ಕಾಡಾನೆ ‘ಭೀಮ’ ಮೂಡಿಗೆರೆ ಎಂಟ್ರಿ – ತಾಲೂಕಿನಲ್ಲಿ ಹೆಚ್ಚಿದ ಆತಂಕ
ಲಿಂಕ್ ನಕಲಿಸಲಾಗಿದೆ ✓
ಚಿಕ್ಕಮಗಳೂರು: ಶಾಂತ ಸ್ವಭಾವದ ‘ಭೀಮ’ (Bhima) ಆನೆ (Elephant) ಮತ್ತೆ ಮೂಡಿಗೆರೆ (Mudigere) ಭಾಗಕ್ಕೆ ಬಂದಿದ್ದು, ಗೌತಹಳ್ಳಿ ಸುತ್ತಮುತ್ತ ಓಡಾಡುತ್ತಿದೆ. ಇದರ ಜೊತೆಗೆ ಈ ಭಾಗದಲ್ಲಿ ಕಾಡಾನೆಗಳ ದೊಡ್ಡ ಹಿಂಡು ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಭಯ ಹೆಚ್ಚಾಗಿದೆ.
ಭೀಮನ ಸಂಚಾರದ ಹಿನ್ನೆಲೆ ಏನು?
ಇತ್ತೀಚೆಗೆ ಬೇಲೂರು ಭಾಗದಿಂದ ಕಾಡಾನೆಗಳ ಗುಂಪನ್ನು ಚಿಕ್ಕಮಗಳೂರು ಕಡೆಗೆ ಅಟ್ಟಲಾಗಿತ್ತು. ಆ ಗುಂಪಿನೊಂದಿಗೆ ಭೀಮ ಕೂಡ ಬಂದಿದ್ದ. ಆದರೆ, ಎರಡೇ ದಿನಗಳಲ್ಲಿ ಮತ್ತೆ ಸಕಲೇಶಪುರದತ್ತ ವಾಪಸ್ ಆಗಿದ್ದ. ನವೆಂಬರ್ 25ರಂದು ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಕಾಡಾನೆಗಳ ಸಮೀಪದಲ್ಲೇ ಭೀಮ ಕಾಣಿಸಿಕೊಂಡಿದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ನವೆಂಬರ್ 26ರಂದು ತನ್ನ ಹಳೆಯ ಗುಂಪನ್ನು ಹುಡುಕಿಕೊಂಡು ಭೀಮ ಮತ್ತೆ ಮೂಡಿಗೆರೆಯತ್ತ ಸಾಗುತ್ತಿದ್ದಾನೆ.
39 ಕಾಡಾನೆಗಳ ಹಿಂಡು ಪತ್ತೆ
ಶಾಂತ ಸ್ವಭಾವದಿಂದ ಹಾಸನ ಭಾಗದ ಜನರಿಗೆ ಚಿರಪರಿಚಿತವಾಗಿರುವ ಭೀಮ ಒಂದು ಕಡೆಯಾದರೆ, ಮತ್ತೊಂದೆಡೆ ಮೂಡಿಗೆರೆಯ ಕಾಫಿ ತೋಟಗಳಲ್ಲಿ ಬರೋಬ್ಬರಿ 39 ಕಾಡಾನೆಗಳ ಬೃಹತ್ ಹಿಂಡು ಕಾಣಿಸಿಕೊಂಡಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆನೆಗಳು ಓಡಾಡುತ್ತಿರುವುದು ಬೆಳೆಗಾರರು ಹಾಗೂ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
‘ಆಪರೇಷನ್ ಗಜ’ ಹಾಗೂ ಎಚ್ಚರಿಕೆ
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ‘ಆಪರೇಷನ್ ಗಜ’ ಕಾರ್ಯಾಚರಣೆಯ ಮೂಲಕ ಆನೆಗಳ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇರಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾರ್ಬೈಲು, ಮಾಕೋನಹಳ್ಳಿ, ಕಲ್ಲುಗುಡ್ಡ ಹಾಗೂ ಕಸ್ಕೆಬೈಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ತೋಟದ ಕಾರ್ಮಿಕರು ಸದ್ಯಕ್ಕೆ ಕಾಫಿ ತೋಟಗಳತ್ತ ಹೋಗದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ