ಬಾಲಿವುಡ್ ನಟ ಆಮೀರ್ ಖಾನ್ ಅವರ ಮೂರನೇ ಮದುವೆಯ ಕುರಿತು ಬಿಜೆಪಿ ನಾಯಕ ನಿತೇಶ್ ರಾಣೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ ಕೂಡ ನಟನನ್ನು ಗುರಿಯಾಗಿಸಿಕೊಂಡು ತೀಕ್ಷ್ಣವಾಗಿ ಮಾತನಾಡಿದ್ದಾರೆ.
ಆಮೀರ್ ಖಾನ್ ಅವರನ್ನು “ಲವ್ ಜಿಹಾದ್”ನ ಬ್ರಾಂಡ್ ಅಂಬಾಸಿಡರ್ ಎಂದು ಕರೆದಿರುವ ಶಿರ್ಸಾತ್, ಆಮೀರ್ ಖಾನ್ ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಮೂರು ಬಾರಿ ಮದುವೆಯಾಗಿರುವ ಅವರ ಈ ನಡೆ ಜನಸಾಮಾನ್ಯರ ಹೃದಯ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಾಗ ಹಿಂದೂ ಸಮಾಜವು ಇದರ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದ ಬಿಜೆಪಿ ನಾಯಕ ಹಾಗೂ ರಾಜ್ಯ ಸಚಿವ ನಿತೇಶ್ ರಾಣೆ ಅವರ ಮಾತುಗಳಿಗೆ ಶಿರ್ಸಾತ್ ಬೆಂಬಲ ಸೂಚಿಸಿದ್ದಾರೆ. ಆಮೀರ್ ಖಾನ್ ಅವರ ಈ ಇತ್ತೀಚಿನ ಮದುವೆಯನ್ನು ‘ಲವ್ ಜಿಹಾದ್’ಗೆ ಒಂದು ಉದಾಹರಣೆಯಾಗಿ ನೋಡಬೇಕೇ ಎಂದು ರಾಣೆ ಈ ಮುನ್ನ ಪ್ರಶ್ನಿಸಿದ್ದರು.
“ನಿತೇಶ್ ರಾಣೆ ಅವರ ಮಾತುಗಳು ಒಂದು ಮಟ್ಟಿಗೆ ಸರಿಯಾಗಿವೆ. ಜನರು ನಿಮ್ಮನ್ನು (ಆಮೀರ್ ಖಾನ್) ಒಬ್ಬ ನಟನಾಗಿ ಇಷ್ಟಪಡುವಾಗ, ನೀವು ದೊಡ್ಡ ಸ್ಟಾರ್ ಎಂದು ಭಾವಿಸುತ್ತಾರೆ. ಇಂತಹ ಸ್ಟಾರ್ ನಟರೇ ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾದರೆ ಜನರು ಅವರಿಂದ ಏನನ್ನು ಕಲಿಯುತ್ತಾರೆ? ಅವರು ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್ ಆಗಬಹುದೇ ಹೊರತು, ಸಾಮಾನ್ಯ ಜನರ ಹೃದಯದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ,” ಎಂದು ಶಿರ್ಸಾತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತರ ಧರ್ಮದ ಮಹಿಳೆಯರನ್ನು ಗುರಿಯಾಗಿಸಿಕೊಂಡು, ವಂಚಿಸಿ ಮದುವೆಯಾಗುವ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಮುಸ್ಲಿಂ ಪುರುಷರು ನಡೆಸುವ ವ್ಯವಸ್ಥಿತ ಸಂಚೇ “ಲವ್ ಜಿಹಾದ್” ಎಂದು ಬಲಪಂಥೀಯ ಸಂಘಟನೆಗಳು ಪದೇ ಪದೇ ಆರೋಪಿಸುತ್ತಾ ಬಂದಿವೆ.
ಆಮೀರ್ ಖಾನ್ ಅವರು ಜುಲೈ 5 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಪಾಲಿ ಹಿಲ್ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಆರೋಗ್ಯ ಮತ್ತು ಸೌಂದರ್ಯ ಕ್ಷೇತ್ರದ ವೃತ್ತಿಪರರಾದ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿದ್ದರು. ನಟ ಆಮೀರ್ ಖಾನ್ ಅವರು ಈ ಹಿಂದೆ 1986 ರಿಂದ 2002 ರವರೆಗೆ ರೀನಾ ದತ್ತಾ ಮತ್ತು 2005 ರಿಂದ 2021 ರವರೆಗೆ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು.
