ದೆಹಲಿ: 2020 ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗಳಲ್ಲಿ ಅಂಗಡಿಯನ್ನು ಲೂಟಿ ಮಾಡಿ ಧ್ವಂಸಗೊಳಿಸಿದ ಏಳು ಜನ ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ. ಬಾಬು, ದಿನೇಶ್ ಯಾದವ್, ಟಿಂಕು, ಸಂದೀಪ್, ಗೋಲು ಕಶ್ಯಪ್, ವಿಕಾಸ್ ಕಶ್ಯಪ್ ಮತ್ತು ಅಶೋಕ್ – ಖುಲಾಸೆಗೊಂಡವರು.
2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಪರ ಹಾಗೂ ವಿರೋಧಿಗಳ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು. ಹಿಂಸಾಚಾರದಲ್ಲಿ ಸತ್ತವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.
2020 ರ ಮಾರ್ಚ್‌ನಲ್ಲಿ ಗೋಕಲ್ಪುರಿ ಪೊಲೀಸ್ ಠಾಣೆಯಲ್ಲಿ ಸಲ್ಮಾನ್ ಮಲಿಕ್ ಎಂಬವರು ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಗಲಭೆಯ ಸಂದರ್ಭದಲ್ಲಿ ಗುಂಪೊಂದು ಸಲ್ಮಾನ್ ಮಲಿಕ್ ಅವರ ಅಂಗಡಿಯನ್ನು ಲೂಟಿ ಮಾಡಿ ಬೆಂಕಿ ಹಚ್ಚಿತ್ತು, ಇದರಿಂದಾಗಿ 5 ಲಕ್ಷ ರುಪಾಯಿ ವರೆಗೆ ನಷ್ಟವಾಗಿತ್ತು.
ಸೋಮವಾರ ನಡೆದ ವಿಚಾರಣೆಯಲಲ್ಲಿ ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ದೂರುದಾರರ ಅಂಗಡಿಗೆ ಗಲಭೆಕೋರರ ಗುಂಪು ಬೆಂಕಿ ಹಚ್ಚುವ ಮೊಬೈಲ್ ವೀಡಿಯೊವೊಂದನ್ನು ಪರಿಶೀಲಿಸಿದರು.
ಆದರೆ, ಫೋರೆನ್ಸಿಕ್ ವರದಿಯ ಆಧಾರದ ಮೇಲೆ ನ್ಯಾಯಾಲಯವು ಇದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. “ಅಂಗಡಿಗೆ ಬೆಂಕಿ ಇಟ್ಟ ದಿನಾಂಕವನ್ನು ಒಬ್ಬನೇ ಸಾಕ್ಷಿ ಬೇರೆ ಬೇರೆ ರೀತಿಯಲ್ಲಿ ನೀಡಿದ್ದಾನೆ. ಫೆಬ್ರವರಿ 24, 2020 ರಂದು ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ತನಿಖಾಧಿಕಾರಿಗೆ ತಿಳಿಸಿದ ಸಾಕ್ಷಿ, ನ್ಯಾಯಾಲಯದಲ್ಲಿ ಫೆಬ್ರವರಿ 25 ಎಂದಿದ್ದಾರೆ,” ಎಂದು ನ್ಯಾಯಾಧೀಶ ಪ್ರಮಾಚಲ ಹೇಳಿದ್ದಾರೆ.
“ಘಟನೆಯ ಸಮಯಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ದಾಖಲೆಯ ಮೇಲೆ ತಂದ ಸಾಕ್ಷ್ಯದಲ್ಲಿ ತಪ್ಪುಗಳಾಗಿವೆ. ಪ್ರಾಸಿಕ್ಯೂಷನ್‌ನ ಇಂತಹ ವಿರೋಧಾಭಾಸಗಳಿಂದಾಗಿ ಆರೋಪಿಗಳ ಪರವಾಗಿ ನಾವು ಹೋಗಬೇಕು,” ಎಂದು ನ್ಯಾಯಾದೀಶರು ತಿಳಿಸಿದ್ದಾರೆ.
ಪೊಲೀಸರಿಗೆ ಛೀಮಾರಿ ಹಾಕಿದ ಕೋರ್ಟ್
ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಗಲಭೆ ಮತ್ತು ಕಾನೂನುಬಾಹಿರವಾಗಿ ಸೇರುವ ಸಭೆಗೆ ಸಂಬಂಧಿಸಿದ ಎರಡು ಗಲಭೆ ಸಂಬಂಧಿತ ಪ್ರಕರಣಗಳಲ್ಲಿ 39 ದೂರುಗಳನ್ನು ಒಟ್ಟಿಗೆ ಸೇರಿಸಿದ್ದಕ್ಕಾಗಿ ನ್ಯಾಯಾಧೀಶರಾದ ಪ್ರಮಾಚಲ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ್ದನ್ನು ಎಂದು ಲೈವ್ ಲಾ ವರದಿ ಮಾಡಿದೆ.
ಈ ಘಟನೆಗಳ ದಿನಾಂಕ ಮತ್ತು ಸಮಯವನ್ನು ದೃಢೀಕರಿಸಲು ದಾಖಲೆಗಳಲ್ಲಿ ಯಾವುದೇ ಪುರಾವೆಗಳಿಲ್ಲದಿರುವುದನ್ನು ಗಮನಿಸಿದ ನ್ಯಾಯಾಲಯವು ದೂರುಗಳ ಕುರಿತು ಹೆಚ್ಚಿನ ತನಿಖೆಗಳನ್ನು ಕೈಗೊಳ್ಳಲು ಪ್ರತ್ಯೇಕವಾಗಿ ಆದೇಶಿಸಿದೆ.
ಅಫ್ತಾಬ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ 2020 ರಲ್ಲಿ ದಯಾಲ್‌ಪುರ ಪೊಲೀಸರು ಜಾವೇದ್, ಗುಲ್ಫಾಮ್ ಮತ್ತು ಪಪ್ಪು ಅಲಿಯಾಸ್ ಮುಸ್ತಕೀಮ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಗಲಭೆಕೋರರ ಗುಂಪೊಂದು ಅವರ ಅಂಗಡಿಯನ್ನು ಲೂಟಿ ಮಾಡಿ ಬೆಂಕಿ ಹಚ್ಚಿದೆ ಎಂದು ಆರೋಪಿಸಿದ್ದರು.
ಇನ್ನೊಂದು ಎಫ್‌ಐಆರ್ ದಯಾಲ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಜಮೀರ್ ಅಹ್ಮದ್ ಅವರು ತಮ್ಮ ಅಂಗಡಿಯನ್ನು ಗುಂಪೊಂದು ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.