ಜನವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜನ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಡಿಸೆಂಬರ್ 29ರಂದು ನಡೆಯಿತು, ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಮತ್ತು ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕರು ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ವಹಿಸಿದ್ದರು. “ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ತಾನು ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎನ್ನುತ್ತಾರೆ. ಅದು ನಿಜವೇ ಆಗಿದ್ದಲ್ಲಿ ಅವರ ನಡೆ, ನುಡಿಯಲ್ಲಿ ತೋರಿಸಬೇಕು. ಕಸಾಪ ಒಂದು ಕಾಲದಲ್ಲಿ ಕನ್ನಡದ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಯಾಗಿತ್ತು. ಆದರೆ ಈಗ ನಾಡಿನ ಚಿಂತನೆಯನ್ನೇ ಕಸಾಪ ಇಟ್ಟುಕೊಂಡಿಲ್ಲ. ಮಹೇಶ್ ಜೋಷಿಯವರು ಕಸಾಪವನ್ನು ಸರಿ ಮಾಡಲಾಗದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹೀಗೆ ಮುಂದುವರೆದರೆ ಜಾತ್ಯಾತೀತ ಮನೋಭಾವದ ಸದಸ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುವ ಮೂಲಕ ಉತ್ತರ ನೀಡಬೇಕಾದೀತು” ಎಂದು ಅಗ್ರಹಾರ ಕೃಷ್ಣಮೂರ್ತಿಯವರು ಎಚ್ಚರಿಸಿದರು.
“ಜನಸಾಹಿತ್ಯ ಸಮ್ಮೇಳನ ಸರಳವಾಗಿರಲಿ. ನಾವು ಚಿಂತನೆಗಳ ಮೂಲಕ ಕಸಾಪದ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ವ್ಯಕ್ತಪಡಿಸಬೇಕು” ಎಂದೂ ಅವರು ಹೇಳಿದರು.
ಬಿಳಿಮಲೆಯವರ ವಿರುದ್ಧ ಸುಳ್ಳು ಆರೋಪ ಮಾಡಿದ ಜೋಶಿ ವಿರುದ್ದ ಖಂಡನೆ
ಕಸಾಪ ಕನ್ನಡ ಸಾಹಿತ್ಯ ಸಮ್ಮೇಳನದ ದ್ವೇಷದ ರಾಜಕಾರಣವನ್ನು ವಿಮರ್ಶೆ ಮಾಡಿದ ಕನ್ನಡ ನಾಡಿನ ಖ್ಯಾತ ಚಿಂತಕ ಪ್ರೊ ಪುರುಷೋತ್ತಮ ಬಿಳಿಮಲೆ ವಿರುದ್ದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸುಳ್ಳು ಆರೋಪ ಮಾಡಿ ನಾಚಿಕೆಗೇಡಿನ ವರ್ತನೆ ತೋರಿದ್ದಾರೆ. ಈ ರೀತಿಯ ಕೀಳುಮಟ್ಟದ ನಡತೆಯನ್ನು ಹೊಂದಿರುವ ಮಹೇಶ್ ಜೋಶಿ ಯಾವ ಕಾರಣಕ್ಕೂ ತನ್ನ ಹುದ್ದೆಯಲ್ಲಿ ಮುಂದುವರೆಯಬಾರದು. ಕನ್ನಡದ ಸಾಹಿತಿಗಳೆಲ್ಲರೂ ಮಹೇಶ್ ಜೋಶಿ ವರ್ತನೆಯನ್ನು ಖಂಡಿಸಿ, ಪ್ರೊ. ಪುರುಷೋತ್ತಮ ಬಿಳಿಮಲೆಯವರ ಜೊತೆ ನಿಲ್ಲುವ ಬಗ್ಗೆ ಚರ್ಚೆ ನಡೆಯಿತು.
ಮಹಿಳಾ ಹೋರಾಟಗಾರ್ತಿ, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಮಾತನಾಡಿ “ಬಿಳಿಮಲೆ ಅವರ ಕುರಿತಾದ ಜೋಶಿಯ ಹೇಳಿಕೆಯನ್ನು ನಾವೆಲ್ಲರೂ ಖಂಡಿಸಬೇಕು. ನಾವುಗಳು ನಡೆಸುವ ಜನಸಾಹಿತ್ಯ ಸಮಾವೇಶದಲ್ಲಿ ಮಹಿಳಾ, ಅಲ್ಪ ಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತ, ಮಕ್ಕಳು, ಯುವಜನರು, ದಲಿತ ಪ್ರಾತಿನಿಧ್ಯ ಇರುವಂತೆ ಎಚ್ಚರ ವಹಿಸಬೇಕು” ಎಂದರು.
ಮಾಜಿ ಐಪಿಎಸ್ ಅಧಿಕಾರಿ, ಸಾಹಿತಿ ಬಿ ಕೆ ಶಿವರಾಂ ಮಾತನಾಡಿ “ಕಸಾಪ ಈಗ ದಳ್ಳಾಳಿಗಳ ಕೂಟವಾಗಿದೆ. ಇಂದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಸರಿಸಿದ ಪ್ರೊ ಬಿಳಿಮಲೆಯ ಬಗ್ಗೆ ಕೆಟ್ಟದಾಗಿ ಆರೋಪಿಸಿದ ಕಸಾಪ ಅಧ್ಯಕ್ಷ ಜೋಶಿ ನಾಳೆಯ ದಿನ ಶಿಶುನಾಳ ಶರೀಫರನ್ನು ಹೀಯಾಳಿಸಿದರೂ ಅಚ್ಚರಿಯಿಲ್ಲ” ಎಂದರು.
ಈ ಕನ್ನಡ ನೆಲದಲ್ಲಿ ಕ್ಯಾಥೊಲಿಕ್ ಕನ್ನಡ ಸಂಘ, ಮಹಮ್ಮದೀಯರ ಕನ್ನಡ ಸಂಘ ಇತ್ತು. ಅವುಗಳು ಕನ್ನಡದ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟಿದ್ದವು. ಕ್ಯಾಥೊಲಿಕ್ ಕನ್ನಡ ಸಂಘವಂತೂ ಕನ್ನಡದ ಪರವಾಗಿ ನಡೆಸಿದ ಹೋರಾಟ ವ್ಯಾಟಿಕನ್ ಸಿಟಿಯನ್ನು ಅಲುಗಾಡಿಸಿತ್ತು. ಕನ್ನಡಕ್ಕಾಗಿನ ಈ ಸಂಘರ್ಷದ ಇತಿಹಾಸ ಜೋಶಿಯಂತಹ ಕೋಮುವಾದಿಗಳಿಗೆ ಗೊತ್ತಿದೆಯೇ? ಎಂದು ಬಿ ಕೆ ಶಿವರಾಂ ಪ್ರಶ್ನಿಸಿದರು.
ಹಿರಿಯ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಮಾತನಾಡಿ “ಜನಸಾಹಿತ್ಯ ಸಮಾವೇಶ ಎಲ್ಲಾ ಜನಸಮುದಾಯಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯ, ಸಂಸ್ಕೃತಿಗೆ ಆಧ್ಯತೆಯನ್ನು ಕೊಟ್ಟು ಜನಸಮುದಾಯಗಳನ್ನು ಒಳಗೊಳ್ಳುವುದೇ ನಾವು ತೋರಿಸುವ ಒಳ್ಳೆ ಪ್ರತಿರೋಧ ಆಗುತ್ತದೆ” ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ “ನಮ್ಮ ಸಮುದಾಯವು ಜನಸಾಹಿತ್ಯ ಸಮಾವೇಶದ ಜೊತೆ ಇದೆ. ಕಸಾಪದ ಅಧ್ಯಕ್ಷರು ಹಲವು ಬಾರಿ ಲಿಂಗ ಸೂಕ್ಷ್ಮತೆಯನ್ನೂ ಮರೆತು ಹೇಳಿಕೆ ಕೊಟ್ಟಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲೂ ಲಿಂಗಸೂಕ್ಷ್ಮತೆಯನ್ನು ಕಡೆಗಣಿಸಲಾಗಿದೆ” ಎಂದರು.
ನವೀನ್ ಸೂರಿಂಜೆ ಮಾತನಾಡಿ “ಜನಸಾಹಿತ್ಯ ಸಮಾವೇಶ ಪರ್ಯಾಯವೂ ಅಲ್ಲ, ಬಂಡಾಯವೂ ಅಲ್ಲ. ಮುಸ್ಲಿಂ, ದಲಿತರನ್ನು ಹೊರಗಿಟ್ಟಿರುವುದಷ್ಟೇ ಕಾರಣವೂ ಅಲ್ಲ. ಅದೂ ಒಂದು ಕಾರಣ. ಒಟ್ಟಾರೆ ಕಸಾಪದ ಹಿಡನ್ ಅಜೆಂಡಾ ಬಹಿರಂಗವಾಗಿದೆ. ಭಜರಂಗದಳ ಬೀದಿಯಲ್ಲಿ ಮಾಡುವ ದೌರ್ಜನ್ಯವನ್ನೇ ಮಹೇಶ್ ಜೋಶಿಯವರು ಕಸಾಪ ವೇದಿಕೆಯಲ್ಲಿ ಮಾಡುತ್ತಿದ್ದಾರೆ. ಅದಕ್ಕಾಗಿ ಸಮಾನ ಮನಸ್ಕರೆಲ್ಲರೂ ಜನಸಾಹಿತ್ಯ ಸಮ್ಮೇಳನ ಎಂಬ ಪ್ರತಿರೋಧ ಸಮಾವೇಶ ಹಮ್ಮಿಕೊಂಡಿದ್ದೇವೆ” ಎಂದರು.
ಸರಳತೆಯೂ ನಮ್ಮ ಸಿದ್ದಾಂತ ಭಾಗವಾಗಿರುವುದರಿಂದ ಜನಸಾಹಿತ್ಯ ಸಮಾವೇಶವು ಅತ್ಯಂತ ಸರಳವಾಗಿರುತ್ತದೆ. ಹೆಚ್ಚೆಂದರೆ ಒಂದೂವರೆ ಲಕ್ಷದಲ್ಲಿ ಕಾರ್ಯಕ್ರಮದ ಖರ್ಚು ವೆಚ್ಚಗಳು ಮುಗಿಯುತ್ತದೆ. ಹಾಗಾಗಿ ಯಾರೂ ಕೂಡಾ ದೊಡ್ಡ ಮೊತ್ತದ ದೇಣಿಗೆಯನ್ನು ಖಾತೆಗೆ ಹಾಕಬೇಡಿ. ಹಾಗೇನಾದರೂ ದೊಡ್ಡ ಮೊತ್ತ ಹಾಕಿದರೆ ಮರಳಿಸಲಾಗುವುದು. ಯಾವುದೇ ರಾಜಕಾರಣಿ, ಉದ್ಯಮಿಗಳ ಬಳಿ ದೇಣಿಗೆ ಸಂಗ್ರಹಿಸುವುದಿಲ್ಲ. ಕಡಿಮೆ ಬಾಡಿಗೆಯ ಹಾಲ್, ಅನ್ನ, ಸಾಂಬರ್, ಪಲ್ಯ, ಚಿಕನ್ ಕಬಾಬ್ ಮೆನು ಇರುವ ಊಟದ ವ್ಯವಸ್ಥೆಯನ್ನು ಆಲೋಚಿಸಲಾಗಿದೆ. ಉತ್ತಮ ಗುಣಮಟ್ಟದ ಮೀನು ಕಡಿಮೆ ಬೆಲೆಯಲ್ಲಿ ದೊರೆತರೆ ಮೀನು ಸಾರು ಮಾಡಿಸುವ ಅಲೋಚನೆಯೂ ಇದೆ. ಆಹಾರ ಪದ್ದತಿಯೂ ಒಂದು ರಾಜಕಾರಣವಾದ್ದರಿಂದ ಫುಡ್ ಕೌಂಟರ್ ಕೂಡಾ ಒಂದು ಗೋಷ್ಠಿ ಎಂದೇ ನಾವು ಪರಿಗಣಿಸುತ್ತೇವೆ” ಎಂದು ನವೀನ್ ಸೂರಿಂಜೆ ಸಂಘಟನೆಯ ವಿವರ ನೀಡಿದರು.
ಸಂಘಟಕರಲ್ಲಿ ಒಬ್ಬರಾದ ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಮಾತನಾಡಿ “ಜನಸಾಹಿತ್ಯ ಸಮ್ಮೇಳನ ಎಂಬುದು ಸಾಮೂಹಿಕ ನಾಯಕತ್ವದ ಸಮ್ಮೇಳನ. ಪ್ರಜಾತಾಂತ್ರಿಕ ನೆಲೆಯಲ್ಲಿ ಎಲ್ಲರನ್ನೂ ಒಳಗೊಂಡು ಜನಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತದೆ. ಕಸಾಪ ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ, ದಲಿತ ದ್ವೇಷ ಕಂಡು ಬಂದ ತಕ್ಷಣ ಪ್ರತಿರೋಧ ವ್ಯಕ್ತಪಡಿಸಬೇಕು ಎಂದು ದಿನೇಶ್ ಅಮೀನ್ ಮಟ್ಟು ಅವರ ಜೊತೆ ಸೇರಿ ಚರ್ಚೆ ನಡೆಸಿದ್ದೆವು. ಪುರುಷೋತ್ತಮ ಬಿಳಿಮಲೆಯವರೂ ದ್ವನಿಗೂಡಿಸಿದ್ದರು. ಈಗ ಈ ಜನಸಾಹಿತ್ಯ ಸಮ್ಮೇಳನವು ರಾಜ್ಯದ ಮೂಲೆಮೂಲೆ ತಲುಪಿದೆ. ಎಲ್ಲಾ ಜಿಲ್ಲೆಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ” ಎಂದರು.
ಹೋರಾಟಗಾರ ಡಾ ಎಚ್ ವಿ ವಾಸು ಮಾತನಾಡಿ “ಜನಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶೇಕಡಾ 80ರಷ್ಟು ಮಂದಿ ಯುವ ಸಮುದಾಯವಿರಬೇಕು” ಎಂದರು.
ಕಸಾಪದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಾವೇರಿಯಲ್ಲೇ ಜನರ ವಿರೋಧ ವ್ಯಕ್ತವಾಗಿದೆ. ಹಾವೇರಿಯ ಹಲವು ಸಾಹಿತಿಗಳು 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಹಿಷ್ಕರಿಸಿ ಜನಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ಹಾವೇರಿಯ ಯುವಜನ ನಾಯಕ ಬಸವರಾಜ ಪೂಜಾರ್ ಹೇಳಿದರು.
ಹುಲಿಕುಂಟೆ ಮೂರ್ತಿ, ರಾಜಶೇಖರ್ ಕಿಗ್ಗ, ಟಿ ಸುರೇಂದ್ರ ರಾವ್ ರವರು ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋರಾಟಗಾರರಾದ ವಿನಯ್ ಶ್ರೀನಿವಾಸ್, ವಿಶ್ವನಾಥ್ ಅನೆಕಟ್ಟೆ, ಸನತ್ ಕುಮಾರ್, ಅಬ್ಬಾಸ್ ಕಿಗ್ಗ, ನಾಗೇಗೌಡ, ಮುರಳಿ ಕಾಟಿ, ಲವನಿಕಾ, ಕಾವ್ಯ ಅಚ್ಯುತ್, ವಿಕಾಸ್ ಪೂಜಾರಿ ಸೇರಿದಂತೆ 40 ಕ್ಕೂ ಹೆಚ್ಚು ಸಾಹಿತಿ, ಹೋರಾಟಗಾರರು ಭಾಗವಹಿಸಿದ್ದರು.