“ಪ್ರಾಣಿಗಳ ಭಾವನೆಗಳನ್ನು ಮನುಷ್ಯರ ಭಾವನೆಗಳಿಗೆ ಆರೋಪಿಸಬಾರದು ಎಂಬುದು ನಿಜ. ಆದರೆ, ಅವುಗಳಿಗೂ ತಮ್ಮದೇ ಆದ ಭಾವನೆಗಳು, ನೀತಿ, ನಿಯಮಗಳು, ಸಾಮಾಜಿಕ ಜೀವನ ಇರುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು…”
ಬೊಗಸೆಗೆ ದಕ್ಕಿದ್ದು ೨೮-೨೯ರಲ್ಲಿ ನಾನು ಬರೇ ಬೆಕ್ಕುಗಳ ಬಗ್ಗೆ ಮತ್ತು ಅವು ನನ್ನಲ್ಲಿ ಪ್ರೇರೇಪಿಸಿದ ಭಾವನೆ, ಯೋಚನೆಗಳ ಬಗ್ಗೆ ಬರೆದಿದ್ದೆ. ಮುಂದಿನ ಕಂತು ಬರೆಯಬೇಕಿತ್ತು. ಆದರೆ, ನನ್ನ ಯೋಚನಾ ರೀತಿಯನ್ನೇ ಬದಲಿಸಿದ ಎರಡು ಮಹಾ ನೇತ್ರಾವತಿ ನದಿಯ ನೆರೆಗಳಿಗೆ 101 ಮತ್ತು 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಬರೆಯಬೇಕಾಯಿತು. ಅರ್ಧದಲ್ಲೇ ಉಳಿದ ಬೆಕ್ಕುಗಳ ಕತೆಗಳ ಕೊನೆಯ ಕಂತಿದು.
ನಾನು ಎಲ್ಲಾ ಬಿಟ್ಟು ಇವುಗಳ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ- ನಾನು ಇತ್ತೀಚಿನ ಕೊಳಕು ರಾಜಕಾರಣ ಮತ್ತು ಮುಖ್ಯವಾಹಿನಿಯ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಹೇಸಿಗೆ ಉಂಟುಮಾಡುವ ಸುಳ್ಳು, ಮತ್ತು ದುಷ್ಟತೆಗಳಿಂದ ರೋಸಿಹೋಗಿರುವುದು ಮತ್ತು ನಾವು ಈ ಮಾನವ ರೂಪದ ಬಚ್ಚಲ ಹುಳಗಳಿಂದ ಕಲಿಯಬಹುದಾದದಕ್ಕಿಂತ ಹೆಚ್ಚಿನದನ್ನು ಪ್ರಕೃತಿ ಸಹಜವಾಗಿ ಪ್ರಾಮಾಣಿಕವಾಗಿರುವ ನಾಯಿ, ಬೆಕ್ಕುಗಳಂತಹ ಪ್ರಾಣಿಗಳಿಂದ ಕಲಿಯಬಹುದು ಎಂಬುದೇ ಆಗಿದೆ. ಅದಿರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ.
ನನ್ನ ತಮ್ಮನ ಬಬ್ಲೀ ಎಂಬ ಬೆಕ್ಕು ಹೆಚ್ಚಾಗಿ ನಮ್ಮ ಮನೆಯಲ್ಲೇ ಹೆಚ್ಚಾಗಿ ಇದ್ದದ್ದು, ಅದು ಹನ್ನೊಂದನೇ ಹೆರಿಗೆಯಲ್ಲಿ ಒಂದು ಕಪ್ಪು ಮತ್ತೊಂದು ಬಿಳಿ ಮರಿಗಳನ್ನು ಇಟ್ಟದ್ದು, ಅವುಗಳಲ್ಲಿ ಬಿಳಿ ಮಾಯವಾಗಿ ಕಪ್ಪು ಬೆಕ್ಕು ಮನೆಯಲ್ಲೇ ಉಳಿದುದು ಮತ್ತು ಕಿಪ್ಲಿಂಗ್‌ನ ಜಂಗಲ್ ಬುಕ್‌ನಲ್ಲಿ ಬರುವ ಕರಿಚಿರತೆ ಬಗೀರಾ ಮಾದರಿಯಲ್ಲಿ ಲೇಡಿ ಬಗೀರಾ ಆದುದು, ನಂತರ ತಾಯಿ-ಮಗಳಿಬ್ಬರೂ ಒಂದೇ ದಿನ ಮರಿಯಿಟ್ಟದ್ದು, ಬಬ್ಲಿ ಮೂರರಲ್ಲಿ ಉಳಿದ ಎರಡು ಮರಿಗಳೊಂದಿಗೆ ತಮ್ಮನ ಮನೆಗೆ ವಾಪಸ್ಸಾಗಿ ಮತ್ತೆ ಈ ಕಡೆ ತಲೆ ಹಾಕದೇ ಇರುವುದು, ಈ ಲೇಡಿ ಬಗೀರಾಳ ನಾಲ್ಕು ಮಕ್ಕಳು ಈಗ ನಮ್ಮ ಮನೆಯಲ್ಲಿಯೇ ಉಳಿದಿರುವುದು ಇತ್ಯಾದಿಗಳ ಬಗ್ಗೆ ಹಿಂದೆ ವಿವರವಾಗಿ ಬರೆದಿದ್ದೆ.
ಈಗ, ಪ್ರಾಣಿಗಳ ಭಾವನೆಗಳನ್ನು ಮನುಷ್ಯರ ಭಾವನೆಗಳಿಗೆ ಆರೋಪಿಸಬಾರದು ಎಂಬುದು ನಿಜ. ಆದರೆ, ಅವುಗಳಿಗೂ ತಮ್ಮದೇ ಆದ ಭಾವನೆಗಳು, ನೀತಿ, ನಿಯಮಗಳು, ಸಾಮಾಜಿಕ ಜೀವನ ಇರುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಕಾಡಿನಲ್ಲಿ ಸ್ವತಂತ್ರವಾಗಿದ್ದರೂ, ಅಲ್ಲಿನ ಅಪಾಯಗಳಿಗೆ ಅಂಜಿ, ಮನುಷ್ಯನ ರಕ್ಷಣೆಯ ಅಡಿಗೆ ಬಂದ ತೋಳ ಜಾತಿಯ ನಾಯಿ, ಮತ್ತು ಹುಲಿ ಕುಲದ ಬೆಕ್ಕುಗಳು ತಮ್ಮ ಸ್ವಾತಂತ್ರ್ಯ ಬಿಟ್ಟುಕೊಟ್ಟು ಸಾಕು ಪ್ರಾಣಿಗಳಾದದ್ದು, ಅವಲಂಬಿತರಾದದ್ದು, ಮನುಷ್ಯನಿಗೆ ನಿಷ್ಟರಾಗಿ ಉಳಿದದ್ದು ಇತ್ಯಾದಿಗಳಿಗೆ ಕೆಲವು ಸಾವಿರ ವರ್ಷಗಳ ಇತಿಹಾಸವಿದೆ.
ಅದೇ ರೀತಿಯಲ್ಲಿ ಚಿಕ್ಕ ರಾಜರು, ದೊಡ್ಡ ರಾಜರಿಗೆ, ದೊಡ್ಡ ರಾಜರು ಚಕ್ರವರ್ತಿಗಳಿಗೆ ಅಡಿಯಾಳುಗಳಾಗಿ ಇರುವುದನ್ನು ನೋಡಿದ್ದೇವೆ. ಅದೇ ರೀತಿ ಮಹಿಳೆಯರು ತಮ್ಮ ತಂದೆಯರ, ಗಂಡಂದಿರ ಅಡಿಯಾಳುಗಳಾಗಿ ಶತಮಾನಗಳಿಂದ ಇದ್ದಾರೆ. ಕೆಳಜಾತಿ ಎನಿಸಿಕೊಂಡವರು ಮೇಲ್ಜಾತಿ ಎನಿಸಿಕೊಂಡವರ ಅಡಿಯಾಳುಗಳಾಗಿ ಇದ್ದಾರೆ. ಇವು ಈ ಪ್ರಾಣಿ ಸ್ವಭಾವಗಳನ್ನೇ ನೆನಪಿಸುವುದಿಲ್ಲವೆ? ಪ್ರಾಣಿಗಳಲ್ಲೂ ಅಸೂಯೆ, ವಂಚನೆ, ಬಂಡುಕೋರತನ ಇತ್ಯಾದಿ ಗುಣಗಳು ಇವೆಯಾದರೂ, ಮನುಷ್ಯನಷ್ಟು ಬೆಳೆದಿಲ್ಲ. ಆದರೆ, ಶೋಷಣೆಯ ಗುಣ ಅವುಗಳಲ್ಲಿ ಇಲ್ಲ. ಪರೋಪಜೀವಿ ಗುಣ ಇದೆಯಾದರೂ, ಅದು ನೈಸರ್ಗಿಕವಾಗಿ ಬಂದದ್ದೇ ಹೊರತು, ಬೆಳೆಸಿಕೊಂಡದ್ದಲ್ಲ.
ಇದೇ ಹಿನ್ನೆಲೆಯಲ್ಲಿ ನಮ್ಮ ನಾಲ್ಕು ಬೆಕ್ಕಿನ ಮರಿಗಳ ವಿಷಯ ನೋಡೋಣ. ಒಂದು ಗೊಂಡೆ ಬಾಲದ ಕರಿಬೆಕ್ಕಿಗೆ ಬ್ಲ್ಯಾಕಿ ಎಂದೂ, ಇನ್ನೊಂದು ಅಚ್ಚಕರಿ, ಸಪೂರ ಬಾಲದ ಬೆಕ್ಕು ಉಳಿದವುಗಳಿಗಿಂತ ದುರ್ಬಲವಾಗಿದ್ದುದರಿಂದ ವೀಕಿ ಎಂದೂ, ಅಚ್ಚ ಕಪ್ಪು ಮತ್ತು ಸ್ವಚ್ಛ ಬಿಳಿಯ ತೇಪೆಗಳಿದ್ದ ಬೆಕ್ಕಿಗೆ ಬ್ಲ್ಯಾಕ್ ಎಂಡ್ ವೈಟಿ, ಇನ್ನೊಂದು ಬೂದು, ಹಸಿರು ಮಿಶ್ರಿತ ಹೆಸರಿಸಲಾಗದ ಬಣ್ಣದ ಬೆಕ್ಕಾದರೂ, ಅದಕ್ಕೆ ಬ್ರೌನಿ ಎಂದು ಅನಧಿಕೃತವಾಗಿ ಹೆಸರಿಡಲಾಯಿತು. ನಮ್ಮಲ್ಲಿ ಹಿಂದೆಲ್ಲಾ ಬೆಕ್ಕುಗಳಿಗೆ ಹೆಸರಿಡುವ ಕ್ರಮವಿರಲಿಲ್ಲ. ಹೆಣ್ಣಾದರೆ “ಮಂಗು” ಎಂದೂ, ಗಂಡಾದರೆ “ಗಂಟೆ” ಎಂದೂ ಕರೆಯಲಾಗುತ್ತಿತ್ತು. ಕೋಣಗಳಿಗೆ, ದನಗಳಿಗೆ, ನಾಯಿಗಳಿಗೆ ಹೆಸರಿಡುವ ಕ್ರಮವಿತ್ತು. ಪ್ರಾಣಿಗಳ ಕುರಿತು ಆಪ್ತತೆ ಅಥವಾ ಎಫಿನಿಟಿ ಇದಕ್ಕೆ ಕಾರಣವಾಗಿರಬಹುದು. ಹಿಂದೂಗಳು ಅನಿಸಿಕೊಂಡವರು ದನಗಳಿಗೆ ಗಂಗೆ, ಗೌರಿ, ಕಾಳಿ, ಬೊಳ್ಳಿ, ಲಕ್ಷ್ಮೀ, ಸರಸ್ವತಿ ಅಥವಾ ಸರಸು ಎಂಬ ಹೆಸರಿಟ್ಟರೆ, ಕೋಣ, ಎಮ್ಮೆಗಳಿಗೆ ಕಾಳ, ಬೊಳ್ಳ, ಕಾಲ, ಬೊಲ್ಲ, ಇತ್ಯಾದಿ ಹೆಸರಿಡುತ್ತಿದ್ದರು. ನಾಯಿಗಳಿಗೆ ಮಾತ್ರ, ಬ್ರಿಟಿಷರ ಮೇಲಿನ ಸಿಟ್ಟಿನಿಂದಲೋ ಏನೋ-ಸರಿಯಾಗಿ ಗೊತ್ತಿಲ್ಲ- ಟಾಮಿ, ಜಿಮ್ಮಿ, ಜೂಲಿ ಇತ್ಯಾದಿ ಹೆಸರಿಡುತ್ತಿದ್ದರು! ಉಳಿದ ಸಮುದಾಯಗಳಲ್ಲಿ ಹೇಗೆ ಎಂದು ನನಗೆ ಗೊತ್ತಿಲ್ಲ; ಈಗಷ್ಟೇ ಈ ಪ್ರಶ್ನೆ ಮೂಡುತ್ತಿದೆ.
ಈ ನಾಲ್ಕೂ ಮರಿಗಳು ಕಣ್ಣು ಬಿಟ್ಟು, ತೊದಲುಗಾಲು ಇಡುತ್ತಾ, ಪುಟಪುಟನೇ ನಡೆಯುತ್ತಾ, ಎಳುತ್ತಾ ಬೀಳುತ್ತಾ ಮನೆಯಿಡೀ ಓಡಾಡುವಾಗ ಒಂದು ರೀತಿಯ ವಿಸ್ಮಯ. ಯಾಕೆ? ನಾನು ನೂರಾರು ಮಾನವ ಮಕ್ಕಳನ್ನು ಕಂಡಿಲ್ಲವೇ? ನಂತರ ಇವು ಎಲ್ಲದರ ಮೇಲೆ ಹತ್ತಿ, ಇಳಿದು, ಹಾರಿ, ನೆಗೆದು ಆಟವಾಡುವುದು, ಜೀವನಕ್ಕೆ ಬೇಕಾದ ಕೌಶಲಗಳನ್ನು ಕಲಿಯುವುದು, ತಾಯಿಯೂ ಅದಕ್ಕೆ ಕಲಿಸುವುದು ಇತ್ಯಾದಿಗಳನ್ನು ಹಿಂದೆಂದೂ ಕಾಣದವನಂತೆ ಆಪ್ತತೆಯಿಂದ ಗಮನಿಸುತ್ತಿದ್ದೇನೆ.
ಒಡಹುಟ್ಟಿದವರ ನಡವಳಿಕೆಗಳನ್ನು ಗಮನಿಸೋಣ. ಸ್ವಲ್ಪ ಬೆಳೆದ ಮೇಲೆ ಮೊದಲಿಗೆ ಬ್ಲ್ಯಾಕ್ ಎಂಡ್ ವೈಟೀ ಉಳಿದವರಿಗಿಂತ ಬೇರೆಯಾಗಿ ಮಲಗುತ್ತಿತ್ತು. ಮನುಷ್ಯರ ದೃಷ್ಟಿಯಿಂದ ಇದು ಹೆಚ್ಚು ಸುಂದರ ಮತ್ತು ದಷ್ಟಪುಷ್ಟವಾಗಿದ್ದರೂ, ಅದಕ್ಕೆ ಅಹಂಕಾರ ಇತ್ತೆ? ಅದು ಒಡಹುಟ್ಟಿದ ಕರಿಯರ ಮತ್ತು ಮತ್ತೊಬ್ಬಳ ಜೊತೆ ವರ್ಣಭೇದ ನೀತಿ ಮಾಡುತ್ತಿತ್ತೆ? ಹೇಳುವುದು ಕಷ್ಟಸಾಧ್ಯ. ಇವುಗಳ ತಾಯಿತಂದೆಯರಲ್ಲಿ ಇರಲಿಲ್ಲ ಎಂಬುದು ಮಕ್ಕಳನ್ನು ನೋಡಿದರೆ ಸುಸ್ಪಷ್ಟ. ಈಗ ಇವೆಲ್ಲವೂ ಜೊತೆಜೊತೆಯಾಗಿ ಇರುತ್ತವೆ. ತಮ್ಮ ಮೈಕೈ, ಬಾಲ ನೆಕ್ಕಿ ಶುಚಿಗೊಳಿಸುವುದರ ಜೊತೆಗೇ, ಒಡಹುಟ್ಟಿದವರನ್ನೂ ನೆಕ್ಕಿ ಶುಚಿಗೊಳಿಸುತ್ತವೆ. ಜೊತೆಗೆ ಯಾವುದೇ ಚಿಂತೆ ಇಲ್ಲದೇ ಒಂದರ ಹೊಟ್ಟೆ ಮೇಲೆ ಇನ್ನೊಂದರ ತಲೆ, ಒಂದರ ಮುಖದ ಮೇಲೆ ಇನ್ನೊಂದರ ಬಾಲ! ನೋಡಿದರೆ ಮೂರು ಜೊತೆ ಬೆಕ್ಕಿನಕಣ್ಣುಗಳು ನಿಮ್ಮನ್ನು ದಿಟ್ಟಿಸುತ್ತವೆ. ಸ್ವಲ್ಪ ಹತ್ತಿರದಿಂದ ನೋಡಿದರೆ, ಇನ್ನೆರಡು ಕಣ್ಣುಗಳು ಇರುವ ಕರಿ ಮುಖ ಮಾತ್ರ ಇವುಗಳ ಅಡಿಯಿಂದ ದಿಟ್ಟಿಸಿ ನೋಡುತ್ತಿರುತ್ತದೆ. ಮನುಷ್ಯರಿಗೆ ಈ ಗುಣಸ್ವಭಾವ ಇದೆಯೇ? ಮನುಷ್ಯ ಗುಣಗಳನ್ನು ಪ್ರಾಣಿಗಳಿಗೆ ಆರೋಪಿಸಬಹುದೆ?
ಇನ್ನು ಆಹಾರ ವಿಷಯಕ್ಕೆ ಬಂದರೆ, ಇವೆಲ್ಲವೂ ನನ್ನಂತೆ ಶುದ್ಧ- ಅಶುದ್ಧ ಮಾಂಸಾಹಾರಿ. ನಾನು ಮಾಂಸ, ಹೇಲು ತಿನ್ನುವ ದನ ನೋಡಿದ್ದೇನಾದರೂ, ಬರೇ ಸಸ್ಯಾಹಾರ ತಿನ್ನುವ ಬ್ರಾಹ್ಮಣ ಬೆಕ್ಕನ್ನು ನೋಡಿಯೇ ಇಲ್ಲ! ಲೇಡಿ ಬಗೀರಾಳಂತೆ ಇವುಗಳಿಗೆ ಪ್ಯೂರ್ ವೆಜ್ ಇಳಿಯುವುದೇ ಇಲ್ಲ. ಹಾಗಾಗಿ ಮೊತ್ತಮೊದಲ ಬಾರಿಗೆ ನಾವು ನಿತ್ಯವೂ ಮೀನು, ಮಾಂಸವನ್ನು ಇಷ್ಟಬಂದಂತೆ ತಿನ್ನುವ ತಾಕತ್ತಿಲ್ಲದವರಾದುದರಿಂದ ಕ್ಯಾಟ್ ಫೂಡ್ ಬಂತು. ನಾನು ನಂತರ ಎಟ್ಟಿದ ಪೊಡಿ (ಒಣ ಸಿಗಡಿ), ಮೊಟ್ಟೆ ತಂದೆ. ಇಲ್ಲಿಯೂ ವಿಶೇಷ.
ಕೆಲವರಿಗೆ ಎಟ್ಟಿದ ಪೊಡಿ ಆಗುವುದಿಲ್ಲ. ಕೆಲವರಿಗೆ ಅದಾಗುವುದಿಲ್ಲ, ಕೆಲವರಿಗೆ ಇದಾಗುವುದಿಲ್ಲ! ಮನುಷ್ಯರ ಮಕ್ಕಳಂತೆಯೇ. ಇಡ್ಲಿ ಮಾಡಿದರೆ ದೋಸೆ ಬೇಕು, ದೋಸೆ ಮಾಡಿದರೆ ಚಪಾತಿ ಬೇಕು.. ಉಪ್ಪಿಟ್ಟು ಇಳಿಯುವುದಿಲ್ಲ. ಮನುಷ್ಯರ ಮಕ್ಕಳಿಗೆ ಮನೆತಿಂಡಿಗಿಂತ ಹೊಟೇಲು ತಿಂಡಿ, ಜಂಕ್ ಫೂಡ್ ಇಷ್ಟ; ಕೆಲವು ಹಿರಿಯರಂತೆಯೇ! ಯಾರು ಹೇಳಿದ್ದು ಪ್ರಾಣಿಗಳಿಗೆ ಮಾನವ ಸ್ವಭಾವ ಅಥವಾ ವೈಸಾವರ್ಸಾ ಇಲ್ಲವೆಂದು.
ಇನ್ನು ನಾಟಕಗಳು!
ಮನೆಯಲ್ಲೇ ಇದ್ದು ಕೆಲಸ ಮಾಡುವ ನಾನು- ಇಡೀ ದಿನ ಒಬ್ಬಂಟಿಯಾಗಿ ಇರುವ ನಾನು- ಸಾಧ್ಯವಿರುವ ಎಲ್ಲಾ ತಿಂಡಿ, ಊಟ ಹಾಕುತ್ತೇನೆ. ಆದರೂ, ನನ್ನ ಹೆಂಡತಿ ಎದ್ದಕೂಡಲೇ ಅಥವಾ ಶಾಲೆಯಿಂದ ಮರಳಿಬಂದ ಕ್ಷಣವೇ ಕಾಲುಗಳಿಗೆ ಅಡ್ಡ ಬರುತ್ತಾ “ನನಗೆ ಅವನು ಏನೂ ಕೊಟ್ಟಿಲ್ಲ!” ಎಂದು ಕಂಪ್ಲೇಂಟ್ ಮಾಡುವಂತೆ- ಮ್ಯಾಂವ್ ಮ್ಯಾಂವ್ ಹೇಳುತ್ತಿದ್ದವಳು “ಕ್ರ್ಯಾಂ ಕ್ರ್ಯಾಂ” ಎಂದು ಹೃದಯ ವಿದ್ರಾವಕವಾಗಿ ಅರಚುತ್ತಿದ್ದಳು- ಈ ಬ್ಲ್ಯಾಕ್ ಬಗೀರಾ! ತಿಂಡಿ ಗ್ಯಾರಂಟಿ. ಮನುಷ್ಯರ ಮಕ್ಕಳೂ ಮಾಡುವುದು ಇದನ್ನೇ ತಾನೇ?
ಈಗಲೂ ಈ ಬೆಕ್ಕುಗಳು ಬೆಳಿಗ್ಗೆ ಎದ್ದು ಮುಚ್ಚಿದ ಬಾಗಿಲು ತೆರೆದ ಕ್ಷಣ, ಆರಚಾಡಿ ಏನಾದರೂ ಹಾಕು ಇಲ್ಲವಾದಲ್ಲಿ ನಿನ್ನನ್ನೇ ತಿನ್ನುತ್ತೇವೆ ಎಂದು ಬೆದರಿಸುತ್ತವೆ. ಬ್ರೌನಿಯಂತೂ ಕಾಲಿಗೆ ಮೃದುವಾಗಿ ಕಚ್ಚಿ ಲುಂಗಿ ಎಳೆದು ರಂಪಾಟ ಮಾಡುತ್ತದೆ. ತಿಂಡಿ ಹಾಕಬೇಕಾದ ಹೊತ್ತಿಗೆ ಘೇರಾವ್! ಕಾಲಿನಡಿಗೆ ಬಿದ್ದು ಪ್ರಾಣ ತ್ಯಾಗಕ್ಕೂ ನಿರ್ಧಾರ. ಮ್ಯಾಂವ್, ಪೀಂ, ಕರ್ರ್, ಗುರ್ರೆಂಬ ನಿರಂತರ ಘೋಷಣೆ!
ಆಟ! ಪಾಠ!
ನಡುವೆ ತಾಯಿ- ಮಕ್ಕಳಿಗೇ ಕಲಿಸಲೆಂದು ಕೊಲ್ಲದೇ ತಂದ ಚಿಕ್ಕ ಹಾವುಗಳು, ಅರಣೆ, ಓತಿ ಮುಂತಾದ ಚಿಕ್ಕ ಪ್ರಾಣಿಗಳ ಜೊತೆ ಚಿತ್ರಹಿಂಸೆ ಕೊಟ್ಟು ಆಡಿ, ಕೊಂದು ತಿನ್ನುವುದು ಮಾಡುತ್ತಿದ್ದವು. ಇದನ್ನು ನಾವು ಮನುಷ್ಯರು- ಕ್ರೂರ ಸ್ವಭಾವ ಎಂದು ಆರೋಪಿಸಬಹುದಲ್ಲವೆ? ಆದರೆ, ಬೇಟೆಯಾಡುವ ಬಗ್ಗೆ ಪ್ರಾಣಿ ತಾಯಿ- ಮಕ್ಕಳಿಗೆ ಕೊಡುವ ಶಿಕ್ಷಣವಲ್ಲವೇ ಇದು? ಈಗಲೂ ಅವುಗಳು ನಿತ್ಯ ಕಾದಾಡುತ್ತವೆ- ಹಿಂಸೆ, ಕೋಪ ಇಲ್ಲದೇ. ವೀಕಿ ಹೊಂಚುಹಾಕಿ ಅಡಗಿ ಕುಳಿತು ಬಲಿಷ್ಟ ಬ್ಯಾಕ್ ಎಂಡ್ ವೈಟ್ ಮೇಲೆ ದಾಳಿ ಮಾಡಿ ಓಡಿಹೋಗುವುದೋ, ಇಳಿಯಲಾಗದ ಮರ ಹತ್ತುವುದೋ, ಕಿಟಕಿ ಸ್ಕ್ರೀನ್‌ಗಳನ್ನು ಹತ್ತಿ ಹರಿದುಹಾಕುವುದೋ, ಶೆಲ್ಫಿನಲ್ಲಿ ಜೋಡಿಸಿಟ್ಟ ನನ್ನ ಪುಸ್ತಕಗಳ ಅಟ್ಟಿಯನ್ನು ಮಗುಚಿ ಹಾಕಿ, ದೊಡ್ಡ ದೊಡ್ಡ ಪುಸ್ತಕಗಳನ್ನು ಓದುವುದೋ, ನನ್ನ ಮಂಚದ ಕೆಳಗೆ, ಮನೆಯ ಮೂಲೆಯಲ್ಲಿ ಒಂದು-ಎರಡು ಮಾಡುವುದೋ- ನನಗೆ ಒಂದೂ ಮಾನವ ಮಕ್ಕಳಿಗಿಂತ ಬೇರೆಯಾಗಿ ಕಾಣಲಿಲ್ಲ! ಸಹಜ ಕುತೂಹಲ. ಆದರೆ, ಒಂದು-ಎರಡು ಸಮಸ್ಯೆಯಾಗಿ ಕಾಡಿತು. ಮೊದಲಿಗೆ ಬಂದು ಹೊದಿಕೆಯ ಒಳಗೇ ಮಲಗುವುದು. ಅಲ್ಲೇ ಮತ್ತು ಮಂಚದ ಕೆಳಗೇ ಕಕ್ಕ, ಚಿಚ್ಚಿ ಮಾಡುವುದು, ಕಾರುವುದು, ನಾವು ಆ ಭಯಂಕರ ವಾಸನೆ ಸಹಿಸಿ ಕ್ಲೀನ್ ಮಾಡುವುದು ನಡೆದೇ ಇತ್ತು; ನಡೆದೇ ಇವೆ. ಇದನ್ನು ನಮ್ಮ ಮಕ್ಕಳು ಮಾಡಿಲ್ಲವೆ? ನಾವು ಮಾಡಿಲ್ಲವೇ, ಅನುಭವಿಸಿಲ್ಲವೆ? ಹಿರಿಯರು? ಅವರ ಹಿರಿಯರು? ಅದಕ್ಕಾಗಿ ಹೊಯ್ಗೆ ತುಂಬಿಸಿದ ಪ್ಲಾಸ್ಟಿಕ್ ಟ್ರೇಗಳನ್ನೂ ಮಕ್ಕಳು ತಂದಿದ್ದಾರೆ.
ಸ್ಥಿತ್ಯಂತರ
ಬರಬರುತ್ತಾ, ಮಕ್ಕಳು ದೊಡ್ಡವರಾಗುತ್ತಾ ಬರುತ್ತಿದ್ದಂತೆ ಬಗೀರಾ ಬೆಕ್ಕು- ಮೊಲೆ ಕೊಡುತ್ತಿದ್ದುದು, ರಕ್ಷಣೆ ನೀಡುತ್ತಿದ್ದುದು, ಮೈನೆಕ್ಕಿ ಸ್ನಾನ ಮಾಡಿಸುತ್ತಿದ್ದು, ಎಲ್ಲಾ ಮರೆತು ಮಕ್ಕಳನ್ನೇ ದೂರಮಾಡಿ ಗರ್ರೆನ್ನಲು ಆರಂಭಿಸಿತು. ಅದಕ್ಕೆ ಇನ್ನೊಂದು ಸೆಟ್ ಮಕ್ಕಳಾಗಲಿವೆ! ಅದನ್ನು ಸಾಕುವ ಜವಾಬ್ದಾರಿ ಅವಳಿಗೋ, ನಮಗೋ? ಸರಿ, ಇವುಗಳಲ್ಲಿ ಎರಡು ಹೆಣ್ಣು, ಎರಡು ಗಂಡು. ತಾಯಿ, ಅಜ್ಜಿ, ಮಕ್ಕಳೆಲ್ಲಾ , ಮರಿ ಇಟ್ಟರೆ ನಾವೇನು ಮಾಡುವುದು? ಬೀದಿಯಲ್ಲಿ ಬಿಡುವುದು ಸಾಧ್ಯವಿಲ್ಲ. ಹಿಂದೂಗಳು ಹೆಚ್ಚು ಮಕ್ಕಳು ಹುಟ್ಟಿಸಬೇಕು ಎನ್ನುವ ಸ್ವಾಮೀಜಿಗಳ, ಮುಲ್ಲಾ, ಪಾದ್ರಿಗಳ ಜೊತೆ ಬಿಡಲೇ? ಅವರಲ್ಲಿ ಸುರಕ್ಷಿತವೆಂದು ಭಾವಿಸಬಹುದೇ?
ಈ ನಡುವೆ ಕಳೆದ ಕಂತಿನಲ್ಲಿ ಹೇಳಿದ್ದ ಒಂದು ಅತಿಥಿ ಮನೆಬಾಗಿಲಿಗೆ ಬಂದು ಜೀವನದೊಂದಿಗೆ ಸೇರಿಕೊಂಡಿತು. ನಮ್ಮ ಊರ ಶಾಲೆಯ ಮಕ್ಕಳು ಒಂದು ಮಳೆಗಾಲದ ಸಂಜೆ ಒಂದು ಪುಟ್ಟ ಬೆಕ್ಕಿನ ಮರಿಯನ್ನು ಬಿರುಮಳೆಯ ನಡುವೆ ನಮ್ಮ ಜಗಲಿಯಲ್ಲಿ ಬಿಟ್ಟುಹೋದರು. ಒಂದು ಕೈಯಲ್ಲಿ ಹಿಡಿಯಬಹುದಾದ ಪುಟಾಣಿ. ಮಳೆಯಲ್ಲಿ ನೆನೆದು ಒದ್ದೆಮುದ್ದೆ. ಗಡಗಡ ನಡುಗುತ್ತಿದೆ. ನನ್ನ ಹೆಂಡತಿ ಸಹಜ ಕನಿಕರ ತೋರಿಸಿ, ನೀರೊರಸಿ, ಬೆಚ್ಚಗೇ ಇಟ್ಟಿದ್ದಳು- ನನಗೆಂದೂ ಮಾಡದಂತೆ! ಕಣ್ಣು ತೆರೆಯುವ ಮೊದಲೇ, ನಡೆಯುವ ಮೊದಲೇ ಈ ಮಗುವನ್ನು ಬಿಟ್ಟು ಹೋದ ಮಾನವ ಪ್ರಾಣಿಯ ಮುಸುಡಿಗೆ ಬಡಿಯವ ಎಂದು ಹುಡುಕಲು ಹೊರಟರೆ ಸಿಕ್ಕಿದ್ದು ಮಕ್ಕಳು!
ಈ ಮಗುವಿಗೆ ತಾಯಿಯಿಲ್ಲ. ಮೊಲೆಯಿಲ್ಲ. ನಾಲ್ಕು ಮರಿಗಳು ತಾಯಿಯ ಮೊಲೆ ಕುಡಿಯುವುದನ್ನು ನೋಡಿ ಅದಕ್ಕೆ ಯಾವ ಮಾನವ ಭಾವನೆಗಳು ಬಂದಿರಬೇಕು!? ನನಗೆ ಗೊತ್ತಿಲ್ಲ. ಇದು ನನ್ನನ್ನೇ ತಾಯಿಯೆಂದು ತಿಳಿದು ನನ್ನ ಹೊದಿಕೆ ಅಡಿಯೇ ಮಲಗುತ್ತಿತ್ತು. ಅಲ್ಲೆ ಕಕ್ಕ, ಚಿಚ್ಚಿ, ಮೂತ್ರ ಎಲ್ಲವೂ! ವಾಸನೆ! ನನಗೇನೂ ಆಗಲಿಲ್ಲ. ಮಾನವ ಮಕ್ಕಳೂ ಮಾಡಿಲ್ಲವೆ? ನನ್ನ ಎದೆ, ಕೈಕಾಲು ಎಲ್ಲವನ್ನೂ ತಡಕಾಡಿ ಮೊಲೆಗಾಗಿ ಹುಡುಕುತ್ತಿತ್ತು ಪಾಪ! ಯಾವುದೇ ಪ್ರಾಣಿಗೆ ಇಲ್ಲಿ ತಾಯಿಯಿದೆ, ಅಲ್ಲಿ ಮೊಲೆಯಿದೆ, ಹಾಲಿದೆ, ರಕ್ಷಣೆಯಿದೆ ಎಂದು ಗೊತ್ತಾಗುವುದಾದರೂ ಹೇಗೆ?
ಇದನ್ನುಒಂದು ದಿನ ಬ್ಲ್ಯಾಕ್ ಬಗೀರಾ ಜೊತೆಗೆ ಸೇರಿಸಲು ಯತ್ನಿಸದೆ. ಉಹೂಂ! ಮಾನವರಲ್ಲಿ ಕಾಣುವ ಸವತಿ ಮತ್ಸರ ಅವಳನ್ನೂ ಬಿಡಲಿಲ್ಲ! ಆಯ್ತು ಬಿಡು ಎಂದು ಮರಿಯನ್ನು ಎತ್ತಿ ತಂದು ನನ್ನ ಜವಾಬ್ದಾರಿ ಎಂದುಕೊಂಡೆ. ಅವಳು ಈ ಮರಿಗೆ ಹೊಡೆಯುತ್ತಳೇ ಇದ್ದಳು.
ಒಂದು ಸಂಜೆ ಈ ಮರಿ ನರಳುತ್ತಿತ್ತು. ಕಿರಿಯ ಮಗ ಅದಕ್ಕಾಗೇ ಮಾಡಿದ್ದ ಹಳೆ ಸೀರೆಗಳ ಬುಟ್ಟಿಯಲ್ಲಿ ಮಲಗಿಸಿದ. ಅದು ಅಲ್ಲಿಯೂ ಚಡಪಡಿಸುವುದು ನೋಡಿ, ಎದೆಯಲ್ಲಿ ಕೂರಿಸಿ, ನೇವರಿಸಿ ಸಂತೈಸಿದೆ. ಅದು ನನ್ನ ಎದೆಯಲ್ಲಿಯೇ ಒಂದು-ಎರಡು ಮಾಡಿ, ಅನಂತಮೂರ್ತಿಯವರ ಆಕಾಶದಲ್ಲಿ ಲೀನವಾಯಿತು. ನೂರು ಸಾವುಗಳನ್ನು ಕಂಡಿರುವ ನಾನು, ಬಿಕ್ಕಿಬಿಕ್ಕಿ ಉಮ್ಮಳಿಸಿ ಅತ್ತುಬಿಟ್ಟೆ! ದೇವರೆಂಬವ ಒಂದು ಜೀವವನ್ನು ಹುಟ್ಟಿಸುತ್ತಾನೆ ಎಂದಾದರೆ, ಆ ಮಕ್ಕಳನ್ನು ಇಪ್ಪತ್ತೇ ದಿನಗಳಲ್ಲಿ ಮುಗಿಸುವ ನೀನೆಂತಾ ಕ್ರೂರಿ? ಅದನ್ನು ಮಗ ಮಣ್ಣು ಮಾಡಿ ಬಂದ.
ಈ ನಡುವೆ ಇನ್ನೊಂದು ವಿಷಯ ಗೊತ್ತಾಗಲೇ ಇಲ್ಲ. ನೆರಹೊರೆಯಲ್ಲೇ ಇರುವ ನನ್ನ ತಂಗಿಯ ಮನೆಯ ಬೆಕ್ಕು “ಡಿಂಕೂ” ನಾಯಿಗಳು ಓಡಿಸಿದುದರಿಂದ ಓಡಿ ನಮ್ಮ ಗದ್ದೆ ಬೈಲುಗಳನ್ನು ದಾಟಿ, ನೀರಿನ ತೋಡನ್ನೂ ದಾಟಿ, ರೆಂಗೇಲು ಎಂಬಲ್ಲಿ ನೆಲೆನಿಂತಿತ್ತು.
ಅದು ಮುದ್ದಿನ ಬೆಕ್ಕು, ಬಗೀರಾಳ ಮಕ್ಕಳ ತಂದೆಯಲ್ಲಿ ಒಬ್ಬನಿರಬೇಕು. ನಾನ್‌ವಜ್, ಕ್ಯಾಟ್ ಫೂಡ್ ಬಿಟ್ಟರೆ ಏನೂ ತಿನ್ನುವುದಿಲ್ಲ. ಸ್ವಲ್ಪ ಮೊದ್ದ. ಅದರ ದುರದೃಷ್ಟ ನೋಡಿ! ಒಂದು ದಿನ ಬೆಳಿಗ್ಗೆ ಪೇಟೆಗೆ ಹೋಗಿ ಬರುವಾಗ, ನನ್ನ ಪರಿಚಯದ ಮಹಿಳೆ ಹೇಳಿದರು: ನಿಕಿಲಣ್ಣ ಇದು ನಿಮ್ಮ ತಂಗಿಯ ಬೆಕ್ಕಲ್ಲವೆ? ನನಗಾಗ ಅದು ಮಾಯವಾಗಿ ಹತ್ತು ದಿನಗಳಾದರೂ ಗೊತ್ತಿರಲಿಲ್ಲ. ನಾನು ಅದಿಷ್ಟು ದೂರ ಬರಲಾರದು ಎಂದೆ!
ನಾನು ಹೇಳಿದ ಕೂಡಲೇ ನಾನು, ಬಾವ, ನನ್ನ ಕಿರಿಯ ಮಗ ಅದನ್ನು ಹುಡುಕಿಕೊಂಡು ಹೊರಟೆವು. ಎಲ್ಲಾ ಮನೆಗಳಲ್ಲೂ ಕೇಳಿದೆವು. ಅದು ಸಿಗಲಿಲ್ಲ. ನಿನ್ನೆ ಸಂಜೆ ಮತ್ತೆ ಕಾಣಸಿಕ್ಕಿ ಮ್ಯಾಂವ್ ಮ್ಯಾಂವ್ ಅಂದಿತು. ಹಿಡಿಯಲು ಸಿಗಲಿಲ್ಲ. ಈ ಬೆಕ್ಕು ಇನ್ನೂ ಆಕಾಶ ಸೇರಿಲ್ಲ. ನಾಳೆ ಹುಡುಕುತ್ತೇವೆ.
ಆಕಾಶ ಮತ್ತು ಬೆಕ್ಕು ಇಷ್ಷೇ. ನಾವೆಷ್ಟೋ ಅಷ್ಟೇ!