ಇನ್ಫೋಸಿಸ್ ಸಂಸ್ಥೆ ಮೈಸೂರಿನಲ್ಲಿರುವ ತರಬೇತಿ ಕೇಂದ್ರದಿಂದ ಏಕಾಏಕಿ 400 ತರಬೇತಿ ಉದ್ಯೋಗಿಗಳನ್ನು ಫೆಬ್ರವರಿ 7 ರಂದು ವಜಾಗೊಳಿಸಿದ ಬಗ್ಗೆ ರಾಜ್ಯ ಸರ್ಕಾರ ಇನ್ಫೋಸಿಸ್ ಸಂಸ್ಥೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
ರಾಜ್ಯ ಐಟಿ ಉದ್ಯೋಗಿಗಳ ಕಲ್ಯಾಣ ಸಂಘವು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಮೈಸೂರು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ವಜಾ ಪ್ರಕ್ರಿಯೆ ಸಂಬಂಧ ಕೇಂದ್ರ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯಿಂದ ಬಂದ ಪತ್ರವು ಕರ್ನಾಟಕವು ಮಧ್ಯಪ್ರವೇಶಿಸಿ ವಿವಾದವನ್ನು ಪರಿಹರಿಸಲು ಸರ್ಕಾರದ ನಿರ್ದೇಶಿಸಿದ್ದು, ದೂರುದಾರರು ಮತ್ತು ಸಚಿವಾಲಯಕ್ಕೆ ನವೀಕರಣಗಳನ್ನು ಒದಗಿಸಬೇಕು ಎಂದು ತಿಳಿಸಿದೆ.
ಇನ್ಫೋಸಿಸ್ ಆಫರ್ ಲೆಟರ್ ಕೊಟ್ಟ ನಂತರ ಎರಡು ವರ್ಷ ಕಾಯಿಸಿ ಉದ್ಯೋಗಕ್ಕೆ ಸೇರಿಸಿಕೊಂಡವರನ್ನು ಈಗ ಕೆಲಸದಿಂದ ತೆಗೆದುಹಾಕುತ್ತಿದೆ. ಈಗಾಗಲೇ ಎರಡು ವರ್ಷ ಕಾದಿರುವ ಅವರು ಉದ್ಯೋಗ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ಸಂಘಟ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿತ್ತು.
ಆದರೆ ಈ ವಿಚಾರವಾಗಿ ಇನ್ಫೋಸಿಸ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದೀಗ ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಕಾರ್ಮಿಕ ಸಚಿವಾಲಯ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.