Friday, April 26, 2024

ಸತ್ಯ | ನ್ಯಾಯ |ಧರ್ಮ

ಮುಳ್ಳಿನ ಹಾಸಿಗೆ ಹಾಸಿ ರಕ್ತದ ಕಲೆ ಹುಡುಕುವ ಮನಸ್ಥಿತಿ

ಮದುವೆಯಾಗುವ ಹೆಣ್ಣು ಕನ್ಯೆಯಾಗಿರಬೇಕು.  ಅದು ಉಳಿದವರಿಗಿಂತ ವಧುವಿನ ಹೆಬ್ಬಯಕೆ ಸಹ.  ಆದರೆ ಕೆಲವು ನಿಸರ್ಗ ನಿರ್ಮಿಸಿದ ಕಾರಣಗಳಿಗೂ ಆಕೆಗೇ ಗೊತ್ತಿಲ್ಲದೆ ಕನ್ಯತ್ವದ ಪರದೆ ಹರಿದು ಹೋಗುವ ಸಾಧ್ಯತೆಗಳು ಇದ್ದೇ ಇದೆ.  ಉದಾಹರಣೆಗೆ ಕುದುರೆ ಓಡಿಸುವವರಿಗೆ ಇದು ಘಟಿಸುವುದು ಸಹಜ. 

ಕನ್ಯತ್ವ ವಧುವಿಗೆ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಕೆಲವು ಸಮುದಾಯಗಳು ಮೊದಲ ರಾತ್ರಿಯ ಸಮಯ ವಧು ವರರು ಮಲಗುವ ಹಾಸಿಗೆಯ ಮೇಲೆ ಬಿಳಿಯ ಬೆಡ್ ಸ್ಪ್ರೆಡ್ ಹಾಸುತ್ತಾರೆ.  ಅಲ್ಲಿ ಒಂದು ತೊಟ್ಟು ರಕ್ತ ಬಿದ್ದಿದ್ದರೆ ಆಕೆ ಕನ್ಯೆ ಎಂಬುದು ಸಾಬೀತು.  ಇಲ್ಲದೇ ಹೋದರೆ ಆ ಮದುವೆ ಗಳಲ್ಲಿ ಅದೆಷ್ಟೋ ವಧುಗಳು ಸಾವಿನ ಶೂಲಕ್ಕೆ ಏರಿರುತ್ತಾರೆ. 

ಕನ್ಯತ್ವಕ್ಕಾಗಿ ಸತ್ತವರೆಷ್ಟೋ?  ತಮ್ಮ ಬಾಳನ್ನೇ ಅಲಗಿನ ಮೇಲೆ ನಡೆದಂತೆ ಬಾಳುತ್ತಿರುವವರೆಷ್ಟೋ?  ಭಾರತೀಯ ಸಮಾಜದಲ್ಲಿ ಕನ್ಯತ್ವಕ್ಕೆ ಅಧಿಕ ಪ್ರಾಮುಖ್ಯತೆ ಇದ್ದೇ ಇದೆ.  ಆದರೆ ಬಾಲ್ಯದಲ್ಲಿ ಅರಿವಿಲ್ಲದ ಸಮಯದಲ್ಲಿ ನಡೆದ ಅತ್ಯಾಚಾರ ಮೊದಲಾದವುಗಳಲ್ಲಿ ಸಹ ಕನ್ಯತ್ವ ಕಳೆದುಕೊಂಡವರಿಗೆ ಬದುಕೇ ಇಲ್ಲವೇ? ಎನ್ನುವುದು ಪ್ರಜ್ಞಾವಂತರನ್ನು ಇಂದಿಗೂ ಕಾಡುತ್ತಿದೆ.

ನಮ್ಮ ಪರಿಚಿತ ಕುಟುಂಬದ ಗೆಳತಿಯ ಹೆಣ್ಣು ಮಗು ತನ್ನ ಇಬ್ಬರು ಅಣ್ಣಂದಿರೊಡನೆ ಆಡಲು ಹೋಗಿತ್ತು.  ಅವರ ಮನೆ ಬಳಿ ಅಷ್ಟೇನು ಅಭಿವೃದ್ಧಿ ಇರಲಿಲ್ಲ.  ಆ ಮಕ್ಕಳನ್ನು ಗಮನಿಸಿದ ಕಿಡಿಗೇಡಿಯೊಬ್ಬ ಆ ಎರಡೂ ಗಂಡು ಮಕ್ಕಳಿಗೆ ಹೆದರಿಸಿ ಬೆದರಿಸಿ ಹೆಣ್ಣು ಮಗುವಿನ ಕೈಗಳೆರಡನ್ನು ಗಟ್ಟಿ ಹಿಡಿಯುವಂತೆ ಮಾಡಿ ತನ್ನ ಚಪಲ ತೀರಿಸಿಕೊಂಡು ಪರಾರಿಯಾಗಿದ್ದ.  ಅಳುವ ಮೂರೂ ಮಕ್ಕಳನ್ನು ಸುಧಾರಿಸಿದ ಗೆಳತಿಗೆ ಗೊತ್ತಾಗಿದ್ದು ಧರ್ಮಸಂಕಟದ ವಿಚಾರ.  ಅರಿಯದ ವಯಸ್ಸಿನಲ್ಲಿ ಏನೆಂದು ಆ ಮಕ್ಕಳಿಗೆ ವಿವರಿಸುವುದು.  ಇನ್ನೂ ಋತುಮತಿಯಾಗದ ಕೂಸಿನ ಸಂಕಟ ನಮ್ಮೆಲ್ಲರ ಅಂತಃಕರಣ ಕದಡಿತ್ತು.  ಮನೆಯವರೆಲ್ಲಾ ಕೂತು ಈ ವಿಚಾರ ಇಲ್ಲಿಗೇ ಬಿಡೋಣ ಎಂದು ನಿರ್ಧರಿಸಿದರು.  ಇತ್ತೀಚಿಗೆ ಬಿಎ ಕಲಿತ ಆ ಮಗಳ ಮದುವೆಯೂ ನಡೆಯಿತು. ಇಪ್ಪತ್ತು ವರ್ಷಗಳ ಹಿಂದೆ ನಡೆದ ಆ ದುರಂತ ಅವಳ ಬದುಕಿನಲ್ಲಿ ದೂರವಾಯಿತು.  ಈ ಘಟನೆ ಬೆಂಗಳೂರು ಮಹಾನಗರದ ಅಮೀಪದ ಜಿಲ್ಲೆಯಲ್ಲಿ ನಡೆದಿತ್ತು.

ವಿದೇಶಿ ಹೆಣ್ಣುಮಕ್ಕಳು ಕನ್ಯತ್ವಕ್ಕಾಗಿ ಹೈಮನೋಪ್ಲಾಸ್ಟಿ ಎಂಬ ಸಣ್ಣ ಅಪರೇಷನ್ ಗೆ ಒಳಗಾಗುತ್ತಿದ್ದರು ಎಂಬುದು ತೊಂಬತ್ತರ ದಶಕದ ಸುದ್ದಿ.  ಇಂದು ಭಾರತೀಯ ಮಹಿಳೆಯರು ಅತಿಹೆಚ್ಚಾಗಿ ಈ ಹೈಮನೋಪ್ಲಾಸ್ಟಿ ವಿಧಾನಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಸಹ ಸತ್ಯ.  ಇಂದು ಇದು ಅವ್ಯಾಹತವಾಗಿ ಸಾಗುತ್ತಿರುವ ವ್ಯಾಪಾರವಾಗಿದೆ.

ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ ಹೈಮನೋಪ್ಲಾಸ್ಟಿ ವಿಧಾನ ನಡೆಸಿದ ನಂತರ ಅವರು ಆರಾಮಗಿಯೇ ಮನೆಗೆ ಹೋಗಬಹುದು.  ಈ ಸರ್ಜರಿಯಿಂದ ಹೆಣ್ಣು ಮಕ್ಕಳು ಮರಳಿ ಕನ್ಯೆಯರಾಗಬಹುದು.  ಅಂದರೆ ಕೇವಲ ೪೦ ನಿಮಿಷಗಳಲ್ಲಿ ಹರಿದ ಹೈಮನ್ ಪರದೆಯನ್ನು ಕೂಡಿಸಿ ಸರಿಪಡಿಸುವ ಕ್ರಮವೇ ಇದು. 

ಈ ಕ್ರಮವು ಒಂದು ಕಡೆಯಲ್ಲಿ ಕನ್ಯತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೆದುಳುಗಳಿಗೆ ಸರ್ಜರಿ ಮಾಡಿದಂತಾಗುತ್ತದೆ ಎಂದರೆ ಅಚ್ಚರಿಯಿಲ್ಲ.  ಆದರೆ ವ್ಯಾಪಾರವಾಗಿರುವ ಈ ವಿಧಾನವನ್ನು ಕನ್ಯೆಯರು ಒಪ್ಪಲು ಸಾಧ್ಯವಿದೆಯೇ ಎಂಬುದು ಸಹ ಪ್ರಶ್ನೆ.  ನಾವು ನ್ಯಾಯಯುತವಾಗಿ ಬದುಕುತ್ತಿದ್ದರೂ ಇದೆಲ್ಲಾ ತಂತ್ರ ಅಗತ್ಯವಿದೆಯೇ ಎಂದು ಈ ಬಗ್ಗೆ ಚರ್ಚಿಸಿದ ಯುವತಿಯೊಬ್ಬಳು ನನ್ನನ್ನೇ ಕೇಳುತ್ತಾಳೆ. 

ಕನ್ಯೆಯಾಗಿದ್ದರೂ ಮಗಳು ಮೊದಲ ರಾತ್ರಿ ಮಲಗಿದ ಬೆಡ್ ಶೀಟ್ ಮೇಲೆ ರಕ್ತದ ಯಾವುದೇ ಕಲೆ ಇಲ್ಲವಲ್ಲ ಎಂದು ತಾಯಿ ಮನೆಯವರನ್ನು ಕರೆಸಿ ‘ನಿಮ್ಮ ಮಗಳನ್ನು ನೀವೇ ಕರೆದುಕೊಂಡು ಹೋಗಿ’ ಎಂದು ಆದೇಶಿಸಿದ ಅತ್ತೆಯರೂ ಇದ್ದಾರೆ.  ವರನಿಗೆ ಅನುಮಾನವಿರದಿದ್ದರೂ ಆತನ ತಾಯಿಯ ಅನುಮಾನಕ್ಕೆ ವಿಚ್ಛೇದನ ಕೊಟ್ಟವರೂ ಇದ್ದಾರೆ.

ಜನ‌ ಮರುಳೋ, ಜಾತ್ರೆ ಮರುಳೋ ಎಂಬಂತೆ ಕನ್ಯತ್ವಕ್ಕಾಗಿ ಶುರುವಾಗಿರುವ ಈ ವ್ಯಾಪಾರ ಎಲ್ಲಿಯವರೆಗೆ ಪುರುಷ ಕೇಂದ್ರಿತ ಮನಸ್ಸುಗಳು,  ವಧುವಿಗೆ ಮುಳ್ಳಿನ ಹಾಸಿಗೆ ಹಾಸಿ ರಕ್ತದ ಕಲೆಗಾಗಿ ಹುಡುಕುವ ಮನಸ್ಥಿತಿ ಇರುತ್ತದೋ ಅಲ್ಲಿಯವರೆಗೆ ಇರುತ್ತದೆ.

  • ನಳಿನಾ ಡಿ. ಚಿಕ್ಕಮಗಳೂರು

Related Articles

ಇತ್ತೀಚಿನ ಸುದ್ದಿಗಳು