ಲಕ್ನೋ: ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ರಾಜ್ಯದ ಮತದಾರರ ಪಟ್ಟಿಯಲ್ಲಿ ಹಲವು ಅಕ್ರಮಗಳು ಮತ್ತು ಅವ್ಯವಹಾರಗಳು ನಡೆದಿವೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಆರೋಪಿಸಿದ್ದಾರೆ. ಮಹೋಬಾ ಜಿಲ್ಲೆಯ ಒಂದೇ ಮನೆಯಲ್ಲಿ 4,271 ಮತದಾರರು ದಾಖಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹೋಬಾ ಜಿಲ್ಲೆಯ ಎರಡು ಮನೆಗಳಲ್ಲಿ 243 ಮತ್ತು 185 ಮತದಾರರಿದ್ದಾರೆ ಎಂದು ಸೋಮವಾರ ಹೇಳಿದ್ದೆ. ಆದರೆ, ಅದಕ್ಕಿಂತಲೂ ಆಘಾತಕಾರಿ ವಿಷಯವನ್ನು ಈಗ ಪತ್ತೆ ಹಚ್ಚಿದ್ದೇನೆ ಎಂದರು.
ಅದೇ ಜಿಲ್ಲೆಯ ಮತ್ತೊಂದು ಮನೆಯಲ್ಲಿ 4,271 ಜನರು ಮತದಾರರಾಗಿ ನೋಂದಣಿಯಾಗಿದ್ದು, ಇಷ್ಟು ಮತದಾರರು ಇದ್ದಾರೆಂದರೆ, ಆ ಮನೆಯ ಒಟ್ಟು ಕುಟುಂಬ ಸದಸ್ಯರ ಸಂಖ್ಯೆ 12 ಸಾವಿರದವರೆಗೆ ಇರಬಹುದು ಎಂದು ಅವರು ಹೇಳಿದರು. ಆಡಳಿತಾರೂಢ ಬಿಜೆಪಿ ಮತ್ತು ಚುನಾವಣಾ ಆಯೋಗದ ಒಳಸಂಚಿನಿಂದಾಗಿ ಮೊದಲು ಯುಪಿಯಲ್ಲಿಯೇ ‘ಮತಗಳ ಕಳ್ಳತನ’ ಪ್ರಾರಂಭವಾಗಿದೆ ಎಂದು ಅವರು ಆರೋಪಿಸಿದರು.
ಈ ಅಸಾಮಾನ್ಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. ಮಹೋಬಾದಲ್ಲಿ ಮಾತ್ರವಲ್ಲ, ರಾಜ್ಯದ ಹಲವು ಕಡೆಗಳಲ್ಲಿಯೂ ಇಂತಹ ಅಕ್ರಮಗಳು ನಡೆದಿವೆ, ಮತ್ತು ತಮ್ಮ ಪಕ್ಷ ಅದನ್ನು ಸಹ ಹೊರಗೆ ತರುತ್ತದೆ ಎಂದು ಅವರು ಹೇಳಿದರು.