ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ ತಮಿಳುನಾಡು ಸಿಎಂ ವಿಜಯ್
ಲಿಂಕ್ ನಕಲಿಸಲಾಗಿದೆ ✓
ತಮಿಳುನಾಡು ಸರ್ಕಾರಿ ನೌಕರರಿಗೆ ಮೊದಲ ಬಾರಿಗೆ ಪಿತೃತ್ವ ರಜೆ (Paternity Leave) ಪರಿಚಯಿಸುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಘೋಷಿಸಿದ್ದಾರೆ. ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷ ನೌಕರರಿಗೆ ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ವೇತನ ಸಹಿತ ಪಿತೃತ್ವ ರಜೆ ನೀಡಲು ಸರ್ಕಾರ ನಿರ್ಧರಿಸಿದೆ.
ತಮಿಳುನಾಡು ಸರ್ಕಾರದ ಮಹಿಳಾ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ (Maternity Leave) ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ಪುರುಷ ಸರ್ಕಾರಿ ನೌಕರರಿಗೂ ಪಿತೃತ್ವ ರಜೆ ನೀಡಬೇಕೆಂದು ಹಲವು ಮನವಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಗು ಜನಿಸುವ ಸಮಯ ತಾಯಿ ಮತ್ತು ಮಗುವಿನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ ತಾಯಿಗೆ ದೈಹಿಕ ಹಾಗೂ ಮಾನಸಿಕ ಬೆಂಬಲ ನೀಡುವುದರ ಜೊತೆಗೆ ನವಜಾತ ಶಿಶುವಿನ ಆರೈಕೆಯಲ್ಲಿಯೂ ತಂದೆಯ ಪಾತ್ರ ಮುಖ್ಯವಾಗಿರುತ್ತದೆ. ಹೀಗಾಗಿ, ಹೆರಿಗೆ ಸಂದರ್ಭದಲ್ಲಿ ಪತ್ನಿಯೊಂದಿಗೆ ಇರಲು ಪುರುಷ ಸರ್ಕಾರಿ ನೌಕರರಿಗೆ ಪಿತೃತ್ವ ರಜೆ ನೀಡುವುದು ಅಗತ್ಯವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲಾಗಿದೆ. ಮಗುವಿನ ನಿರೀಕ್ಷಿತ ಜನನ ದಿನಾಂಕಕ್ಕಿಂತ 15 ದಿನಗಳ ಮೊದಲು ಅಥವಾ ಮಗು ಜನಿಸಿದ ನಂತರದ ಆರು ತಿಂಗಳ ಅವಧಿಯೊಳಗೆ ಈ ರಜೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ನಿರ್ಧಾರದಿಂದ ತಾಯಿಯ ಹೆರಿಗೆ ಅವಧಿಯಲ್ಲಿ ಪತಿಯ ಬೆಂಬಲ ದೊರೆಯುವುದರ ಜೊತೆಗೆ ನವಜಾತ ಶಿಶುವಿನ ಆರೈಕೆಯಲ್ಲಿ ತಂದೆಯೂ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ತಮಿಳುನಾಡು ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯು ನವೆಂಬರ್ 26, 2026ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ.
Peepal Media
Peepal Media · ದೇಶ ವಿಭಾಗ