Home ಜನ-ಗಣ-ಮನ ಕ್ಯಾಂಪಸ್ ಕನ್ನಡಿ ಅಲೆಮಾರಿ ಹುಡಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ | ಭಾಗ-2

ಅಲೆಮಾರಿ ಹುಡಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ | ಭಾಗ-2

0

ಹೊಡೆಯುತ್ತಲೇ ತಿದ್ದಿದವರು ಇವರು!

ಒಂದಿನ ಗಣಿತ ಗುಣಾಕಾರ ಭಾಗಕಾರ ಬರೆಯಿಸಿ ಬಾಯಿಪಾಠ ಮಾಡಿ ನಾಳೆ ಹೇಳಬೇಕು ಎಂದು ಹೇಳಿದ್ದರು ಅಮರಮ್ಮ ಟೀಚರ್. ನಾನು ಕಂಠಪಾಠ ಮಾಡಿರಲಿಲ್ಲ. ಎಲ್ಲಾ ಶಿಕ್ಷಕರು ನಾಲ್ಕು ಏಟು ಹೊಡೆದರೆ ಇವರು ಆರು ಏಟು ಹೊಡಿಯೋಕೆ ಶುರು ಮಾಡಿದರು. ಅವರ ಕೈ ಕೆಂಪಾಗಿ ಹೋಯಿತು. ಮತ್ತೆ ನಾಳೆ ಕೇಳುತ್ತೇನೆ ಹೇಳದಿದ್ದರೆ ಇನ್ನೂ ಹೆಚ್ಚಿಗೆ ಏಟು ಇವೆ ನೋಡೆಂದರುಅಲೆಮಾರಿ ಸಮುದಾಯದ ಎಸ್‌ ಕೆ ಉಮೇಶ ಶಾಲೆ ಓದಿದ ಕಥೆ-ವ್ಯಥೆಯ ಎರಡನೇ ಭಾಗ ಅವರದೇ ಮಾತುಗಳಲ್ಲಿ ಇಲ್ಲಿದೆ.

ನಾಲ್ಕನೇ ತರಗತಿಯವರೆಗೆ ಸರ್ಕಾರಿ ಶಾಲೇಲಿ ಏನೂ ಕಲಿಯದ ನನ್ನನ್ನು ಐದನೇ ಕ್ಲಾಸಿಗೆ, ಊರಿನ ಕೋಠಾ ಕ್ರಾಸ್ ಬಳಿ ಇರುವ ಶ್ರೀ ಶರಣಬಸವೇಶ್ವರ ಎಂಬ ಖಾಸಗಿ ಶಾಲೆಗೆ ಅಡ್ಮಿಷನ್ ಮಾಡೋಕೆ ಬಸವರಾಜ ಅಣ್ಣ, ಶಿವರಾಜ ಅಣ್ಣ ಕರೆದುಕೊಂಡು ಹೋದ್ರು. ಅವರು ಹೆಡ್‌ ಮೇಡಂ ಶ್ರೀಮತಿ ಸರಸ್ವತಿ ಅವರತ್ರ ಮಾತಾಡಿದರು. ಸರಸ್ವತಿ ಟೀಚರ್ ನನಗೆ ʼನಿನ್ನ ಹೆಸರು, ಅಪ್ಪನ ಹೆಸರು ಬರಿʼ ಎಂದರು. ಬರೆದೆ. ಮತ್ತೆ ಅಮ್ಮನ ಹೆಸರು ಬರಿ ಅಂದರು. ಬರಲ್ಲ, ನನ್ನ ಹೆಸರು ಮತ್ತು ಅಪ್ಪನ ಹೆಸರು ಬಿಟ್ಟು ನಂಗೇನೂ ಬರೋದಿಲ್ಲೆಂದು ನಯವಾಗಿಯೇ ಹೇಳಿ ಬಿಟ್ಟೆ. ನನ್ನ ಈ ಇಬ್ಬರು ಅಣ್ಣಂದಿರು ಆ ಮುಖ್ಯೋಪಾಧ್ಯಾಯರಿಗೆ ಇವನು ಬಹಳ ದಡ್ಡ ಇದಾನೆ ಮೇಡಂ ನೀವೇ ಸರಿ ದಾರಿಲಿ ತರಬೇಕು ಎಂದು ವಿನಂತಿ ಮಾಡ್ಕೊಂಡ್ರು. ಅಡ್ಮಿಷನ್ ಆದ ಎರಡು ದಿನಗಳ ನಂತರ ನನ್ನನ್ನು  ಶಾಲೆಗೆ ಬಿಡಲು ಬಸವರಾಜ ಅಣ್ಣ ಬಂದು ಅಶ್ವಿನಿ ಟೀಚರ್‌ ನೊಂದಿಗೆ (ಎರಡನೇ ಮುಖ್ಯಗುರುಗಳು) ಮಾತಾಡಿ ಶಾಲೆಯಲ್ಲಿ ಬಿಟ್ಟು ಮನೆಗೆ ಹೋದ.

ಅಕ್ಕ ಲಕ್ಷ್ಮೀ (ನಮಗೆ ವಯಸ್ಸಿನ ಅಂತರವಿದ್ದರೂ, ಒಂದೇ ತರಗತಿಯಲ್ಲಿದ್ದೆವು.) ಅಶ್ವಿನಿ ಟೀಚರ್ ಕೊಠಡಿ ತೋರಿಸಿ ಕ್ಲಾಸ್ ಟೀಚರ್ ಅಮರಮ್ಮ ಅವರನ್ನು ಭೇಟಿ ಮಾಡಿಸಿ ಹೋದರು. ನಾನು ಮಾತಾಡುವಾಗ ತೊದಲುವ (ಈಗಲೂ ಮಾತನಾಡುವಾಗ ತೊದಲುತ್ತೇನೆ, ತೊದಲುವುದು ಈಗ ಹೆಚ್ಚಿನಂಶ ಕಡಿಮೆಯಾಗಿದೆ. ಆದರೆ ಸಂಪೂರ್ಣ ತೊದಲುವಿಕೆ ಯಾವಾಗ ನಿಲ್ಲುವುದೋ?) ಸಂಗತಿಯನ್ನು ಎಲ್ಲಾ ಹುಡುಗರಿಗೆ ಹೇಳುತ್ತಾ ʼಇವನ ಹೆಸರು ಉಮೇಶ. ತೊದಲು ಮಾತನಾಡುತ್ತಾನೆ. ನೀವು ಯಾರಾದರೂ ಹಂಗಿಸಿದರೆ, ಅಸಹ್ಯವಾಗಿ ಅವನ ಜೊತೆ ನಡೆದು ಕೊಂಡರೆ ಕಠಿಣ ಶಿಕ್ಷೆ ಕೊಡಲಾಗುವುದು ಎಂದು ಅವರಿಗೆ ಹೇಳಿ ನನ್ನಲ್ಲಿ  ಧೈರ್ಯ ತುಂಬಿದ್ದರು ಆ ಅಮರಮ್ಮ ಟೀಚರ್!

ಮೊದಲನೇ ದಿನ ಶಾಲೆಯಲ್ಲಿ GK ಶಿಕ್ಷಕರಾದ ಗೀತಾ ಟೀಚರ್ರು ಎಲ್ಲರನ್ನೂ ಕರೆದು ಒಬ್ಬೊಬ್ಬರಿಗೆ ಕನ್ನಡ ಓದಿಸುತ್ತಿದ್ದರು. ಓದಲು ಬಾರದವರಿಗೆ ಹೊಡೆಯುತ್ತಿದ್ದರು ಕೂಡ! ನನ್ನನ್ನು ಕರೆದರು. ಓದೋಕೆ ಬರಲ್ಲ ಟೀಚರ್ ಅಂದೆ. ಅವರು ಇಲ್ಲಿ ಬಾರೋ ಮೊದ್ಲು ಅಂದು ‘ಆನಂತರ’ ಅಂತ ಒಂದೇ ಶಬ್ದವನ್ನು ಓದು ಎಂದಾಗ ಬರಲ್ಲ ಟೀಚರ್ ಎಂದೆ. ಅವರು ಒಂದೊಂದು ಅಕ್ಷರ ಬಿಡಿಸಿ  ಹೇಳಿಕೊಟ್ಟು ನನಗೆ ಹೊಡೆಯದೇ ಕಳಿಸಿದರು.

ಆವತ್ತೆ PT ರಮೇಶ ಮಾಸ್ತರ ನಾಡಗೀತೆ ಐದು ಸಲ ಬರೆದುಕೊಂಡು ಬರಬೇಕೆಂದು ಹೋಂವರ್ಕ್ ಕೊಟ್ಟರು. ಆ ವರೆಗೆ ಒಂದಿನನೂ ಬರೆಯದ ಹುಡುಗ ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮೇಲೆ ರಾತ್ರಿ ಹತ್ತರವರೆಗೆ ಬರೆಯುತ್ತಾ ಕುಳಿತಿದ್ದೆ. ನನ್ನವ್ವ ಹೆತ್ತಮ್ಮ ಕಮಲಮ್ಮ, ಯಾವತ್ತೂ ಬರೆಯಲು ಕುಳಿತು ಕೊಳ್ಳದ ನನ್ಮಗ ಇವತ್ತು ಬರ್ಕೋಂತಾ ಕುಂತಾನೆ ಅಂದ್ರೆ ಶಾಲೆ ತುಂಬಾ ಸ್ಟ್ರಿಕ್ಟ್ ಇದೆ ಅನ್ಸುತ್ತೆ ಅಂತಿದ್ದರು.

ಬೆಳಿಗ್ಗೆ ಮನೆಪಾಠ ಕೊಟ್ಟಿದ್ದನ್ನು ಚೆಕ್ ಮಾಡುತ್ತಿದ್ದರು. ನಾನು ಆ ಹೋಂವರ್ಕ್ ಮಾಡಿದ್ದೆ. ಆದರೆ ರಾಷ್ಟ್ರಗೀತೆ ಬರೆದುಕೊಂಡು ಹೋಗಿದ್ದೆ. ಮಾಸ್ಟ್ರು ನನ್ನ ನೋಡಿ ನಕ್ಕು ರಾಷ್ಟ್ರಗೀತೆ ಅಲ್ಲಪ್ಪಾ ಉಮೇಶಾ! ನಾಡಗೀತೆ.. ನಾಳೆ ಮತ್ತೆ ಬರೆದುಕೊಂಡು ಬಾ… ಹೋಗು ಅಂದರು. ನನಗೆ ಹೊಡೆಯಲಿಲ್ಲ. ಬರೆದುಕೊಂಡು ಬರದವರಿಗೆ ಹೊಡೆಯುತ್ತಿದ್ದರು. ಗಣಿತ ಸಬ್ಜೆಕ್ಟ್‌ನ ಲೆಕ್ಕ ಬೋರ್ಡಿನ ಮೇಲೆ ಬರೆದಿದ್ದನ್ನು ನಾನು ನೋಟ್ಸ್‌ನಲ್ಲಿ ಬರೆದುಕೊಳ್ಳುತ್ತಿದ್ದೆ. ಅಮರಮ್ಮ ಟೀಚರ್ ನೋಡಿ ನೋಟ್ಸ್‌ನಲ್ಲಿ ಬರ್ಕೋಬಾರದು ಕಚ್ಚಾ ಕಾಪಿಯಲ್ಲಿ ಬರೆಯಬೇಕೆಂದು ಗದರಿಸಿದರು. ನನಗೆ ಮಾತ್ರ ನೋಟ್ಸ್ ಅಂದರೆ ಏನೆಂದೇ  ಗೊತ್ತಿರಲಿಲ್ಲ!

ಒಂದಿನ ಕ್ಲಾಸ್ ಟೀಚರ್ ಎಲ್ಲಾ ವಿಷಯಗಳ ನೋಟ್ಸ್ ಚೆಕ್ ಮಾಡುತ್ತಿದ್ದರು. ನಾನು ಒಂದು ವಿಷಯ ಕೂಡ ಬರೆದಿರಲಿಲ್ಲ. ಹೊಡೆದ್ರಪ್ಪಾ ಚೆನ್ನಾಗಿ. ಶಾಲೆ ಬಿಟ್ಟ ನಂತರ ಮನೆಯಲ್ಲಿ ಬರೆಯೋಕೆ ಅಂತ ಅಕ್ಕನ ನೋಟ್ಸ್ ಇಸ್ಕೊಂಡು ಕುಂತೆ. ನಾಲ್ಕು ಪೇಜ್ ಬರೆದೆ. ಸುಸ್ತಾಗಿ ಬೇಸರವಾಯಿತು. ಬರಿಯೋದನ್ನು ಅಲ್ಲಿಗೆ ನಿಲ್ಲಿಸಿ ಬಿಟ್ಟೆ. ಮತ್ತೆ ಬೆಳಿಗ್ಗೆ ಚೆಕ್ ಮಾಡಿದರು. ಮತ್ತೆ ಅದೆ ಗತಿನೇ. ಮತ್ತೆ ಹೊಡಿಯೋಕೆ ಶುರು ಮಾಡಿದರು. ಮನೆಗೆ ಬಂದ ತಕ್ಷಣ ಹಗಲು-ರಾತ್ರಿ ಎನ್ನದೇ ಎಲ್ಲಾ ವಿಷಯಗಳನ್ನು ಬರೆದು ಮುಗಿಸಿದೆ. ಆದರೂ ಒಂದು ವಿಷಯ ಬಾಕಿ ಇತ್ತು ಅದು ಸಮಾಜ ವಿಜ್ಞಾನ. ಆ ವಿಷಯವೇ ನನಗೆ ಗೊತ್ತಿರಲಿಲ್ಲ. ಅಕ್ಕನ ನೋಟ್ಸ್‌ ಸಹಾಯದಿಂದ ಎಲ್ಲವನ್ನೂ ಬರೆದು ಮುಗಿಸಿದೆ.

ಇದೆಲ್ಲಾ ಮುಗಿದ ನಂತರ ನಮ್ಮೂರಿನ ಜಾತ್ರೆಗೋಸ್ಕರ ನಾಲ್ಕು ದಿನ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋದ ನಂತರ ಅಮರಮ್ಮ ಟೀಚರ್ ಹೊಡಿಯಲಿಲ್ಲ. ಅದರೆ ಶಿಕ್ಷೆ ಕೊಟ್ಟರು. ಬೆಳಿಗ್ಗೆಯಿಂದ ಶಾಲೆ ಬಿಡೋವರೆಗೂ ಕೂರುವಂತಿಲ್ಲ, ನಿಂತಿರಬೇಕೆಂದು ಕಟ್ಟಪ್ಪಣ್ಣೆ  ಹೊರಡಿಸಿದಂತೆ ಹೇಳಿಯೇ ಬಿಟ್ಟರು. ನನಗೆ ನಿಂತು-ನಿಂತು ಸಾಕಾಗಿತ್ತು. ನಾನೊಬ್ಬನೇ ನಿಂತಿಲ್ಲ. ನನ್ನ ಜೊತೆಗೆ ಸಣ್ಣದಾದ ದಂಡೇ ಇತ್ತು. ನನಗಂತೂ ಕೈ-ಕಾಲು, ಬೆನ್ನು-ಸೊಂಟ ಬಹಳ ನೋವು ಬಂದಿತ್ತು. ಈ ಶಿಕ್ಷೆ ಬೇಡಪ್ಪಾ ಅಂತ  ಒಂದೆರಡು ತಿಂಗಳು ಒಂದು ದಿನವೂ ತಪ್ಪದೇ ಸರಿಯಾಗಿ ಶಾಲೆಗೆ ಹೋದೆ. ಹೋಂ ವರ್ಕ್ ಸರಿಯಾಗಿ ಮಾಡುತ್ತಿದ್ದೆ. ಮತ್ತೆ ಕೆಲವು ದಿನಗಳ ನಂತರ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಮನೆಪಾಠ ಬರೆಯುತ್ತಿರಲಿಲ್ಲ. ಆಗೆಲ್ಲ ದಿನಾಲೂ ಎಲ್ಲಾ ಟೀಚರ್‌ಗಳು ಕೈಗೆ ಬಡಿಗೆಯಿಂದ ಹೊಡೆಯುತ್ತಿದ್ದರು.

ಇದನ್ನೂ ಓದಿ- ಅಲೆಮಾರಿ ಹುಡುಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ

ಅಶ್ವಿನಿ ಟೀಚರ್ ನನ್ನ ಹಸಿಹಸಿ ದಡ್ಡತನ ನೋಡಿ ನನಗೆ ಹೋಂವರ್ಕ್ ಪಾಠಗಳು ಬೇಡ ಅಂತ “ಅ, ಆ, ಇ, ಈ” ಎರಡು ಗೆರೆ ಕಾಪಿಯಲ್ಲಿ ಹಾಕಿಕೊಡುತ್ತಿದ್ದರು. ಅವರು ಎರಡೇ ಪೇಜ್ ಹಾಕಿ ಕೊಡುತ್ತಿದ್ದರು. ಕನ್ನಡ ವಿಷಯವೊಂದೇ ಸರಿಯಾಗಿ ಹೋಂವರ್ಕ್ ಮಾಡುತ್ತಿದ್ದೆ. ಉಳಿದ ಎಲ್ಲಾ ವಿಷಯಗಳದ್ದು ಮಾಡುತ್ತಿರಲಿಲ್ಲವಾದ್ದರಿಂದ ದಿನಾಲೂ ಹೊಡೆಸಿ ಕೊಳ್ಳುತ್ತಿದ್ದೆ.

ಒಂದಿನ ಕನ್ನಡ ಟೀಚರ್ ಅದೊಂದೇ ಹೋಂವರ್ಕ್ ಮಾಡಬೇಡಪ್ಪಾ ಎಲ್ಲ ಪಾಠಗಳು, ವಿಷಯಗಳು ಕೂಡ ಬರಿ ಎಂದರು. ನಾನು ಆವತ್ತಿನಿಂದ “ಅ ಆ ಇ ಈ” ಹಾಕಿಸಿ ಕೊಳ್ಳುತ್ತಿರಲಿಲ್ಲ. ನಮ್ಮ ಗೌರಿ ಟೀಚರ್ (ಶಾಲೇಲಿ ಇಂಗ್ಲೀಷ್-ಸಮಾಜವಿಜ್ಞಾನ ಪಾಠ ಮಾಡುತ್ತಿದ್ದರು)ಮನೆಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. ಅಲ್ಲಿ ತಿಂಗಳ ಫೀಸ್ 150 ರೂ. ಮಾತ್ರ. ನಾನು ಅಡ್ವಾನ್ಸ್ 50 ರೂ. ಕಟ್ಟಿದೆ ಕೆಲವು ದಿನ ಹೋದೆ. ಅಲ್ಲಿ ನಾನು ಕಲ್ತಿದ್ದು “ಅ ಯಿಂದ ಳ” ವರೆಗೆ ಮಾತ್ರ. 15 ದಿನಗಳು ಮಾತ್ರ ಹೋಗಿ ಆಮೇಲೆ ಯಾಕೋ ಹೋಗಲೇ ಇಲ್ಲ. ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅವರ ವಿಷಯದಲ್ಲಿ ಸೊನ್ನೆ ಮಾರ್ಕ್ಸ್ ಪಡೆದಿದ್ದೆ. ಅವರು ಕರೆದು ಯಾಕೆ ಟ್ಯೂಷನ್ಗೆ ಬರುತ್ತಿಲ್ಲ ಅಂದಾಗ, ನಾನೇನೂ ಮಾತಾಡದೆ ಸುಮ್ಮನೇ ನಿಂತೆ. ನಾನು ಉತ್ತರ ಹೇಳುತ್ತೇನೆ ಬರೀ ಎಂದರು. ಬರಲ್ಲ ಟೀಚರ್ ಅಂದೆ. ಕೆನ್ನೆಗೆ ಕೈ ಸಡ್ಲು ಬಿಟ್ಟು ಹೊಡೆದರು.

ಉಡಾಳ ಗೆಳೆಯರ ಜೊತೆ ಸೇರಿ ಟ್ಯೂಷನ್ನಿಗೆ ಹೋಗುವ ಹುಡುಗನೊಬ್ಬ ಅವರಿಗೆ ಕೆಟ್ಟದಾಗಿ ಬೈದಿದ್ದ. ಟ್ಯೂಷನ್ ಹುಡುಗರು ಆ ಟೀಚರಿಗೆ ಎಲ್ಲವನ್ನೂ ಸ್ಪಷ್ಟವಾಗಿ ಬಿಡಿಸಿ ಹೇಳಿದ್ದರು. ಬೆಳಿಗ್ಗೆ ಶಾಲೆಯಲ್ಲಿ ನಮಗೆಲ್ಲರಿಗೆ ಕಠಿಣ ಶಿಕ್ಷೆ ಕೊಟ್ಟರು. ಬೈದಿದ್ದವನ ಪೋಷಕರನ್ನು ಕರೆಸಿ ಎಚ್ಚರಿಕೆಯನ್ನು ಕೊಟ್ಟರು. ನಂತರ ನನ್ನ ಮನೆಯಲ್ಲಿ ಇವನನ್ನೂ ಹೀಗೆ ಬಿಟ್ಟರೆ ಉದ್ದಾರ ಆಗಲ್ಲ ಅಂತ ಅಣ್ಣ ಶಿವರಾಜ ನನಗೆ ಕನ್ನಡ ಓದುವುದು, ಬರೆಯುವುದು ತಿದ್ದುತ್ತಾ ನಗುನಗುತ್ತ ಕಲಿಸಿದರು. ಕಲಿಸುವ ಸಮಯದಲ್ಲಿ ಒಂದಿನ ಕೂಡ ಹೊಡೆದಿಲ್ಲ. ಬಹಳ ಸಲ ಬೈದಿದ್ದಾನೆ ಅಷ್ಟೇ! ಆತನೆ ನನಗೆ ಕನ್ನಡ ಕಲಿಸಿದ್ದು. ಆದರೂ ಕನ್ನಡ ಓದೋಕೆ ಸರಿಯಾಗಿ ಬರುತ್ತಿರಲಿಲ್ಲ ಒತ್ತಕ್ಷರ ಓದೋಕೆ ಬರುತ್ತಿರಲಿಲ್ಲ. ಶಾಲೆಯಲ್ಲಿ ಒಂದನೇ ಕಿರು ಪರೀಕ್ಷೆ ಇಟ್ಟಿದ್ದರು. ಅವುಗಳಲ್ಲಿ ನಾನು ಗಳಿಸಿದ್ದ ಅಂಕಗಳು ಜೀರೋ ಮಾತ್ರ. ಅದನ್ನು ಟೀಚರ್ ಅಮರಮ್ಮ ಗಮನಿಸಿ ಪಾಲಕರನ್ನು ಕರೆದುಕೊಂಡು ಬರಬೇಕೆಂದು ಹೇಳಿದರು. ಬೆಳಿಗ್ಗೆ ಬಸವರಾಜ ಅಣ್ಣನ್ನ ಕರೆದುಕೊಂಡು ಹೋದೆ. ನನ್ನ ದಡ್ಡತನವನ್ನು ವಿಸ್ತಾರವಾಗಿ ಅಣ್ಣನ ಮುಂದೆ ಬಿಚ್ಚಿಟ್ಟರು. ಓದಲ್ಲ, ಬರೆಯಲ್ಲ ಜೀರೋ ಮಾರ್ಕ್ಸ್ ಗಳಿಸಿದ್ದಾನೆ ನೋಡಿ ಎಂದು ಪೇಪರ್ ಕೊಟ್ಟರು. ಅದನ್ನು ನೋಡಿ ಅಣ್ಣ ಸುಮ್ಮನಾದ. ಪೋಷಕರ ಸಹಿ ಮಾಡಿ ಮನೆಗೆ ಬಂದ.

ಇಲ್ಲೊಂದು ವಿಷಯ ನಿಮಗೆ ಹೇಳಲೇಬೇಕು. ನನ್ನ ತೊದಲುವಿಕೆ ನನ್ನಿಂದ ಬಂದಿಲ್ಲ. ನನ್ನಪ್ಪ ತೊದಲುತ್ತಿದ್ದ. ಆತನ ತೊದಲುವಿಕೆಯೇ ವಂಶ-ಪಾರಂಪರ್ಯವಾಗಿ ಒಬ್ಬ ಅಣ್ಣ, ಅಕ್ಕ, ನನಗೂ ಬಳುವಳಿಯಾಗಿ ಬಂದುಬಿಟ್ಟಿತ್ತು. ಅವರಿಬ್ಬರೂ ಸುಧಾರಿಸಿದರೆ, ನಾನು ಮಾತ್ರ ಸ್ಪಷ್ಟವಾಗಿ ಮಾತನಾಡುವ ಹಂತದಲ್ಲಿದ್ದೇನೆ ಅಷ್ಟೆ  ಎಂದು ಹೇಳಬಹುದು.

ಅದೊಂದು ದಿನ ಗಣಿತ ನೋಟ್ಸ್ ಚೆಕ್ ಮಾಡಿ ಹುಡುಗರಿಗೆ ಹೊಡೆಯುತ್ತಿದ್ದರು ‘ದನಕ ಬಡದ್ಹಂಗಾ’ ಮುಂದಿನ ಪಾಳೆ(ಸರದಿ) ನನ್ನದೆ ಇದೆ ಎಂದು ನೆನೆದೇ ನನಗೆ ತುಂಬಾ ಭಯವಾಗಿ ಉಗುಳು ನುಂಗಿಕೊಳ್ಳುತ್ತಿದ್ದೆ. ನನ್ನ ಅದೃಷ್ಟ ಅದೇ ಸಮಯದಲ್ಲಿ ರೆಸ್ಟ್‌ಗೆ ಸಮಯ ಆಯಿತು ಉಮೇಶಾ ನಿಮಗೆ ನಾಳೆ ಚೆಕ್ ಮಾಡಿ ನೋಡಿಕೊಳ್ಳುತ್ತೇನೆ ಅಂದರು. ನಾನು ಹೊರಗೆ ಬಂದು ದೇವರಿಗೆ ಕೈ ಮುಗಿದೆ. ಶಾಲೆಯಿಂದ ಮನೆಗೆ ಬಂದ ತಕ್ಷಣ ಊಟ ಮಾಡಿ ಮನೆ ಮೇಲೆ ಒಬ್ಬನೇ ಬರ್ಕೋಂತ ಕುಳಿತು ನಾಲ್ಕರಿಂದ ಎಂಟು ಗಂಟೆಯವರೆಗೆ ಬರೆದು ಮುಗಿಸಿದೆ. ಬೆಳಿಗ್ಗೆ ಬಂದು ತೋರಿಸಿ ಅಂದು ಪೆಟ್ಟಿನಿಂದ ತಪ್ಪಿಸಿಕೊಂಡೆ. ಬಡಿಸಿಕೊಳ್ಳದ ದಿನವೆಂದರೆ ಅದು ನಮ್ಮ ಅದೃಷ್ಟದ ದಿನವೇ ಸರಿ. ಒಂದಿನ ಗಣಿತ ಗುಣಾಕಾರ ಭಾಗಕಾರ ಬರೆಯಿಸಿ ಬಾಯಿಪಾಠ ಮಾಡಿ ನಾಳೆ ಹೇಳಬೇಕು ಎಂದು ಹೇಳಿದ್ದರು ಅಮರಮ್ಮ ಟೀಚರ್. ನಾನು ಕಂಠಪಾಠ ಮಾಡಿರಲಿಲ್ಲ. ಎಲ್ಲಾ ಶಿಕ್ಷಕರು ನಾಲ್ಕು ಏಟು ಹೊಡೆದರೆ ಇವರು ಆರು ಏಟು ಹೊಡಿಯೋಕೆ ಶುರು ಮಾಡಿದರು. ಅವರ ಕೈ ಕೆಂಪಾಗಿ ಹೋಯಿತು. ಮತ್ತೆ ನಾಳೆ ಕೇಳುತ್ತೇನೆ ಹೇಳದಿದ್ದರೆ ಇನ್ನೂ ಹೆಚ್ಚಿಗೆ ಏಟು ಇವೆ ನೋಡೆಂದಾಗ, ಮರುದಿನ ಬಾಯಿಪಾಠ ಮಾಡಿ ಎಲ್ಲರೂ ಹೇಳಿದ ನಂತರ ತೊದಲುತ್ತಾ ಹೇಳಿದೆ. ನನ್ನನ್ನು ಎಬ್ಬಿಸಿ ನಿಲ್ಲಿಸಿ ಚಪ್ಪಾಳೆ ತಟ್ಟಿಸಿದರು.

ಹಂಗೂ ಹಿಂಗೂ ಮಾಡಿ 7ನೇ ಕ್ಲಾಸ್ ಮುಕ್ತಾಯ ಮಾಡಿಯೇ ಬಿಟ್ಟೆ. ಅಶ್ವಿನಿ ಟೀಚರ್ ಒಮ್ಮೆ ಪ್ರೈಮರಿಯಲ್ಲಿ ನಾಲ್ಕು ಜನರನ್ನು ಎಬ್ಬಿಸಿ (ಅದರಲ್ಲಿ ನಾನೂ ಒಬ್ಬ) ನೀವು ಸತ್ರೂ ಹತ್ತನೇ ತರಗತಿ ಪಾಸ್ ಆಗಲ್ಲ. ಬರೆದು ಕೊಡುತ್ತೇನೆ ಅಂದಿದ್ದರು. SSLCಯ ರಿಸಲ್ಟ್ ಬಂದಾಗ ರಸ್ತೆಯಲ್ಲಿ ಸಿಕ್ಕಿ ಅವರೇ ಅಭಿನಂದನೆಗಳು ತಿಳಿಸಿದ್ದರು.

ಒಂದಿನ ಯಾಕೋ ಅವರ ಮನೆಗೆ ಹೋಗಿದ್ದೆ ಕೆಲಸದ ವೇಳೆ ನನಗೆ ಡೈರಿ ಮಿಲ್ಕ್ ಚಾಕೂಲೇಟ್ ಕೊಟ್ಟಿದ್ದರು. ಏಳನೇ ಕ್ಲಾಸ್ ಮಾರ್ಕ್ಸ್‌ಕಾರ್ಡ್ ತರುವುದಕ್ಕೆ ಹೋದಾಗ ಅಶ್ವಿನಿ ಟೀಚರ್ ಯಾವ ಶಾಲೆಗೆ ಹಚ್ಚಿದಿ ಪಾ ಉಮೇಶ ಎಂದು ಕೇಳಿದರು. ನಾನು ವಿನಾಯಕ ಶಾಲೆ ಟೀಚರ್ರ್ ಅಂತ ತೊದಲುತ್ತಾ ಹೇಳಿದೆ. ಸರಿ, ಚೆನ್ನಾಗಿ ಓದು ಇಲ್ಲಿನ ತರಹ ಆ ಶಾಲೆಯಲ್ಲಿ ಮಾಡಿದರೆ “ಹುಚ್ಚನಾಯಿಗೆ ಒದ್ಹಂಗಾ ಒದಿತಾರ” ನೋಡು ಚೆನ್ನಾಗಿ ಅಭ್ಯಾಸ ಮಾಡೆಂದು ಶಾಲೆಯಲ್ಲಿ ಕೊನೆಯದಾಗಿ ಮಾತನಾಡಿದ್ದರು.

ಆ ಶಾಲೆಯಲ್ಲಿ ನನ್ನ ಪ್ರೀತಿಯ ಅಭಿಮಾನದ ಶಿಕ್ಷಕರು ಅಮರಮ್ಮ, ಅಶ್ವಿನಿ, ಗೌರಿ, ರೇಷ್ಮಾ, ದೌಲಮ್ಮ ಟೀಚರ್. ಇವರೇ ನನ್ನನ್ನು ದನಕ್ಕೆ ಹೊಡೆದ್ಹಂಗ ಹೊಡೆಯುತ್ತಿದ್ದರು. ಆದರೂ ನಾನು ಇವರನ್ನೇ ಪ್ರೀತಿಯಿಂದ ಇಷ್ಟಪಡುತ್ತೇನೆ. ಇವರ ಬಗ್ಗೆ ದೊಡ್ಡ ಅಭಿಮಾನವಿದೆ. ಹೊಡೆಯುತ್ತಲೇ ತಿದ್ದಿದವರು ಇವರು!

ಎಸ್‌ ಕೆ ಉಮೇಶ

ರಾಯಚೂರು ಜಿಲ್ಲೆಯ ಲಿಂಗಸಗೂರಿನ ಹಟ್ಟಿ ಚಿನ್ನದ ಗಣಿಯವರಾದ ಇವರು ಅಲೆಮಾರಿ ಸಮುದಾಯದಕ್ಕೆ ಸೇರಿದವರು. ಪ್ರಸ್ತುತ ಧಾರವಾಡದ ಕೆಇ ಬೋರ್ಡ್‌ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾರೆ.

You cannot copy content of this page

Exit mobile version