ಪ್ರೀತಿಯನ್ನು ತಿರಸ್ಕರಿಸಿದ ಕಾರಣಕ್ಕೆ ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿ ಮೇಲೆ ಆಸಿಡ್ ಎರಚಿದ ಘಟನೆ ಪ್ರೇಮಿಗಳ ದಿನದಂದೇ ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಗುರ್ರಮಕೊಂಡ ಮಂಡಲದ ಪ್ಯಾರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತನ್ನ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದಿದ್ದಾನೆ ಎಂದು ವರದಿಯಾಗಿದೆ.
ಪ್ಯಾರಂಪಲ್ಲಿ ಗ್ರಾಮದ ನಿವಾಸಿ ಗೌತಮಿ, ಮದನಪಲ್ಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಯುವತಿಗೆ ಪ್ರೀತಿಯ ಪ್ರಸ್ತಾಪ ಮಾಡಿದ ಯುವಕ ಪ್ರೇಮಿಗಳ ದಿನದಂದು ತನ್ನ ಪ್ರೇಮ ನಿವೇದನೆ ಒಪ್ಪಿಕೊಳ್ಳಲು ಗಡುವು ನೀಡಿದ್ದ ಎನ್ನಲಾಗಿದೆ. ಯುವತಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಗಣೇಶ ಎಂಬ ಹುಚ್ಚು ಪ್ರೇಮಿ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಗೌತಮಿಯನ್ನು ಆಕೆಯ ಕುಟುಂಬ ಸದಸ್ಯರು ತಕ್ಷಣ ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪ್ರಸ್ತುತ ಚಿಕಿತ್ಸೆ ನೀಡುತ್ತಿದ್ದಾರೆ.
ಗೌತಮಿ ಈಗಾಗಲೇ ಶ್ರೀಕಾಂತ್ ಎಂಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಏಪ್ರಿಲ್ 29 ರಂದು ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ.
ಗೌತಮಿಯ ಪೋಷಕರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಗಣೇಶ್, ನೇರವಾಗಿ ಮನೆಗೆ ಹೋಗಿ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯ ಮುಖದ ಮೇಲೆ ಆಸಿಡ್ ಸುರಿದ. ಮಾಹಿತಿ ಪಡೆದ ಪೊಲೀಸರು ತಕ್ಷಣ ಆಸ್ಪತ್ರೆಗೆ ತೆರಳಿ ವಿವರಗಳನ್ನು ಸಂಗ್ರಹಿಸಿದರು. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.