“..ಜಲವಿದ್ಯುತ್ ಯೋಜನೆಯ ಸಾಧ್ಯತಾ ವರದಿಗಾಗಿ ಸರಕಾರವು ಸಶಸ್ತ್ರ ಪಡೆಗಳನ್ನು ಮತ್ತು ಯಂತ್ರಗಳನ್ನು ತಂದಾಗ, ಅವು ಆ ಪ್ರದೇಶವನ್ನು ಸಮೀಪಿಸದಂತೆ ತಡೆಯಲು ಪ್ರತಿಭಟನಾ ನಿರತ ಗ್ರಾಮಸ್ಥರು ತೂಗು ಸೇತುವೆಯನ್ನೇ ಸುಟ್ಟುಹಾಕಿದರು..” ಆದಿರಾ ಪೆರಿಂಚೇರಿ ಅವರ ಬರಹದ ಅನುವಾದ
“ಅಣೆಕಟ್ಟು ಬೇಡ, ಇಲ್ಲಿಂದ ತೊಲಗಿ.” ಇದು ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಬೇಗಿಂಗ್ ಗ್ರಾಮದಲ್ಲಿ ಸುಮಾರು 12,000 ಮೆಗಾವ್ಯಾಟ್ ಸಿಯಾಂಗ್ ಅಪ್ಪರ್ ಮುಲ್ಟಿಪರ್ಪಸ್ ಯೋಜನೆ (SUMP) ಯ ವಿರುದ್ಧ ಪ್ರತಿಧ್ವನಿಸಿದ ಗುಡುಗು. ಇದೇ ಮೇ 23 ರಿಂದ, ಅಲ್ಲಿನ ಗ್ರಾಮಸ್ಥರು ಯೋಜನೆಯ ಮೊದಲ ಹಂತವಾದ ಕಾರ್ಯಸಾಧ್ಯತಾ ಸಮೀಕ್ಷೆಗೆಂದು ಸಶಸ್ತ್ರ ಪಡೆಗಳನ್ನು ನಿಯೋಜಿಸುವುದರ ವಿರುದ್ಧ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸಶಸ್ತ್ರ ಪಡೆಯು ಗ್ರಾಮಕ್ಕೆ ಬರುವುದನ್ನು ತಡೆಯಲು ಅವರು ಅಲ್ಲಿನ ತೂಗುಸೇತುವೆಯನ್ನೇ ಸುಟ್ಟು ಹಾಕಿದ್ದಾರೆ.
ಗ್ರಾಮಸ್ಥರು ತಮ್ಮ ತಕ್ಷಣದ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಒಂದು, ಸರಕಾರವು ಅಲ್ಲಿ ನಿಯೋಜಿಸಿರುವ ಸಶಸ್ತ್ರ ಪಡೆಗಳನ್ನು ಮೂರು ದಿನಗಳೊಳಗೆ ಹಿಂದಕ್ಕೆ ಕರೆಸಿಕೊಳ್ಳಬೇಕು. ಎರಡು, ಕಾರ್ಯಸಾಧ್ಯತಾ ಸಮೀಕ್ಷೆಗಾಗಿ ತಂದಿರುವ ಭೂಮಿ ಕೊರೆಯುವ ಯಂತ್ರಗಳನ್ನು ಮರಳಿ ತೆಗೆದುಕೊಂಡು ಹೋಗಬೇಕು.
ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಜಾರಿಗೆ ತರುತ್ತಿರುವ ಈ ಜಲವಿದ್ಯುತ್ ಯೋಜನೆಯ ಬಗ್ಗೆ ಸ್ಥಳೀಯರ ಪ್ರಮುಖ ಆತಂಕಗಳೆಂದರೆ: ಪುನರ್ವಸತಿ, ತಮ್ಮ ಮನೆ ಮತ್ತು ಕೃಷಿ ಭೂಮಿಗಳ ನಷ್ಟ, ಈ ಪ್ರದೇಶದಲ್ಲಿರುವ ವೈವಿಧ್ಯಮಯ ಜೀವಜಗತ್ತಿನ ಮೇಲಿನ ದುಷ್ಪರಿಣಾಮ.
ಎಲ್ಲಕ್ಕಿಂತ ಕೆಟ್ಟ ಸಂಗತಿಯೆಂದರೆ, ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಲಿರುವ ಅಪ್ಪರ್ ಸಿಯಾಂಗ್ ಯೋಜನೆಯು ಭೂಕಂಪನ ವಲಯದಲ್ಲಿ ನಿರ್ಮಾಣವಾಗುತ್ತಿದೆ ಎಂಬುದು.
ಸುಟ್ಟು ಬೂದಿಯಾದ ತೂಗು ಸೇತುವೆ
ಈ ಯೋಜನೆಯಿಂದ ಬಾಧಿತರಾಗಲಿರುವ ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. NHPC ಯು ತನ್ನ ಮೊದಲ ಹಂತದ ಯೋಜನೆಯಾದ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಈಗ ಮುಂದಾಗಿರುವ ಕಾರಣ ಮೇ 21 ರಿಂದ ಗ್ರಾಮದಲ್ಲಿ ಸಶಸ್ತ್ರ ಪಡೆಗಳನ್ನು ನೇಮಿಸಲಾಗಿದೆ. ಆದ್ದರಿಂದಲೇ ಈಗ ಮತ್ತೆ ಪ್ರತಿಭಟನೆಯ ಕಾವು ಜೋರಾಗಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF)ನ ಸುಮಾರು 100 ಸಿಬ್ಬಂದಿಯನ್ನು ಸಿಯಾಂಗ್, ಅಪ್ಪರ್ ಸಿಯಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಗಳಲ್ಲಿ NHPC ತನ್ನ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲೆಂದು ನಿಯೋಜಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೇ 23 ರಂದು, ಪ್ರತಿಭಟನೆಯ ಕೇಂದ್ರಬಿಂದುವಾದ ಸಿಯಾಂಗ್ ಜಿಲ್ಲೆಯ ಬೇಗಿಂಗ್ ಗ್ರಾಮದಲ್ಲಿ ಗ್ರಾಮಸ್ಥರು ಈ ನಿಯೋಜನೆಯನ್ನು ವಿರೋಧಿಸಿ ಮೆರವಣಿಗೆ ನಡೆಸಿದ್ದರು. Siang Indigenous Farmers’ Forum (SIFF) ನೇತೃತ್ವದಲ್ಲಿ, ಸರ್ಕಾರವು ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಬಾರದು ಎಂಬ ತಮ್ಮ ಬೇಡಿಕೆಗಳನ್ನು ಮತ್ತೊಮ್ಮೆ ಘೋಷಿಸಿದರು. ಅದಕ್ಕಾಗಿ ಮೊದಲು ಸಶಸ್ತ್ರ ಪಡೆಗಳನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಮತ್ತು ಅಧ್ಯಯನಕ್ಕೆಂದು NHPC ತಂದಿರುವ ಕೊರೆಯುವ ಯಂತ್ರಗಳನ್ನು ಮರಳಿ ಕೊಂಡುಹೋಗಬೇಕು.
“ನಮ್ಮ ನೆಲಕ್ಕೋಸ್ಕರ ನಾವು ಸಾಯಲು ಸಿದ್ಧರಿದ್ದೇವೆ” ಎಂದು ಗ್ರಾಮಸ್ಥರು ಆ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೇನಾ ಸಿಬ್ಬಂದಿಗೆ ಹೇಳುತ್ತಿರುವುದು ಕೇಳಿ ಬರುತ್ತಿತ್ತು.
ಬೇಗಿಂಗ್ ಗ್ರಾಮಕ್ಕೆ ಸಶಸ್ತ್ರ ಪಡೆಗಳು ಪ್ರವೇಶಿಸುವುದನ್ನು ತಡೆಯಲು ಗ್ರಾಮಸ್ಥರು ಅದೇ ದಿನ ತೂಗು ಸೇತುವೆಯನ್ನು ಸುಟ್ಟು ಹಾಕಿದರು. ಇದೊಂದು ಶಾಂತಿಯುತ ಪ್ರತಿಭಟನೆಯಾಗಿದ್ದರೂ ಕೂಡ ಜನರ ಭಾವನೆಗಳು ಕೆರಳಿದ್ದವು ಮತ್ತು ಒಂದಷ್ಟು ಉದ್ರಿಕ್ತ ಗ್ರಾಮಸ್ಥರು ಸೇತುವೆಯನ್ನು ಸುಟ್ಟುಹಾಕಿದರು ಎಂದು SIFF ಯುವ ವಿಭಾಗದ ನಾಯಕ ನಿತ್ ಪರೋನ್ ಅವರನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. “ಯಾವುದೇ ರೀತಿಯ ಹಿಂಸಾಚಾರಕ್ಕೆ ಗ್ರಾಮಸ್ಥರು ಇಳಿಯಬಾರದೆಂದು ಮತ್ತು ಶಾಂತಿಯುತ ಪ್ರತಿಭಟನೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕು ಎಂದು ಜನರಿಗೆ ಈಗ ಮನವರಿಕೆ ಮಾಡಲಾಗಿದೆ” ಎಂದೂ ಅವರು ಹೇಳಿದರು.
SUMP ಯೋಜನೆಗಾಗಿ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಸಶಸ್ತ್ರ ಪಡೆಯನ್ನು ನಿಯೋಜಿಸುವುದನ್ನು ವಿರೋಧಿಸಿ , SIFF ಮೇ 23 ರಂದು ಸಿಯಾಂಗ್ ಜಿಲ್ಲೆಯ ಉಪ ಆಯುಕ್ತರಿಗೆ ಸಲ್ಲಿಸಿದ ಪತ್ರದಲ್ಲಿ “ಅನಿರ್ದಿಷ್ಟಾವಧಿ ಧರಣಿ” ಆರಂಭಿಸಿರುವುದಾಗಿ ತಿಳಿಸಲಾಗಿತ್ತು.
ದಿ ವೈರ್ಗೆ ಲಭ್ಯವಾದ ಈ ಪತ್ರದಲ್ಲಿ ಮೂರು ಸ್ಪಷ್ಟ ಬೇಡಿಕೆಗಳನ್ನು ಇಡಲಾಗಿದೆ. ಮೊದಲನೆಯದಾಗಿ, ಸಿಯಾಂಗ್, ಅಪ್ಪರ್ ಸಿಯಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಗಳಲ್ಲಿ ಈಗ ನಿಯೋಜಿಸಲ್ಪಟ್ಟಿರುವ ಎಲ್ಲಾ CAPF ಸಿಬ್ಬಂದಿಯನ್ನು ಸರಕಾರವು ತೆಗೆದುಹಾಕಬೇಕು. ಎರಡನೆಯದಾಗಿ, ಸಮೀಕ್ಷೆಗಾಗಿ ಬೀಗಿಂಗ್‌ಗೆ ತರಲಾದ ಡ್ರಿಲ್ಲಿಂಗ್ ಯಂತ್ರವನ್ನು ನಾಲ್ಕು ದಿನಗಳಲ್ಲಿ ತೆಗೆದುಹಾಕಬೇಕು. ಮತ್ತು ಮೂರನೆಯದಾಗಿ, “ಸ್ಥಳೀಯರ ಪೂರ್ವಾನುಮತಿಯಿಲ್ಲದೆ PFR (ಕಾರ್ಯಸಾಧ್ಯತಾ ವರದಿ)ಗೆ ಸಂಬಂಧಿಸಿದ ಯಾವುದೇ ಬಲವಂತದ ಚಟುವಟಿಕೆಯನ್ನು ಕೈಗೊಳ್ಳಲಾಗುವುದಿಲ್ಲ” ಎಂದು ಸರ್ಕಾರವು ಭರವಸೆ ನೀಡಬೇಕು.
ಸ್ಥಳೀಯರ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರವು ವಿಫಲವಾದರೆ “ತಮ್ಮ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ದೀರ್ಘಕಾಲೀನ ಆತಂಕಗಳು
ಕಳೆದ ಡಿಸೆಂಬರ್ ತಿಂಗಳ ಮಧ್ಯದಲ್ಲಿ ಅಪ್ಪರ್ ಸಿಯಾಂಗ್ ಜಿಲ್ಲೆಗಳ ಗೇಕು, ರೀವ್ ಮತ್ತು ಪಾರೊಂಗ್ ಗ್ರಾಮಸ್ಥರು SUMP ವಿರುದ್ಧ ಪ್ರತಿಭಟನೆಗಳನ್ನು ಮತ್ತು ಜಾಥಾಗಳನ್ನು ಸಂಘಟಿಸಿದ್ದರು. ಈಗಿನ ಪ್ರತಿಭಟನೆಗಳಿಗೆ ಕಾರಣವಾಗಿರುವ ರಾಜ್ಯ ಮತ್ತು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಅರುಣಾಚಲ ಪ್ರದೇಶ ಸರಕಾರವು ಆದೇಶ ಹೊರಡಿಸಿದ್ದ ಕಾರಣಕ್ಕೆ ಆಗ ಪ್ರತಿಭಟನೆಗಳು ನಡೆದಿದ್ದವು.
ಭಾರತದ ಗಡಿ ಭಾಗದ ಎತ್ತರದ ಪ್ರದೇಶದಲ್ಲಿ ಸಿಯಾಂಗ್ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರಯವ ಬೃಹತ್ ಅಣೆಕಟ್ಟು ಯೋಜನೆಗೆ ಎದುರಾಗಿ SUMP ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದ್ದರೂ, ಸ್ಥಳೀಯರು ಇನ್ನೂ ಆತಂಕದಲ್ಲಿದ್ದಾರೆ. ಜೊತೆಗೆ ಈ ಯೋಜನೆಯ ಬಗ್ಗೆ ಹಲವು ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಯೋಜನೆಯಿಂದಾಗಿ ಸುಮಾರು 27 ಹಳ್ಳಿಗಳು ಸ್ಥಳಾಂತರಗೊಳ್ಳುತ್ತವೆ, ಅವರ ಭೂಮಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ, ನಂತರ ಅದನ್ನು ಜಲಾಶಯಕ್ಕಾಗಿ ಮುಳುಗಿಸಲಾಗುತ್ತದೆ ಎಂಬುದು ಗ್ರಾಮಸ್ಥರ ಆತಂಕ. ಇದರಿಂದಾಗಿ ಜನರು ತಮ್ಮ ಮನೆಗಳು ಮತ್ತು ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಈ ಪ್ರದೇಶದ ಜನರ ಮುಖ್ಯ ಜೀವನಾಧರವೂ ಕೃಷಿಯೇ ಆಗಿದೆ.
ಎರಡನೆಯದಾಗಿ, ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಯನ್ನು ಆರಂಭಿಸಿರುವುದು ಕೂಡ ಕಳವಳಕಾರಿಯಾಗಿದೆ. ಸೇನಾ ಪಡೆಗಳ ನಿಯೋಜನೆ ಎಂಬುದು ಈಗ ದೈನಂದಿನ ವಿದ್ಯಮಾನವಾಗಿದೆ. ಆದ್ದರಿಂದಲೇ ಸ್ಥಳೀಯರು ಇದನ್ನು ಗಟ್ಟಿ ದನಿಯಲ್ಲಿ ವಿರೋಧಿಸುತ್ತಿದ್ದಾರೆ.
“ಇಲ್ಲಿನ ಒಟ್ಟು ಪರಿಸ್ಥಿತಿಯು ಈಗ ನಮ್ಮ ಜನರಿಗೆ ತುಂಬಾ ದುಃಖಕರ ಮತ್ತು ಅನ್ಯಾಯಕರವಾಗಿದೆ” ಎಂದು ಮೇ 23 ರ ಪ್ರತಿಭಟನೆಯಲ್ಲಿ ಭಾಗವಹಿಸಲೆಂದು ಬೇಗಿಂಗ್‌ಗೆ ಆಗಮಿಸಿದ ಪಾಸಿಘಾಟ್ ನಿವಾಸಿ ಕ್ಯಾಟನ್ ಮೊಯೊಂಗ್ ಹೇಳಿದರು. ಅಣೆಕಟ್ಟಿನ ವಿರುದ್ಧ ದಶಕಗಳಿಂದ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದ ಅವರು, ಕಳೆದ ಎರಡು-ಮೂರು ವರ್ಷಗಳಿಂದ ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.
“SUMP ಯೋಜನೆಯ PFR ನಡೆಸುವುದು ಬೇಡ ಎಂದು ನಾವು ಒತ್ತಾಯಿಸುತ್ತಿದ್ದೇವೆ. ತಮ್ಮ ಅಜೆಂಡಾವನ್ನು ಮರೆಮಾಚಿ, ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆಯನ್ನು ಜಾರಿಗೆ ತರಲು, ಅಣೆಕಟ್ಟೆಗೆ ಭೂಸ್ವಾಧೀನ ನಡೆಸಲು ಸಮೀಕ್ಷೆಗೆಂದು ಈ ಎಲ್ಲಾ ಉಪಕರಣಗಳನ್ನು ಬೇಗಿಂಗ್ ಗ್ರಾಮಕ್ಕೆ ತಂದಿವೆ. ನಮ್ಮ ಜನರು ಇದನ್ನು ಒಪ್ಪುವುದಿಲ್ಲ… ಜನರು ಬೇಡ ಎಂದು ಹೇಳಿದರೆ ಬೇಡ. ಸರ್ಕಾರಕ್ಕೆ ಅದನ್ನು ಜಾರಿಗೊಳಿಸುವ ಹಕ್ಕಿಲ್ಲ.” ಎಂದು ಅವರು ಹೇಳಿದರು.
ಇಲ್ಲಿನ ಜನರು ಎತ್ತಿರುವ ಮತ್ತೊಂದು ಪ್ರಮುಖ ಆತಂಕವೆಂದರೆ, ಈ ಪ್ರದೇಶದ ಶ್ರೀಮಂತ ಜೀವವೈವಿಧ್ಯ ಮತ್ತು ಸಿಯಾಂಗ್ ನದಿಯ ಜೊತೆಗೆ ಇಲ್ಲಿನ ಜನಸಮುದಾಯಗಳು ಹೊಂದಿರುವ ಸಾಂಸ್ಕೃತಿಕ ಸಂಬಂಧಗಳು. ಅಣೆಕಟ್ಟು ನಿರ್ಮಾಣವಾದರೆ, ಸಾಂಪ್ರದಾಯಿಕ ಮೀನುಗಾರಿಕಾ ಪ್ರದೇಶಗಳಿಗೆ ಪ್ರವೇಶ ತಡೆ ಸಹಿತ ಹಲವು ರೀತಿಯಲ್ಲಿ ಈ ಸಂಬಂಧಗಳು ಹಾನಿಗೊಳಗಾಗಲಿವೆ.
ಇಲ್ಲಿ ಸೇನೆಯನ್ನು ನಿಯೋಜಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳು SUMP ಯೋಜನೆಯನ್ನು ಜನರ ಒಪ್ಪಿಗೆ ಇದ್ದರೂ ಇಲ್ಲದಿದ್ದರೂ ಜಾರಿಗೊಳಿಸಿಯೇ ತೀರುತ್ತೇವೆ ಎಂಬ “ಸ್ಪಷ್ಟ ಸಂದೇಶ”ವನ್ನು ರವಾನಿಸುತ್ತಿವೆ ಎಂದು ಮೊಯೊಂಗ್ ಹೇಳಿದರು.
“ನಮ್ಮ ನೆಲವನ್ನು ಉಳಿಸಿಕೊಳ್ಳಲು ನಾನಿಲ್ಲಿಗೆ ಬಂದಿದ್ದೇನೆ… ನಮ್ಮ ಮೇಲೆ ನಡೆಯುತ್ತಿರುವ ಈ ಕೆಟ್ಟ ದಾಳಿಯಿಂದ ನಮ್ಮ ಪರ್ವತಗಳನ್ನು ಮತ್ತು ನದಿಗಳನ್ನು ರಕ್ಷಿಸಲೆಂದು ಬಂದಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಒಪ್ಪಿಗೆಯಿಲ್ಲದೆ 12,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುವುದೆಂದರೆ ಅದು ನಮ್ಮ ಎದೆಗೆ ಇರಿದಂತೆ.” ಎಂದು ಅವರು ಹೇಳಿದರು.
ನಮ್ಮ ಜನರು ಶಾಂತಿಯುತವಾಗಿ ಬದುಕಲು, ಈ ಯೋಜನೆಯಿಂದ ಹಿಂದಕ್ಕೆ ಸರಿಯುವಂತೆ ಇದರ ಹಿಂದಿನ ನಾಯಕರುಗಳಾದ ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಒತ್ತಾಯಿಸಲು ಈ ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ ಎಂದು ಮೊಯೊಂಗ್ ಹೇಳಿದರು.
“ನಾವು ಅಣೆಕಟ್ಟುಗಳನ್ನು ವಿರೋಧಿಸುವುದಿಲ್ಲ, ಆದರೆ SUMP ತರದ ಬೃಹತ್ ಅಣೆಕಟ್ಟುಗಳನ್ನು ವಿರೋಧಿಸುತ್ತೇವೆ” ಎಂದು ಅವರು ಹೇಳಿದರು.