ಮೀರತ್: ಬೀದಿನಾಯಿಯೊಂದು ಮೃತಪಟ್ಟ ಘಟನೆಯಿಂದ ನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಇಲ್ಲಿನ ಕಂಕರಖೇಡದಲ್ಲಿ ನಡೆದಿದೆ.
ಬೀದಿನಾಯಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯುವತಿ ಗೌರಿ (24) ಅವುಗಳಿಗೆ ಊಟ ನೀಡುವುದು, ಶುಶ್ರೂಶೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ಒಂದು ಬೀದಿನಾಯಿ ಅಪಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಬದುಕುಳಿಯಲಿಲ್ಲ. ಇದರಿಂದಾಗಿ ನೊದ ಗೌರಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದ ಜಿಗಿದು ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ.
ಗೌರಿಯ ತಂದೆ ಸಂಜಯ್ ತ್ಯಾಗಿ ಅವರ ಪುತ್ರ ಸಾರ್ಥಕ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಇಂಜಿನಿಯರ್. ಮಗಳು ಗೌರಿ ಈ ವರ್ಷ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾಳೆ. ಆಕೆ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಗುರುವಾರ ಸಂಜೆ ಸಾಕು ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ಆಕೆ ರಸ್ತೆಯಲ್ಲಿ ಗಾಯಗೊಂಡಿದ್ದ ನಾಯಿಯನ್ನು ನೋಡಿ ಮನೆಗೆ ಕರೆತಂದಿದ್ದಾಳೆ. ನಾಯಿಯ ಶುಶ್ರೂಶೆ ಮಾಡಿದ್ದಾಳೆ. ಆದರೆ ಅದು ಮೃತಪಟ್ಟಿತು. ಆ ನೋವಿನಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.