ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೆಟಾ ವಿರುದ್ಧ – ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: ಕಳೆದ ವಾರ ದೇಶದ ವಿವಿಧೆಡೆ ಇರುವ ಮೆಟಾ ಕಚೇರಿಗಳ (Meta) ಎದುರು ಪ್ರತಿಭಟನೆ ನಡೆಸಿದ ಬಳಿಕ, ಇದೀಗ ಕಾಂಗ್ರೆಸ್ (Congress) ಪಕ್ಷವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮಾತೃಸಂಸ್ಥೆಯಾದ ಮೆಟಾ ವಿರುದ್ಧ ದೆಹಲಿ ಹೈಕೋರ್ಟ್ (high Court) ಮೆಟ್ಟಿಲೇರಿದೆ. ಕಾನೂನುಬದ್ಧ ರಾಜಕೀಯ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಸಾಧನವಾಗಿ ಈ ತಂತ್ರಜ್ಞಾನ ಸಂಸ್ಥೆ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದೆ.
ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಮನು ಜೈನ್ ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಮತ್ತು ಫೋಟೋಗಳನ್ನು ಕೀವರ್ಡ್‌ಗಳಾಗಿ ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ರಾಜಕೀಯ ಪೋಸ್ಟ್‌ಗಳನ್ನು ಮೆಟಾ ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿದೆ ಎಂದು ದೂರಿದ್ದಾರೆ.
ಮೆಟಾ ಅಧಿಕಾರಿಗಳ ಭೇಟಿ: ಸುಪ್ರಿಯಾ ಶ್ರೀನೇತ್ ತೀಕ್ಷ್ಣ ಪ್ರತಿಕ್ರಿಯೆ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನ, ಅಂದರೆ ಮಂಗಳವಾರ ಮೆಟಾ ಸಂಸ್ಥೆಯ ಅಧಿಕಾರಿಗಳು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರನ್ನು ದೆಹಲಿಯ ಪಂಚತಾರಾ ಹೋಟೆಲ್‌ವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ತಾವು ಭಾರತೀಯ ಕಾನೂನುಗಳನ್ನು ಪಾಲಿಸುತ್ತಿರುವುದಾಗಿ ಮತ್ತು ಸರ್ಕಾರದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೆಟಾ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಮೆಟಾ ನಡೆ ವಿರೋಧ ಪಕ್ಷಗಳ ವಿರುದ್ಧ ತಾರತಮ್ಯದಿಂದ ಕೂಡಿದ್ದು, ಇದು ಭಾರತದ ಪ್ರಜಾಪ್ರಭುತ್ವದಲ್ಲಿನ ಹಸ್ತಕ್ಷೇಪವಾಗಿದೆ ಎಂದು ಸುಪ್ರಿಯಾ ಶ್ರೀನೇತ್ ವಾದಿಸಿದ್ದಾರೆ.
ಮತ್ತೊಂದು ಸಾಮಾಜಿಕ ಜಾಲತಾಣ ‘ಎಕ್ಸ್’ ಅನ್ನು ಉದಾಹರಣೆಯಾಗಿ ನೀಡಿದ ಅವರು, ಪೋಸ್ಟ್ ಅಥವಾ ಖಾತೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವ ಮೊದಲು ಬಳಕೆದಾರರಿಗೆ ವಿವರಣೆ ನೀಡಲು ಅಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಗಮನ ಸೆಳೆದರು. ಗುರುವಾರ ಮತ್ತೆ ಮೆಟಾ ವಿರುದ್ಧ ಕಿಡಿಕಾರಿದ ಸುಪ್ರಿಯಾ ಶ್ರೀನೇತ್, ಮೆಟಾ ಆಗಲಿ ಅಥವಾ ಬೇರೆ ಯಾವುದೇ ಅಮೆರಿಕನ್ ವೇದಿಕೆಯಾಗಲಿ ಕೇವಲ ವಿರೋಧ ಪಕ್ಷದ ಪೋಸ್ಟ್ ಮತ್ತು ಖಾತೆಗಳನ್ನು ವ್ಯವಸ್ಥಿತವಾಗಿ ನಿರ್ಬಂಧಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಬಿಜೆಪಿಯ ಎಐ (AI) ನಿರ್ಮಿತ ಪೋಸ್ಟ್‌ಗಳಿಗೆ ಅವಕಾಶ ನೀಡಿ ಕಾಂಗ್ರೆಸ್‌ನ ಎಐ ಪೋಸ್ಟ್‌ಗಳನ್ನು ತೆಗೆದುಹಾಕುವುದು ಸ್ಪಷ್ಟ ಪಕ್ಷಪಾತವಾಗಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಸ್ತುವಾರಿಗಳ ಖಾತೆಗಳನ್ನು ನಿರ್ಬಂಧಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶಾದ್ಯಂತ ಯುವ ಕಾಂಗ್ರೆಸ್ ಪ್ರತಿಭಟನೆ: ಖಾತೆ ನಿರ್ಬಂಧ ಆರೋಪ
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒತ್ತಡಕ್ಕೆ ಮಣಿದು ಬಿಜೆಪಿ ಮತ್ತು ಆಡಳಿತವನ್ನು ಟೀಕಿಸುವ ಪೋಸ್ಟ್‌ಗಳನ್ನು ಯಾವುದೇ ವಿವರಣೆ ನೀಡದೆ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಹಾಕಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಉಸ್ತುವಾರಿ ಮನೀಶ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೂ ನಿರ್ಬಂಧ ಹೇರಲಾಗಿದೆ ಎಂದು ದೂರಿದೆ.
ಕಳೆದ ವಾರ ಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿಗೆ ನುಗ್ಗಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದರು. ಮುಂಬೈ ಮತ್ತು ಗುರುಗ್ರಾಮದಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದು, ದೆಹಲಿಯಿಂದ ಬೆಂಗಳೂರುವರೆಗೆ ಹಲವು ನಗರಗಳಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರಹಾಕಿದ್ದರು.
ಇದನ್ನು ಓದಿ
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ