ಸಿಡ್ನಿ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕಪ್ಪುಚುಕ್ಕೆಯೆಂಬಂತೆ, ಶ್ರೀಲಂಕ ಆಟಗಾರ ಧನುಷ್ಕ ಗುಣತಿಲಕ ಅತ್ಯಾಚಾರದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಸಿಡ್ನಿಯ ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ 29 ವರ್ಷದ ಶ್ರೀಲಂಕ ಬ್ಯಾಟ್ಸ್ ಮನ್ ಧನುಷ್ಕ ಗುಣತಿಲಕ ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ.
ಧನುಷ್ಕ ಅವರು ಡೇಟಿಂಗ್ ಆಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಪಡೆದಿದ್ದು, ನಂತರ ಈ ಅತ್ಯಾಚಾರ ಪ್ರಕರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಗುಣತಿಲಕ ಶ್ರೀಲಂಕ ತಂಡದ ಆರಂಭಿಕ ಆಟಗಾರ. ಶ್ರೀಲಂಕ ತಂಡಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಆಡಿದ್ದಾರೆ.
ಶ್ರೀಲಂಕ ತಂಡ ಲೀಗ್ ಹಂತದಿಂದ ಹೊರಗೆ ಬಿದ್ದಿದ್ದು, ಆಟಗಾರರು ವಾಪಾಸ್ ಶ್ರೀಲಂಕ ತೆರಳುತ್ತಿದ್ದಾರೆ. ಈ ನಡುವೆ ತಂಡದ ಆಟಗಾರನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದರಿಂದ ತಂಡ ಮುಜುಗರಕ್ಕೆ ಸಿಲುಕಿದೆ.