ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಬಿಜೆಪಿಯಿಂದ ಆರಿಸಿ ಹೋದ ನಂತರ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದೊಂದಿಗೆ ಇವರ ಒಡನಾಟ ಇದ್ದ ಹಿನ್ನೆಲೆಯಲ್ಲಿ ಈ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರೂ ಆಗಿದ್ದ ಇಬ್ಬರು ಶಾಸಕರು ಆಪರೇಷನ್ ಕಮಲದ ಸಮಯದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರವನ್ನು ಶಿವರಾಮ್ ಹೆಬ್ಬಾರ್ ಪ್ರತಿನಿಧಿಸಿದರೆ, ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ಮೂರನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾದರೆ, ಸೋಮಶೇಖರ್ ಅವರು ಸಹಕಾರ ಸಚಿವರಾಗಿದ್ದರು. 2023ರಲ್ಲಿ ಇಬ್ಬರೂ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬಂದರೂ ಶಿವರಾಮ್ ಹೆಬ್ಬಾರ್ ಹಾಗೂ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಜೊತೆಗೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದರು. .
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅಂತೂ ಎಷ್ಟೋ ಬಾರಿ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲೇ ತನ್ನನ್ನು ತಾನು ಗುರುತಿಸಿಕೊಂಡಿದ್ದರು. ಸಧ್ಯ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕಾಗಿ ಇಬ್ಬರೂ ಉಚ್ಚಾಟನೆ ಮಾಡಿ ಹೈ ಕಮಾಂಡ್ ಆದೇಶ ಹೊರಡಿಸಿದೆ.