ವಿರೋಧ ಪಕ್ಷದ ಬ್ಯಾನರ್‌ನಲ್ಲಿ ಒಂದು ವೃತ್ತಾಕಾರದ ಒಳಗೆ ಬಹುಪಾಲು ಎಲ್ಲಾ ಇಪ್ಪತ್ತಾರು ಪಕ್ಷಗಳ ಮುಖಂಡರುಗಳ ಫೋಟೊಗಳು, ಸಮಪ್ರಮಾಣದಲ್ಲೇ ಒಳಗೊಳ್ಳಲ್ಪಟ್ಟಿದ್ದವು. ತಮ್ಮ ಮೈತ್ರಿಕೂಟಕ್ಕೆ ಹೊಸದಾಗಿ ಇರಿಸಿಕೊಂಡಿರುವ ‘ಇಂಡಿಯಾ’ (I.N.D.I.A) ಎಂಬ ಹೆಸರಿನಲ್ಲಿ ಎರಡನೇ ‘ಐ’ ವಿವರಿಸುವ ಇನ್‌ಕ್ಲ್ಯೂಸಿವ್‌ನೆಸ್‌ಗೆ ಆ ಬ್ಯಾನರ್ ತಕ್ಕುದಾಗಿ ಇದ್ದಂತೆ ಗೋಚರಿಸಿತು. ಆದರೆ ಎನ್‌ಡಿಎ ಮೈತ್ರಿಕೂಟದ ಬ್ಯಾನರ್‌ನಲ್ಲಿ ರಾರಾಜಿಸುತ್ತಿದ್ದುದು ಕೇವಲ ಮೋದಿಯವರ ಫೋಟೊ ಮಾತ್ರ! – ಗಿರೀಶ್ ತಾಳಿಕಟ್ಟೆ, ಪತ್ರಕರ್ತರು.
ಎರಡು ದಿನಗಳ ಅಂತರದಲ್ಲಿ ದೇಶದಲ್ಲಿ ಎರಡು ಪ್ರಮುಖ ವಿದ್ಯಮಾನಗಳು ಜರುಗಿದವು. ಮೊದಲನೆಯದ್ದು ಬೆಂಗಳೂರಿನಲ್ಲಿ ಜರುಗಿದ 26 ವಿರೋಧ ಪಕ್ಷಗಳ ಮೈತ್ರಿ ಸಭೆ. ಎರಡನೆಯದು, ಅದರ ಮಾರನೇ ದಿನವೇ ದಿಲ್ಲಿಯಲ್ಲಿ ಸಮಾವೇಶಗೊಂಡ 38 ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಸಭೆ. ಮುಂದಿನ ವರ್ಷ ದೇಶವು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವುದರಿಂದ ಇವೆರಡೂ ಸಭೆಗಳು ರಾಜಕೀಯ ನಿಟ್ಟಿನಿಂದ ಮಹತ್ವದ್ದಾಗಿದ್ದವು. ಇವುಗಳ ಪರಿಣಾಮ, ಸಭೆಯ ಕಾಮನ್ ಅಜೆಂಡಾ, ಚರ್ಚೆಯಾದ ವಿಚಾರಗಳು, ಸೀಟು ಹಂಚಿಕೆಯ ಸೂತ್ರ, ಇವುಗಳ ಪೈಕಿ ಯಾರಿಗೆ ಅನುಕೂಲಕರ ವಾತಾವರಣ ಇದೆ…. ಇವೆಲ್ಲಾ ಗಂಭೀರ ಚರ್ಚೆಗೆ ಒಳಪಡಬೇಕಾದ ಸಂಗತಿಗಳು. ಆದರೆ ಅದೆಲ್ಲಕ್ಕಿಂತ ಮೊದಲು ವಿಶೇಷವಾಗಿ ಗಮನ ಸೆಳೆದ ಒಂದು ಸಂಗತಿಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ತಮ್ಮತಮ್ಮ ಈ ಕಾರ್ಯಕ್ರಮಗಳಿಗೆ ಈ ಮೈತ್ರಿಕೂಟಗಳು ಕಟ್ಟಿಕೊಂಡಿದ್ದ ಬ್ಯಾನರ್‌ಗಳು ಏನನ್ನೋ ಒತ್ತಿ ಹೇಳುತ್ತಿರುವಂತೆ ನನಗೆ ಭಾಸವಾಯ್ತು. ವಿರೋಧ ಪಕ್ಷದ ಬ್ಯಾನರ್‌ನಲ್ಲಿ ಒಂದು ವೃತ್ತಾಕಾರದ ಒಳಗೆ ಬಹುಪಾಲು ಎಲ್ಲಾ ಇಪ್ಪತ್ತಾರು ಪಕ್ಷಗಳ ಮುಖಂಡರುಗಳ ಫೋಟೊಗಳು, ಸಮಪ್ರಮಾಣದಲ್ಲೇ ಒಳಗೊಳ್ಳಲ್ಪಟ್ಟಿದ್ದವು. ತಮ್ಮ ಮೈತ್ರಿಕೂಟಕ್ಕೆ ಹೊಸದಾಗಿ ಇರಿಸಿಕೊಂಡಿರುವ ‘ಇಂಡಿಯಾ’ (I.N.D.I.A) ಎಂಬ ಹೆಸರಿನಲ್ಲಿ ಎರಡನೇ ‘ಐ’ ವಿವರಿಸುವ ಇನ್‌ಕ್ಲ್ಯೂಸಿವ್‌ನೆಸ್‌ಗೆ ಆ ಬ್ಯಾನರ್ ತಕ್ಕುದಾಗಿ ಇದ್ದಂತೆ ಗೋಚರಿಸಿತು. ಆದರೆ ಎನ್‌ಡಿಎ ಮೈತ್ರಿಕೂಟದ ಬ್ಯಾನರ್‌ನಲ್ಲಿ ರಾರಾಜಿಸುತ್ತಿದ್ದುದು ಕೇವಲ ಮೋದಿಯವರ ಫೋಟೊ ಮಾತ್ರ! ಇನ್ನುಳಿದ ಮಿತ್ರಪಕ್ಷಗಳ ನಾಯಕರುಗಳಿಗೆ ಅಲ್ಲಿ ಕಿಂಚಿತ್ತೂ ಸ್ಥಾನವಿರಲಿಲ್ಲ. ‘ಮೋದಿ ನಮ್ಮ ಬಹುದೊಡ್ಡ ಲೀಡರು, ಮುಂಬರುವ ಲೋಕಸಭಾ ಚುನಾವಣೆಗೂ ಅವರೇ ಪಿಎಂ ಕ್ಯಾಂಡಿಡೇಟ್. ಹಾಗಾಗಿ ಅವರ ಫೋಟೊವನ್ನಷ್ಟೇ ಹಾಕಿಕೊಂಡಿದ್ದೇವೆ’ ಅಂತ ಸಮರ್ಥಕರು ಸಮರ್ಥಿಸಿಕೊಳ್ಳಬಹುದು.
ಆದರೆ ಮೋದಿಯವರ ಡಾಮಿನೇಟಿಂಗ್ ಆಟಿಟ್ಯೂಡ್ ಮತ್ತು ಇಡೀ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯು ಇತರೆ ಪಕ್ಷಗಳನ್ನು ಮೂಲೆಗುಂಪಾಗಿಸಿರುವ ವಿದ್ಯಮಾನಗಳನ್ನು ಕಂಡಾಗ, ಅದು ಆ ಸಮರ್ಥನೆಯಷ್ಟು ಸರಳವಲ್ಲ ಅನ್ನೋದು ಗೊತ್ತಾಗುತ್ತೆ.
ಬೇಸಿಕಲಿ, ಅದೊಂದು ಪ್ರಧಾನಿ ಸ್ಥಾನದ ಚುನಾವಣಾ ಪ್ರಚಾರ ಸಭೆಯಾಗಿರಲಿಲ್ಲ. ಹಾಗಾಗಿ ಪ್ರಧಾನಿ ಅಭ್ಯರ್ಥಿ, ಪ್ರಧಾನ ಲೀಡರ್ ಎಂಬುದು ಅಪ್ರಸ್ತುತ. ಮೈತ್ರಿಕೂಟ ಸಭೆ. ಮೈತ್ರಿ ಎಂದರೆ ಡಿಕ್ಷ್‌ನರಿಯಲ್ಲಿ ಸ್ನೇಹ, ಗೆಳೆತನ ಎಂಬ ಅರ್ಥಗಳಿವೆ. ಪ್ರತಿಯೊಬ್ಬರಿಗೂ ಸಮಾನ ಪಾಲುದಾರಿಕೆ ಹಾಗೂ ಸಮಾನ ಆತ್ಮಗೌರವ ಇದ್ದಾಗ ಅದನ್ನು ಸ್ನೇಹ ಅಥವಾ ಮೈತ್ರಿ ಅಂತನ್ನಬಹುದು. ಯಾರೋ ಒಬ್ಬರು ಹೆಚ್ಚು ಮುಖ್ಯ, ಇನ್ನುಳಿದವರು ಕಡಿಮೆ ಮುಖ್ಯ ಎಂದಾದರೆ ಅದು ಯಜಮಾನಿಕೆಯ ದಾರ್ಷ್ಟ್ಯವಾಗುತ್ತದೆ. ಎನ್‌ಡಿಎ ಮೈತ್ರಿಕೂಟದ ಬ್ಯಾನರ್ ಹೊರಸೂಸುತ್ತಿದ್ದುದು ಕೂಡಾ ಇದೇ ಅಭಿಪ್ರಾಯವನ್ನು. ನೀವು ಸಾಮಾನ್ಯವಾಗಿ ಗಮನಿಸಿ ನೋಡಿ, ಯಾವುದೇ ಒಂದು ಪಕ್ಷದ ಕಾರ್ಯಕ್ರಮವಾದರೂ, ಅಲ್ಲಿ ಒಬ್ಬ ವ್ಯಕ್ತಿಯ ಫೋಟೊ ಇರುವುದಿಲ್ಲ. ಅಧ್ಯಕ್ಷ, ನ್ಯಾಶನಲ್ ಲೀಡರ್‌ಗಳು, ಹೀಗೆ ಕೆಲವರಿಗಾದರೂ, ಮೂಲೆಯಲ್ಲಾದರೂ ಜಾಗ ಕೊಟ್ಟಿರುತ್ತಾರೆ. ಅಂತದ್ದರಲ್ಲಿ ಹಲವಾರು ಪಕ್ಷಗಳ ಈ ಸಭೆಯಲ್ಲಿ ಬೇರೆ ಪಕ್ಷಗಳ ನಾಯಕರಿಗೂ ಜಾಗವಿಲ್ಲದೆ ಮೋದಿ ರಾರಾಜಿಸುತ್ತಿದ್ದಾರೆಂದರೆ, ಅದು ಲೀಡರ್‌ಶಿಪ್ ಅನ್ನಿಸಿಕೊಳ್ಳುವುದಕ್ಕಿಂತ ಕಮಾಂಡರ್‌ಶಿಪ್ ಅನ್ನಿಸಿಕೊಳ್ಳುತ್ತದೆ. ಕಮಾಂಡಿಂಗ್ ಕೂಟದಲ್ಲಿ, ಕಮಾಂಡರ್ ಹೊರತುಪಡಿಸಿ ಇನ್ನುಳಿದವರಿಗೇನಿದ್ದರೂ ಆಜ್ಞಾಪಾಲನ ಕರ್ತವ್ಯವಷ್ಟೇ!
ಅಂದಹಾಗೆ, ಎನ್.ಡಿ.ಎ ಪದದಲ್ಲಿ ಡಿ ಅಕ್ಷರವು ಡೆಮಾಕ್ರಟಿಕ್ ಎಂಬುದನ್ನು ಪ್ರತಿನಿಧಿಸುತ್ತದೆ. ಮೋದಿಯವರು ಮಾತ್ರವೇ ರಾರಾಜಿಸುತ್ತಿದ್ದ ಬ್ಯಾನರ್, ಆ ಡೆಮಾಕ್ರೆಟಿಕ್ ಎಂಬ ಪದವನ್ನೇ ಅಣಕಿಸುತ್ತಿದ್ದಂತಿತ್ತು. ಯಾಕೆಂದರೆ ಡೆಮಾಕ್ರೆಟಿಕ್ ಮೌಲ್ಯ ಯಾವಾಗಲೂ, ಎಲ್ಲರನ್ನೂ ಸಮನಾಗಿ ಪರಿಗಣಿಸಿ, ಎಲ್ಲರಿಗೂ ಸಮಾನ ಸ್ಥಾನವನ್ನು ಖಾತ್ರಿಗೊಳಿಸುತ್ತದೆ. ಜನರೇ (ಪ್ರತಿಯೊಬ್ಬರೂ) ‘ಪ್ರಭುತ್ವ’ವಾದ ಡೆಮಾಕ್ರಟಿಕ್ ಆಶಯದಲ್ಲಿ ಯಾರೋ ಒಬ್ಬರು ಮಾತ್ರ ರಾರಾಜಿಸುವುದು ಅಸಂಬದ್ಧವಲ್ಲವೇ?
ಹೋಗಲಿ ಬಿಡಿ, ಇದೆಲ್ಲ ಅವರವರ ಮೈತ್ರಿಕೂಟದ ಆಂತರಿಕ ವಿಚಾರ ಅಂತ ಸುಮ್ಮನಾಗಬೇಕಾದ ಸಂಗತಿ. ಆದರೆ ತಮ್ಮ ಪಕ್ಷದ ಹೆಸರಿನಲ್ಲೇ ಜಾತ್ಯತೀತತೆ ಇದ್ದಾಗಲೂ, ಬೇರೆಯವರನ್ನು ಜಾತ್ಯತೀತತೆಗೆ ಡೆಫಿನಿಷನ್ ಕೇಳುವ ನಮ್ಮ ಕುಮಾರಸ್ವಾಮಿಯವರು, ಕರ್ನಾಟಕದ ಜನರು ಕೊಟ್ಟಿರುವ ತೀರ್ಪಿನ ವಿರುದ್ಧ ಸೇಡು ತೀರಿಸಿಕೊಳ್ಳುವ ಧಾವಂತದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಲು ಹಾತೊರೆಯುತ್ತಿದ್ದಾರಲ್ಲಾ, ಅವರ ಮತ್ತು ಅವರ ಪಕ್ಷದ ಭವಿಷ್ಯವನ್ನು ನೆನಪಿಸಿಕೊಂಡಾಗ, ಆ ಬ್ಯಾನರ್‌ನಲ್ಲಿ ಮುಖವೂ ಕಾಣದೆ ನಾಪತ್ತೆಯಾದ ಇನ್ನುಳಿದ ಮೂವತ್ತೇಳು ಪಕ್ಷಗಳ ನಾಯಕರುಗಳ ದುಸ್ಥಿತಿ ಕಣ್ಣ ಮುಂದೆ ಸುಳಿದು ಹೋಯ್ತಷ್ಟೆ…
ಗಿರೀಶ್ ತಾಳಿಕಟ್ಟೆ
ಪತ್ರಕರ್ತರು
ಇದನ್ನೂ ಓದಿ-ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಯಾಕಿಷ್ಟು ಸಿಟ್ಟು?