*ಚಂದ್ರಪ್ರಭ ಕಠಾರಿ
ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಶನದ ಅಂಗವಾಗಿ ʼಹಾರರ್ ನ್ಯೂಸ್ʼ ಟಿವೀ ಚಾನೆಲ್ಲಿನ ಮುಖ್ಯ ಸಂಪಾದಕ ಬಕೆಟ್ ಗೋಸ್ವಾಮಿ ಕುಳಿತ ಕುರ್ಚಿಯಲ್ಲೇ ಬ್ರೇಕ್ ಡ್ಯಾನ್ಸ್ ಮಾಡಲು ಸ್ಟುಡಿಯೊದಲ್ಲಿ ಕೈಕಾಲುಗಳನ್ನು ಗಾಳಿಯಲ್ಲಿ ಜಾಡಿಸುತ್ತ ತಾಲೀಮು ನಡೆಸಿದ್ದ. ಆದರೆ, ಎಷ್ಟು ಹೊತ್ತಾದರೂ ಮೇಕಪ್ ರೂಮಿನಿಂದ ಹೊರಬರದ ನಮೋ ಆಸ್ಥಾನದ ಹೊಸ ಮಂತ್ರಿ, ನಟಿಮಣಿ ಮಂಗನಾ ಶೇಪೌಟ್ ಹೊರಬರದಿದ್ದಾಗ ಕುಳಿತ ಚೇರಿಗೆ ಅಂಟಿಸಿದ್ದ ಮುಳ್ಳುಗಳು ಚುಚ್ಚಿ, ಕೂರಲು ಆಗದೆ ಡ್ಯಾನ್ಸ್ ಆರಂಭಿಸುವಂತಾಗಿತ್ತು.
ಬಾಲಿವುಡ್ಡಿನಲ್ಲಿ ನಟಿಸುತ್ತಲೇ, ಶೂಟಿಂಗ್ ನಡುವೆ ವಿರಾಮ ಸಿಕ್ಕಾಗೆಲ್ಲ ಜಪಸರ ಹಿಡಿದು ʼನಮೋ…ನಮೋ…ನಮೋʼ ಎಂದು ಜಪಿಸುತ್ತ ಸಾಮ್ರಾಟನ ಅಖಂಡಭಕ್ತಳಾಗಿದ್ದ ಮಂಗನಾಳಿಗೆ ಮಂತ್ರಿಗಿರಿ ಸಿಕ್ಕಿದ್ದು ಬರೀ ಭಜನೆಯಿಂದಲ್ಲ. ಅದಕ್ಕೆ ಹರುಕುಬಾಯಿಯಲ್ಲಿ ಅವಳ ಹಿರಿಯಕ್ಕನಂತಿದ್ದ ಮಾಜಿಮಂತ್ರಿ ವಿಸ್ಮೃತಿ ಈರಾಣಿಯೂ ಕಾರಣ.
ಸಿಲಿಂಡರ್ ರಾಣಿ ಎಂದೇ ಕುಖ್ಯಾತಿಯಾಗಿದ್ದ ವಿಸ್ಮೃತಿ ಈರಾಣಿ ಜನಾದೇಶದಲ್ಲಿ ಸೋತು, ಸಾಮ್ರಾಟ ನಮೋ ವಿರೋಧಿಗಳ ಎಲೆಅಡಿಕೆ ತಾಂಬೂಲಕ್ಕೆ ಸುಣ್ಣವಾಗಿದ್ದು ಈಗ ಇತಿಹಾಸ. ಭಾರೀ ಬಹುಮತದಲ್ಲಿ ಗೆಲ್ಲುತ್ತೇನೆಂದು ದೆವ್ವ ಮೆಟ್ಟಿದವಳಂತೆ ಕುಣಿಯುತ್ತಿದ್ದವಳಿಗೆ ಜನರು ಗಂಜಲ ಎರಚಿ ಎಚ್ಚರಿಸಿ, ಮುಖಕ್ಕೆ ಮಂಗಳಾರತಿ ಎತ್ತಿ ʼಗಂಟೆಮೂಟೆ ಕಟ್ಟಿ ಹೊರಡುʼ ಎಂದದ್ದು ಈರಾಣಿಗೆ ಕನಸಿನಲ್ಲಿಯೂ ಎಣಿಸದ ಸಂಗತಿಯಾಗಿತ್ತು. ಅವಳೇನೊ ರಾತ್ರೋರಾತ್ರಿ ಸೋಲಿನ ಅಪಮಾನದಿಂದ ಸೆರಗಲ್ಲಿ ಮುಖ ಮುಚ್ಚಿ, ʼಹೋಂ ಸ್ವೀಟ್ ಹೋಂʼ ಎಂದು ಮನೆದಾರಿ ಹಿಡಿದಿದ್ದಳು. ಆದರೆ – ಸಾಮ್ರಾಟ ನಮೋನನ್ನು ಹೊಗಳಿ ಅಟ್ಟಕ್ಕೇರಿಸಲು, ವಿರೋಧಿಗಳನ್ನು ಮಣಿಸಲು ಬಾಯಿ ಬಡಿದುಕೊಳ್ಳುವ ನಾರಿಮಣಿಗಳೇ ಕಮಲಪಕ್ಷದಲ್ಲಿ ಇಲ್ಲವಾಗಿ ಪರಿಸ್ಥಿತಿ ದಯನೀಯವಾಗಿತ್ತು.
ಹರುಕು ಬಾಯಿಯ ಸ್ಥಾನ ಖಾಲಿ ಬಿಡಬಾರದೆಂದು ವಿಧಿ ಇಲ್ಲದೆ, ಡಾಬರ್ ಮನ್ ತಳಿ ಅಲ್ಲದ ಪೊಮೆರಿಯನ್ ಜಾತಿಯ ಮಂಗನಾ ಶೇಪೌಟ್ ಳನ್ನು ಬೊಗಳೊ ಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಕೆಸರು ಮೆತ್ತಿಕೊಂಡ ಕೆಲ ಕಮಲೀಗಳು ಇದ್ದರಾದರೂ ಮಂಗನಾಳನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಅವಳ ಬೇವ್ಕೂಫಿತನ. ಕಿರಿಗಂಟಲಿನಿಂದ ಹೊರಡುವ ಅಸಂಬದ್ಧ ಪ್ರಲಾಪಗಳಿಗೆ ಡಾಲ್ಬಿ ಸೌಂಡ್ ಎಫೆಕ್ಟ್ ಇರದಿದ್ದರೂ, ಬಳಸುವ ಪದಗಳ ಗುರುತ್ವ ಅಗಾಧವಾಗಿದ್ದು ಅಟ್ಮೊಸ್ ಸೌಂಡಿಗೆ ಸರಿಸಮವಾಗಿತ್ತು.
ಕೊನೆಗೂ ಸ್ಟುಡಿಯೊಗೆ ಹಂಸದಂತೆ ಬಳುಕುತ್ತ ಮಂಗನಾಳು ಬಂದಾಗ, ʼಆಕಾಶದಿಂದ ಧರೆಗಿಳಿದ ಗೊಂಬೆ…ಇವಳೇ…ಇವಳೇ ಚಂದನದ ಗೊಂಬೆʼ ಎಂಬ ಹಾಡು ಬಕೆಟ್ ಗೋಸ್ವಾಮಿಯ ಕಿವಿಯಲ್ಲಿ ಮಾರ್ದನಿಸಿ ಮೈಯಲ್ಲಿ ಕರೆಂಟ್ ಪಾಸಾಯಿತು.
ಬಕೆಟ್ ಸ್ವಾಮಿ: ಪ್ಲೀಸ್…ಟೇಕ್ ಯುರ್ ಸೀಟ್…
ಮಂಗನಾ: ಧನ್ಯವಾದ್…ಬಕೆಟ್ ಜೀ.
ಬಕೆಟ್ ಸ್ವಾಮಿ: ಇಂಟರ್ ವ್ಯೂ…ಶುರುಮಾಡೋಕೆ ಮುಂಚೆ ಒಂದು ಪ್ರಶ್ನೆ. ಆಫ್ ದ ರೆಕಾರ್ಡ್…ಅದೇನು ನಿಮ್ಮ ಹೆಸ್ರು…ಮಂಗ…ಸಾರಿ…ಮಂಗನಾ…ಶೇಪೌಟ್ ಅಂತ ಬೇರೆ ಸೇರಿಸ್ಕೊಂಡಿದ್ದೀರ?
ಮಂಗನಾ: (ಮಲ್ಲಿಗೆಯ ನಗೆ ಚೆಲ್ಲುತ್ತ) ಅದು…ನಮ್ಮನೇಲಿ ಇಟ್ಟ ಹೆಸ್ರು….ನಂದು ಕೋತಿ ಬುದ್ದಿ ಅಂತ… ಶೇಪೌಟ್ ಅಂದರೆ ನನ್ನ ಶೇಪು…ಔಟ್ ಟು ದಿ ಸ್ಟಾಂಡಿಂಗ್ ಅಂತ.
ಬಕೆಟ್ ಸ್ವಾಮಿ: (ಅಣಕಿಸುವಂತೆ) ಸೊ ವಿಯರ್ಡ್…!
ಮಂಗನಾ: (ಕೋಪಗೊಂಡು) ನಿಮ್ ಹೆಸ್ರು…ಭಾರೀ ಚೆಂದಾನ…ಬಕೆಟ್ ಅಂತೆ…ಪ್ಲಾಸ್ಟಿಕ್ದಾ ಅಥ್ವಾ ಐರನ್ದಾ?
ಬಕೆಟ್ ಸ್ವಾಮಿ: (ದೇಶಾವರಿ ನಗೆ) ಎರಡು ಅಲ್ಲ…ಅದು ತಾಮ್ರದ್ದು… ನಮೋ ಸಾಹೇಬರಿಗೆ ಹೆಚ್ಚು ಬಕೆಟ್ ಹಿಡಿಯೋದು ನಾನೇ! ʼಬಕೆಟ್ ಸ್ವಾಮಿʼ ಅವರೇ ಕೊಟ್ಟ ಬಿರುದು. ಇರಲಿ…ಇಂಟರ್ ವ್ಯೂ ಶುರು ಮಾಡೋಣ್ವ?
ಹಿಂಬದಿಯ ಎಲ್ಇಡಿಯ ದೊಡ್ಡ ಪರದೆಯಲ್ಲಿ “ಸಾಮ್ರಾಟ್ ನಮೋ ಅಮರ್ ಹೈ…ವಿಶ್ವಗುರು ಜಿಂದಾಬಾದ್…ಫೇಕ್ ಫಕೀರನಿಗೆ ಜಯವಾಗಲಿ” ಎಂದು ಬೃಹತ್ತಾದ ಸ್ಟೇಡಿಯಮ್ ನಲ್ಲಿ ಗುಡ್ಡೆ ಹಾಕಿದ್ದ ಸಾವಿರಾರು ಭಕ್ತಗಣಗಳು ಜೈಕಾರ ಹಾಕುತ್ತಿರುವ ದೃಶ್ಯಾವಳಿಯು ಬಿತ್ತರಿಸಲಿತ್ತು.
ಬಕೆಟ್ ಸ್ವಾಮಿ: ಹಾರರ್ ನ್ಯೂಸ್ ಚಾನೆಲ್ಲಿನ ಸಮಸ್ತ ಭಕ್ತ ವೀಕ್ಷಕರಿಗೆ ಎಪ್ಪತ್ತೆಂಟನೇ ಸ್ವಾತಂತ್ರೋತ್ಸದ ಶುಭಾಶಯಗಳು. ಇವತ್ತಿನ ನಮ್ಮ ವಿಶೇಷ ಸಂದರ್ಶನದಲ್ಲಿ ನಿಮ್ಮೆಲ್ಲರ ಮತ್ತು ಸಾಮ್ರಾಟರ ಮೆಚ್ಚಿನ ಮಂಗನಾ ಶೇಪೌಟ್….
ಮಂಗನಾ: ಸಾರಿ…ಒಂದ್ ಸೆಕೆಂಡ್…ಇದು ದೇಶದ ಹತ್ತನೇ ಸ್ವಾತಂತ್ರೋತ್ಸವ…
ಬಕೆಟ್ ಸ್ವಾಮಿ: ಮರೆತಿದ್ದೆ…ಥ್ಯಾಂಕ್ಸ್…ನಮೋ ಸಾಹೇಬರು ಕೊಟ್ಟ ಹತ್ತನೇ ದ್ವಿತೀಯ ಸ್ವಾತಂತ್ರೋತ್ಸದ ಶುಭಾಶಯಗಳು.
ಮಂಗನಾ: ಹೌದು…ದೇವಾಂಶ ಸಂಭೂತ ನಮೋರು ಅವತರಿಸದಿದ್ದರೆ ನಾವೆಲ್ಲ ಗುಲಾಮರಾಗಿ ಬಾಳ ಬೇಕಾಗಿತ್ತು. ಹೊಟ್ಟೆಗೆ ಪಿಜ್ಜಾ, ಬರ್ಗರ್ ಇಲ್ಲದೆ…ತೊಡಲು ಮೇಡಮ್, ಬಿಬಾ, ಜಾರ ಕ್ಲೋತಿಂಗ್ ಇಲ್ಲದೇ…ಮ್ಯಾನ್ ಷನ್ ಇಲ್ಲದೆ ಜೋಪಡಿಯಲ್ಲಿ ಅನಾಥರಂತೆ ಇರಬೇಕಿತ್ತು.
ಬಕೆಟ್ ಸ್ವಾಮಿ: ಯೆಸೆಸ್…ಮಂಗನಾ ಅವರೇ…ಎಂದಿನಿಂದ ನಿಮಗೆ ನಮೋ ದೇವರು ಮತ್ತು ಹೇಗೆ ಸ್ಪೂರ್ತಿ?
ಮಂಗನಾ: ಅದೊಂದು ಬ್ಯೂಟಿಫುಲ್ ಎಕ್ಸ್ ಪಿರೀಯನ್ಸ್…ಒಂದಾದ ಮೇಲೊಂದರಂತೆ ನನ್ನ ಸಿನಿಮಾಗಳು ತೋಪೆದ್ದು ಮಕಾಡೆ ಮಲಗುತ್ತಿದ್ದಾಗ, ಕಾಲ್ ಶೀಟ್ ಕೇಳೋರು ಗತಿ ಇಲ್ಲದೆ ಏನು ಮಾಡುವುದೆಂದು ತೋಚದೆ ಡಿಪ್ರೆಶನ್ನಿಗೆ ಹೋಗಿದ್ದೆ. ಒಂದು ರಾತ್ರಿ ಮಲಗಿದ್ದಾಗ “ಮಂಗಾ! ಎದ್ದೇಳು ನಿನ್ನ ಕಷ್ಟಗಳು ಮಾಯವಾಗುವ ದಿನಗಳು ಹತ್ತಿರದಲ್ಲಿದೆ” ಎಂದು ಯಾರೋ ಕೂಗಿದ ಹಾಗಾಯ್ತು. ಭಯದಿಂದ ಎದ್ದರೆ, ನಮೋ ಭಗವಾನರು ಸಾಕ್ಷಾತ್ ವಿಷ್ಣುವಿನ ಹನ್ನೊಂದನೇ ಅವತಾರದಲ್ಲಿ ಗಡ್ಡ ನೀವುತ್ತ ನಿಂತಿದ್ದರು.
ಬಕೆಟ್ ಸ್ವಾಮಿ: (ಸ್ವಗತ – ನಾನೇ ರೀಲ್ ಮಾಸ್ಟರ್ ಅಂದ್ರೆ ಇವ್ಳು ನನ್ನೇ ಮೀರಿಸ್ತಾಳೆ…ಏನ್ ಸೂಪರ್ ಆಕ್ಟಿಂಗ್!)
ಖಂಡಿತ…ಅವರು ದೇಶವನ್ನು ಕಾಪಾಡಲು ಬಂದ ಅವತಾರ ಪುರುಷ. ಅವರ ಮಾತಲ್ಲೇ ಹೇಳೋದಾದರೆ…ಕೋಟ್…ನಾನು, ನನ್ನ ಅಮ್ಮನ ಹೊಟ್ಟೇಲಿ ಹುಟ್ಟಿಲ್ಲ. ನಾನು, ನಾನ್ ಬಯೊಲಾಜಿಕಲ್ ಬಾರ್ನ್…ನನ್ನನ್ನು ಈ ಭೂಮಿಗೆ ಆಕಾಶದಿಂದ ದೇವರೇ ಸೀದಾ ಉದುರಿಸಿದ್ದು….ಅನ್ ಕೋಟ್…ಇಂಟೆರೆಸ್ಟಿಂಗ್…ಆಮೇಲೆ…
ಮಂಗನಾ: ಆವತ್ತಿನಿಂದ ಅವರನ್ನು ಜಪಮಾಲೇಲಿ ಸ್ತುತಿಸುತ್ತ ಭಕ್ತಿಯ ಸಾಗರದಲ್ಲಿ ಜಂಪ್ ಮಾಡಿ… ವೇವ್ಸ್ ಗಳಲ್ಲಿ ಮುಳುಗಿ ಏಳುತ್ತಿದ್ದೇನೆ…ಓಂ ನಮೋ ( ಕಣ್ಮುಚ್ಚಿ, ಕೆನ್ನೆ ಬಡಿದುಕೊಂಡು ವಂದಿಸಿದಳು)
ಬಕೆಟ್ ಸ್ವಾಮಿ: ಹೌದೌದು…ನನಗೂ ಆಗಾಗ ಖುದ್ದಾಗಿ ಬಂದು ಪೆಡಿಗ್ರೆ ಬಿಸ್ಕತ್ ಹಾಕಿ ಹೋಗ್ತಾರೆ. ಅದಿರಲಿ…ನೀವು ಬಾಲಿವುಡ್ಡು…ಹಾಲಿವುಡ್ಡು…ಟಾಲಿವುಡ್ಡು…ಅಂತ ಎಷ್ಟೊಂದು ವುಡ್ಡುಗಳಲ್ಲಿ ಆಕ್ಟಿಂಗ್ ಮಾಡ್ತಾ ಫೇಮಸ್ ಆಗಿದ್ದೀರಿ…
ಮಂಗನಾ: ವೇಟ್…ಸಧ್ಯಕ್ಕೆ ಬಚ್ಚನ್, ಖಾನ್ ಗಳಿಗಿಂತ ನಾನೇ ಮುಂದು…ನಂಬರ್ ಒನ್ ಆಕ್ಟರ್…
ಬಕೆಟ್ ಸ್ವಾಮಿ: ಓಹ್…ಅಮೇಜಿಂಗ್…ನನ್ನ ಪ್ರಶ್ನೆಯ ಎರಡನೇ ಭಾಗ…ನಮೋ ಭಗವಾನರು ನಿಮಗೆ ಹೇಗೆ ಸ್ಪೂರ್ತಿ? ಆ ಬಗ್ಗೆ ಹೇಳಿ.
ಮಂಗನಾ: ಓಹ್…ಆ ಬಗ್ಗೆ ಏನ್ ಹೇಳೋದು…ಅವರು ಫೆಂಟಾಸ್ಟಿಕ್, ಹಾರಿಬಲ್, ವೆರ್ಸಟೈಲ್ ಆಕ್ಟರ್…ಅವರನ್ನು ಮೀರಿಸೋರು ಜಗತ್ತಲ್ಲೇ ಯಾರೂ ಇಲ್ಲ…ಮುಂದೆ ಹುಟ್ಟೋದು ಇಲ್ಲ. ಮಹಾನ್ ನಟ. ಅವರ ಮುಂದೆ ನಂದು ಯಾವ ಆಕ್ಟಿಂಗ್! ಅವರ ಡ್ರೆಸ್ ಸೆನ್ಸ್…ಮ್ಯಾನರಿಸಮ್…ವಾಯ್ಸ್ ಮಾಡುಲೇಷನ್…ಅಬ್ಬಾ…ನಟ ಭಯಂಕರ…ಅವರಿಂದ ಕಲಿಯೋದು ಬಹಳಷ್ಟಿದೆ. ಅವರನ್ನು ನೋಡಿ ಚೂರುಪಾರು ಕಲೀತಿದ್ದೇನೆ.
ಬಕೆಟ್ ಸ್ವಾಮಿ: ಮತ್ತೆ…ನಮೋ ಅವರಿಗೆ ಆಸ್ಕರ್ ಅವಾರ್ಡ್ ಯಾಕೆ ಇನ್ನು ಸಿಕ್ಕಿಲ್ಲ?
ಮಂಗನಾ: ಓ…ಆಸ್ಕರ್ ಗೆ ನಿಜಕ್ಕೂ ಆ ಯೋಗ್ಯತೆ ಇದ್ಯಾ? ನಮೋ ಅವರಿಗೆ ಕೊಡುವಂಥ ಅವಾರ್ಡ್ ಗಳು ಭೂಮಿ ಮೇಲೆ ಯಾವುದು ಇಲ್ಲ. ಮಂಗಳ ಅಥವಾ ಶನಿಗ್ರಹದಲ್ಲಿ ಹುಡುಕಬೇಕು.
ಬಕೆಟ್ ಸ್ವಾಮಿ: (ಮಾತಾಡುತ್ತ ತನ್ನ ಆಕ್ಟಿಂಗ್ ಮಿಸ್ ಆಗುತ್ತಿರುವುದು ನೆನಪಿಗೆ ಬಂದು, ತಲೆಕೊಡವಿ, ಜೋರಾಗಿ ಮೇಜು ಕುಟ್ಟುತ್ತ) ಮಂಗನಾ ಮೇಡಮ್…ಹಾಗಾದರೆ, ದೇಶದ ಜನರಿಗೋಸ್ಕರ ಜನ್ಮ ತಾಳಿದವನಿಗೆ ವಿರೋಧಿಗಳು ಯಾಕಿದ್ದಾರೆ? ಅವರೆಲ್ಲ ಫೇಕು, ಜುಮ್ಲಾ, ಕಿಂಗ್ ಆಫ್ ಕರಪ್ಷನ್, ಬಾಯಿಹರುಕ ಅಂತೆಲ್ಲಾ ಏಕೆ ಟನ್ ಗಟ್ಟಲೆ ಬೈಯ್ತಿದ್ದಾರೆ?
ಮಂಗನಾ: ಅವರೆಲ್ಲ ದುಷ್ಟರು…ದೇಶದ್ರೋಹಿಗಳು…ನಮೋಬಾಬಾರು ಬಂದ ಮೇಲೆ ದೇಶದಲ್ಲಿ ಬಡತನ ಮಾಯವಾಗಿದೆ. ಆದರೂ ತಿಂಗಳಿಗೆ ಪುಕ್ಕಟೆ ಸಿಗುವ ಐದು ಕೇಜಿ ಅಕ್ಕಿ ತಿಂದು ವಿಷ ಕಾರುತ್ತಿದ್ದಾರೆ… ಬೆಗ್ಗರ್ಸ್…ಹತ್ತುವರ್ಷಗಳ ಹಿಂದೆ ಭಿಕಾರಿಗಳ ದೇಶ ಎಂದು ಮುಖ ತಿರುಗಿಸುತ್ತಿದ್ದ ಫಾರಿನರ್ಸ್ ಗಳು…ಈಗ ನಮ್ಮ ದೇಶದತ್ತ ಎಗರಿ ಎಗರಿ ನೋಡುತ್ತಿದ್ದಾರೆ.
ಬಕೆಟ್ ಸ್ವಾಮಿ: ಹೌದು…ಹಾಗೆ ನಮೋರ ಬೆಸ್ಟ್ ಫ್ರೆಂಡ್ಸ್ ಗಳಾದ ಅಂದಾನಿ, ತುಂಬಾನಿಯರಂಥ ಮಹನೀಯರನ್ನು ಬಿಡುತ್ತಿಲ್ಲ. ಅವರ ಬಾಯಿಗೆ ನಮೋ ದೇಶವನ್ನು ತುರುಕುತ್ತಿದ್ದಾನೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂಡನ್ ಬರ್ಗ್ ರಿಪೋರ್ಟ್ ಅಂತೆಲ್ಲ ಕೂಗಾಡುತ್ತಿದ್ದಾರೆ.
ಮಂಗನಾ: ಅಂದಾನಿ ಅಂಕಲ್, ತುಂಬಾನಿ ಅಂಕಲ್ ಗಳು ಇಲ್ಲದಿದ್ದರೆ ಈ ದೇಶವೇ ಇರುತ್ತಿರಲಿಲ್ಲ. ಕೆಲಸವಿಲ್ಲದೆ ಯಂಗ್ ಸ್ಟರ್ ಗಳು ತಿರುಪೆ ಎತ್ತಬೇಕಿತ್ತು. A1 A2 ಅಂಕಲ್ ಗಳಿಂದ ವಿಶ್ವದಲ್ಲೇ ನಮ್ಮ ದೇಶ ಆರ್ಥಿಕತೆಯಲ್ಲಿ ನಂಬರ್ ಒನ್ ರ್ಯಾಂಕ್ ಲ್ಲಿದೆ.
ಬಕೆಟ್ ಸ್ವಾಮಿ: ಮತ್ತೆ ಈ ರಾಗಾ…ನ್ಯಾಯ…ನ್ಯಾಯ ಅಂತ ರಾಗ ತೆಗೀತ್ತಿದ್ದಾನೆ. ಜಾತಿ ಜನಗಣತಿ ಮಾಡಿದ್ರೆ ಮಾತ್ರ ದೇಶೋದ್ಧಾರ ಆಗೋದು ಅಂತಿದ್ದಾನೆ. ಆ ಬಗ್ಗೆ ಬೊಗಳೆ ಮಂತ್ರಿಯಾಗಿ ನಿಮ್ಮ ಒಪಿನಿಯನ್ ಏನು?
ಮಂಗನಾ: ಅಯ್ಯೋ…ರಾಗಾ ಒಬ್ಬ ಶತದಡ್ಡ. ಕಳೆದ ಹತ್ತು ವರ್ಷದಲ್ಲಿ ಸನಾತನ ಬಿಟ್ಟು ಉಳಿದ ಜಾತಿಗಳನ್ನೆಲ್ಲ ನಮೋಬಾಬಾರು ಖತಮ್ ಮಾಡಿದ್ದಾರೆ. ದೇಶದಲ್ಲಿ ಈಗ ಜಾತಿ ಎಲ್ಲಿದೆ? ಮಹಿಳೆ, ಯುವ, ಬಡವರು ಮತ್ತು ರೈತರು – ಇವಿಷ್ಟೇ ಮಾತ್ರ ಜಾತಿಗಳು ಅಂತ ನಮೋಬಾಬಾರೇ ಹೇಳಿಲ್ವೇ?
ಬಕೆಟ್ ಸ್ವಾಮಿ: ಹೌದೌದು…ಕೊನೆಯಲ್ಲಿ ನಮ್ಮ ಭಕ್ತ ವೀಕ್ಷಕರಿಗೆ ಮತ್ತು ದೇಶಕ್ಕೆ ಹತ್ತನೇ ಸ್ವತಂತ್ರ ದಿನಾಚರಣೆಯ ದಿನ ನಿಮ್ಮ ಸಂದೇಶವೇನು?
ಮಂಗನಾ: ನಾನು ಹೇಳೋದಿಷ್ಟು…ತಮ್ಮ ತಪಶ್ಯಕ್ತಿಯಿಂದ ನಮೋ ಭಗವಾನ್ ದೇಶವನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ದೇಶವಾಸಿಗಳೆಲ್ಲ ನಮೋ ಭಜನೆ ಮಾಡುತ್ತ, ತಮ್ಮ ಕೈಲಿ ಆದಷ್ಟು ದೇಶವನ್ನು ಮುಂದೆ ತಳ್ಳಬೇಕು. ಅದು ಬಿಟ್ಟು, ನಮೋ ಅವರ ಪೈಜಾಮ ಎಳೆದು ದೇಶದ್ರೋಹಿಗಳಾಗ ಬಾರದು. ಹ…ಮರೆತಿದ್ದೆ. ಮುಂದಿನ ತಿಂಗಳು ನನ್ನ ಹೊಸ ಸಿನಿಮಾ ʼಆಪತ್ಕಾಲ್ʼ ರಿಲೀಸ್ ಆಗ್ತಿದೆ. ಮನೆಮಠ ಎಲ್ಲಾ ಮಾರಿ ಸಿನಿಮಾ ಮಾಡಿದ್ದೇನೆ. ಎಲ್ರೂ ಸಿನಿಮಾ ನೋಡಿ ದೇಶ ಸೇವೆ ಮಾಡ್ಬೇಕು. ʼಮತ್ತೆ ಸಿನಿಮಾ ತೋಪಾದ್ರೆ ಕೈಗೆ ತೆಂಗಿನ ಕರಟ ಗ್ಯಾರಂಟಿ!ʼ ಎಂಬ ಮಂಗನಾಳ ಸ್ವಗತದ ಮಾತುಗಳು – ಲೈಟುಗಳು ನಂದಿ, ಸ್ಟುಡಿಯೊದ ಕತ್ತಲಲ್ಲಿ ಕರಗಿ ಹೋದವು