ಪಿಎಂ ಕೇರ್ಸ್ ನಿಧಿಯ 8,500 ಕೋಟಿ ಹಣವನ್ನು ಹೊಸ ಶಾಲೆಗಳ ನಿರ್ಮಾಣಕ್ಕೆ ಬಳಸಿ: ಅಭಿಜಿತ್ ದೀಪ್ಕೆ

ದೆಹಲಿ: ಪಿಎಂ ಕೇರ್ಸ್ (PM CARES) ನಿಧಿಯಲ್ಲಿರುವ ಸುಮಾರು 8,500 ಕೋಟಿ ರೂಪಾಯಿ ಹಣವನ್ನು ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಬಳಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂಬ ವರದಿ ಬೆನ್ನಲ್ಲೇ, ಈ ಹಣವನ್ನು ಬಡ ಮಕ್ಕಳ ಶಿಕ್ಷಣ ಮತ್ತು ಹೊಸ ಶಾಲೆಗಳ ನಿರ್ಮಾಣಕ್ಕೆ ಏಕೆ ಬಳಸಬಾರದು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಧ್ವನಿಯೆತ್ತಿರುವ ಅವರು, “ಒಂದೆಡೆ ದೇಶದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳು ಕುಡಿಯುವ ನೀರು, ಕೂರಲು ಬೆಂಚ್, ಉತ್ತಮ ರಸ್ತೆಗಳಂತಹ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಅನುದಾನದ ಕೊರತೆ’ ಎಂಬ ಸಬೂಬು ನೀಡುತ್ತಾರೆ. ಆದರೆ, ಮತ್ತೊಂದೆಡೆ ಪಿಎಂ ಕೇರ್ಸ್ ನಿಧಿಯಲ್ಲಿ 8,500 ಕೋಟಿ ರೂ. ಹಣ ಬಳಕೆಯಾಗದೆ ಹಾಗೆಯೇ ಬಿದ್ದಿದೆ. ಈ ಹಣವನ್ನು ಬಡ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಏಕೆ ಉಪಯೋಗಿಸುತ್ತಿಲ್ಲ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಗಳ ನಿರ್ಮಾಣದ ಲೆಕ್ಕಾಚಾರವನ್ನು ಮುಂದಿಟ್ಟಿರುವ ದೀಪ್ಕೆ, “ಎಲ್ಲಾ ಅತ್ಯಾಧುನಿಕ ಸೌಲಭ್ಯಗಳಿರುವ ಒಂದು ಹೈಟೆಕ್ ಮಾದರಿ ಶಾಲೆಯ ನಿರ್ಮಾಣಕ್ಕೆ ಅಂದಾಜು 8 ಕೋಟಿ ರೂ. ವೆಚ್ಚವಾಗುತ್ತದೆ ಎಂದುಕೊಂಡರೂ, ನಿಧಿಯಲ್ಲಿರುವ 8,500 ಕೋಟಿ ರೂ.ಗಳಲ್ಲಿ ದೇಶಾದ್ಯಂತ 1,000ಕ್ಕೂ ಹೆಚ್ಚು ಹೊಸ ಮಾದರಿ ಶಾಲೆಗಳನ್ನು ಸುಲಭವಾಗಿ ನಿರ್ಮಿಸಬಹುದು. ಸರ್ಕಾರ ಮನಸ್ಸು ಮಾಡಿದರೆ ಎಷ್ಟೋ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬದಲಾಯಿಸಬಹುದು,” ಎಂದು ವಿವರಿಸಿದ್ದಾರೆ.

“ಪಿಎಂ ಕೇರ್ಸ್ ನಿಧಿಯಲ್ಲಿರುವ 8,500 ಕೋಟಿ ಹಣ ಪ್ರಧಾನಿಯವರ ವೈಯಕ್ತಿಕ ಹಣವಲ್ಲ; ಅದು ದೇಶದ ಜನತೆ ನೀಡಿರುವ ಸಾರ್ವಜನಿಕ ಹಣ. ಹೀಗಾಗಿ, ಪ್ರಧಾನಿಯವರು ನಿಜವಾಗಿಯೂ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದ್ದರೆ, ಈ ನಿಧಿಯನ್ನು ತಕ್ಷಣವೇ ಬಡಮಕ್ಕಳ ಶಿಕ್ಷಣ ಮತ್ತು ಶಾಲೆಗಳ ಅಭಿವೃದ್ಧಿಗಾಗಿ ಬಳಸಬೇಕು,” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ನೇರ ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು