ʼಯುವ ನೋಟʼ ಜಗತ್ತಿನ ಆಗು ಹೋಗುಗಳ ಕಡೆಗೆ ಬೆರಗು ಕಣ್ಣಿಂದ ನೋಡುತ್ತಾ ತಮ್ಮ ಲೋಕ ದೃಷ್ಟಿಯನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿರುವ ಯುವ ಜನರಿಗೆ ಪೀಪಲ್ ಮೀಡಿಯಾ ಒದಗಿಸಿರುವ ವೇದಿಕೆ. ಬರವಣಿಗೆ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡಲು ಆಶಿಸುವವರಿಗೂ ಈ ವೇದಿಕೆ ಮುಕ್ತವಾಗಿದೆ. ಈ ಅಂಕಣದ ಮೊದಲ ನೋಟ ಗುರು ಸುಳ್ಯ ಅವರದು.
“ಇನ್ನು ಮುಂದೆ ನನ್ನ ಬಯಾಲೋಜಿಕಲ್ ತಂದೆಯ ಜೊತೆ ನನಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಮತ್ತು ನನ್ನ ಹೆಸರನ್ನು ನನ್ನಿಷ್ಟದಂತೆ ಬದಲಾಯಿಸಿಕೊಂಡು, ನನ್ನ ತಾಯಿಯ ಹೆಸರನ್ನು ಸರ್ ನೇಮ್ ಆಗಿ ಇಟ್ಟುಕೊಳ್ಳುತ್ತೇನೆ. ಇದಕ್ಕಾಗಿ ಕಾನೂನಿನ ಅನುಮತಿ ಕೋರುತ್ತೇನೆ ಮತ್ತು ಈ ಮೂಲಕ ನನಗೆ ಹೊಸ ಜನ್ಮಪ್ರಮಾಣ ಪತ್ರ ನೀಡಬೇಕಾಗಿ ವಿನಂತಿಸುತ್ತೇನೆ”. ಇದು ಮನುಷ್ಯರ ದುಡ್ಡಿನ ಲೋಕದ ಅತಿ ಶ್ರೀಮಂತರಲ್ಲಿ ಒಬ್ಬನಾದ ‘ಎಲಾನ್ ಮಸ್ಕ್’ ನ ‘ಟ್ರಾನ್ಸ್ ಜೆಂಡರ್’ ಮಗಳು ‘ವಿವಿಯನ್ ಜೆನ್ನ ವಿಲ್ಸನ್’ ನ್ಯೂಯಾರ್ಕಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ. ನ್ಯಾಯಾಲಯ ಇದನ್ನು ಮಾನ್ಯ ಮಾಡಿದೆ ಕೂಡ. ಈ ಘಟನೆಯನ್ನು ಉಲ್ಲೇಖಿಸಿದ್ದು, ನಮ್ಮ ಕುಟುಂಬ ಎನ್ನುವ ಪರಿಕಲ್ಪನೆ, ಒಡೆಯದೆಯೇ ಜಡ್ಡುಗಟ್ಟಿರುವ ಅದರ ಕಟ್ಟುಪಾಡುಗಳ ಬಗ್ಗೆ ಅಲೋಚಿಸಲಿ ಎಂಬ ಕಾರಣಕ್ಕಾಗಿ. ಅನುಕೂಲಸ್ಥರ ಮನೆಗಳಲ್ಲಿ ಇವೆಲ್ಲವು ನಡೆಯುತ್ತದೆ ಎಂದು ನೀವು ಅನ್ನಬಹುದು. ಆದರೆ ಪ್ರತಿ ಮನೆಯ, ಪ್ರತಿ ಮನುಷ್ಯರಿಗೂ ತಮ್ಮ ಬದುಕನ್ನು ರೂಪಿಸಿಕೊಳ್ಳುವ, ಬದುಕುವ ಹಕ್ಕಿದೆ ಅಲ್ವೇ ? ‘ಬಡವ ಮಡುಗಿದಂಗಿರು’ ಅನ್ನೋ ಕ್ರೂರವಾದ ನುಡಿಗಟ್ಟುಗಳು ಮೇಲ್ವರ್ಗದವರ ಕೊಡುಗೆಗಳು. ಇದನ್ನು ಒಡೆದು ಬಾಳಬೇಕಾದುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ.
ನಮ್ಮ ಸಮಾಜ ಮತ್ತದರ ನಾಯಕರುಗಳು, ನಮ್ಮ ಮನೆ ಮತ್ತದರ ಯಜಮಾನರುಗಳ ಮುಂದುವರಿಕೆಯಾಗಿಯೇ ಇರುವಂತದ್ದು. ನಮ್ಮ ಸರಕಾರಗಳು, ಸ್ವಾಯತ್ತ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವ್ಯಾಪಾರ ವಹಿವಾಟುಗಳು ಪುರುಷಾಧಿಪತ್ಯದ ಉಕ್ಕಿನ ಕೈಗಳಲ್ಲಿಯೇ ಇವೆ. ಹೀಗಿರುವಾಗ ಎಲ್ಲವೂ ಸರಿಯಾಗಿದೆ ಅನ್ನುವಂತೆ ಬದುಕೋದು ಯಾಕೆ ಸಾಧ್ಯವಾಗ್ತಿದೆ ? ನಮ್ಮ ನಮ್ಮ ಮನೆಗಳಲ್ಲಿ ಸಮಾನತೆ ಬೇಕೆಂಬ ಅಲೋಚನೆ ಕನಿಷ್ಠ ಪಕ್ಷ ಸಂವಿಧಾನದ ಅರಿವು ಇರುವವರಿಗಾದರು ಬರಬೇಕಲ್ಲವೆ? ತಂದೆ-ತಾಯಿ, ಯಂತ್ರದಂತ ಕೆಲಸ, ತಂದೆ ತಾಯಿಯರ ಋಣ ತೀರಿಸಲು ಎಂಬಂತೆ ಬೆಳೆಸಲ್ಪಡುವ ಮಕ್ಕಳು, ಅವರ ಮದುವೆ ಮತ್ತು ಇವಕ್ಕೆಲ್ಲಾ ಅಂಟಿಸಿಕೊಂಡಿರುವ ಸೆಂಟಿಮೆಂಟ್ ಇವುಗಳಲ್ಲೇ ಮುಳುಗಿ ಹೋದರೆ ಹೇಗೆ!. ಪೂರ್ತಿ ಜಗತ್ತು ವಿಕಸನಗೊಳ್ಳುತ್ತಲೇ ಇದೆ ಎಂಬುದು ಆಧಾರಗಳೊಂದಿಗೆ ವಿಜ್ಞಾನ ಕಂಡುಕೊಂಡಿರುವ ಸತ್ಯ. ಇವನ್ನೆಲ್ಲಾ ಅನ್ವೇಷಿಸಿ ಪತ್ತೆ ಹಚ್ಚಿರುವ ಮನುಷ್ಯರು ಮತ್ತು ನಮ್ಮ ಮೆದುಳು ಕೂಡ ಈ ವಿಕಸನದ ಭಾಗ. ವಿಜ್ಞಾನವೆಂದರೆ ನಮಗೆ ಸಂಬಂಧವಿರದ ಯಾರೋ ಅನ್ವೇಷಿಸುವ ನಿಗೂಢ ಕ್ರಿಯೆಯೇನಲ್ಲ. ಮೊದ ಮೊದಲು ಮಡಿಕೆ ಕಂಡು ಹಿಡಿದ ಮನುಷ್ಯರು ಕೂಡ ವಿಜ್ಞಾನಿಗಳೇ.
ನಮ್ಮ ಇತಿಹಾಸ, ಅನುಭವ, ಬಾಲ್ಯದ trauma ಗಳು ನಮ್ಮನ್ನು ರೂಪಿಸಿದಂತೆಯೇ, ಮನುಷ್ಯ ಬುದ್ಧಿ-ಭಾವಗಳು ನಿತ್ಯ ಹೊಸತಾಗುತ್ತಿರುವುದನ್ನು ಅರಿಯಬೇಕು; ತೆರೆದುಕೊಳ್ಳಬೇಕು. ಮನುಷ್ಯರು ‘ಬದುಕು’ ಎಂದು ಏನನ್ನು ವೈಭವವೀಕರಿಸುತ್ತಾರೋ, ಅದು ಜೀವ ವಿಕಾಸದ ಭಾಗವಷ್ಟೇ. ಆದ್ದರಿಂದ, ಕನಿಷ್ಠ ಜೀವಶಾಸ್ತ್ರದ ಪಾಠಗಳನ್ನು ಪೋಷಕರಾಗುವ ಮೊದಲು ಕಲಿಯಬೇಕು. ಆ ಮೂಲಕ ಬೇರೆಯದೆ ಜಗತ್ತನ್ನು ಒಳಗಿಟ್ಟುಕೊಂಡು ಬೆಳೆಯುವ ನಮ್ಮ ಮಕ್ಕಳನ್ನು ವಿಶಾಲವಾಗಿ ಪ್ರೀತಿಸುವುದು, ಬೆಂಬಲಿಸುವುದು ಸಾಧ್ಯವಾಗಬೇಕು. ಸಂಘ ಜೀವಿಗಳಾದ ಮಾನವರು ಗುಂಪುಗಳಾಗಿಯೇ ಬದುಕುವವರು. ಆದರೆ, ಆ ಗುಂಪುಗಳು ಬದಲಾಗುತ್ತಾ ಹೋಗುತ್ತವೆ. ತಾಯಿಯೇ ಪ್ರಧಾನವಾಗಿದ್ದ ಗುಂಪುಗಳಲ್ಲಿ ವಾಸಿಸುತ್ತಿದ್ದ, ಜೊತೆಯಲ್ಲಿ ಬದುಕುವವರೆಲ್ಲರ ಪೋಷಣೆಯಲ್ಲಿ ಬೆಳೆಯುತ್ತಿದ್ದವರು ಮಕ್ಕಳು. ಬಹುಶಃ ಸ್ಥಿರ ಕೃಷಿ ಪದ್ಧತಿಯ ನಂತರದ ದಿನಗಳಲ್ಲಿ ಹೆಚ್ಚು ಪುರುಷ ಪ್ರಧಾನವೂ, ವ್ಯಕ್ತಿ ಸ್ವಾತಂತ್ರ್ಯ ಹರಣವೂ ಆದ ಕುಟುಂಬಗಳಾಗಿ ಬದಲಾಯಿತು. ಆ ರೀತಿಯಲ್ಲಿ ಮಣ್ಣು ಮತ್ತು ಹೆಣ್ಣು ಎರಡರ ಮೇಲೂ ಅತ್ಯಾಚಾರಗಳು ನಿರಂತರವಾದುವು.
ಮನುಷ್ಯರ ನಡುವೆ ಹಲವು ತೆರನಾದ ಆಕರ್ಷಣೆಗಳು, ಅನಾಕರ್ಷಣೆಗಳು ಇವೆ. ಪ್ರೇಮ ಮತ್ತು ಕಾಮಕ್ಕೆ ಪರಿಧಿಯನ್ನು ನಿರ್ಧರಿಸಲಾಗುವುದಿಲ್ಲ. ಪ್ರೇಮ, ಕಾಮ, ಹಂಚುವಿಕೆ, ಹೊಣೆಗಾರಿಕೆ, ಬೆಂಬಲ, ಸ್ಥೈರ್ಯ ಎಲ್ಲವನ್ನೂ ಒಂದರಲ್ಲಿ ಗಂಟುಹಾಕಿ ಮದುವೆ, ಕುಟುಂಬ ಎಂದು ಹಾಕುವ ಚೌಕಟ್ಟು ಸರಿಯಾದುದಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚಿಸಿದರೆ ಅರ್ಥವಾಗುವಂತದ್ದು. ಆದರೆ ಈಗಾಗಲೇ ಬಹುದೊಡ್ಡ ಹಗರಣವಾಗಿ ಬೆಳೆದಿರುವ ಮುಖ ಮತ್ತು ದೇಹ ಸೌಂದರ್ಯವೆಂಬ ಭ್ರಮೆಯನ್ನು, ಆರ್ಥಿಕ ಅಸಮಾನತೆಯ ಕರಾಳತೆಯನ್ನು ಕಿತ್ತು ಹಾಕುವುದು ಅಷ್ಟು ಸುಲಭವೂ ಅಲ್ಲ. ಅದರ ಭಾಗವಾಗಿಯೇ ಮದುವೆಯ ಸಂಕೋಲೆಗೆ ಕೊರಳೊಡ್ಡುವ ಪದ್ಧತಿ ನಿರಂತರವಾಗಿ ಸಾಗಿದೆ. ಬ್ರಾಹ್ಮಣ್ಯದ ಕಡುವಿರೋಧಿಗಳು, ಸ್ತ್ರೀ ಸಮಾನತೆಯ ಹರಿಕಾರರು ಕೂಡ ‘ಮಂತ್ರ ಮಾಂಗಲ್ಯ’ ಕ್ಕೆ ಗಂಟು ಬಿದ್ದಿರುವುದು ಯಾಕೋ ಅರ್ಥವಾಗುತ್ತಿಲ್ಲ. ಮಂತ್ರಗಳು ಸಾಯಿಸಿದ ಜೀವಗಳು, ಮಾಂಗಲ್ಯದ ನೇಣಲ್ಲಿ ಬಿದ್ದು ಸತ್ತವರು, ಇನ್ನೂ ಸಾಯುತ್ತಿರುವವರು ಕಾಣುತ್ತಿಲ್ಲವೇ ! ವಿವಾಹ ಮತ್ತು ವಿಚ್ಛೇದನ ಎರಡನ್ನು ಸಮವಾಗಿ ಕಾಣುವುದಾದರು ಸಾಧ್ಯವೇ ಎಂದರೆ, ಅದೂ ಇಲ್ಲ.
ಭಾರತದಲ್ಲಿ ತಮ್ಮ ‘ಜೆಂಡರ್’ ಮತ್ತು ‘ ಸೆಕ್ಷ್ಯುವಲ್ ಓರಿಯಂಟೇಷನ್’ ಕಾರಣವಾಗಿ, ಸರಿಯಾದ ವಿದ್ಯಾಭ್ಯಾಸವು ದೊರೆಯದೆ ಮನೆ ಬಿಟ್ಟು ಓಡಿ ಹೋಗುವವರು ಅದೆಷ್ಟೋ ಮಂದಿ. ‘ಲಿಂಗ ಬದಲಾವಣೆ’ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ಕಳಪೆ ಡಾಕ್ಟರುಗಳ ಕಾರಣವಾಗಿ ಮೈಯೆಲ್ಲಾ ನೋವಿನ ಮುದ್ದೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುವ ಹಲವಾರು ಜೀವಗಳಿವೆ ಇಲ್ಲಿ. ಕಳೆದ ವರ್ಷ ಕೇರಳದಲ್ಲೆಲ್ಲಾ ಸುದ್ದಿಯಾದ, ಚುನಾವಣೆಗೂ ನಿಂತಿದ್ದ ‘ಅನನ್ಯ ಕುಮಾರಿ ಅಲೆಕ್ಸ್” ಳ ಆತ್ಮಹತ್ಯೆ ಇದಕ್ಕೆ ಒಂದು ಉದಾಹರಣೆ ಅಷ್ಟೇ. ಅದೇ ರೀತಿ ಲೆಸ್ಬಿಯನ್, ಗೇ, ಬೈ ಸೆಕ್ಷ್ಯುವಲ್ ಜೋಡಿಗಳನ್ನು ನಮ್ಮ ಸಮಾಜ ಹಿಂಸಿಸುತ್ತಿರುವುದು ನಡೆದೇ ಇದೆ. ಈ ಹಿನ್ನೆಲೆಯಲ್ಲಿ ನೋಡಿದರೂ ‘ಗಂಡಿಗೊಂದು ಹೆಣ್ಣು’ ಎನ್ನುವ ಮದುವೆಯ ಸಂಪ್ರದಾಯ ಅರ್ಥಹೀನವಾಗಿಯೇ ಕಾಣುತ್ತದೆ.
ದೇಹದ ವ್ಯವಹಾರದಲ್ಲಿ ತೊಡಗುವ ಮುನ್ನ ದೇಹಕ್ಕೆ ತಗುಲುವ ರೋಗಗಳ ಬಗ್ಗೆ, ಒಪ್ಪಿಗೆಯ ಬಗ್ಗೆ, ಗರ್ಭಧಾರಣೆಯ ಬಗ್ಗೆ, ಪರಸ್ಪರರ ದೇಹಗಳ ಬಗ್ಗೆ ತಿಳುವಳಿಕೆ ಇರಬೇಕಾದದ್ದು ಈ ಕಾಲದ ಸಹಜ ಅಗತ್ಯ. ಅದರಲ್ಲೂ ಹೆಣ್ಣು ದೇಹಕ್ಕೆ ಪ್ರಕೃತಿದತ್ತವಾಗಿ ಹೆಚ್ಚಿನ ಹೊರೆ ಮತ್ತು ನೋವು ದಕ್ಕಿದೆ (ಇದನ್ನು ಸೌಭಾಗ್ಯವೆಂದು, ಹೆಣ್ತನದ ಔನ್ನತ್ಯವೆಂದು ಕೊಂಡಾಡುವವರಿಗೇನು ಕಮ್ಮಿಯಿಲ್ಲ). ವಯಸ್ಸುಗಳನ್ನು ಮೀರಿ ಹೆಣ್ಣು, ಗಂಡು, ಟ್ರಾನ್ಸ್ ಜೆಂಡರ್ ಇಂಟರ್ ಸೆಕ್ಸ್ – ಎಲ್ಲಾ ತರದ ಮನುಷ್ಯರ ನಡುವೆ ವಿವಿಧ ರೀತಿಯ ಬಂಧಗಳು ಸಂಭವಿಸುತ್ತವೆ. ನೆನಪಿಡಿ – “ಹೆತ್ತರಷ್ಟೇ ತನ್ನ ಮಗು ಆಗುವುದಿಲ್ಲ. ಕುಟುಂಬ ಎಂದರೆ ರಕ್ತ ಸಂಬಂಧಿಗಳಾಗಿರಬೇಕು ಎಂದೇನು ಇಲ್ಲ”. ಹೀಗಿಲ್ಲದೆ ಹೋದರೆ ಎಲ್ಲವೂ ಉಲ್ಟಾಪಲ್ಟಾ ಆಗುತ್ತದೆ ಎಂದು ಭ್ರಮೆಯಲ್ಲಿರಬೇಡಿ. ಜವಾಬ್ದಾರಿಯೆಂಬುದು ಸಂಪ್ರದಾಯಗಳ ಕಟ್ಟುಪಾಡುಗಳಲ್ಲಿ ಪರೋಕ್ಷವಾಗಿ ಬಂಧಿಸಿಡುವಂತದ್ದಲ್ಲ. ಲೈಸೆನ್ಸ್ ಇರುವ ಸಲ್ಮಾನ್ ಖಾನ್ ನಂತವರು ಎರ್ರಾಬಿರ್ರಿ ಗಾಡಿ ಓಡಿಸಿ ಕೊಲೆ ಮಾಡಬಲ್ಲರು. ಲೈಸೆನ್ಸ್ ಇಲ್ಲದಿರುವ ಟೀನೇಜ್ ಹುಡುಗಿ ತುಂಬಾ ಜಾಗರೂಕಳಾಗಿ ಗಾಡಿ ಚಲಾಯಿಸಬಲ್ಲಳು; ಮನುಷ್ಯರು ಯಂತ್ರಗಳಲ್ಲ ಎಂಬುದಷ್ಟೇ ಮುಖ್ಯ. ಇದೆಲ್ಲದರಾಚೆಗೂ ಮನುಷ್ಯರು ಅದಾಗಲೇ ಭೂಮಿಗೆ ಮಾರಕವಾಗಿ ಆಗಿದೆ. ಜ್ಞಾನ, ವಿಜ್ಞಾನ, ಪ್ರೇಮಗಳು ನಮಗೆ ನಮ್ಮ ಸರಕಾರ, ಶಾಲೆಗಳು ತಲುಪಿಸಿರುವುದಕ್ಕಿಂತಲೂ ಹೆಚ್ಚು ವಿವರಗಳೊಂದಿಗೆ ಮಾನವ ಸಂಕುಲದ ನಡುವೆ ಲಭ್ಯವಿದೆ. ಅಲ್ಪ ಬುದ್ಧಿಯವರಾಗದೇ, ಬುದ್ಧಿವಂತಿಕೆಯ ಅಹಮ್ಮುಗಳನ್ನು ಹೊಂದದೆ, ಅರಿವು ಹಂಚೋಣ. ನಮ್ಮ ಮುಖಗಳು ಫ್ಯಾಮಿಲಿ ಫೋಟೋ ಫ್ರೇಮಿನೊಳಗೆ ಕಾಣುವಷ್ಟು ನೀರಸವು, ಸಂತುಷ್ಟವು ಆದುದಲ್ಲ. ನಾವು ಆ ಫ್ರೇಮಿನ ಒಳಗೆ ಕೂರಿಸಲ್ಪಟ್ಟವರು ಅಷ್ಟೇ. ಆದ ಕಾರಣ ಆ ಫ್ರೇಮ್ ಒಡೆಯಲಿ, ಪ್ರೀತಿ ಹರಿಯಲಿ.
ಗುರು ಸುಳ್ಯ
ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.