Home ರಾಜ್ಯ ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ

ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ

0

ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಬೆಳೆ ಅಡಿಕೆಗೆ 1990 ನಂತರದಲ್ಲಿನ ಬೆಲೆ ಏರಿಕೆಯಿಂದ ಅಡಿಕೆ ಬೆಳೆಗಾರರಿಗೆ ಗೌರವ ತಂದುಕೊಟ್ಟಿದ್ದು, ನಮ್ಮಗಳ ಆರ್ಥಿಕ ಭದ್ರತೆಯನ್ನು ಸಹ ಹೆಚ್ಚಿಸಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟಿದೆ, ಹಳೆಮನೆಗಳನ್ನು ಕೆಡವಿ ಹೊಸಮನೆಗಳನ್ನು ನಿರ್ಮಿಸುವಂತೆ ಮಾಡಿದೆ, ಮಕ್ಕಳ ಮದುವೆಯನ್ನು ಸಂಭ್ರಮದಿಂದ ಮಾಡುವಂತೆ ಮಾಡಿದೆ, ಮನೆ ಮನೆಗೂ ಬೈಕು- ಕಾರುಗಳು ಬರುವಂತೆ ಮಾಡಿದೆ ಅಷ್ಟೇ ಅಲ್ಲಾ ಮಲೆನಾಡು ಭಾಗದ ಕೃಷಿ ಕೂಲಿಕಾರರ ಬದುಕನ್ನು ಸುಧಾರಿಸಿದೆ ಕನಿಷ್ಟ ಸಂಬಳದಿಂದ ಒಂದು ಹಂತದ ಗೌರವಯುತ ಸಂಬಳ ಪಡೆಯುವ ಹಂತಕ್ಕೆ ತಂದಿದೆ. ಒಟ್ಟಿನಲ್ಲಿ ಒಂದು ರೀತಿಯಲ್ಲಿ ಮಲೆನಾಡನ್ನು ಅಡಿಕೆ ಶ್ರೀಮಂತಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ಬದುಕು ರೂಪಿಸಿದ ಅಡಿಕೆ ಹಲವು ಸಮಸ್ಯೆಗಳನ್ನು ತನ್ನೊಂದಿಗೆ ಇಟ್ಟುಕೊಂಡಿದೆ, ಮಳೆಗಾಲದಲ್ಲಿ ನಿರಂತರವಾಗಿ ಬಾಧಿಸುವ ಕೊಳೆರೋಗ, ದಶಕಗಳಿಂದ ಇರುವ ಹಳದಿ ರೋಗ, ಹಿಂಡಿಮುಂಡೆ ರೋಗ ಬಾರಿ ನಷ್ಟವನ್ನೆ ಉಂಟು ಮಾಡಿದ್ದು ಈ ರೋಗಗಳಿಂದ ಹಲವೆಡೆ ತೋಟಗಳು ಸಂಪೂರ್ಣ ನಾಶವಾಗಿದ್ದರೆ ಹಲವೆಡೆ ಬೇಸಿಗೆಯಲ್ಲಿನ ನೀರಿನ ಕೊರತೆಯಿಂದ ತೋಟಗಳು ನಾಶವಾಗಿದ್ದನ್ನು ಸಹ ನೋಡಿದ್ದೇವೆ ಕಳೆದ ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ನೀರಿನ ಸಮಸ್ಯೆ ಇಲ್ಲವಾಗಿದೆ ಆದರೆ ಈ ವರ್ಷ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ ಹಲವೆಡೆ ಅಡಿಕೆ ತೋಟವನ್ನು ಸರ್ವನಾಶ ಮಾಡಿದೆ, ಅತ್ಯಂತ ಹೆಚ್ವು ಮಳೆ ಮತ್ತು ಶೀತಕ್ಕೆ ಈ ರೋಗ ಬಂದಿದೆ ಎನ್ನಲಾಗುತ್ತಿದೆ, ಇದೊಂದು ಪಂಗಸ್ ಎಂತಲೂ ಹೇಳಲಾಗುತ್ತಿದೆ ಆದರೆ ಇದಕ್ಕೆ ಇದುವರೆವಿಗೂ ಸೂಕ್ತ ಜೌಷದಿಯನ್ನು ಕಂಡು ಹಿಡಿದಿಲ್ಲ. ಈ ಬಗ್ಗೆ ನಡೆದ ಹೋರಾಟಗಳಿಂದ ಎಚ್ಚೆತ್ತ ಸರ್ಕಾರ ಈ ಎಲೆ ಚುಕ್ಕಿ ರೋಗಕ್ಕ ಜೌಷದಿ ಕಂಡು ಹಿಂಡಿಯಲು ಸಂಶೋದಕರ ತಂಡವನ್ನು ನೇಮಿಸಿದೆ ಆದರೆ ಈ ತಂಡ ಇನ್ನೂ ನಮ್ಮ ರೈತರ ತೋಟಗಳಿಗೆ ಬೇಟಿ ನೀಡಿಲ್ಲ, ಬಿಸಿಲು ಆರಂಭವಾಗಿದ್ದರಿಂದ ರೋಗ ನಿಯಂತ್ರಣಕ್ಕೆ ಬರಬಹುದೆಂಬ ವಿಶ್ವಾಸದಲ್ಲಿ ರೈತರು ಇದ್ದಾರೆಯೇ ಹೊರತು ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಡುತ್ತೆ ಎಂಬ ವಿಶ್ವಾಸ ಕಳೆದುಕೊಂಡಿದ್ದಾರೆ.

ಮಲೆನಾಡಿಗರ, ಅದರಲ್ಲೂ ಅಡಿಕೆ ಬೆಳೆಗಾರರ ಎಲ್ಲಾ ಸಮಸ್ಯೆ ನೀಗಿಸಲಿದ್ದೇವೆ ಎಂದು ಆಶ್ವಾಸನೆ ಕೊಟ್ಟಿದ್ದ ಆರಗ ಜ್ಞಾನೇಂದ್ರರವರಿಂದ ಹಿಡಿದು ಅಮಿತ್ ಶಾ ವರೆಗೆ ಡಬ್ಬಲ್ ಇಂಜಿನ ಸರ್ಕಾರದ ಗೃಹ ಮಂತ್ರಿಗಳ ಆಡಳಿತದಲ್ಲೇ ಭೂತಾನ ದೇಶದ ಅಡಿಕೆ 17 ಲಕ್ಷ ಟನ್ ಸುಂಕ ರಹಿತವಾಗಿ ಅಮಾದು ಆಯಿತು, ಮತ್ತು ಇನ್ನಷ್ಟು ಅಡಿಕೆ ಅಮದು ಆಗುವ ಸಂಭವವಿದೆ ಇದರ ಮೂಲ ಉದ್ದೇಶ ಮತ್ತು ಮೊನ್ನೆಯ ಆರಗ ಜ್ಞಾನೇಂದ್ರರವರು ಅಡಿಕೆ ಕುರಿತು ಅಸೆಂಬ್ಲಿಯಲ್ಲಿ “ಮುಂದೆ ಅಡಿಕೆಗೆ ಭವಿಷ್ಯವಿಲ್ಲ ಮುಂದೆ ಅಡಿಕೆಗೆ ಹೆಚ್ಚಿನ ಮಾನ್ಯತೆ ನೀಡಬಾರದು, ಪ್ರೋತ್ಸಾಹಿಸಬಾರದು” ಎಂಬುವುದಕ್ಕು ಬಹಳಷ್ಟು ಸಾಮ್ಯತೆ ಇದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಎಂಬ ಗಾದೆಯನ್ನು ನಾವು ಇಂತಹ ರಾಜಕರಣಿಗಳಿಗೆ ಬರುವ ಚುನಾವಣೆಯಲ್ಲಿ ಅರ್ಥೈಸಿ ತೋರಿಸಬೇಕಾಗಿದೆ.

ಅಡಿಕೆ ಬೆಳೆ ನಿಯಂತ್ರಣದಲ್ಲಿ ಇರಬೇಕು ಇದಕ್ಕೆ ಕಡಿವಾಣ ಹೇರಬೇಕು ಎಂಬುವ ಪರಿಜ್ಞಾನ ಅಥವಾ ಜ್ಣಾನೋದಯ ಇವರಿಗೆ ಇಷ್ಟೊಂದು ತಡವಾಗಿ ಅಯಿತೆ, ಡ್ಯಾಂಗಳನ್ನು ಕಟ್ಟಿ ನಮ್ಮ ಮಲೆನಾಡಿಗರ ಬದುಕನ್ನು ಮುಳುಗಿಸಿ ಬಯಲು ಸೀಮೆಗೆ ನೀರು ಹರಿಸಿದಾಗ ಸರ್ಕಾರದ ನಿಯಮಾವಳಿ ಪ್ರಕಾರ ಅದು ಆಹಾರ ಬೆಳೆಗಳನ್ನು ಬೆಳೆಯಲು ಮತ್ತು ಕುಡಿಯುವ ನೀರಿಗಾಗಿ ಇತ್ತು ಅಲ್ಲಿಯ ರೈತರಿಗೆ ಆಹಾರದ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕಿತ್ತು, ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಿ ಪ್ರೋತ್ಸಾಹ ನೀಡಿದ್ದರೆ, ಕಬ್ಬುಗಳು ಬೆಳೆಯುವಲ್ಲಿ ಕಬ್ಬಿಗೆ ಉತ್ತಮ ಬೆಲೆ ನೀಡಿದ್ದರೆ ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ದಿ ಪಡಿಸಿದ್ದರೆ ಮುಚ್ಚಿಹೋದ ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನ ಗೊಳಿಸಿದ್ದರೆ ಮಲೆನಾಡಿಗರ ಸಂಪ್ರದಾಯಿಕ ಬೆಳೆಯಾಗಿದ್ದ ಅಡಿಕೆ ಬಯಲು ಸೀಮೆಯಲ್ಲಿ ಬೆಳೆಯುವ ಬೆಳೆ ಆಗುತ್ತಿರಲಿಲ್ಲ.

ಅಡಿಕೆ ಬಯಲು ಸೀಮೆಯ ಜನರ ಬದುಕನ್ನು ಹಸನಗೊಳಿಸಿದೆ ಅವರು ಅಡಿಕೆ ಬೆಳೆದಿದ್ದು ತಪ್ಪು ಎಂದು ಹೇಳುತ್ತಿಲ್ಲ, ಅವರು ಬೆಳೆದ ಆಹಾರಿಕ ಬೆಳೆಗೆ, ಕಬ್ಬಿಗೆ ಸರಿಯಾದ ಮಾರುಕಟ್ಟೆ ಒದಗಿಸದ ಸರ್ಕಾರದ ಹೊಣೆಗೇಡಿತನವೇ ಅವರು ಅಡಿಕೆ ಬೆಳೆಯನ್ನು ಬೆಳೆಯುವ ಅನಿವಾರ್ಯ ಪರಿಸ್ಥಿತಿಗೆ ತಂದಿತು, ಈಗ ಇಡಿ ದೇಶದಲ್ಲಿಯೇ ನಾವು ಅತಿ ಹೆಚ್ವು ಅಡಿಕೆ ಬೆಳೆಯುತ್ತೇವೆ, ರಪ್ತುಮಾಡುವಷ್ಟು ಪ್ರಮಾಣದ ಅಡಿಕೆ ನಮ್ಮಲ್ಲಿಯೇ ಇದ್ದರೂ ಸಹ ಯಾವ ಕಾರಣಕ್ಕಾಗಿ ಭೂತಾನ ದೇಶದಿಂದ ಅಡಿಕೆ ಅಮದು ಮಾಡಿಕೊಳ್ಳುತ್ತಿರುವರು? ನಮ್ಮಲ್ಲಿ ಭವಿಷ್ಯವೇ ಇಲ್ಲವೆಂಬ ಬೆಳೆಯನ್ನು ವಿದೇಶದಿಂದ ಯಾವ ಕಾರಣಕ್ಕಾಗಿ ಲಕ್ಷಾಂತರ ಟನ್ ಅಡಿಕೆಗಳನ್ನು ಸುಂಕರಹಿತವಾಗಿ ಅಮದು ಮಾಡಿಕೊಳ್ಳುತ್ತಿರುವಿರಿ? ವಿದೇಶಿ ಅಡಿಕೆ ಇಲ್ಲಿ ಭವಿಷ್ಯ ರೂಪಿಸಿ ಕೊಡುವ ಮತ್ತು ನಮ್ಮ ಅಡಿಕೆಗೆ ಭವಿಷ್ಯವಿಲ್ಲದ ನಿಮ್ಮ ಸರ್ಕಾರದಲ್ಲಿ ಸ್ವತಹ ಅಡಿಕೆ ಬೆಳೆಗಾರರಾದ ಮತ್ತು ಪ್ರಭಾವಿ ಹುದ್ದೆಯ ಗೃಹ ಮಂತ್ರಿಯಾಗಿರುವ ನೀವು ನಿಮ್ಮ ಪಕ್ಷದ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಅಡಿಕೆಗೆ ಭವಿಷ್ಯವೆ ಇಲ್ಲಾ ಅಂದ ಮೇಲೆ ಒಂದು ನಿಮ್ಮ ಪಕ್ಷಕ್ಕೆ ಮತ್ತು ಮಂತ್ರಿಗಿರಿಗೆ ರಾಜಿನಾಮೆ ಕೊಡಿ ಇಲ್ಲಾ ಭವಿಷ್ಯವಿಲ್ಲದ ಅಡಿಕೆ ಬೆಳೆ ಬೆಳೆದಿರುವ ನೀವು ನಿಮ್ಮ ಅಡಿಕೆ ತೋಟವನ್ನು ನಾಶಪಡಿಸಿ ಅಡಿಕೆಗೆ ಬೆಲೆ ಇಲ್ಲಾ ಎಂದು ಸಾಬೀತು ಪಡಿಸಲು ನೀವು ಮೊದಲು ಬೇರೆ ಬೆಳೆಯನ್ನು ಬೆಳೆದು ತೋರಿಸಿ.

ಮೊದಲೆ ಸಂಕಷ್ಟದಲ್ಲಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಾ ಬೇಕಾದ ಜವಬ್ದಾರಿಯುತ ವ್ಯಕ್ರಿಯಾದ ನಿಮ್ಮ ಹೇಳಿಕೆ ಖಂಡನೀಯ, ನಮ್ಮ ಮಲೆನಾಡಿಗರಿಗೆ ಏಕಾಎಕಿ ಅಡಿಕೆ ಬೆಳೆ ಬಿಟ್ಟು ಬೆರೆ ಬೆಳೆಯಲು ತೋಟ ನಿರ್ಮಿಸಿದ ಜಾಗದಲ್ಲಿ ಸಾಧವೇ, ಲಕ್ಷಾಂತರ ಜನರು ಅಡಿಕೆ ಬೆಳೆಯನ್ನು ಬೆಳೆದು ಬದುಕು ಸಾಗಿಸುತ್ತಿದ್ದಾರೆ ಈ ಬೆಳೆಯ ಮಾರುಕಟ್ಟೆ ನಂಬಿಕೊಂಡು ಸಹ ಲಕ್ಷಾಂತರ ಜನ ದಲ್ಲಾಳಿಗಳು ಮಾರಾಟಗಾರರು ಹಾಗೂ ಈ ಅಡಿಕೆ ಕೃಷಿಯ ಕೂಲಿಯಿಂದ ಜೀವನ ನಿರ್ವಹಿಸುವ ಲಕ್ಷಾಂತರ ಜನ ಕೂಲಿ ಕಾರ್ಮಿಕರು ಎಲ್ಲಿ ಹೋಗಬೇಕು ಗೃಹ ಮಂತ್ರಿಗಳೆ?

– ಕೆ‌. ಪಿ. ಶ್ರೀಪಾಲ.

 ವಕೀಲರು, ಶಿವಮೊಗ್ಗ.

You cannot copy content of this page

Exit mobile version