಬ ಪ್ರಶ್ನೆ ಮತ್ತು ಪ್ರಯತ್ನ ಮಹತ್ವವಾದುದು. ಇಹದ ಬದುಕನ್ನು ಸುಂದರಗೊಳಿಸಲು ಪರಲೋಕವೇನೂ ಬೇಕಿಲ್ಲ. ಇರುವ ಲೋಕವನ್ನೇ ಇಹಲೋಕವೂ ಪರಲೋಕವೂ ಆಗಿಸುವ ಶಕ್ತಿ ಮನುಷ್ಯನಲ್ಲಿಯೇ ಇರುತ್ತದೆ. ಹೀಗಾಗಿ ಇಹಪರಗಳೆಲ್ಲವೂ ಈ ಬಾಳಿನಲ್ಲಿಯೇ ಕಾಣಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡುವ ಕವಿ ;
ಇದುವೆ ಪರ ಇದುವೆ ಇಹ
ಇದುವೆ ಸೌಭಾಗ್ಯ ;
ಇದುವೆ ಚೆಲುವು ಇದುವೆ ನಗು
ಇದುವೆ ಮೋಕ್ಷ
೭ ಈ ಬಾಳು ಲೌಕಿಕ ಅಲೌಕಿಗಳ ಸಮಾಗಮ. ಬೇರೆ ಲೋಕವೆಂಬುದು ಕಲ್ಪಿತ. ಬದುಕಿನಲ್ಲಿಯೇ ಇಹಪರಗಳೆರಡೂ ಇವೆ. ಸ್ವೀಕರಿಸುವ ಮನೋಭಾವದ ಆಧಾರದ ಮೇಲೆ ಈ ಅನುಭವ ಸಾಧ್ಯ. ಇತ್ಯಾತ್ಮಿಕ ಮತ್ತು ನೇತ್ಯಾತ್ಮಕ ದೃಷ್ಟಿಕೋನಗಳೇ ಬಾಳ ಬಗೆಗಿನ ನೋಟ ನಿರ್ಧಾರಕ ಅಂಶಗಳು. ಧನಾತ್ಮಕ ನೆಲೆಯಲ್ಲಿಯೇ ಈ ಬಾಳನ್ನು ಕಂಡಿರುವ ಕವಿಗೆ ಚೆಲುವು, ನಗು ಕೊನೆಗೇ ಮೋಕ್ಷವನ್ನೂ ಇದೇ ಬಾಳಿನಲ್ಲಿಯೇ ಕಾಣಲು ಸಾಧ್ಯವಾಗಿದೆ. ಇದೆಲ್ಲವೂ ಇದ್ದ ಮೇಲೆ ‘ಇನ್ನೇನು ಬೇಕು ?’ ಬಾಳು ರುಚಿಸಲು. ಹೀಗಾಗಿ ವಿ.ಸೀ. ಬಾಳಿನ ಶುಚಿ ಮತ್ತು ರುಚಿಗೆ ಆದ್ಯತೆ ನೀಡಿರುವುದು ವೇದ್ಯವಾಗುತ್ತದೆ. ಬದುಕಿನಲ್ಲಿ ಶುಚಿಯನ್ನೇ ಕಾಣುವ ಕಟ್ಟುವ ಕೊಡುವ ಕಾಪಿಡುವುದರಿಂದ ಇಹವೂ ಪರವೇ ಆಗಿ ಪರಿವರ್ತಿತಗೊಳ್ಳುತ್ತದೆ ಎಂಬ ಸತ್ಯ ಅವರ ಬಾಳಿನ ತತ್ವ.

ಬಾಳನ್ನು ಒಲುಮೆಯೇ ಎಂದು ಪರಿಭಾವಿಸಿದ ಕವಿ, ಅದನ್ನು ಬೆಳಕಿನೊಂದಿಗೆ ಪ್ರತಿಮೀಕರಿಸಿದ್ದಾರೆ. ಬೆಳಕು-ಬದುಕು ಒಂದೇ ಎಂದು ತಿಳಿದಿರುವ ಕವಿ ಬೂರ್ದಿಲಾನ್ ಕವಿಯ ಕವಿತೆಯೊಂದನ್ನು
ನಿಶೆಗೆ ಸಾವಿರ ಕಣ್ಗಳಿಹವು
ಹಗಲಿಗಿರುವುದು ಒಂದೆಯೆ
ಹೊಳೆವ ಲೋಕದ ಬೆಳಕು ಅಳಿವುದು
ಅಳಿವ ನೇಸರಿನೊಡನೆಯೆ.
ಮನಕೆ ಸಾವಿರ ಕಣ್ಗಳಿಹವು
ಹೃದಯಕಿರುವುದು ಒಂದೆಯೆ
ಬಾಳಿನೆಲ್ಲಾ ಬೆಳಕು ಅಳಿವುದು
ನಲುಮೆ ತೀರಿದ ಒಡನೆಯೆ
೮ ಎಂಬುದಾಗಿ ಕನ್ನಡಿಸಿದ್ದಾರೆ. ಬಾಳಿನಲ್ಲಿ ನಲುಮೆ ಮುಖ್ಯ. ಪ್ರೀತಿ ಇಲ್ಲದಿದ್ದರೆ ಬಾಳು ವ್ಯರ್ಥ. ಹಗಲಿನಲ್ಲಿರುವ ಬೆಳಕು ಶಾಶ್ವತವಲ್ಲ. ಹಾಗೇ ಪ್ರೀತಿಯಿಲ್ಲದೇ ಹೋದರೆ ಈ ಬಾಳು ಕತ್ತಲೇ ಆಗಿಬಿಡುತ್ತದೆ ಎಂಬ ವಾಸ್ತವವನ್ನು ಕವಿ ವಿ.ಸೀ. ಅರಹುತ್ತಾರೆ. ಅಲ್ಲದೇ ಅನುವಾದಕ್ಕೆ ಆಯ್ದುಕೊಂಡ ಕವಿತೆಯ ವಸ್ತುವಿನ ನೆಲೆಯಲ್ಲಿಯೂ ಅವರ ಬಾಳಿನ ನೋಟ ಸ್ಪಷ್ಟವಾಗುತ್ತದೆ.

ಜೀವನದಲ್ಲಿ ಎಲ್ಲವೂ ಅಂದುಕೊಂಡಂತಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಕಾಲದ ಮತ್ತು ಮೌಲ್ಯದ ಪಲ್ಲಟವನ್ನೂ ಏಕಕಾಲಕ್ಕೆ ಸೂಚಿಸುತ್ತದೆ. ಈ ಜೀವನದ ಆಟದಲ್ಲಿ ಮನುಷ್ಯರೆಲ್ಲರೂ ಅವನ ದಾಳಗಳೇ. ಅವನು ಆಡುವ ಆಟಕ್ಕೆ ಬಳಕೆಯಾಗುವ ಮನುಷ್ಯರೆಲ್ಲರೂ ವಸ್ತುಗಳೇ. ಹೀಗಾಗಿ ಬಾಳು ಆಡಿಸಿದಂತೆ ನಮ್ಮ ಅನುಭವ, ಅಭಿಪ್ರಾಯ, ಅನಿಸಿಕೆ, ದೃಷ್ಟಿ ಧೋರಣೆ ಎಲ್ಲವೂ ಬದಲಾಗುತ್ತದೆ. ಮನೆ ಮಠ ಬಂಧು ಬಳಗ ಈ ಬಗ್ಗೆ ಕವಿಯ ನಿಲುವು ವ್ಯಕ್ತವಾಗಿರುವುದು ಹೀಗೆ :
ಎಂದೊ ಮುಗಿಯಿತು ಆ ಕಾಲ
ತಂದೆ ಬಂಧು ಮನೆ ಮಠ
ಎಷ್ಟು ದಿನ ದುಡಿವುದಿವಕೆ
-ಎನ್ನುತಿದೆ ಈ ಕಾಲದ ನುಡಿತ,
೯ ಎನ್ನುವ ಕವಿಗೆ ಆಧುನಿಕ ಕಾಲದ ಮನುಷ್ಯರಲ್ಲಿ ಉಂಟಾದ ಸಂಬಂಧಗಳ ಸ್ವರೂಪ ಕುರಿತು ವಿಷಾದವಿದೆ. ದಣಿವರಿಯದ ದುಡಿಮೆಯಲ್ಲಿಯೇ ಕಾಲ ದೂಡುವ ಇಂದಿನ ಆಧುನಿಕ ಬದುಕಿನ ರೀತಿ ಮತ್ತು ಸಂಬಂಧಗಳ ಸಂಕುಚಿತ ನೆಲೆಗಳನ್ನು ಕಾಣಿಸುವ ಕವಿಗೆ, ಕಳೆದು ಹೋದ ಅಂದಿನ ಕಾಲದ ಬಗೆಗೆ ಒಂದುಬಗೆಯ ಸಂಕಟ ಮತ್ತು ವಿಷಾದ ಎರಡೂ ಇದೆ.
ಅವರವರಷ್ಟಕೆ ಅವರದು ಸರಿ
ಬೇರೊಬ್ಬರ ಗೊಡವೆಯೇಕೆ
ನಾಲ್ವರ ಬಾಳಿಸಿ ಉಳಿಸಿ ಬಾಳುವುದು ಹಿರಿದು
ಆಗುವುದಿದೆ ಗಾಸಿ ; ಆಗಲಿಬಿಡು ಒಳಿತು.
ನಾನು ಮಡದಿ ಮಕ್ಕಳು ಹೊರೆವುದು ಅದಕೇನು
ಬಲಿತಿದೆ ರೆಕ್ಕೆ ಹಕ್ಕಿಗೆ ಹಾರುವುದೆಲ್ಲಲ್ಲೂ
ತರುವುದು ಅನ್ನವ ತನಗೆ ಹೆಣ್ಣಿಗೆ ಮಕ್ಕಳಿಗೆ
ನಿನ್ನದೇನು ಹಿರಿಮೆ ; ಬಾಳಿಸು ನಾಲ್ವರ
ಎಡರೇ ತೊಡರೇ ಆದುದು ಆಗಲಿ ಅವು

ಒಡಬಾಳ್ವುದು ಹಿರಿದು, ಬಾಳಿನ ಆಟವನಾಡು ೧೦ ಒಂದು ಹಕ್ಕಿ ತನ್ನ ಬಳಗವೆನ್ನೆಲ್ಲ ಸಾಕಿ ಸಲುಹುವಾಗ ಈ ಮನುಷ್ಯನು ತನ್ನ ಕುಟುಂಬವನ್ನೆಲ್ಲ ಸಾಕಲು ಹೆಣಗಾಡುವ ಮತ್ತು ಜವಾಬ್ದಾರಿಯಿಂದ ನುಣಚಿಕೊಳ್ಳುವ ಈ ಧೋರಣೆ ಆಧುನಿಕ ಕಾಲದ ದೊಡ್ಡ ವೈರುಧ್ಯ. ಇದನ್ನು ಅತ್ಯಂತ ನಿಕಟವಾಗಿ ದಾಖಲಿಸುವ ಕವಿ ವಿ.ಸೀ. ನಂಬಿದವರನ್ನು ಬಾಳಿಸುವ ಮತ್ತು ಪ್ರತಿಯೊಬ್ಬರೂ ಹೊಣೆಯರಿತು ಬಾಳುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ರೂಪಕದ ಮೂಲಕ ಕೂಡು ಬಾಳಿನ ಮತ್ತು ಕೂಡಿಸಿ ಬಾಳುವ ಅಗತ್ಯತೆಯನ್ನು ಜೊತೆಗೆ ಸಾಂಘಿಕ ಬದುಕಿನ ಮಹತ್ವವನ್ನು ಮನಗಾಣಿಸುತ್ತಾರೆ.

ಮಾನವನ ದೈನಂದಿನ ಚಟುವಟಿಕೆಗಳೊಂದಿಗೆ ಆಗುವ ಅನುಭವ-ಅನುಭೂತಿಗಳೆಲ್ಲವೂ ಹಾಡಾಗಿ ಹೊಮ್ಮಲು ಹವಣಿಸುವವು. ಬಾಳೆಲ್ಲವೂ ಶೋಧವೇ. ಹುಡುಕಾಟದ ಅನುಭವಕ್ಕೆ ಬಂದುದೆಲ್ಲವಕ್ಕೂ ಮಾತು ಕೊಡುವ ಯತ್ನ ಕವಿಯದು. ಇಲ್ಲಿ ಬಾಳು ಕವಿತೆಯಾಗುತ್ತದೆಯೊ ಕವಿತೆಯ ತೆಕ್ಕೆಯಿಂದ ಬಾಳು ತಪ್ಪಿಸಿಕೊಳ್ಳುತ್ತದೆಯೊ ನಿಖರವಾಗಿ ಹೇಳುವುದು ಕಷ್ಟ. ಆದರೂ ಹಾಡು ಹಾಡುವುದನ್ನು ಕವಿ ಎಂದಿಗೂ ನಿಲ್ಲಿಸುವುದಿಲ್ಲ. ‘ಕವಿತೆ ಹಾಡಿಗೆ ಒಲಿಯುತ್ತದೆಯೇ ಎಂದು ಕೇಳುವ ಕವಿ ವಿ.ಸೀ. ಅವರು ಮನುಷ್ಯನ ಎಲ್ಲ ವ್ಯಾವಹಾರಗಳನ್ನು ಅರಿತು ಕತ್ತಲು ತುಂಬಿದ ಜಗತಿಗ್ತೆ ಬೆಳಕಾಗುವ ಆಶಯದೊಂದಿಗೆ ‘ಹಾಡು ಹಗಲಿಗೆ ಹಸಿದಿದೆ’೧೧ ಎನ್ನುವುದು ಗಮನಾರ್ಹ.

ಒಟ್ಟಾರೆ ವಿ.ಸೀ. ಅವರು ಸಂಗೀತಜ್ಞಾನ, ಛಂದಸ್ಸಿನ ಸುಲಲಿತ ಬಳಕೆ, ವೈವಿಧ್ಯತೆಯ ವಿವಿಧ ಪ್ರಯೋಗಗಳಿಗೆ ಒಡ್ಡಿಕೊಂಡಿರುವುದರ ಸಂಕೇತವಾಗಿ ‘ಗೀತಗಳು’ ಸಂಕಲನ ರಚನೆಯಾಗಿದೆ. ಅದೇ ಲಕ್ಷಣಗಳು ಅವರ ಎರಡನೇ ಸಂಕಲನ ‘ದೀಪಗಳ’ಲ್ಲೂ ಕಾಣಿಸುತ್ತದೆ. ಸಂಕೇತ ಪ್ರತಿಮೆಗಳ ನಡಿಗೆಯನ್ನು ಸಾಧಿಸಿರುವ ‘ನೆಳಲು-ಬೆಳಕು’ ಸಂಕಲನ ತುಂಬು ಭರವಸೆ ಹುಟ್ಟಿಸಿದ್ದು ಗಮನಾರ್ಹ. ಕಾವ್ಯಸೃಷ್ಟಿಯ ಸುಗ್ಗಿಯ ಸಂಕೇತವಾಗಿ ‘ದ್ರಾಕ್ಷಿ-ದಾಳಿಂಬೆ’, ‘ಹೆಜ್ಜೆ ಪಾಡು’ ಸಂಕಲನಗಳು ಕಾಣಿಸುತ್ತವೆ. ವಸ್ತು, ಭಾಷೆ, ವಿಧಾನ, ತಂತ್ರ, ಮುಕ್ತ ಛಂದಸ್ಸುಗಳ ಕಾರಣಕ್ಕೆ ನವ್ಯದ ಲಕ್ಷಣಗಳಿಗೆ ಹೊರಳಿಕೊಂಡ ಹಿನ್ನೆಲೆಯಲ್ಲಿ ೧೯೭೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ‘ಅರಲು-ಬರಲು’ ವಿಶಿಷ್ಟ ಕೃತಿ ರಚನೆಯಾಗಿದೆ. ಹಗಲು-ಇರುಳು, ನೋವು ನಲಿವು ಈ ಎಲ್ಲ ಸಂಕಲನಗಳು ಅವರ ಬಾಳಿನ ಸಮೃದ್ಧತೆಯ ಜೊತೆಗೆ ಕಾವ್ಯದ ಶ್ರಿಮಂತಿಕೆಗೆ ಸಂಕೇತವಾಗಿವೆ.
ಕವಿತೆ ಬರೆಯುವುದು ಕಷ್ಟ; ಅದಕಿಂತಲೂ ಕಷ್ಟ
ಬಾಳನ್ನೇ ಕವಿತೆ ಮಾಡುವುದು.
ಬರೆಯುವುದಕ್ಕೆ ಬೇಕು ಚತುರತೆ, ಪ್ರತಿಭೆ,
ಬಾಳಕವಿತೆಗೆ ಬೇಕು ಹೃದಯದಾಳದೊಲುಮೆ’
ಎಂಬ ಕುವೆಂಪು ಅವರ ಮಾತಿನಂತೆ ಹೃದಯಲ್ಲಿ ಪ್ರೀತಿಯನ್ನೇ ತುಂಬಿಕೊಂಡು ದೊಡ್ಡ ಬಾಳನ್ನು ಬಾಳಿದ ವಿ.ಸೀ ಅವರ ಕಾವ್ಯವು ಗಾತ್ರದಲಿಯ್ಲೂ ಗುಣದಲ್ಲಿಯೂ ಮಹತ್ವದ್ದಾಗಿದೆ.

ಕೊನೆ ಟಿಪ್ಪಣಿಗಳು :
ವಿ.ಸೀ : ಸ್ನೇಹ-ವಿಶ್ವಾಸ (ಸಮಗ್ರ ಕಾವ್ಯ ಸಂಪುಟ), ವಿ.ಸೀ. ಸಂಪದ, ಪು-೩೮
ಅದೇ, ಪುಟ
ಅದೇ, ಪು-೩೨೧
ಅದೇ, ಪು-೪೦೯
ಅದೇ, ಪು-೧೧೩
ಅದೇ, ಪುಟ
ಅದೇ, ಪು-೧೬೪
ಅದೇ, ಪು-೪೯೮
ಅದೇ, ಪು-೫೪೧
ಅದೇ, ಪುಟ
ಅದೇ, ಪು-೪೩೬
ಆಕರ ಗ್ರಂಥ :
ಸ್ನೇಹ-ವಿಶ್ವಾಸ (ಸಮಗ್ರ ಕಾವ್ಯ ಸಂಪುಟ) : ಪ್ರ: ವಿ.ಸೀ. ಸಂಪದ ಸಂಸ್ಮರಣ ವೇದಿಕೆ ಬೆಂಗಳೂರು, ೧೯೯೦

ವಿಷಯಗಳು: #article #peepal #peepalmedia
PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು