Home ಕರ್ನಾಟಕ ಚುನಾವಣೆ - 2023 ಕರಾವಳಿಯಲ್ಲಿ ನಾಯಕನಿಲ್ಲದೆ ಅತಂತ್ರವಾದ ಕಾಂಗ್ರೆಸ್

ಕರಾವಳಿಯಲ್ಲಿ ನಾಯಕನಿಲ್ಲದೆ ಅತಂತ್ರವಾದ ಕಾಂಗ್ರೆಸ್

0

ಬಿಜೆಪಿ ಪರಿವಾರ ಹೆಣೆಯುವ ಕಟ್ಟುಕತೆಗಳಿಗೆ ನರೇಟಿವ್ ಕಟ್ಟುವಷ್ಟು ಪ್ರಬುದ್ಧರೂ ಅಲ್ಲದ, ಸಂಘಟನಾತ್ಮಕ ಕಾರ್ಯಗಳು ತಿಳಿಯದ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೈದ್ಧಾಂತಿಕವಾಗಿಯಾಗಲಿ, ಸಂಘಟನೆಯ ಮೂಲಕವಾಗಲಿ ಬಿಜೆಪಿಯನ್ನು ಎದುರಿಸಲು ಸಾಧ್ಯ ಆಗಲೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅಗೋಚರವಾದ ಗುಂಪುಗಾರಿಕೆ ಕೂಡ ಪಕ್ಷಕ್ಕೆ ಹಿನ್ನಡೆ ಮಾಡಿದೆ – ಆಯುಷ್‌ ನಾರಾಯಣ

ರಾಜ್ಯದ ಇತರೆಡೆಯಂತೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ವಿರುದ್ಧ ಜನರ ಅಸಮಾಧಾನ ದಟ್ಟವಾಗಿದೆ. ಅದೇ ರೀತಿ ಧರ್ಮದ ಅಫೀಮಿನ ಅಮಲು ಕೂಡ ಮತದಾರರ ತಲೆಯಿಂದ ಇಳಿದಿಲ್ಲ ಎಂಬುದು ಸತ್ಯ. ಆದರೆ, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸಿ ಹಸಿ ಹಸಿ ಸುಳ್ಳುಗಳ ಮೂಲಕ ಯಾವ ಬಿಜೆಪಿ ಶಾಸಕರನ್ನು ಗೆಲ್ಲಿಸಲು ಶ್ರಮಿಸಿದ ಅದೇ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂತ್ವ ಕಾರ್ಯಕರ್ತರು ಎನ್ನಲಾದ ವ್ಯಕ್ತಿಗಳು ಹಾಲಿ ಬಿಜೆಪಿ ಶಾಸಕರನ್ನು ಸೋಲಿಸಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಂತಹ ವಾತಾವರಣ ಸುಳ್ಯದಿಂದ ಮಂಗಳೂರು ತನಕವೂ ಇದೆ. ಇಂತಹ ಸಂಘಟನೆಯ ಕಾರ್ಯಕರ್ತರ ಪ್ರಕಾರ ಬಿಜೆಪಿ ಶಾಸಕರ ಮಿತಿ ಮೀರಿದ ಭ್ರಷ್ಟಚಾರ, ಸರಕಾರಿ ಕಚೇರಿಗಳಲ್ಲಿ ಲಂಚ, ಕೆಲವು ಶಾಸಕರು ಸನಾತನ ಧರ್ಮ ವಿರೋಧಿಗಳಾಗಿರುವುದು, ಸರಕಾರ ಶ್ರೀಮಂತರ ಪರ ಇರುವುದು, ಮಧ್ಯಮ ಸ್ತರದ ಜನರು ಬದುಕು ನಡೆಸುವುದೇ ದುಸ್ತರ ಆಗಿರುವುದು ಅವರ ಇಂತಹ ನಿಲುವಿಗೆ ಕಾರಣ.

ಸ್ವಲ್ಪ ಮಟ್ಟಿಗೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೊರತುಪಡಿಸಿ ಉಳಿದ ಎಲ್ಲ ಬಿಜೆಪಿ ಶಾಸಕರ ವಿರುದ್ಧ ಜನರಿಗೆ ಅದರಲ್ಲು ಮುಖ್ಯವಾಗಿ ಬಿಜೆಪಿಯ ಮತದಾರರಿಗೆ ಅಸಮಾಧಾನವಿದೆ. ಸುಳ್ಯದಿಂದ ಆರಂಭಿಸಿ ಮಂಗಳೂರು ತನಕ ಸ್ವಪಕ್ಷೀಯರ ಅಸಮಾಧಾನವಿದೆ. ಕಳೆದ ಚುನಾವಣೆಯಲ್ಲಿ ಯಾವ ಭರವಸೆ ನೀಡಿ ಚುನಾವಣಾ ಪ್ರಚಾರ ಮಾಡಲಾಗಿತ್ತೋ ಅದಕ್ಕೆ ವಿರುದ್ಧವಾಗಿ ಬಿಜೆಪಿ ಶಾಸಕರು, ಸರಕಾರ ನಡೆದುಕೊಂಡಿದೆ. ಮತ್ತೆ ಮತದಾರರನ್ನು ಎದುರಿಸಲು ಇರಿಸು ಮುರಿಸಿನ ಪರಿಸ್ಥಿತಿ ಬಿಜೆಪಿ ಕಾರ್ಯಕರ್ತರದ್ದು, ಅದೇನು ದೊಡ್ಡ ಸಮಸ್ಯೆ ಅಲ್ಲ. ಬಿಜೆಪಿ ಬದಲಿ ಕಾರ್ಯಕರ್ತರಿದ್ದಾರೆ. ದುರ್ಗಾವಾಹಿನಿ, ಬಜರಂಗ ದಳ, ಹಿಂದೂ ಮಹಾಸಭಾ, ಸನಾತನ ಧರ್ಮ ಜಾಗೃತಿ ಎಂದು ನೂರಾರು ಸಂಘಟನೆಗಳಿವೆ. ಅವರು ಬಿಜೆಪಿಯ ಪರವಾಗಿ ಅಲ್ಲ ಕಾಂಗ್ರೆಸ್ ವಿರುದ್ಧವಾಗಿ ಮತ ಕೇಳುತ್ತಾರೆ. ದೇಶ ರಕ್ಷಣೆ, ಗೋ ರಕ್ಷಣೆ, ಧರ್ಮ ರಕ್ಷಣೆ ಇತ್ಯಾದಿ.

ಒಟ್ಟಾರೆಯಾಗಿ ಬಿಜೆಪಿಗೆ ಪ್ರತಿಕೂಲವಾದ ವಾತಾವರಣ ಇದ್ದರೂ ಕೂಡ ಅದನ್ನು ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಎಂಬ ನೂರು ವರ್ಷ ಇತಿಹಾಸ ಹೊಂದಿರುವ ಪಕ್ಷಕ್ಕೆ ಸಾಧ್ಯ ಆಗುತ್ತಿಲ್ಲ. ಹೆಚ್ಚು ಕಡಿಮೆ 2013ರ ಪರಿಸ್ಥಿತಿ ದಕ್ಷಿಣ ಕನ್ನಡದಲ್ಲಿ ಇದೆ. ಬಿಜೆಪಿಗೆ ವಿರುದ್ಧವಾದ ಜನಾಭಿಪ್ರಾಯ, ಕಾಂಗ್ರೆಸ್ ಪರವಾದ ಒಲವು ಇದೆ. 2013ರಲ್ಲಿ ಕಾಂಗ್ರೆಸ್ ಎಂಟರಲ್ಲಿ ಎಳು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆನಂತರದ ಚುನಾವಣೆಯಲ್ಲಿ ಫಲಿತಾಂಶ ತಿರುವು ಮುರುವಾಯಿತು. ಬಿಜೆಪಿ 7 ಸ್ಥಾನ ಗೆದ್ದು ಕಾಂಗ್ರೆಸ್ಸಿನ ಯು.ಟಿ.ಖಾದರ್ ಮಾತ್ರ ಗೆದ್ದುಕೊಂಡರು. ಸದ್ಯಕ್ಕೆ ದಕ್ಷಿಣ ಕನ್ನಡದಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ಮುಖಂಡರೇ ಇಲ್ಲ.

ಕರಾವಳಿಗೆ ಕೇಸರಿಯ ಪ್ರಭಾವ ಹೆಚ್ಚಾದಾಗ ಮಾರ್ಗರೇಟ್ ಆಳ್ವ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ಊರು ಬಿಟ್ಟು ತೆರಳಿದರು. ಆಗ ಉಳಿದವರು ಜನಾರ್ದನ ಪೂಜಾರಿ ಅವರೊಬ್ಬರೇ. ಕರಾವಳಿಯಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ತಮ್ಮದೇ ಕೊಡುಗೆ ನೀಡಿರುವುದರ ಹೊರತಾಗಿಯೂ 2013ರ ವಿಧಾನಸಭಾ ಚುನಾವಣಾ ಮೇಲುಗೈ ಪಡೆಯುವಲ್ಲಿ ಪೂಜಾರಿಯವರ ಶ್ರಮವೂ ಇತ್ತು. ಕರಾವಳಿಯಲ್ಲಿ ಕಾಂಗ್ರೆಸ್ ಪಾರ್ಟಿಗೆ ಹೊಸ ಮುಖಗಳನ್ನು ಚುನಾವಣಾ ಕಣಕ್ಕಿಳಿಸಿ ಅಭ್ಯಾಸವೇ ಇಲ್ಲ. ಈ ಬಾರಿ  ಮೂಡಬಿದಿರೆಯ ಅಭಯಚಂದ್ರ ಜೈನ್ ಅವರು ಸ್ವಯಂಪ್ರೇರಿತರಾಗಿ ಚುನಾವಣಾ ರಾಜಕೀಯಕ್ಕೆ  ನಿವೃತ್ತಿ ಘೋಷಿಸಿದರು. ವಸಂತ ಬಂಗೇರ ಅವರು ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆಗೆ ಸ್ಪರ್ಧಿಸದಿರುವ ತೀರ್ಮಾನಕ್ಕೆ ಬರಬೇಕಾಯಿತು. ಸುಳ್ಯದಲ್ಲಿ ಸಾಕಷ್ಟು ಹಣ ಕಳಕೊಂಡ ಡಾ.ರಘು ಕೂಡ ಟಿಕೇಟ್ ಅಪೇಕ್ಷೆ ಪಡಲಿಲ್ಲ. ಇನ್ನುಳಿದಂತೆ ಯಾವ ಹಳಬ ಮಾಜಿ ಶಾಸಕರು ಕೂಡ ತಮ್ಮ ಕ್ಷೇತ್ರಗಳಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಲೂ ಇಲ್ಲ, ಕ್ಷೇತ್ರ ಬಿಟ್ಟುಕೊಡಲೂ ಸಿದ್ಧರಾಗಲಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಮೊದಲ ಹಿನ್ನಡೆಯಾಗಿದೆ. ಪುತ್ತೂರು, ಬಂಟ್ವಾಳ ಸೇರಿದಂತೆ ಇನ್ನುಳಿದ ಕ್ಷೇತ್ರಗಳಲ್ಲಿ ಕೂಡ ಹೊಸಮುಖಗಳಿಗೆ ಅವಕಾಶ ನೀಡುತ್ತಿದ್ದರೆ ಚುನಾವಣೆಯ ಫಲಿತಾಂಶದಲ್ಲಿ ಬದಲಾವಣೆ ನಿರೀಕ್ಷಿಸಬಹುದಿತ್ತು.

ಕರಾವಳಿಯ ಟಿಕೇಟ್ ಹಂಚಿಕೆ ವಿಚಾರದಲ್ಲಿ  ಮಾಜಿ ಸಿಎಮ್ಮುಗಳು, ಮಾಜಿ ಶಾಸಕರು, ಮಾಜಿ ಸಚಿವರ ಒತ್ತಡಕ್ಕೆ ಮಣಿಯುತ್ತಿರುವ ಕಾಂಗ್ರೆಸ್ ಹೈಕಮಾಂಡ್ ತಾನು ಹೈಕಮಾಂಡ್ ಎಂಬುದನ್ನೆ ಮರೆತಂತಿದೆ. ಗೆಲ್ಲುವ ಅಭ್ಯರ್ಥಿಗೆ ಅವಕಾಶ ಕೊಡಬೇಕಾಗಿದ್ದ ಕಾಂಗ್ರೆಸ್ ಪಾರ್ಟಿ ಹಳೆ ಕಾಲದ ಫಾರ್ಮುಲ ಇಟ್ಟುಕೊಂಡು ಇತ್ತ ಹಳಬರನ್ನು ನಿರಾಶೆ ಮಾಡಲಾಗದೆ ಅತ್ತ ಸಾಮಾಜಿಕ ನ್ಯಾಯವನ್ನೂ ಕೊಡಲಾಗದೆ ಚುನಾವಣೆಯಲ್ಲಿ ಮುಗ್ಗರಿಸಿ ಬೀಳಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು, ಮುಸ್ಲಿಮರು ಮತ್ತು ಇತರ ಹಿಂದುಳಿದವರ (ಓಬಿಸಿ) ಓಟುಗಳು ಹೆಚ್ಚಿವೆ. ಬಿಲ್ಲವರು ಮತ್ತು ಓಬಿಸಿ ಜನಸಂಖ್ಯೆ ಹೆಚ್ಚಿದ್ದರು ಕೂಡ ಶೋಷಿತರ ಪಕ್ಷ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಗವನ್ನು ಕಡೆಗಣಿಸುತ್ತಿದೆ. ಭಾರತೀಯ ಜನತಾ ಪಾರ್ಟಿ ಹಲವು ವರ್ಷಗಳ ಹಿಂದೆ ಬಿಲ್ಲವರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿ, ಓಬಿಸಿ ಅಭ್ಯರ್ಥಿಗಳಿಗೆ ಅರೆಭಾಷೆ ಒಕ್ಕಲಿಗರಿಗೂ ಅವಕಾಶ ನೀಡಿ ಗೆಲ್ಲಿಸಿದೆ. ಅಂತಹ ಪ್ರಯತ್ನ ಕಾಂಗ್ರೆಸ್ಸಿಂದ ಸಾಧ್ಯ ಆಗಿಲ್ಲ. ಬಹುಸಂಖ್ಯಾತ ಬಿಲ್ಲವರನ್ನು ಸಹಜವಾಗಿ ಬಿಜೆಪಿ ತನ್ನತ್ತ ಸೆಳೆದು ಕೊಂಡಿತು. ನಾಯಕರ ಕೊರತೆಯಿಂದಾಗಿ ಮತ್ತು ಸರಿಯಾದ ಮಾಹಿತಿಯ ಕೊರತೆಯಿಂದ ಬಿಲ್ಲವ ಯುವ ಸಮೂಹ ಧರ್ಮದ ಹೆಸರಿನಲ್ಲಿ ಬಿಜೆಪಿ ಪಾಳೆಯ ಸೇರಿ ಧರ್ಮ ರಕ್ಷಣೆ, ಗೋ ರಕ್ಷಣೆಯ ಹೊಣೆಗಾರಿಕೆ ವಹಿಸಿಕೊಂಡರು.

ಕರಾವಳಿಯ ಮಟ್ಟಿಗೆ ಮುಸ್ಲಿಂ ದ್ವೇಷವನ್ನು ಪ್ರಧಾನ ಆಸ್ತ್ರ ಮಾಡಿಕೊಂಡಿದೆ ಬಿಜೆಪಿ. ಈಗ ಬಿಜೆಪಿ ಸರಕಾರ ಇರುವುದರಿಂದ ಕೋಮುವಾದದ ಅಮಲು ಸ್ವಲ್ಪ ಕಡಿಮೆಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕು ಕಾಂಗ್ರೆಸ್ ಪಕ್ಷವನ್ನೆ ನೇರ ಹೊಣೆ ಮಾಡಲಾಯಿತು. ಬಿಜೆಪಿ ಪರಿವಾರದವರೇ ಕೊಲೆ ನಡೆಸಿದರೂ ಕೂಡ ಕೊನೆಗೆ ಅದನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟಲಾಯಿತು. ಕರಾವಳಿಯಲ್ಲಿ ನಡೆದ ಹಲವು ಕೊಲೆಗಳಿಗೆ, ಆತ್ಮಹತ್ಯೆಗೆ, ಗೋ ಕಳ್ಳತನಕ್ಕೆ ಕಾಂಗ್ರೆಸ್ ಸರಕಾರವನ್ನೇ ಹೊಣೆ ಮಾಡಲಾಯಿತು. ಕೊಲೆ ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಎಸ್.ಡಿ.ಪಿ.ಐ ಯವರೇ ಆರೋಪಿಗಳಾಗಿದ್ದರೂ ಕೂಡ ಕಾಂಗ್ರೆಸ್ಸಿನ ಯಾವನೇ ಮುಖಂಡ ಕೊಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಇಲ್ಲ ಎಂದು ಸಾರ್ವನಿಕ ಹೇಳಿಕೆ ನೀಡಲು ಮುಂದಾಗಲಿಲ್ಲ. ಮಾಜಿ ಸಚಿವ ರಮಾನಾಥ ರೈ ಅವರಾದಿಯಾಗಿ ಈ ಮುಖಂಡರು ನಡೆಸಿದ ಸ್ವಯಂಕೃತ ಅಪರಾಧಗಳಿಂದಾಗಿ ಕೇವಲ ಈ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಕರಾವಳಿ, ಮಲೆನಾಡು, ಬಯಲು ಸೀಮೆ ಜಿಲ್ಲೆಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು.

ಬಿಜೆಪಿ ಪರಿವಾರ ಹೆಣೆಯುವ ಕಟ್ಟುಕತೆಗಳಿಗೆ ನರೇಟಿವ್ ಕಟ್ಟುವಷ್ಟು ಪ್ರಬುದ್ಧರೂ ಅಲ್ಲದ, ಸಂಘಟನಾತ್ಮಕ ಕಾರ್ಯಗಳು ತಿಳಿಯದ ಕಾಂಗ್ರೆಸ್ ಮುಖಂಡರು ಸೈದ್ಧಾಂತಿಕವಾಗಿಯಾಗಲಿ, ಸಂಘಟನೆಯ ಮೂಲಕವಾಗಲಿ ಬಿಜೆಪಿಯನ್ನು ಎದುರಿಸಲು ಸಾಧ್ಯ ಆಗಲೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅಗೋಚರವಾದ ಗುಂಪುಗಾರಿಕೆ ಕೂಡ ಪಕ್ಷಕ್ಕೆ ಹಿನ್ನಡೆ ಮಾಡಿದೆ.

ರಾಜ್ಯದಲ್ಲಿ ಶತಾಯ ಗತಾಯ ಮತ್ತೆ ಅಧಿಕಾರ ಗಳಿಸಲೇ ಬೇಕು ಎಂಬ ಗುರಿ ಇರಿಸಿ ಕೊಂಡಿರುವ ಬಿಜೆಪಿಯು ಯಾವುದೇ  ಅಭ್ಯರ್ಥಿಯನ್ನು ಬದಲಾಯಿಸುವ ಪರಿಸ್ಥಿತಿಯಲ್ಲಿ ಇಲ್ಲ. ಇಬ್ಬರು ಹೊಸ ಶಾಸಕರು ಆರ್ ಎಸ್ ಎಸ್ ಮುಖಂಡರನ್ನು ಖುಷಿ ಪಡಿಸಲು ವಿಫಲರಾಗಿದ್ದು, ಅವರನ್ನು ಬದಲಾಯಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿತ್ತು. ಸುಳ್ಯ ಮೀಸಲು ಕ್ಷೇತ್ರದಲ್ಲಿ ಸಚಿವ ಅಂಗಾರ ಅವರನ್ನು ಬದಲಾಯಿಸಬೇಕು ಎಂಬ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಬಿಜೆಪಿ ಕೂಡ ಸರ್ವೇ ನಡೆಸಿದೆ. ಸರ್ವೇಯ ಫಲಿತಾಂಶ ಏನೇ ಇದ್ದರೂ ಅಂಗಾರ ಅವರೇ ಸ್ಪರ್ಧಿಸಬೇಕೆಂದು ಆರ್ ಎಸ್ ಎಸ್ ಹೇಳಿದೆ.

ಬೆಳ್ತಂಗಡಿಯಲ್ಲಿ ಪೂಂಜರ ಆಟೋಟೋಪಗಳು ಏನೇ ಇದ್ದರೂ ಕೂಡ ಕಾಂಗ್ರೆಸ್ ಪಕ್ಷದ ಹೊಸ ಮುಖ ರಕ್ಷಿತ್ ಶಿವರಾಂ ಗೆಲುವಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತವರ ಪಟಾಲಂ ಅಡ್ಡಿಯಾಗಲಿದೆ. ವಸಂತ ಬಂಗೇರ ಅವರ ಸೋಲಲ್ಲಿ ಕೂಡ ಅವರ ಸಂಬಂಧಿಕರ ಪಾತ್ರವೇ ಹೆಚ್ಚಿತ್ತು ಎಂಬುದು ವಾಸ್ತವ.

ಬಂಟ್ವಾಳ ಮತ್ತು ಮಂಗಳೂರು (ಉಳ್ಳಾಲ) ಕ್ಷೇತ್ರಗಳಲ್ಲಿ ಮಾಜಿ ಸಚಿವರಿಬ್ಬರ ಚುನಾವಣೆ ಬಹಳ ತ್ರಾಸದಾಯಕ ಆಗಲಿದೆ. ಬಂಟ್ವಾಳದಲ್ಲಿ ಪೂಜಾರಿ ಮತ್ತು ಬಿಲ್ಲವರು ನಿರಂತರವಾಗಿ ಸಮಸ್ಯೆಯಾಗಿ ಕಾಡಲಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರಿಗೇ ಅಸಮಾಧಾನವಿದೆ. ಹಾಗಂತ ಅವರನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಯಾವ ಸಹಾಯವನ್ನು ನೀಡುವಲ್ಲಿಯೂ ವಿಫಲವಾಗಿದೆ. ಕಾಂಗ್ರೆಸ್ ಆಕಾಂಕ್ಷಿಗಳ ಬಗ್ಗೆ ಮಾತನಾಡದಿರುವುದು ಉತ್ತಮ.

ಪುತ್ತೂರಿನಲ್ಲಿ ಹೊಸದಾಗಿ ಪಕ್ಷಕ್ಕೆ ಸೇರಿದ ಕೊಡುಗೈ ದಾನಿ ಅಶೋಕ್ ಕುಮಾರ್ ರೈ ಗೆಲ್ಲುವ ಕುದುರೆ ಆಗಿದ್ದರು ಕೂಡ ಕಾಂಗ್ರೆಸ್ ತೀರ್ಮಾನ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ. ಶಕುಂತಳ ಶೆಟ್ಟಿಗೆ ಟಿಕೇಟ್ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಸೂಚಿಸಿರುವುದು ಪುತ್ತೂರಿನ ಮತದಾರರಲ್ಲಿ ಅಚ್ಚರಿ ಮೂಡಿಸಿದೆ.

ಈ ಬಾರಿ ಕಾಂಗ್ರೆಸ್ ಮಕಾಡೆ ಮಲಗುವ ಎಲ್ಲ ಸೂಚನೆಗಳು ಇವೆ.

ಆಯುಷ್‌ ನಾರಾಯಣ

You cannot copy content of this page

Exit mobile version