ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ತತ್ವಲೋಕ – ವಿ.ಸೀ. ಕಾವ್ಯ : ಬಾಳಿನ ತತ್ವಶೋಧನೆಬೊಗಸೆಗೆ ದಕ್ಕಿದ್ದು-102 : ಸರ್ವಾಧಿಕಾರಿ ಅಪಾಯದ ಗಂಟೆ ಕೇಳದಿದ್ದರೆ ನಮ್ಮಲ್ಲೇ ಗಂಭೀರ ದೋಷವಿದೆ!ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನದ ಶತ್ರುಗಳು | ಈ ಬಾರಿ ಮೀಸೆ ಇರುವ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿ ಬೆದರಿಕೆ ಆರೋಪ: ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ ತಮಿಳುನಾಡು ಸಿಎಂ ವಿಜಯ್ಕೇರಳದ ಜನರು, ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ದೂರುಭಾರತದ ಸಂವಿಧಾನ ; ಸಮಾನತೆಯ ಋತುಗಾನಅಮೆರಿಕದ ಸುಂಕ ಸಮರ: ಭಾರತದ ಮೇಲೆ ಶೇ.25 ಸುಂಕದ ಪ್ರಸ್ತಾಪ, ಮೋದಿ ರಾಜಿಯಾಗ್ತಾರಾ?ಕಾಂಗ್ರೆಸ್ ಒಬಿಸಿ ಮೀಸಲಾತಿ ಕಿತ್ತುಕೊಂಡು ಅದನ್ನು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ: ನರೇಂದ್ರ ಮೋದಿಕರ್ನಾಟಕ ಹಿಜಾಬ್ ಪ್ರಕರಣದೊಂದಿಗೆ ಮತ್ತೊಂದು ಅರ್ಜಿ ವಿಚಾರಣೆಗೆ; ಅಲಹಾಬಾದ್ ಹೈಕೋರ್ಟ್ ತೀರ್ಪು ಪೂರ್ವನಿದರ್ಶನವಲ್ಲ ಎಂದ ಸುಪ್ರೀಂ ಕೋರ್ಟ್ಸಂವಿಧಾನ ದಿನ 2026: ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತೆ ಚರ್ಚೆಯಲ್ಲಿಶಾರುಖ್ ಖಾನ್ ವಿರುದ್ಧ ತಿರುಚಿದ ರೀಲ್ಸ್ ವೈರಲ್; ಸಂಘಪರಿವಾರದ ಹಿನ್ನೆಲೆಯ ಕಂಟೆಂಟ್ ಕ್ರಿಯೇಟರ್‌ಗೆ ಲೀಗಲ್ ನೋಟಿಸ್ಆಸ್ತಿಗಾಗಿ ಅಕ್ಕನನ್ನೇ ಕೊಂದ ವಕೀಲ; ಬೆಂಗಳೂರಿನಲ್ಲಿ ಮಕ್ಕಳ ಎದುರೇ ಮಹಿಳೆಯ ಹತ್ಯೆ, ಆರೋಪಿ ಪರಾರಿನಂದಿನಿ ಮೊಸರಿನ ಬೆಲೆ ಕೆ.ಜಿಗೆ ₹2 ಇಳಿಕೆ; ನವೆಂಬರ್ 29ರಿಂದ ಹೊಸ ದರ ಜಾರಿಬಸವ ಸಂಸ್ಕೃತಿಯ ಮೇಲಿನ ದಾಳಿಗೆ ಖಂಡನೆ; ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ನೀಡಿದ ಮಠಾಧಿಪತಿಗಳುಸಾಕಾಣಿಕೆ ದರ ಕೆ.ಜಿಗೆ ₹20ಕ್ಕೆ ಹೆಚ್ಚಿಸಿ; ಕಂಪನಿಗಳ ಶೋಷಣೆ ತಡೆಯಿರಿ: ಕೋಳಿ ಸಾಕಾಣಿಕೆದಾರರಿಂದ ಮುಖ್ಯಮಂತ್ರಿಗೆ ಮನವಿಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಆರಂಭ: 1,000ಕ್ಕೂ ಹೆಚ್ಚು ಉದ್ಯೋಗಿಗಳ ನೇಮಕಕ್ಕೆ ಯೋಜನೆ; ‘ಬಿಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಬಲಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ವ್ಯಕ್ತಿ: ಒಂದು ತಿಂಗಳ ಬಳಿಕ ಸ್ವಗ್ರಾಮಕ್ಕೆ ಮೃತದೇಹ ರವಾನೆ2016ರ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆಎಸ್‌ಐಆರ್‌ ವಿವಾದ: ತಂದೆಯ ಹೆಸರು ಮತದಾರರ ಪಟ್ಟಿಯಿಂದ ತೆಗೆದಿದ್ದಕ್ಕೆ ಎರಡೂವರೆ ತಿಂಗಳ ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!

ಬೊಗಸೆಗೆ ದಕ್ಕಿದ್ದು-102 : ಸರ್ವಾಧಿಕಾರಿ ಅಪಾಯದ ಗಂಟೆ ಕೇಳದಿದ್ದರೆ ನಮ್ಮಲ್ಲೇ ಗಂಭೀರ ದೋಷವಿದೆ!

PPeepal Media Desk

Peepal Media Desk ಅಂಕಣ

• 8 ನಿಮಿಷದ ಓದು

ಬೊಗಸೆಗೆ ದಕ್ಕಿದ್ದು-102 : ಸರ್ವಾಧಿಕಾರಿ ಅಪಾಯದ ಗಂಟೆ ಕೇಳದಿದ್ದರೆ ನಮ್ಮಲ್ಲೇ ಗಂಭೀರ ದೋಷವಿದೆ!

“..ಭಾರತೀಯ ಜನಸಂಘ ಮತ್ತು ಅದರ ಕೂಸು ಭಾರತೀಯ ಜನತಾಪಕ್ಷದಂತೆ ಯಾರೂ ಕೇಳುವವರಿಲ್ಲದ ಪಕ್ಷವೊಂದು ಯದ್ವಾತದ್ವಾ ಬೆಳೆದು ಇಡೀ ದೇಶದಲ್ಲೇ ಸರ್ವಾಧಿಕಾರ ನಡೆಸಲು ಹೊಂಚುಹಾಕುವುದು ಹೇಗೆ ಸಾಧ್ಯ ಎಂಬುದನ್ನು ಜರ್ಮನಿಯ ಇತಿಹಾಸದಲ್ಲಿ ನೋಡಬಹುದು..” ಲೇಖಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

​ಭಾರತೀಯ ಜನಸಂಘ ಮತ್ತು ಅದರ ಕೂಸು ಭಾರತೀಯ ಜನತಾಪಕ್ಷದಂತೆ ಯಾರೂ ಕೇಳುವವರಿಲ್ಲದ ಪಕ್ಷವೊಂದು ಯದ್ವಾತದ್ವಾ ಬೆಳೆದು ಇಡೀ ದೇಶದಲ್ಲೇ ಸರ್ವಾಧಿಕಾರ ನಡೆಸಲು ಹೊಂಚುಹಾಕುವುದು ಹೇಗೆ ಸಾಧ್ಯ ಎಂಬುದನ್ನು ಜರ್ಮನಿಯ ಇತಿಹಾಸದಲ್ಲಿ ನೋಡಬಹುದು. ಮೊದಲ ಮಹಾಯುದ್ಧದ ಸೋಲು ಮತ್ತು ವರ್ಸೈಲ್ಸ್ ಒಪ್ಪಂದದ ಅವಮಾನವನ್ನು ಜರ್ಮನ್ ಪ್ರಜಾಪ್ರಭುತ್ವವಾದಿಗಳು ಮತ್ತು ಯಹೂದಿ/ಸಮಾಜವಾದಿಗಳು ದೇಶದ ‘ಬೆನ್ನಿಗೆ ಚೂರಿ ಹಾಕಿದ’ ಕೃತ್ಯವೆಂದು ನಾಜಿಗಳು ಬಿಂಬಿಸಿದ್ದರು. ಅಲ್ಲಿ ನಡೆದ 1928ರ ಚುನಾವಣೆಯಲ್ಲಿ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (ಎನ್‌ಎಸ್‌ಡಿಎಪಿ) ದಯನೀಯವಾಗಿ ಸೋತ ಬಳಿಕ ಪಕ್ಷದೊಳಗೆ ಅಡಾಲ್ಫ್ ಹಿಟ್ಲರನ ಪ್ರಾಬಲ್ಯ ಬೆಳೆಯಿತು. ಕಾರಣವೆಂದರೆ, ಆತ ಹೆಚ್ಚು ಹೆಚ್ಚು ಆಕ್ರಮಣಕಾರಿ ಮತ್ತು ಹಿಂಸಾತ್ಮಕ ರೀತಿಯನ್ನು ಅಳವಡಿಸಿಕೊಂಡದ್ದು. ದಂಗೆ ಯತ್ನದಲ್ಲಿ ಬಂಧಿತನಾಗಿ, ದೇಶದ್ರೋಹದ ಆರೋಪದ ಮೇಲೆ ಜೈಲುಸೇರಿ, ಒಂದೇ ವರ್ಷದಲ್ಲಿ ಹೊರಗೆ ಬಂದು ತನ್ನನ್ನು ಮಹಾನ್ ದೇಶಪ್ರೇಮಿ ಎಂದು ಬಿಂಬಿಸಿ ಹೇಗೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಎಂಬುದನ್ನು ಹಿಂದೆ ನೋಡಿದ್ದೇವೆ.

​ನಂತರದ ದಿನಗಳಲ್ಲಿ ನಾಜಿ ಪಕ್ಷದ ಹಿಂಸಾತ್ಮಕ ದಾಳಿಗಳು ಗಣನೀಯವಾಗಿ ಹೆಚ್ಚಾದವು. ಇದಕ್ಕೆ ಗುರಿಯಾಗಿದ್ದದ್ದು ಆಗ ಬಹಳಷ್ಟು ಪ್ರಬಲವಾಗಿದ್ದ ಜರ್ಮನ್ ಕಮ್ಯುನಿಸ್ಟ್ ಪಕ್ಷ ಮತ್ತು ಯಹೂದಿಗಳು. ಪಕ್ಷದ ಸ್ಥಳೀಯ ಕಚೇರಿಗಳು, ಯಹೂದಿಗಳ ಅಂಗಡಿ ಮುಂಗಟ್ಟುಗಳು ಮುಂತಾದವುಗಳ ಮೇಲೆ ಸಶಸ್ತ್ರ ದಾಳಿಗಳು ನಡೆದವು. ಎಲ್ಲೆಡೆ ನಾಜಿಗಳು ಮತ್ತು ಕಮ್ಯುನಿಸ್ಟರ ನಡುವಿನ ಹಿಂಸಾತ್ಮಕ ಘರ್ಷಣೆ ಹೆಚ್ಚಿತು. ಇದರಲ್ಲಿ ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸ್ಸೋಲಿನಿಯ ‘ಬ್ಲ್ಯಾಕ್ ಶರ್ಟ್ಸ್’ ಗೂಂಡಾಗಳ ಮಾದರಿಯಲ್ಲಿ ‘ಬ್ರೌನ್ ಶರ್ಟ್ಸ್’ ಎಂದು ಕರೆಯಲ್ಪಡುತ್ತಿದ್ದ ‘ಸ್ಟ್ರಮ್‌ಅಬ್ಟೈಲುಂಗ್’ (SA) ಗೂಂಡಾಗಳ ಪಾತ್ರವೇ ಹೆಚ್ಚಿತ್ತು. ಭಾರತದಲ್ಲಿಯೂ, ಮುಖ್ಯವಾಗಿ ಕಮ್ಯುನಿಸ್ಟರು ಪ್ರಬಲವಾಗಿರುವ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಹಳ ವರ್ಷಗಳ ಹಿಂದೆ ಆರಂಭವಾದ ಆರೆಸ್ಸೆಸ್ ಮತ್ತು ಕಮ್ಯುನಿಸ್ಟರ ಘರ್ಷಣೆ ಇಂದಿಗೂ ಮುಂದುವರಿದಿದ್ದು, ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂಬುದನ್ನು ನಾವು ಗಮನಿಸಬೇಕು.

ಹೆಣಗಳು ಬೇಕು ಹೆಣಗಳು!
​ಇದು ಸಾವುಗಳ ಆರಂಭದೊಂದಿಗೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆದದ್ದು 1930ರಲ್ಲಿ. ನಾಜಿ ಪಕ್ಷದ ಹೋರ್ಸ್ಟ್ ವೆಸ್ಸೆಲ್ ಎಂಬಾತ ಹುಚ್ಚೆಬ್ಬಿಸುವ ರೋಷಭರಿತ ದೇಶಪ್ರೇಮದ ಹಾಡುಗಳನ್ನು ಬರೆದು ಸಂಯೋಜನೆ ಮಾಡುತ್ತಿದ್ದ. ಅವನಿಗೆ ಪಕ್ಷದಲ್ಲಿ ಸ್ವಲ್ಪ ಹೆಸರಿತ್ತು. ಆತ ನಾಜಿ ಗೂಂಡಾ ಪಡೆ ಎಸ್‌ಎ (SA)ನ ‘ಕಮಾಂಡರ್’ಗಳಲ್ಲಿ ಒಬ್ಬನಾಗಿದ್ದ. 1930ರ ಜನವರಿಯಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತನ ಗುಂಡೇಟಿಗೆ ತುತ್ತಾಗಿ ಫೆಬ್ರವರಿ 23ರಂದು ವೆಸ್ಸೆಲ್ ಮೃತಪಟ್ಟ. ವೆಸ್ಸೆಲ್ ನೇತೃತ್ವದ ಎಸ್‌ಎ ಪಡೆ ಮತ್ತು ಸ್ಥಳೀಯ ಕಮ್ಯುನಿಸ್ಟರ ನಡುವಿನ ಬೀದಿ ಕಾಳಗ, ಪೂರ್ವದ್ವೇಷ ಹಾಗೂ ಆತನ ಸುತ್ತಲಿನ ವಿವಾದಗಳು ಈ ಘರ್ಷಣೆಯನ್ನು ಮತ್ತಷ್ಟು ಕಾವೇರಿಸಿದವು. ಒಂದು ಕಾದಾಟದಲ್ಲಿ ನಾಲ್ವರು ಕಮ್ಯುನಿಸ್ಟ್ ಕಾರ್ಯಕರ್ತರು ಮಾರಣಾಂತಿಕವಾಗಿ ಗಾಯಗೊಂಡರು; ಮುಂದೆ ನಡೆದ ಘರ್ಷಣೆ ಮತ್ತು ಗುಂಡಿನ ಚಕಮಕಿಯಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತನೊಬ್ಬ ಹಾರಿಸಿದ ಗುಂಡಿಗೆ ಹೋರ್ಸ್ಟ್ ವೆಸ್ಸೆಲ್ ಸಾವಿಗೀಡಾದ. ಇದು ನಾಜಿ ಪಕ್ಷಕ್ಕೆ ವರವಾಯಿತು.

​ಹೋರ್ಸ್ಟ್ ವೆಸ್ಸೆಲ್‌ನ ಸಾವನ್ನು ಚಾಣಾಕ್ಷ ಗೊಬೆಲ್ಸ್ ಪಕ್ಷದ ಪ್ರಚಾರಕ್ಕೆ ಬಳಸಲು ಯೋಜಿಸಿದ. ದೇಶಪ್ರೇಮಿಗಳನ್ನು ಕಮ್ಯುನಿಸ್ಟರು ಕೊಲ್ಲುತ್ತಿದ್ದಾರೆಂಬ ಹುಯಿಲೆಬ್ಬಿಸಲಾಯಿತು. ಗೊಬೆಲ್ಸ್ ಇನ್ನೊಬ್ಬ ಖತರ್ನಾಕ್ ನಾಜಿ – ಹರ್ಮನ್ ಗೋರಿಂಗ್ ಜೊತೆ ಸೇರಿ ಹೋರ್ಸ್ಟ್ ವೆಸ್ಸೆಲ್‌ನ ಹಾಡೊಂದನ್ನು (‘ಹೋರ್ಸ್ಟ್ ವೆಸ್ಸೆಲ್ ಲೀಡ್’) ಪಕ್ಷದ ಗೀತೆಯನ್ನಾಗಿ ಮಾಡಿ ಅದಕ್ಕೆ ಹೋರ್ಸ್ಟ್ ವೆಸ್ಸೆಲ್ ಎಂದೇ ಹೆಸರಿಟ್ಟ. ವೆಸ್ಸೆಲ್‌ನ ಅಂತ್ಯಕ್ರಿಯೆಯಲ್ಲಿ ಪಕ್ಷದ ದೊಡ್ಡದೊಡ್ಡ ನಾಯಕರು ಭಾಗವಹಿಸಿದರು. ಇದೇ ಹಾಡನ್ನು ಅಲ್ಲಿ ಹಾಡಲಾಯಿತು. ಈ ಘಟನೆ ನಿರಂತರವಾಗಿ ಕಾರ್ಯಕರ್ತರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕೆಂಬುದು ಅವನ ಉದ್ದೇಶವಾಗಿತ್ತು. ಮುಂದೆ ಹಿಟ್ಲರ್ ಆಡಳಿತ ಬಂದಾಗ 1933ರಲ್ಲಿ ಇದನ್ನು ನಾಜಿ ಪಕ್ಷದ ಅಧಿಕೃತ ಗೀತೆಯಾಗಿ ಮತ್ತು ರಾಷ್ಟ್ರಗೀತೆಯೊಂದಿಗೆ ಜೊತೆಗೂಡಿಸಿ ಬಳಸಲಾಯಿತು. ಹಿಟ್ಲರ್ ಪತನದ ನಂತರ 1945ರಲ್ಲಿ ಮಿತ್ರರಾಷ್ಟ್ರಗಳ ನಿಯಂತ್ರಣ ಮಂಡಳಿಯು ಇದನ್ನು ನಿಷೇಧಿಸಿದರೂ, ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ನವನಾಜಿಗಳು ಇದನ್ನು ಈಗಲೂ ಬಳಸುತ್ತಿದ್ದಾರೆ. ನಮ್ಮಲ್ಲಿ ಕೂಡಾ ಹೆಣ ಬಿದ್ದೊಡನೆ ಓಡಿಬರುವ ರಣ ಹದ್ದುಗಳಿದ್ದಾರೆ!

​ಇದಾದ ಬಳಿಕ ಜರ್ಮನಿಯಲ್ಲಿ ನಾಜಿಗಳ ಹಿಂಸಾಪ್ರವೃತ್ತಿ ಇನ್ನೂ ಹೆಚ್ಚಿತು. ಅವರು ಕಮ್ಯುನಿಸ್ಟರ ಜೊತೆಗೆ ಅಲ್ಪಸಂಖ್ಯಾತರಾಗಿದ್ದ ಯಹೂದಿಗಳ ಮೇಲೆ ದಾಳಿ ಆರಂಭಿಸಿದರು. ಕಾಲು ಕೆರೆದು ಜಗಳ ಮಾಡುವುದು, ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಗುಂಪು ಹಲ್ಲೆ ನಡೆಸುವುದು, ಅಂಗಡಿ ಮುಂಗಟ್ಟುಗಳಿಗೆ ಹಾನಿ ಮಾಡುವುದು, ಗಾಜು ಒಡೆಯುವುದು, ಯಹೂದಿಗಳ ಮನೆ ಕಟ್ಟಡಗಳ ಮೇಲೆ ಪೇಂಟ್‌ನಲ್ಲಿ ಜ್ಯೂ (ಯಹೂದಿ, Juden) ಎಂದು ಬರೆಯುವುದು, ದ್ವೇಷ ಹರಡುವುದು ಇತ್ಯಾದಿಗಳು ವ್ಯವಸ್ಥಿತವಾಗಿ ಹೆಚ್ಚಾದವು.

​ನಮ್ಮಲ್ಲಿ ಕೂಡಾ ವಿರೋಧಿಗಳ ಮೇಲೆ, ಕೆಲವೊಮ್ಮೆ ಬೇರೆ ಧರ್ಮಕ್ಕೆ ಸೇರಿದವರು, ಅಥವಾ ಅಂತಹ ತಪ್ಪು ತಿಳುವಳಿಕೆಯಿಂದ ತಮ್ಮವರ ಮೇಲೆಯೇ ದಾಳಿ ಮಾಡುವುದು, ಕೊಲೆ ಮಾಡುವುದು ಇತ್ಯಾದಿಗಳಲ್ಲಿ ಭಾಗಿಯಾದವರನ್ನು ಹೀರೋಗಳನ್ನಾಗಿ ಮಾಡಿ, ಪ್ರತೀಕಾರವಾಗಿ ಕೊಲೆಯಾದವರನ್ನು ಹಿಂದೂ ಹುತಾತ್ಮರನ್ನಾಗಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಗಳನ್ನು ನಾವು ನಿರಂತರ ನೋಡುತ್ತಿದ್ದೇವೆ. ಕೋಮುನೆಲೆಯಲ್ಲಿ ಚಿಕ್ಕಪುಟ್ಟ ಜಗಳಗಳನ್ನೂ ಉತ್ಪ್ರೇಕ್ಷಿಸಿ, ತಿರುಚಿ ಕೋಮುಗಲಭೆಗಳನ್ನು ಉಂಟುಮಾಡುವ ಪರಿಪಾಠವನ್ನೂ ನಾವು ನೋಡುತ್ತಾ ಬಂದಿದ್ದೇವೆ. ಬೇಕೆಂದೇ ಮುಸ್ಲಿಮರ ವಿರುದ್ಧ ಆರೋಪ ಹೊರಿಸಲು ಆರೆಸ್ಸೆಸ್ ಕಾರ್ಯಕರ್ತರು ತಾವೇ ಸ್ವತಃ ಹಿಂದೂ ಪೂಜಾಸ್ಥಳಗಳಿಗೆ ಮಾಂಸ ಎಸೆದು, ಕಟ್ಟಡಗಳಲ್ಲಿ ಪಾಕಿಸ್ತಾನದ ಧ್ವಜ ಏರಿಸಿ ಸಿಕ್ಕಿಬಿದ್ದ ಹಲವು ಪ್ರಕರಣಗಳು ನಮ್ಮ ನೆನಪಿನಲ್ಲಿವೆ. ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಬುರ್ಖಾ ಧರಿಸಿ ಬ್ರಾಹ್ಮಣರ ಕಾಲನಿಯಲ್ಲಿ ಮಾಂಸ ಎಸೆದು ಕೋಮುಗಲಭೆ ಹುಟ್ಟುಹಾಕಲು ಯತ್ನಿಸಿದ ಸ್ವಾತಿ ವಿಕ್ರಂ ಭೋಸ್ಲೆ ಎಂಬ ಆರೆಸ್ಸೆಸ್ ಕಾರ್ಯಕರ್ತೆಯ ಬಂಧನದ ಪ್ರಕರಣವೂ ಇಂತಹ ಧ್ರುವೀಕರಣದ ತಂತ್ರಗಳ ಚರ್ಚೆಯಲ್ಲಿ ತಾಜಾ ಉದಾಹರಣೆಯಾಗಿ ಗಮನ ಸೆಳೆದಿದೆ.

​ನಮ್ಮಲ್ಲಿ ಕೂಡಾ ನೈತಿಕ ಪೊಲೀಸ್‌ಗಿರಿ ಎಂಬ ಹೆಸರಿನಲ್ಲಿ ಅನೈತಿಕ ಗೂಂಡಾಗಿರಿ, ದನದ ನೆಪದಲ್ಲಿ ಅಲ್ಪಸಂಖ್ಯಾತರ ಮೇಲೆ, ಅಸ್ಪೃಶ್ಯತೆ ನೆಪದಲ್ಲಿ ದಲಿತರ ಮೇಲೆ ಹಲ್ಲೆ, ಅವರ ಕೊಲೆ, ಇದೇ ನೆಪಹಿಡಿದು ಅತ್ಯಾಚಾರದ ಘಟನೆಗಳು ನಿರಂತರ ನಡೆಯುತ್ತಿರುವುದು, ದಿನೇದಿನೇ ಹೆಚ್ಚಾಗುತ್ತಿರುವುದು, ಅದನ್ನು ಸಾಧುಗಳು, ಸಾಧ್ವಿಯರು ಎನಿಸಿಕೊಂಡವರು ಸಮರ್ಥಿಸುವುದು, ಕೈ ಕಡಿಯಿರಿ, ತಲೆ ಕಡಿಯಿರಿ ಎಂದು ಬಿಜೆಪಿ ಸಂಸದ, ಶಾಸಕರೂ ಸೇರಿದಂತೆ ನಾಯಕರು ಬಹಿರಂಗ ಕರೆ ನೀಡುವುದು, ಜವಾಬ್ದಾರಿ ಇಲ್ಲದೇ ಬಂದಲ್ಲಿ ಹೋದಲ್ಲಿ ಎಲ್ಲಾ ಬೆಂಕಿ ಹಚ್ಚುವ ಮಾತನಾಡುವುದು, ಕಾರ್ಯಕರ್ತರು ಗೂಂಡಾಗಳಂತೆ ವಿರೋಧಿಗಳಲ್ಲಿ ಭಯದ ವಾತಾವರಣ ಮೂಡಿಸುವುದು, ಎಲ್ಲರನ್ನೂ ಜೊತೆಗೆ ಒಯ್ಯುವ ಮಾತನಾಡುವ ವಿಶ್ವಗುರು ಈ ಕುರಿತು ತುಟಿಬಿಚ್ಚದೆ ಮೌನ ಸಮ್ಮತಿ ಸೂಚಿಸಿ, ಪರೋಕ್ಷ ಬೆಂಬಲ ನೀಡುತ್ತಿರುವುದು ಏನನ್ನು ಸೂಚಿಸುತ್ತದೆ?!

ಅದೇ ಹಾದಿ; ಅದೇ ಗುಣಲಕ್ಷಣ!
​ಹೀಗಿರುತ್ತಾ, 1929ದಲ್ಲಿ ಯುಎಸ್‌ಎಯಲ್ಲಿ ಭಾರೀ ಆರ್ಥಿಕ ಕುಸಿತ ಉಂಟಾಯಿತು. ಮೊದಲ ಮಹಾಯುದ್ಧದಿಂದ ಬಸವಳಿದಿದ್ದ ಜರ್ಮನಿಗೆ ನೀಡಿದ್ದ ಭಾರೀ ಮೊತ್ತದ ಸಾಲಗಳನ್ನು ತಕ್ಷಣ ಹಿಂದಕ್ಕೆ ಪಡೆಯುವುದು ಅಲ್ಲಿನ ಹಣಕಾಸು ಲೇವಾದೇವಿಗಾರರಿಗೆ ಅನಿವಾರ್ಯವಾಯಿತು. ಬೇರೆ ಕೆಲವು ದೇಶಗಳೂ ಹಾಗೆಯೇ ಮಾಡಿದವು. ಜರ್ಮನಿ ಇನ್ನಷ್ಟೂ ಕಂಗಾಲಾಯಿತು. ನಿರುದ್ಯೋಗ ಎಲ್ಲೆ ಮೀರಿತು. ಜನರಿಗೆ ಆಡಳಿತಗಾರ ಪಕ್ಷಗಳ ಮೇಲೆ ತೀರಾ ಅಸಮಾಧಾನವಿತ್ತು. ಇದನ್ನು ಕಮ್ಯುನಿಸ್ಟರು ತಮ್ಮ ಸಂಘಟನೆ ಬಲಪಡಿಸಲು ಬಳಸಿದರೆ, ನಾಜಿಗಳು ತಮ್ಮ ಗೂಂಡಾಪಡೆಗಳನ್ನು ಬಲಪಡಿಸಲು ಬಳಸಿಕೊಂಡರು. ನಿರುದ್ಯೋಗಿಗಳಿಗೆ ಆಮಿಷವೊಡ್ಡಿದರು. ಕ್ರಿಮಿನಲ್‌ಗಳಿಗೆ ಗೂಂಡಾಗಿರಿ, ವಸೂಲಿ ಇತ್ಯಾದಿ ನಡೆಸಲು ಅವಕಾಶ ಕೊಟ್ಟು ಆಶ್ರಯ ನೀಡಿದರು.

​ಆಗ ಜರ್ಮನಿಯಲ್ಲಿದ್ದ ಜರ್ಮನ್ ಪೀಪಲ್ಸ್ ಪಾರ್ಟಿ, ಜರ್ಮನ್ ಡೆಮೋಕ್ರಾಟಿಕ್ ಪಾರ್ಟಿ, ಕ್ಯಾಥೋಲಿಕ್ ಸೆಂಟ್ರಲ್ ಪಾರ್ಟಿ ಇತ್ಯಾದಿಗಳು ಬಲಕಳೆದುಕೊಳ್ಳಲು ಆರಂಭಿಸಿದ್ದವು. ನಾಜಿಗಳು ಮತ್ತು ಕಮ್ಯುನಿಸ್ಟರು ಬಲ ಹೆಚ್ಚಿಸಿಕೊಳ್ಳುತ್ತಿದ್ದರು. ಧ್ರುವೀಕರಣ ನಡೆಯುತ್ತಿತ್ತು. 1930ರ ಚುನಾವಣೆಯಲ್ಲಿ ಇವೆರಡು ಪಕ್ಷಗಳು ಒಟ್ಟಾಗಿ 40 ಶೇಕಡಾಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದವು. ನಾಜಿಗಳ ಓಟವನ್ನು ತಡೆಯಲು ಉಳಿದ ಪಕ್ಷಗಳು ವಿಫಲವಾದವು. ನಾಜಿ ಪಕ್ಷವು 18.3 ಶೇಕಡಾ ಮತಗಳೊಂದಿಗೆ 107 ಸ್ಥಾನಗಳನ್ನು ಗಳಿಸಿತು. ನಾಜಿಗಳು ಕಮ್ಯುನಿಸ್ಟ್ ವಿರೋಧಿ ಬಂಡವಾಳಿಗರ ನೆರವಿನಿಂದ ಹಣದ ಹೊಳೆಯನ್ನೇ ಹರಿಸಿದರು. ಜರ್ಮನಿಯಂತಹ ಹೆಚ್ಚು ಜನಸಂಖ್ಯೆ ಇಲ್ಲದ ದೇಶದಲ್ಲಿ ಆ ಕಾಲಕ್ಕೇ ಹತ್ತು ಲಕ್ಷ ನಾಜಿ ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿತ್ತು.

​ಇದಕ್ಕೆ ಮೊದಲು ಜರ್ಮನಿಯ ವೈಮರ್ ಮಾದರಿಯನ್ನು ತಿಳಿಯಬೇಕು. ಅಲ್ಲಿ ಅಧ್ಯಕ್ಷೀಯ ಚುನಾವಣೆಗೆ ನೇರ ಮತದಾನ ನಡೆಯುತ್ತಿತ್ತು. ಗೆದ್ದವರು ಅಧ್ಯಕ್ಷರಾಗುತ್ತಿದ್ದರು. ಅವರ ಬಳಿ ಅಧಿಕಾರ ಇದ್ದರೂ, ಅವರು ಪ್ರತಿನಿಧಿಸುವ ಪಕ್ಷಕ್ಕೆ ಸಂಸತ್ತಿನಲ್ಲಿ (ರೈಖ್‌ಸ್ಟ್ಯಾಗ್) ಬಹುಮತ ಇರುತ್ತಿರಲಿಲ್ಲ. ಸಂಸತ್ ಚುನಾವಣೆಯಲ್ಲಿ ಬಹುಮತ ಪಡೆದ, ಅಥವಾ ಅತೀ ದೊಡ್ಡ ಕೂಟದ ನಾಯಕರನ್ನು ಚಾನ್ಸಲರ್ ಹುದ್ದೆಗೆ ಅಧ್ಯಕ್ಷರೇ ನೇಮಕ ಮಾಡುತ್ತಿದ್ದರು. ಹಿಟ್ಲರ್ ಸರ್ವಾಧಿಕಾರಿಯಾಗುವ ತನಕ ರಾಜಸತ್ತೆಯ ಪರವಿದ್ದ ಸಂಪ್ರದಾಯವಾದಿ (ಕನ್ಸರ್ವೇಟಿವ್) ನಾಯಕ, ಮೊದಲ ಮಹಾಯುದ್ಧದ ಹೀರೋ ವಾನ್ ಹಿಂಡೆನ್‌ಬರ್ಗ್ ಅಧ್ಯಕ್ಷರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚಾನ್ಸಲರ್‌ಗೆ ಅಧಿಕಾರ ನಡೆಸಲು ಕಷ್ಟವಾಗುತ್ತಿತ್ತು. ವೈಮರ್ ಸಂವಿಧಾನದ 48ನೇ ವಿಧಿಯ (Article 48) ಸಾಂವಿಧಾನಿಕ ತುರ್ತುಸ್ಥಿತಿಯ ಅಧಿಕಾರಗಳನ್ನು ಬಳಸಿಕೊಂಡು ಸುಗ್ರೀವಾಜ್ಞೆಗಳ ಮೂಲಕ ಆಡಳಿತ ನಡೆಸುವ ಪರಿಪಾಠ ಬೆಳೆಯಿತು.

​ಇಂತಹ ಪರಿಸ್ಥಿತಿಯಲ್ಲಿ ಹಿಟ್ಲರ್ 1931ರಿಂದ 1933ರ ವರೆಗೆ ದೇಶಾದ್ಯಂತ ಪ್ರವಾಸ ಮಾಡಿ, ಆಡ್ವಾಣಿಯ ರಥಯಾತ್ರೆಯಂತೆ ತನ್ನ ಪ್ರಚೋದನಕಾರಿ ಭಾಷಣಗಳ ಮೂಲಕ ಜನರ ನಡುವೆ ಬೆಂಕಿ ಹಚ್ಚಿಬರುತ್ತಿದ್ದ. ಆಶ್ವಾಸನೆಗಳ ಮೇಲೆ ಆಶ್ವಾಸನೆಗಳ ಸುರಿಮಳೆಯಾಗುತ್ತಿತ್ತು. ಎಂದೂ ಈಡೇರಿಸಲಾಗದ ಮತ್ತು ಆತ ಎಂದೂ ಈಡೇರಿಸದ ಆಶ್ವಾಸನೆಗಳು ಅವಾಗಿದ್ದವು. ಆದರೆ, ಪ್ರಸಕ್ತ ಇದ್ದ ಆಡಳಿತದಿಂದ ಬೇಸತ್ತಿದ್ದ ಜನರು ಆತನ ಮಾತಿಗೆ ಮರುಳಾಗುತ್ತಿದ್ದರು. ದೇಶದೆಲ್ಲೆಡೆ ಇದು ನಡೆಯುತ್ತಿದ್ದಾಗ ನಾಜೀ ಗೂಂಡಾ ಯುವಪಡೆಗಳು ಹಾದಿಬೀದಿಗಳಲ್ಲಿ ಅಪಪ್ರಚಾರದಲ್ಲಿ ತೊಡಗಿ, ಭಯಹುಟ್ಟಿಸುವ ಹಿಂಸಾಚಾರಗಳನ್ನು ನಡೆಸುತ್ತಿದ್ದವು. ಮತ್ತೊಂದು ಕಡೆಯಲ್ಲಿ ಗೊಬೆಲ್ಸ್ ತನ್ನ ಪಕ್ಷದ ಪತ್ರಿಕೆಯಾದ ‘ಡರ್ ಅಂಗ್ರಿಫ್’ (Der Angriff – The Attack)ನಲ್ಲಿ ಹೆಸರೇ ಸೂಚಿಸುವಂತೆ ಆಕ್ರಮಣಕಾರಿಯಾಗಿ ಮತ್ತು ಪ್ರಚೋದನಾತ್ಮಕವಾಗಿ ಬರೆಯುತ್ತಾ ‘ಪಾಂಚಜನ್ಯ’ವನ್ನು ಊದುತ್ತಿದ್ದ. ಮುಂದೆ ಚಾನ್ಸಲರ್ ಆಗಿ ನಾಜಿಗಳಿಗೆ ಆರಂಭಿಕ ಅವಕಾಶ ಒದಗಿಸಿಕೊಟ್ಟ ಫ್ರಾಂಜ್ ವಾನ್ ಪಾಪೆನ್ ಸಹಿತ ವಿರೋಧಿ ನಾಯಕರ ವಿರುದ್ಧ ಮಾನಹಾನಿಕರ ಸುಳ್ಳುಗಳನ್ನು ಬರೆದು ಹಲವು ಕೇಸುಗಳಲ್ಲಿ ದಂಡವನ್ನೂ ಕಟ್ಟಿದ.

​ಇಂತಹ ಸಮಯದಲ್ಲಿ ಅಂದರೆ, 1930–32ರ ನಡುವೆ ಹೈನ್ರಿಕ್ ಬ್ರ್ಯೂನಿಂಗ್ ಚಾನ್ಸಲರ್ ಆಗಿದ್ದ. 80 ವರ್ಷ ದಾಟಿದ್ದ ಅಧ್ಯಕ್ಷ ಹಿಂಡೆನ್‌ಬರ್ಗ್ ನಾಜಿಗಳ ಉಪಟಳಕ್ಕೆ ಕಡಿವಾಣ ಹಾಕಲಿಲ್ಲ. ಇನ್ನೊಂದು ಕಡೆಯಲ್ಲಿ ಇತರ ಪಕ್ಷಗಳು ತಮ್ಮ ನಡುವಿನ ಜಗಳದಿಂದ ನಾಜಿಗಳ ವಿರುದ್ಧ ಒಗ್ಗಟ್ಟು ರೂಪಿಸಲಿಲ್ಲ. ಬಂಡವಾಳಶಾಹಿ ಮತ್ತು ಸಾಂಪ್ರದಾಯಿಕ, ಧಾರ್ಮಿಕ ಹಿನ್ನೆಲೆಯಿಂದ ಬಂದ ಈ ಪಕ್ಷಗಳು ಕಮ್ಯುನಿಸ್ಟರಿಗಿಂತ ನಾಜಿಗಳೇ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿದ್ದರು; ಹಿಟ್ಲರ್‌ನನ್ನು ಅಧಿಕಾರದಲ್ಲಿಟ್ಟು ನಿಯಂತ್ರಿಸಬಹುದು ಎಂಬ ತಪ್ಪು ಲೆಕ್ಕಾಚಾರವೂ ಅವರಲ್ಲಿತ್ತು. ಆಗಿನ್ನೂ ನಾಜಿಗಳು ತಮ್ಮ ಭಯಾನಕ ರೂಪವನ್ನು ಪೂರ್ಣವಾಗಿ ಅನಾವರಣಗೊಳಿಸಿರಲಿಲ್ಲ. ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಈ ಸಾಂಪ್ರದಾಯಿಕ ರಾಜಸತ್ತೆಯ ಪರ ಪಕ್ಷಗಳಿಗಿಂತ ಕನಿಷ್ಟ ಸಮಾಜವಾದಿ ಎಂದು ಹೆಸರಲ್ಲಾದರೂ ಹೇಳಿಕೊಳ್ಳುವ ನಾಜಿಗಳೇ ವಾಸಿ ಎಂಬ ನಿಲುವು ಹೊಂದಿದ್ದರು ಎಂಬುದನ್ನು ಗಮನಿಸಬೇಕು! ಇದರ ಬೆನ್ನಿಗೇ 1932ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಿತು. ಅದರಲ್ಲಿ ಅಧ್ಯಕ್ಷ ಹಿಂಡೆನ್‌ಬರ್ಗ್ 53 ಶೇಕಡಾ ಮತಗಳನ್ನು ಗಳಿಸಿದರೆ, ಹಿಟ್ಲರ್ 36.8 ಶೇಕಡಾ ಮತಗಳನ್ನು ಗಳಿಸಿ ಪರಾಭವಗೊಂಡರೂ ರಾಷ್ಟ್ರ ರಾಜಕಾರಣದಲ್ಲಿ ಎರಡನೇ ಅತ್ಯಂತ ಪ್ರಭಾವಶಾಲಿ ನಾಯಕನಾಗಿ ಮೂಡಿಬಂದ.

ಅವಕಾಶವಾದಿಗಳ ದ್ರೋಹ
​1932ರ ಜುಲೈನಲ್ಲಿ ರೈಖ್‌ಸ್ಟ್ಯಾಗ್‌ಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ನಾಜಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು (230 ಸ್ಥಾನಗಳು); ಅದೇ ವರ್ಷದ ನವೆಂಬರ್‌ನಲ್ಲಿ ನಡೆದ ಮರುಚುನಾವಣೆಯಲ್ಲಿ ನಾಜಿ ಪಕ್ಷ ಸ್ವಲ್ಪ ಹಿನ್ನಡೆ ಕಂಡರೂ (196 ಸ್ಥಾನಗಳು) ಅತಿ ದೊಡ್ಡ ಪಕ್ಷವಾಗಿಯೇ ಉಳಿಯಿತು, ಆದರೆ ಬಹುಮತ ದೊರೆಯಲಿಲ್ಲ; ನವೆಂಬರ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಸುಮಾರು 16.9 ಶೇಕಡಾ ಮತ ಪಡೆದು 100 ಸ್ಥಾನಗಳನ್ನು ಗಳಿಸಿತು. ಈ ರಾಜಕೀಯ ಅಸ್ಥಿರತೆಯ ನಡುವೆ 1932ರಲ್ಲಿ ಫ್ರಾಂಜ್ ವಾನ್ ಪಾಪೆನ್ ಮತ್ತು ನಂತರ ಮೇಜರ್ ಜನರಲ್ ಕುರ್ಟ್ ವಾನ್ ಶ್ಲೈಷರ್ ಚಾನ್ಸಲರ್‌ಗಳಾದರು. 1933ರ ಜನವರಿಯಲ್ಲಿ ಹಿಟ್ಲರ್ ಚಾನ್ಸಲರ್ ಆದಾಗ ಫ್ರಾಂಜ್ ವಾನ್ ಪಾಪೆನ್ ಆತನ ಜೊತೆ ಸೇರಿ ಉಪ ಚಾನ್ಸಲರ್ ಆದರು. ಮೈತ್ರಿಕೂಟದ ರಾಜಕಾರಣದಲ್ಲಿ ಸಣ್ಣಪುಟ್ಟ ಅಥವಾ ಪ್ರಾದೇಶಿಕ ಪಕ್ಷಗಳು ಅಧಿಕಾರದ ಲೆಕ್ಕಾಚಾರದಲ್ಲಿ ದೊಡ್ಡ ಪಕ್ಷಕ್ಕೆ ಬೆಂಬಲ ನೀಡಿದಂತೆ ಈ ರಾಜಕೀಯ ಲೆಕ್ಕಾಚಾರವೂ ನಡೆಯಿತು. (ವೈಮರ್ ವ್ಯವಸ್ಥೆಗೂ, ನಮ್ಮ ಆಳವಾಗಿ ಬೇರೂರಿರುವ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ ಎಂಬುದು ನಿಜ. ಆದರೂ, ತಾತ್ವಿಕವಾಗಿ ಕೋಮುವಾದಿ, ಸನಾತನವಾದಿಯೆಂದು ಗುರುತಿಸಿಕೊಂಡ ಅಪಾಯಕಾರಿಯಾದ ಬಲಪಂಥೀಯ ಪಕ್ಷದ ಜೊತೆ ಕೈಜೋಡಿಸಿದ ಸಮಾಜವಾದಿ, ಜಾತ್ಯತೀತರೆಂದು ಹೇಳಿಕೊಳ್ಳುವ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಬಿಜು ಪಟ್ನಾಯಕ್, ದೇವೇಗೌಡ ಮತ್ತು ಕುಮಾರಸ್ವಾಮಿ ಮುಂತಾದವರು ಮತ್ತು ರಾಮ್ ವಿಲಾಸ್ ಪಾಸ್ವಾನ್, ರಾಮದಾಸ ಅಠವಳೆ ಮುಂತಾದ ಭರವಸೆ ಹುಟ್ಟಿಸಿದ್ದ ದಲಿತ ನಾಯಕರ ನಡೆಗಳನ್ನು ನೆನಪಿಸಿಕೊಳ್ಳಿ!).

​ಆಗ ನಾಜಿಗಳ ಅಟಾಟೋಪ ಎಷ್ಟು ಹೆಚ್ಚಿತೆಂದರೆ ರಾಜಧಾನಿ ಬರ್ಲಿನ್‌ನಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿಯ ಮೇಲೆಯೇ ಅವರು ಸಶಸ್ತ್ರ ದಾಳಿ ನಡೆಸಿ ನಾಲ್ವರು ಕಾರ್ಯಕರ್ತರನ್ನು ಕೊಂದುಹಾಕಿದರು. 1932ರ ಆಗಸ್ಟ್‌ನಲ್ಲಿ ನಡೆದ ಪೊಟೆಂಪಾ ಹತ್ಯಾಕಾಂಡದಂತಹ ಪ್ರಕರಣದಲ್ಲಿ ಐವರು ನಾಜಿಗಳಿಗೆ ಆರಂಭದಲ್ಲಿ ಮರಣದಂಡನೆ ವಿಧಿಸಲಾಯಿತಾದರೂ, ಅದು ಜೀವಾವಧಿ ಶಿಕ್ಷೆಯಾಗಿ ಬದಲಾಗಿ, 1933ರ ಮಾರ್ಚ್‌ನಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ಘೋಷಿಸಲಾದ ಕ್ಷಮಾದಾನದ ಅಡಿಯಲ್ಲಿ ಬಿಡುಗಡೆಯಾದರು. ಬಲಪಂಥೀಯ ಹಿಂಸಾಚಾರದ ವಿರುದ್ಧ ನ್ಯಾಯಾಂಗ ಮತ್ತು ಆಡಳಿತ ತೋರಿದ ಈ ‘ಸಾಂಸ್ಥಿಕ ಮೃದುತ್ವ’ (institutional leniency) ನಾಜೀ ಗೂಂಡಾಗಳ ಸೊಕ್ಕನ್ನು ಇನ್ನಷ್ಟೂ ಹೆಚ್ಚಿಸಿತು. ನಮ್ಮಲ್ಲಿಯೂ ಇಂತಹ ಹಂತಕ ಗೂಂಡಾಗಳು ಬಿಡುಗಡೆಗೊಂಡು, ಕಾರ್ಯಕರ್ತರಿಂದ ಹೂಮಾಲೆ ಹಾಕಿಸಿಕೊಂಡು ಮರಿ ನಾಯಕರಾಗಿ ಬೆಳೆಯುತ್ತಿರುವ ವಿದ್ಯಮಾನವನ್ನು ನೋಡುತ್ತಿದ್ದೇವೆ ಎಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಾವಿಸಬಹುದು.

ಸರ್ವಾಧಿಕಾರದ ವ್ಯವಸ್ಥಿತ ಬೆಳವಣಿಗೆ
​ಜರ್ಮನಿಯಲ್ಲಿ ಹಿಟ್ಲರ್ ಸರ್ವಾಧಿಕಾರಿಯಾಗಿ ಬೆಳೆದ ರೀತಿ ವ್ಯವಸ್ಥಿತವಾಗಿತ್ತು. ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ – ಅಂದರೆ, ಜರ್ಮನಿಯ ಅಭಿವೃದ್ಧಿ ಎಂಬ ಘೋಷಣೆ ಅಂದೂ ಇತ್ತು. ನಾಜಿಗಳ ಹತ್ತು ಘೋಷಣೆಗಳಲ್ಲಿ ಇದೂ ಒಂದಾಗಿತ್ತು. ಅವುಗಳಲ್ಲಿ ಇತರ ಕೆಲವು ಇಲ್ಲಿವೆ:
​ಜರ್ಮನಿಯು ನಿಮ್ಮ ಪಿತೃಭೂಮಿ (ಫಾದರ್‌ಲ್ಯಾಂಡ್). ಅದನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ. ಜರ್ಮನಿಯ ವಿರೋಧಿಗಳು ನಿಮ್ಮ ವಿರೋಧಿಗಳು. ಅವರನ್ನು ಮನಸಾರೆ ದ್ವೇಷಿಸಿ. (ಇಲ್ಲಿಯೂ ಸರಕಾರವನ್ನು ವಿರೋಧಿಸಿದವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟಲಾಗುತ್ತಿರುವುದನ್ನು ಗಮನಿಸಿದ್ದೀರಲ್ಲ?). ಜರ್ಮನಿಯ ವಿರೋಧಿಗಳ ಕಪಾಳಕ್ಕೆ ಹೊಡೆಯಿರಿ. ಯಹೂದಿಗಳ ಮೇಲಿನ ದ್ವೇಷವನ್ನು ಎದುರಿಗೆ ತೋರಿಸಿಕೊಳ್ಳುವ ಮೂರ್ಖತನ ಮಾಡಬೇಡಿ. (ಇಲ್ಲಿಯೂ ಕೆಲವೊಮ್ಮೆ ಕೆಲವರಿಗೆ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ಪ್ರೇಮ ಉಕ್ಕುತ್ತಿರುವುದನ್ನು ನೋಡುವಿರಿ). ಮಾತಿಗಿಂತ ಹೆಚ್ಚು ಕೆಲಸ ಮಾಡಿ; ಕರ್ತವ್ಯಗಳ ಬಗ್ಗೆ ಮಾತಾಡಿ, ಹಕ್ಕುಗಳ ಬಗ್ಗೆ ಅಲ್ಲ; ನಾಯಕತ್ವವನ್ನು ಪ್ರಶ್ನಿಸಬೇಡಿ… ಇತ್ಯಾದಿ. ನಮ್ಮಲ್ಲಿಯೂ ದೇಶಕ್ಕಾಗಿ ತ್ಯಾಗ ಮಾಡಿ, ಸಬ್ಸಿಡಿ ಬಿಡಿ, ಬೆಲೆ ಏರಿಕೆಯನ್ನು ಪ್ರಶ್ನಿಸಬೇಡಿ ಇತ್ಯಾದಿ ಹೇಳಲಾಗುತ್ತದೆ. ಸೂಕ್ಷ್ಮವಾಗಿ ದೇಶಪ್ರೇಮದ ಹೆಸರಿನಲ್ಲಿ ಪಕ್ಷನಿಷ್ಠೆ ಮತ್ತು ವ್ಯಕ್ತಿನಿಷ್ಠೆಯನ್ನು ಬೆಳೆಸುವ ತಂತ್ರವಿದು.

​ಆದರೆ, ದೇಶದೊಳಗೆ ಜರ್ಮನಿಯ ವಿರೋಧಿಗಳು, ದೇಶದ್ರೋಹಿಗಳೂ ಯಾರೆಂದು ವಿವರಿಸಲಾಗುತ್ತಿರಲಿಲ್ಲ. ಪರೋಕ್ಷವಾಗಿ ಅವರು ಯಹೂದಿಗಳು, ಬುದ್ಧಿಜೀವಿಗಳು, ಕಮ್ಯುನಿಸ್ಟರು, ಜಿಪ್ಸಿಗಳು ಎಂದು ಸೂಚಿಸಲಾಗುತ್ತಿತ್ತು. ಪಕ್ಷದೊಳಗೆಯೇ ಕೆಲವರು ಆಗಾಗ ಅವರ ವಿರುದ್ಧ ಕೊಲ್ಲಿರಿ, ಕಡಿಯಿರಿ ಎಂಬಂತಹ ಹೇಳಿಕೆಗಳನ್ನು ನೀಡುತ್ತಾ ವಿಷಯವನ್ನು ಜೀವಂತವಾಗಿಟ್ಟಿದ್ದರು. ಚದುರಿದಂತೆ ಅಲ್ಲಲ್ಲಿ ಅವರ ಮೇಲೆ ದಾಳಿಗಳನ್ನು ಚಾಲ್ತಿಯಲ್ಲಿಟ್ಟಿದ್ದರು. ಯಹೂದಿ ಮತ್ತು ಕೆಲವು ಕ್ರೈಸ್ತ ಪಂಥಗಳ ಪೂಜಾಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದರು. ಇನ್ನೊಂದು ವಿಧಾನವೆಂದರೆ, ಅವರ ಜೊತೆ ವ್ಯಾಪಾರ ವಹಿವಾಟು ನಡೆಸಬೇಡಿ ಎಂದು ಪ್ರಚೋದಿಸುವುದು ಹಾಗೂ ಅವರು ದೇಶಕ್ಕೆ ಪರಕೀಯರು ಎಂಬಂತೆ ಬಿಂಬಿಸುತ್ತಾ ಬರುವುದು.

​ನಮ್ಮಲ್ಲಿ ಕೂಡಾ ಇಂತಹ ದಾಳಿಗಳು ನಡೆಯುತ್ತಿರುವುದು, ನಿರ್ದಿಷ್ಟ ಸಮುದಾಯಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ, ಅವರ ರಿಕ್ಷಾಗಳಲ್ಲಿ ಕುಳಿತುಕೊಳ್ಳಬೇಡಿ, ಮುಂತಾಗಿ ಪ್ರಚೋದಿಸುವ ವಿಫಲ ಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದು. ನೂರಾರು ವರ್ಷಗಳಿಂದ ಇಲ್ಲಿ ಬಾಳಿ ಬದುಕಿ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಸಮುದಾಯಗಳಲ್ಲಿ ಕೂಡ ‘ನಾವು–ಅವರು’ ಎಂಬ ಭಾವ ಮೂಡಿಸಿ, ಅಲ್ಪಸಂಖ್ಯಾತರಲ್ಲಿ ಪರಕೀಯ ಪ್ರಜ್ಞೆ ಮೂಡಿಸುವ ಕೆಲಸಗಳೂ ನಿರಂತರವಾಗಿ ನಡೆಯುತ್ತಿವೆ. ಇದು ಅಂದು ಹಿಟ್ಲರನ ಜರ್ಮನಿಯಲ್ಲಿ ನಡೆಯುತ್ತಿತ್ತು! ಇಂದು ಮೋದಿಯ ಭಾರತದಲ್ಲಿ ನಡೆಯುತ್ತಿದೆ!

​1930ರಲ್ಲೇ ಏನಾಯಿತೆಂದರೆ, ಆಗಸ್ಟ್ 9ರಂದು ಕರಾಳ ಕಾಯ್ದೆಯೊಂದನ್ನು ತರಲಾಯಿತು. ಇದರಂತೆ ರಾಜಕೀಯ ಹಿಂಸಾಚಾರಕ್ಕೆ 20 ವರ್ಷ ಸಜೆ, ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಯನ್ನೂ ವಿಧಿಸಬಹುದಾದ ಕಾನೂನು ಇದು. ಆಗ ಕಮ್ಯುನಿಸ್ಟ್-ನಾಜಿ ಘರ್ಷಣೆ ಯಾವ ಹಂತಕ್ಕೆ ತಲುಪಿತ್ತು ಎಂದರೆ ಪೂರ್ಣ ಪ್ರಮಾಣದ ಅಂತರ್ಯುದ್ಧದ ಭೀತಿ ಇತ್ತು. ರಾಜಕೀಯ ಕೊಲೆಗಳು ಮಾಮೂಲಿಯಾಗಿದ್ದವು. ಜರ್ಮನ್ ಜನತೆ ಹಿಂಸೆಯನ್ನು ನಿಯಂತ್ರಿಸುವ ಪರವಾಗಿದ್ದರು. ಇದನ್ನು ನಾಜಿ ಗೂಂಡಾಗಿರಿಯ ವಿರುದ್ಧ ಬಳಸಲಿಲ್ಲ! ಬದಲಿಗೆ ಇದನ್ನು ಕಮ್ಯುನಿಸ್ಟರು ಮತ್ತು ಸರಕಾರ ವಿರೋಧಿಗಳನ್ನು ದಮನಿಸಲು ಅಸ್ತ್ರವಾಗಿ ಬಳಸಲಾಯಿತು. ನಮ್ಮಲ್ಲಿ ಕೂಡಾ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ವೇಳೆ ತಂದ ಮಿಸ (MISA – Maintenance of Internal Security Act) ಮತ್ತು ಟಾಡಾ (TADA)ಕ್ಕಿಂತಲೂ ದಮನಕಾರಿಯಾದ ರಾಷ್ಟ್ರೀಯ ಭದ್ರತಾ ಕಾಯಿದೆ (NSA), ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA- Unlawful Activities (Prevention) Act) ಮತ್ತು ಇತರ ಕಾನೂನುಗಳನ್ನು ಈಗ ಹಿಂಸಾತ್ಮಕ, ಪ್ರಚೋದನಕಾರಿ ಹಿಂದೂ ಎಂದು ಹೇಳಿಕೊಳ್ಳುತ್ತಿರುವ ಸಂಘಟನೆಗಳ ನಾಯಕರು, ಸದಸ್ಯರ ವಿರುದ್ಧ ಬಳಸಲಾಗುತ್ತಿಲ್ಲ. ಸರಕಾರದ ವಿರುದ್ಧ ಮಾತನಾಡುವ ಬೌದ್ಧಿಕ ಹೋರಾಟಗಾರರ ವಿರುದ್ಧ ಬಳಸಲಾಗುತ್ತಿದೆ!

​ಇಷ್ಟೆಲ್ಲಾ ಹೇಳಿಯೂ – ಅಲ್ಲಿ ನಡೆದದ್ದಕ್ಕೂ, ಅದೇ ತಂತ್ರವನ್ನು ಇಲ್ಲಿಯೂ ಅನುಸರಿಸುವವರು ನಡೆಸುತ್ತಿರುವುದಕ್ಕೂ ನಮಗೆ ಸಾಮ್ಯವೇ ಕಾಣುತ್ತಿಲ್ಲ; ಅಪಾಯದ ಗಂಟೆಯಾಗಿ ಕೇಳಿಸುತ್ತಿಲ್ಲ ಎಂದಾದಲ್ಲಿ – ನಮ್ಮಲ್ಲಿ ಏನೋ ಒಂದು ಗಂಭೀರವಾದ ದೋಷವಿದೆ!

ವಿಷಯಗಳು: #article #peepal #peepalmedia
PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು