Friday, April 26, 2024

ಸತ್ಯ | ನ್ಯಾಯ |ಧರ್ಮ

ಸೋಲಿನ ಭಯ : ಬಿಜೆಪಿ ದ್ವೇಷ ರಾಜಕಾರಣಕ್ಕೆ ಮೊರೆ : ಸಮಾಜ ಒಡೆಯುವ ಸಂಚಿನ ಬಗ್ಗೆ ಜಾಗೃತರಾಗೋಣ

ಬಿಜೆಪಿ ಪಕ್ಷದ ದ್ವೇಷ ರಾಜಕಾರಣದ ಬಗ್ಗೆ ಎಚ್ಚೆತ್ತುಕೊಂಡು, ಸಮಾಜ ಒಡೆಯುವ ಅವರ ತಂತ್ರದ ಬಗ್ಗೆ ರಾಜ್ಯದ ಜನತೆ ಸದಾ ಜಾಗೃತರಾಗಿ ಇರಬೇಕು ಎಂದು ಜನಪರ ಸಂಘಟನೆ ಜಾಗೃತ ಕರ್ನಾಟಕ ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆ ಬಿಜೆಪಿ ಸೋಲಿನ ಮುನ್ಸೂಚನೆ ಅರಿತು ಇಂತಹ ಕೆಲಸಕ್ಕೆ ಮುಂದಾಗಿದೆ. ಇದರ ಬಗ್ಗೆ ಎಲ್ಲರಿಗೂ ಅರಿವಿರಲಿ ಎಂದು ಮನವಿ ಮಾಡಿದೆ.

“ನಾವೆಲ್ಲರೂ ಕೂಡಿ ನಾಲ್ಕು ವರ್ಷ ರಾಜ್ಯಕ್ಕೆ ಅತಿ ಕೆಟ್ಟ ದುರಾಡಳಿತ ನೀಡಿದ ಬಿಜೆಪಿಯನ್ನು ಸೋಲಿಸಿ ಅಧಿಕಾರದಿಂದ ಕೆಳಗಿಳಿಸಿದ್ದೇವೆ. ಈಗ ಮತ್ತೊಮ್ಮೆ ನಾವೆಲ್ಲರೂ ಸೇರಿ ಹತ್ತು ವರ್ಷ ಮಹಾಮೋಸಗಳ ಆಳ್ವಿಕೆ ನೀಡಿದ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಗಳಿಗೆ ಬಂದಿದೆ. ದೇಶವ್ಯಾಪಿಯಾಗಿ ಜನ, ವಿಶೇಷವಾಗಿ ದುಡಿಯುವ ಮತ್ತು ದಮನಿತ ಜನ ವರ್ಗಗಳು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸೋಲುವ ಭೀತಿ ಬಿಜೆಪಿಯನ್ನು ಕಾಡುತ್ತಿದೆ.

ಜನರ ಬಳಿ ಹೋಗಲು, ಓಟು ಕೇಳಲು ಬಿಜೆಪಿಯವರಿಗೆ ವಿಷಯ ಇಲ್ಲವಾಗಿದೆ. ಮಾಡಿದ ಸಾಧನೆ ಶೂನ್ಯ. ಕೊಟ್ಟ ಯಾವ ಮಾತನ್ನೂ ಈಡೇರಿಸಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಮಹಿಳೆಯರ ಮೇಲೆ ಅತ್ಯಾಚಾರಗಳು, ದಲಿತ – ದಮನಿತರ ಮೇಲಿನ ದೌರ್ಜನ್ಯಗಳು…..ಎಲ್ಲಾ ಹೆಚ್ಚಾಗಿವೆ. ಜನರ ಆದಾಯ, ಅವಕಾಶಗಳು, ಮೀಸಲಾತಿ, ಹಕ್ಕು, ಭದ್ರತೆ, ನೆಮ್ಮದಿ, ಶಾಂತಿ …..ಎಲ್ಲವೂ ಗಣನೀಯವಾಗಿ ಕಡಿಮೆಯಾಗಿದೆ. ಸಂವಿಧಾನವನ್ನು ಬದಲಾಯಿಸಲು ಅವರು ನಡೆಸುತ್ತಿರುವ ಒಳಸಂಚು ಅವರ ಮುಖಂಡರುಗಳ ಬಾಯಿಂದಲೇ ಬಯಲಾಗಿದೆ. ಎಂತಹ ದುಸ್ಥಿತಿ ಎಂದರೆ ಕೊಡಲು ಹೊಸ ಭರವಸೆಗಳೂ ಬಿಜೆಪಿ ಬಳಿ ಇಲ್ಲವಾಗಿವೆ. ಕಾಂಗ್ರೆಸ್ ಪ್ರಣಾಳಿಕೆಯ ಮುಂದೆ ಬಿಜೆಪಿಯ ಪ್ರಣಾಳಿಕೆ ಮಂಕು ಬಡಿದಿದೆ. ಮೋದಿಯ ಫೋಟೋಗಳು ಬಿಟ್ಟರೆ ಜನತೆಯ ಪಾಲಿಗೆ ಅದರಲ್ಲಿ ಯಾವುದೇ ನಿರ್ಧಿಷ್ಟ ಆಶಾದಾಯಕ ಭರವಸೆಗಳಿಲ್ಲ, ಯೋಜನೆಗಳಿಲ್ಲ, ನೀತಿಗಳಿಲ್ಲ.

ಬಿಜೆಪಿಯೊಳಗೆ ಆಂತರಿಕ ಕಲಹ ಭುಗಿಲೆದ್ದಿದೆ. ಬಿಜೆಪಿಯ ದ್ವಿಜರೆಂದು ಕರೆಸಿಕೊಳ್ಳುವ ಎಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಘರ್ಷವನ್ನೂ ತಣಿಸುವ ಶಕ್ತಿ ಮೋದಿಗಿಲ್ಲ. ಮೋದಿಯ ಭಾಷಣಗಳಿಗೆ ಜನ ಸೇರುತ್ತಿಲ್ಲ, ರ್ಯಾಲಿಯಲ್ಲಿ ಉತ್ಸಾಹವಿಲ್ಲ. ಬಸ್ಸಿನಲ್ಲಿ ತುಂಬಿಸಿಕೊಂಡು ಬಂದ ಜನರೂ ಮೋದಿ ಭಾಷಣ ಮಾಡುವಾಗಲೇ, ಅವರ ಕಣ್ಣ ಮುಂದೆಯೇ ಎದ್ದು ಹೋಗುತ್ತಿದ್ದಾರೆ. ಏಪ್ರಿಲ್ 19ರಂದು ನಡೆದ ಮೊದಲ ಸುತ್ತಿನ ಚುನಾವಣೆಯಲ್ಲಿ ಬಿಜೆಪಿಯ ಭದ್ರ ಬೂತ್ ಗಳಿಂದಲೇ ಜನ ಮತ ಹಾಕಲು ಬಂದಿಲ್ಲ, ಅವರಿಗೆ ಉತ್ಸಾಹ ಉಳಿದಿಲ್ಲ. ಇದು ಮೋದಿ ಸಾಮ್ರಾಜ್ಯ ಕುಸಿಯುತ್ತಿರುವ ಸ್ಪಷ್ಟ ಸೂಚನೆಯಾಗಿದೆ.

ಮೋದಿ, ಬಿಜೆಪಿ ಮತ್ತು ಸಂಘಪರಿವಾರ ಚಿಂತಾಕ್ರಾಂತರಾಗಿದ್ದಾರೆ. ಜನರನ್ನು ಜಾತಿ, ಧರ್ಮದ ಮೇಲೆ ಭಾವೋದ್ರೇಕಗೊಳಿಸಿ ಓಟು ಪಡೆಯುವ ಹಳೆಯ ತಂತ್ರಕ್ಕೆ ಮರಳಿದ್ದಾರೆ. ರಾಜಸ್ಥಾನದಲ್ಲಿ ಮೋದಿ ಮಾಡಿದ ಭಾಷಣ ಕೀಳುತನದ ಪರಮಾವಧಿಯಾಗಿದೆ. ತಳ ಸಮುದಾಯಗಳು ಅಭಿವೃದ್ದಿಯ ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಮಾಡಿದ ಭಾಷಣವನ್ನು ತಿರುಚಿ “ಮುಸ್ಲಿಮರು ಮೊದಲ ಹಕ್ಕುದಾರರು” ಎಂದು ಹೇಳಿರುವುದಾಗಿ ಹಸಿ ಸುಳ್ಳು ಹೇಳಿದ್ದಲ್ಲದೆ, ಒಂದು ಸಮುದಾಯವನ್ನು “ನುಸುಳುಕಾರರು” ಎಂದು ಕರೆದು, ಮಹಿಳೆಯರನ್ನು “ನಿಮ್ಮ ಮಂಗಳ ಸೂತ್ರ ಕಸಿದು ಅವರಿಗೆ ಕೊಡುತ್ತಾರೆ” ಎಂದು ಪ್ರಚೋದಿಸುವ ತುಚ್ಛ ಮಾತುಗಳನ್ನು ಆಡಿದ್ದಾರೆ. ಇತ್ತೀಚಿನ ಮೋದಿ ಭಾಷಣಗಳು ಸಂವಿಧಾನ ವಿರೋಧಿಯಾಗಿದ್ದರೂ ಅವರೇ ಆಯ್ಕೆ ಮಾಡಿ ಕೂರಿಸಿರುವ ಕೈಗೊಂಬೆ ಎಲೆಕ್ಷನ್ ಕಮಿಷನ್ ಏನೂ ಆಗಿಲ್ಲ ಎಂಬಂತೆ ಬಾಯಿಮುಚ್ಚಿ ಕೂತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟ ‘ಚೊಂಬು’ ಜಾಹಿರಾತಿನಿಂದ ಕಕ್ಕಾಬಿಕ್ಕಿಯಾದ ಬಿಜೆಪಿ ಹಸಿಹಸಿ ಸುಳ್ಳುಗಳಿಂದ ಕೂಡಿದ ಕೋಮು ಪ್ರಚೋದಕ ಜಾಹಿರಾತನ್ನು ಎಲ್ಲಾ ಪತ್ರಿಕೆಗಳಲ್ಲೂ ನೀಡಿದೆ. ಅದರಲ್ಲಿ ‘ಪಾಕಿಸ್ತಾನ’, ‘ಕುಕ್ಕರ್ ಬಾಂಬ್’, ‘ಜೆಹಾದ್’, ‘ಕಸಾಯಿಖಾನೆ’ ಅಂತಹ ಪದಗಳಿಂದ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಗಂಡು ದರ್ಪಕ್ಕೆ ಗುರಿಯಾದ ನೇಹಾ ಕೊಲೆ ಎಲ್ಲರ ಹೃದಯ ಹಿಂಡಿದೆ. ನೇಹಾ, ರುಕ್ಸಾನಾ, ಚಂದ್ರಮ್ಮ, ಶರಣಮ್ಮ, ಮುಂತಾದ ಅನೇಕ ಹೆಣ್ಣು ಮಕ್ಕಳು ಗಂಡು ದರ್ಪಕ್ಕೆ ಸಿಲುಕಿ ಹೊಸಕಿಹೋಗುತ್ತಿದ್ದಾರೆ. ಇಡೀ ಸಮಾಜವಾಗಿ ನಾವು ತಲೆತಗ್ಗಿಸಬೇಕಾದ ವಿಚಾರ. ಜಾತಿ, ಧರ್ಮದ ಬೇಧವಿಲ್ಲದೆ ತೀವ್ರ ಕ್ರಮಕ್ಕಾಗಿ ಆಳುವವರ ಮೇಲೆ ಒತ್ತಾಯ ಹೇರಬೇಕಿದೆ. ಆದರೆ ನೇಹ ಸಾವು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ನೋವು ತರುವ ಬದಲು ಸಂತಸ ತಂದಿದೆ. ಹೆಣ್ಣನ್ನು ಅತಿ ಕೀಳಾಗಿ ನಡೆಸಿಕೊಂಡ, ಮಹಿಳೆಯರ ಮೇಲಿನ ಯಾವೊಂದು ದೌರ್ಜನ್ಯದ ವಿರುದ್ಧವೂ ದನಿ ಎತ್ತದ ಇವರು, ಈಗ ಓಟಿಗಾಗಿ ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಬರುವ ದಿನಗಳಲ್ಲಿ ಕೋಮು ಪ್ರಚೋದನೆಯ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚು ಮಾಡಲಿದ್ದಾರೆ.

ಬಂಧುಗಳೇ,

ಈ ಬಾರಿ ಬಿಜೆಪಿ ಸೋಲುವುದು ಶತಸಿದ್ಧ. ಅವರ ನಾಟಕಕ್ಕೆ ಮರುಳಾಗುವಷ್ಟು ಕರ್ನಾಟಕದ ಜನರು ಮೂರ್ಖರಲ್ಲ. ಅವರ ಹುನ್ನಾರಗಳಿಗೆ ಬಲಿಯಾಗುವುದು ಬೇಡ, ಪ್ರಚೋದನೆಗಳಿಗೆ ಗುರಿಯಾಗುವುದು ಬೇಡ. ಯಾವುದೇ ಕಾರಣಕ್ಕೂ ನಾವು ನಮ್ಮ ತಾಳ್ಮೆ ಕಳೆದುಕೊಳ್ಳುವುದು ಬೇಡ. ಭಾವೋದ್ರೇಕಕ್ಕೆ ಗುರಿಯಾಗದಂತೆ, ದುಡುಕಿನ ತಪ್ಪುಗಳು ನಡೆಯದಂತೆ ಎಚ್ಚರಿಕೆವಹಿಸೋಣ. ಬಿಜೆಪಿಯ ಮಹಾಮೋಸಗಳನ್ನು, ದುಷ್ಟ ಆಡಳಿತವನ್ನು, ನೀಚ ರಾಜಕಾರಣವನ್ನು, ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸುವ ಕೆಲಸವನ್ನು ಸಂಯಮದ ಜೊತೆ, ಸಂಪೂರ್ಣ ತನ್ಮಯತೆ ಜೊತೆ ಮುಂದುವರಿಸೋಣ” ಎಂದು ಜಾಗೃತ ಕರ್ನಾಟಕ  ಸಂಘಟನೆ ಮನವಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು