ಸಂಚಾರಿ ಬಸ್ ಒಂದು ಬ್ರೇಕ್ ಪೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 25 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ಮಹಾರಾಷ್ಟ್ರದ ಕುರ್ಲಾ ಪಶ್ಚಿಮ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದ ಬಳಿ ಬೃಹನ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್(ಬೆಸ್ಟ್) ಬಸ್ ಚಾಲನೆಯಲ್ಲಿರುವಾಗ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಪಾದಚಾರಿಗಳ ಮೈ ಮೇಲೆ ಹರಿದು ನಾಲ್ವರು ಮೃತರಾಗಿದ್ದಾರೆ.
ತೀವ್ರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಿಯಾನ್ ಮತ್ತು ಕುರ್ಲಾ ಭಾಭಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಂಬೇಡ್ಕರ್ ನಗರದ ಬುದ್ಧ ಕಾಲೋನಿ ಬಳಿ ಈ ಘಟನೆ ನಡೆದಿದೆ. ಮಾರ್ಗ ಸಂಖ್ಯೆ 332 ರ ಬೆಸ್ಟ್ ಬಸ್ ಚಾಲಕ ಚಕ್ರದ ಮೇಲೆ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಮತ್ತು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಬೆಸ್ಟ್ ಅಂಡರ್‌ಟೇಕಿಂಗ್‌ನ ಬಸ್ ನಂತರ ವಸತಿ ಸಮಾಜದ ಗೇಟ್‌ಗೆ ಡಿಕ್ಕಿ ಹೊಡೆದು ಸ್ಥಗಿತಗೊಂಡಿದೆ. ಅಪಘಾತದ ನಿಖರ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಮತ್ತು ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ.