ಡಾಲಿ ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಪ್ರೀಮಿಯರ್ ಶೋ ಓರಾಯನ್ ಮಾಲ್‌ನಲ್ಲಿ ನಿನ್ನೆ ಸಂಜೆ ಅದ್ದೂರಿಯಾಗಿ ನಡೆಯಿತು. ಇಡೀ ಟೀವಿ ಮತ್ತು ಚಿತ್ರರಂಗವೇ ಸಿನಿಮಾ ನೋಡಲು ಆಗಮಿಸಿತ್ತು. ಇದಕ್ಕೆ ಕಾರಣ ಚಿತ್ರದ ನಿರ್ದೇಶಕ ಪರಮ್. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲೆಸಿದ್ದ ಇವರಿಗೆ ಕಿರುತೆರೆ ಮತ್ತು ಹಿರಿತೆರೆ ಎಲ್ಲೆಡೆ ಸ್ನೇಹಿತರಿದ್ದಾರೆ. ತಾರೆಗಳಿಗಾಗಿಯೇ ಎರಡು ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದೆ ಇದಕ್ಕೆ ಸಾಕ್ಷಿ. ಒಂದು ಸಾರ್ವಜನಿಕರ ಪೇಯ್ಡ್ ಪ್ರೀಮಿಯರ್ ಸೇರಿ ಓರಾಯನ್‌ನ ಮೂರು ಪರದೆಗಳು ಹೌಸ್‌ಫುಲ್ ಆಗಿದ್ದವು. ಸಾವಿರಕ್ಕಿಂತಲೂ ಹೆಚ್ಚು ಜನರು ಸಿನಿಮಾ ವೀಕ್ಷಿಸಿದರು.
‘ಕೋಟಿ’ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಧನಂಜಯ ಅವರ ಎಂಟ್ರಿಗೆ ಶಿಳ್ಳೆ, ಕೇಕೆಗಳು ಮುಗಿಲ ಮುಟ್ಟಿದ್ದವು. ಇಡೀ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ದೊರೆಯಿತು. ಸಿನಿಮಾದಲ್ಲಿ ಬರುವ ಒಂದು ಕ್ಯಾಮಿಯೋಗೆ ಇಡೀ ಚಿತ್ರಮಂದಿರವೇ ಹರ್ಷೋದ್ಗಾರ ಮಾಡಿದರೆ, ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿತ್ತು. ಸಿನಿಮಾ ಮುಗಿಯುತ್ತಿದ್ದಂತೆ ಮುಖ್ಯ ಪರದೆಯಲ್ಲಿ ಪ್ರೇಕ್ಷಕರೊಬ್ಬರು ಓಡಿ ಬಂದು ನಿರ್ದೇಶಕರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು. ಸಿನಿಮಾ ಮೆಚ್ಚಿದ ಟೀವಿ ಮತ್ತು ಸಿನಿಮಾ ಮಂದಿ ತಂಡಕ್ಕೆ ಶುಭ ಕೋರಿದರು.
ತಾರೆಗಳ ದಂಡು:
ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ನೂರಾರು ತಾರೆಗಳು ಪ್ರೀಮಿಯರ್ ಶೋಗೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ರಂಗು ತಂದಿದ್ದರು. ಟಿ ಎನ್ ಸೀತಾರಾಂ, ಜೋಗಿ, ಹೇಮಂತ್ ರಾವ್, ಕಿರಣ್ ರಾಜ್, ಆರ್ ಚಂದ್ರು, ಸತೀಶ್ ನೀನಾಸಂ, ನವೀನ್ ಶಂಕರ್, ಮಂಜು ಪಾವಗಡ, ಬಿಗ್ ಬಾಸ್ ವಿನ್ನರ್ ಕಾರ್ತಿಕ್, ದಿವ್ಯ ಉರುಡುಗ, ಅರವಿಂದ ಕೆ ಪಿ, ಶೈನ್ ಶೆಟ್ಟಿ ಸೇರಿ ಸುಮಾರು ಆರುನೂರಕ್ಕೂ ಅಧಿಕ ಟೀವಿ ಮತ್ತು ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದರು. ಮಾಧ್ಯಮ ಮಿತ್ರರಿಂದ ಕನ್ನಡ ಸಿನಿಮಾವೊಂದರ ಅತಿದೊಡ್ಡ ಪ್ರೀಮಿಯರ್ ಶೋ ಎಂಬ ಮಾತುಗಳು ಕೇಳಿಬಂದವು.
ಕೋಟಿಯ ಬುಕಿಂಗ್ಸ್ ಈಗ ಓಪನ್ ಆಗಿದ್ದು ಇಂದು ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಧನಂಜಯ್ ಮತ್ತು ಸಿನಿಮಾ ತಂಡ ಮೈಸೂರಿನ ಸಿನಿಪ್ರೇಮಿಗಳ ಜತೆ ‘ಕೋಟಿ’ ನೋಡಲಿದೆ. ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.
ಸಾಕಷ್ಟು ಸದ್ದು ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.
ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ನಾಳೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿ ಬಿಡುಗಡೆಯಾಗಲಿದೆ.