ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಟೋಯಿಂಗ್ ಈಗ ಮತ್ತೆ ಪುನರಾರಂಭಗೊಳ್ಳುತ್ತಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ ನೀಡಿದ್ದು ಬೆಂಗಳೂರಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟೋಯಿಂಗ್ ಅನಿವಾರ್ಯ ಎಂದು ಹೇಳಿದ್ದಾರೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ, ಈ ನಡುವೆ ಪಾರ್ಕಿಂಗ್ ಇಲ್ಲದ ಜಾಗಗಳಲ್ಲಿ ವಾಹನ ಸವಾರರು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಸಂಚಾರಕ್ಕೂ ಅಡ್ಡಿ ಆಗುತ್ತಿರುವ ಹಿನ್ನೆಲೆಯಲ್ಲಿ ಟೋಯಿಂಗ್ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಖಾಸಗಿಯವರಿಗೆ ಟೋಯಿಂಗ್ ಮಾಡಲು ಟೆಂಡರ್ ನೀಡಲಾಗಿತ್ತು. ಆದರೆ ಇನ್ನು ಮುಂದೆ ಪೊಲೀಸರು ಮತ್ತು ಹೋಂ ಗಾರ್ಡ್ ಅವರನ್ನು ಬಳಸಿ ಟೋಯಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬಿಬಿಎಂಪಿ ಮತ್ತು ಪೊಲೀಸರು ಒಟ್ಟಾಗಿ ಕಾರ್ಯಚರಣೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಬೆಂಗಳೂರಿನ 19 ಕಡೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಕಾರಣ ಏನು ಎಂದು ಟ್ರಾಫಿಕ್ ಪೊಲೀಸರು ಗುರುತಿಸಿದ್ದಾರೆ. ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕೆಲಸ ಮಾಡುತ್ತೇವೆ ಎಂದು ಗೃಹಸಚಿವ ಪರಮೇಶ್ವರ್ ಭರವಸೆ ನೀಡಿದರು.