ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯ 124 ಸ್ಥಾನಗಳಲ್ಲಿ ಕೇವಲ ಆರು ಮಹಿಳಾ ಅಭ್ಯರ್ಥಿಗಳಿದ್ದಾರೆ! ಎಂದಿನಂತೆ ರಾಷ್ಟೀಯ, ಪ್ರಾದೇಶಿಕ, ಎಡ ಎನ್ನದೆ ಎಲ್ಲ ರಾಜಕೀಯ ಪಕ್ಷಗಳೂ ಈ ಬಾರಿಯೂ ಇದನ್ನೇ ಮುಂದುವರಿಸುವ ಸಾಧ್ಯತೆ ಕಣ್ಣಿಗೆ ರಾಚುತ್ತಿದೆ. ಹೀಗಿರುವಾಗ, ಮಹಿಳೆಯರಿಗೆ ಸಮಾನ ಗೌರವ, ಸಮಾನ ಅವಕಾಶ, ನಿರ್ಧಾರಕ ಸ್ಥಾನಮಾನ ನೀಡಬೇಕೆಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಹಕ್ಕೊತ್ತಾಯ ಹೇರಲು ಕರೆ ಕೊಟ್ಟಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಿದೆ. ಅಭ್ಯರ್ಥಿಗಳಾಗಿ ಟಿಕೆಟ್ ಪಡೆಯಲು ಪ್ರತಿಯೊಂದು ಕ್ಷೇತ್ರದಲ್ಲೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ರಾಜಕೀಯ ಪಕ್ಷಗಳು ಕರ್ನಾಟಕದ ಎರಡೂವರೆ ಕೋಟಿ ಮಹಿಳಾ ಮತದಾರರನ್ನು ಇದುವರೆಗೂ ಹೇಗೆ ಪರಿಗಣಿಸಿವೆ? ಅವರಿಗೆ ಹುಸಿಹುಸಿ ಯೋಜನೆಗಳನ್ನು ಕಾಗದದ ಮೇಲೆ ತೋರಿಸುತ್ತ, ಮಹಿಳೆಯರ ಭಾವಪ್ರಪಂಚವನ್ನು ದುರ್ಬಳಕೆ ಮಾಡಿಕೊಳ್ಳುತ್ತ, ಪರಿಕರಗಳ ಆಮಿಷ ತೋರಿಸುತ್ತ, ಕೌಟುಂಬಿಕ ಆರೋಗ್ಯ-ನೆಮ್ಮದಿಗಳನ್ನು ಹಾಳು ಮಾಡುವ ಹೆಂಡ ಹಂಚುತ್ತ ಮತವನ್ನು ಪಡೆಯವ ಹುನ್ನಾರದಲ್ಲೇ ನಿಂತುಬಿಟ್ಟಿವೆ. ಮಹಿಳೆಯರನ್ನು ರಾಜಕೀಯ ಪ್ರಕ್ರಿಯೆಗಳಲ್ಲಿ ದುಡಿಮೆಗಷ್ಟೇ ಸೀಮಿತಗೊಳಿಸಿ, ನಾಯಕತ್ವದ ಅವಕಾಶಗಳಿಂದ ದೂರವೇ ಇರಿಸಿವೆ. ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯ 124 ಸ್ಥಾನಗಳಲ್ಲಿ ಕೇವಲ ಆರು ಮಹಿಳಾ ಅಭ್ಯರ್ಥಿಗಳಿದ್ದಾರೆ! ಎಂದಿನಂತೆ ರಾಷ್ಟೀಯ, ಪ್ರಾದೇಶಿಕ, ಎಡ ಎನ್ನದೆ ಎಲ್ಲ ರಾಜಕೀಯ ಪಕ್ಷಗಳೂ ಈ ಬಾರಿಯೂ ಇದನ್ನೇ ಮುಂದುವರಿಸುವ ಸಾಧ್ಯತೆ ಕಣ್ಣಿಗೆ ರಾಚುತ್ತಿದೆ.
ಹೀಗಿರುವಾಗ ‘ಜಾಗೃತ’ ಮತದಾರರಾಗಿ, ಪ್ರತಿಯೊಂದು ಪಕ್ಷವೂ ಟಿಕೆಟ್ ಹಂಚಿಕೆಯಲ್ಲಿ ಮತ್ತು ಆಂತರಿಕ ರಚನೆ, ಸಮಿತಿ, ಯೋಜನೆಗಳಲ್ಲಿ ಮಹಿಳೆಯರಿಗೆ ಸಮಾನ ಗೌರವ, ಸಮಾನ ಅವಕಾಶ, ನಿರ್ಧಾರಕ ಸ್ಥಾನಮಾನ ನೀಡಬೇಕೆಂದು; ಕೇಂದ್ರ- ರಾಜ್ಯ ಶಾಸನಸಭೆಗಳಲ್ಲೂ ಮಹಿಳೆಯರಿಗೆ 33% ಮೀಸಲಾತಿ ಕೊಡಲೇಬೇಕೆಂದು ಹಕ್ಕೊತ್ತಾಯ ಹೇರೋಣ ಬನ್ನಿ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪರವಾಗಿ
ಎಂ. ಎನ್. ಸುಮನಾ ನೆಟ್ಟಾರ್, ವಾಣಿ ಪೆರಿಯೋಡಿ, ರತಿ ರಾವ್, ಸಬಿಹಾ ಭೂಮಿಗೌಡ. ಶಾಂತಮ್ಮ ಕೋಲಾರ, ಲಿನೆಟ್ ಡಿಸಿಲ್ವಾ, ಸಬಿತಾ ಬನ್ನಾಡಿ, ಅಖಿಲಾ ವಿದ್ಯಾಸಂದ್ರ, ಆರ್. ಪ್ರತಿಭಾ, ಗೌರಿ, ರೇಖಾಂಬಾ ಶಿವಮೊಗ್ಗ, ಬಾ. ಹ. ರಮಾಕುಮಾರಿ, ಡಿ. ಅರುಂಧತಿ, ಗುಲಾಬಿ ಬಿಳಿಮಲೆ, ಎಚ್. ಎಸ್. ಅನುಪಮಾ.