Home ದೇಶ ಕಾಕ್ರೋಚ್ ಜನತಾ ಪಾರ್ಟಿ ಕೇವಲ ಸೋಷಿಯಲ್ ಮೀಡಿಯಾ ಗಿಮಿಕ್: ಅದಕ್ಕೆ ತಳಮಟ್ಟದಲ್ಲಿ ಅಸ್ತಿತ್ವವಿಲ್ಲ ಎಂದ ಎಬಿವಿಪಿ...

ಕಾಕ್ರೋಚ್ ಜನತಾ ಪಾರ್ಟಿ ಕೇವಲ ಸೋಷಿಯಲ್ ಮೀಡಿಯಾ ಗಿಮಿಕ್: ಅದಕ್ಕೆ ತಳಮಟ್ಟದಲ್ಲಿ ಅಸ್ತಿತ್ವವಿಲ್ಲ ಎಂದ ಎಬಿವಿಪಿ ನಾಯಕ ಸೋಲಂಕಿ

0

ಭುವನೇಶ್ವರ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕೇವಲ ಫಾಲೋವರ್ಸ್‌ಗಳನ್ನು ಗಳಿಸಲು ನಡೆಸಿರುವ ಒಂದು “ಸೋಷಿಯಲ್ ಮೀಡಿಯಾ ಸ್ಟಂಟ್” ಅಷ್ಟೇ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಸಿಂಗ್ ಸೋಲಂಕಿ ಲೇವಡಿ ಮಾಡಿದ್ದಾರೆ.

ಮೇ 29 ರಿಂದ 31 ರವರೆಗೆ ಒಡಿಶಾದಲ್ಲಿ ನಡೆಯಲಿರುವ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸೋಲಂಕಿ, ಈ ಕಾಕ್ರೋಚ್ ಜನತಾ ಪಾರ್ಟಿಗೆ ತಳಮಟ್ಟದಲ್ಲಿ ಯಾವುದೇ ಅಸ್ತಿತ್ವವಿಲ್ಲ ಮತ್ತು ದೇಶದ ಯುವಜನತೆಯೊಂದಿಗೆ ಅದಕ್ಕೆ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದರು. ಆನ್‌ಲೈನ್‌ನಲ್ಲಿ ಸೃಷ್ಟಿಯಾದ ಒಂದು ಸಣ್ಣ ಸನ್ನಿವೇಶದ ಲಾಭ ಪಡೆದು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇದನ್ನು ಹುಟ್ಟುಹಾಕಲಾಗಿದೆಯೇ ಹೊರತು, ಇದು ವಾಸ್ತವ ನೆಲೆಯ ಸಂಘಟನೆಯಲ್ಲ ಎಂದು ಅವರು ಆಕ್ಷೇಪಿಸಿದರು.

ನ್ಯಾಯವಾದಿಗಳಿಗೆ ‘ಹಿರಿಯ’ (Senior) ಸ್ಥಾನಮಾನ ನೀಡುವ ಕುರಿತಾದ ಕೋರ್ಟ್ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ‘ಜಿರಳೆಗಳು’ (Cockroaches) ಮತ್ತು ‘ಪರಾವಲಂಬಿಗಳು’ (Parasites) ಎಂದು ಬಳಸಿದ್ದ ಕೆಲವು ಪದಗಳ ವಿವಾದದ ಬೆನ್ನಲ್ಲೇ ಈ ವ್ಯಂಗ್ಯ ರಾಜಕೀಯ ವೇದಿಕೆಯು ಆನ್‌ಲೈನ್‌ನಲ್ಲಿ ಮುಂಚೂಣಿಗೆ ಬಂದಿತ್ತು. ಆದರೆ, ನಕಲಿ ಮತ್ತು ಬೋಗಸ್ ಪದವಿಗಳನ್ನು ಪಡೆದು ವಕೀಲಿ ವೃತ್ತಿಗೆ ಪ್ರವೇಶಿಸುವವರನ್ನು ಉಲ್ಲೇಖಿಸಿ ತಾವು ಆ ಮಾತುಗಳನ್ನು ಆಡಿದ್ದಾಗಿಯೂ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಸಿಜೆಐ ನಂತರ ಸ್ಪಷ್ಟನೆ ನೀಡಿದ್ದರು.

ನೀಟ್ ಪೇಪರ್ ಲೀಕ್ ಮತ್ತು ಶಿಕ್ಷಣ ಸುಧಾರಣೆ:

ಇದೇ ವೇಳೆ ದೇಶಾದ್ಯಂತ ಭಾರಿ ಚರ್ಚೆಯಲ್ಲಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮಾತನಾಡಿದ ಸೋಲಂಕಿ, “ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹಲವು ಶಿಕ್ಷಣ ಸುಧಾರಣೆಗಳು ಜಾರಿಗೆ ಬಂದಿದ್ದರೂ ಸಹ, ವ್ಯವಸ್ಥೆಯಲ್ಲಿ ಇನ್ನೂ ಕೆಲವು ಲೋಪದೋಷಗಳು ಉಳಿದುಕೊಂಡಿವೆ. ಇವುಗಳನ್ನು ಗಂಭೀರವಾದ ಸಮಾಲೋಚನೆಗಳ ಮೂಲಕ ಆದಷ್ಟು ಬೇಗ ಬಗೆಹರಿಸಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಮುಂಬರುವ ಎಬಿವಿಪಿ ರಾಷ್ಟ್ರೀಯ ಸಭೆಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಒಡಿಶಾದಲ್ಲಿ ವಿದ್ಯಾರ್ಥಿ ಸಂಘಟನೆ ಚುನಾವಣೆಗಳಿಗೆ ಒತ್ತಾಯ:

ಒಡಿಶಾ ರಾಜ್ಯದಲ್ಲಿ 2018 ರಿಂದ ವಿದ್ಯಾರ್ಥಿ ಸಂಘಗಳ ಚುನಾವಣೆಗಳು ನಡೆಯದೆ ಬಾಕಿ ಇರುವ ಕುರಿತು ಕಳವಳ ವ್ಯಕ್ತಪಡಿಸಿದ ಸೋಲಂಕಿ, ಕ್ಯಾಂಪಸ್ ಚುನಾವಣೆಗಳನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಎಬಿವಿಪಿ ಪರವಾಗಿ ಕಟ್ಟುನಿಟ್ಟಿನ ಒತ್ತಾಯ ಮಾಡಿದರು. ಈ ಹಿಂದೆ ಈ ವಿಷಯವಾಗಿ ಒಡಿಶಾ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ನೆನಪಿಸಿದ ಅವರು, ರಾಜ್ಯದ ನೂತನ ಸರ್ಕಾರವು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶೀಘ್ರದಲ್ಲೇ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಮೇ 29 ರಿಂದ ಆರಂಭವಾಗಲಿರುವ ಈ ಮೂರು ದಿನಗಳ ರಾಷ್ಟ್ರೀಯ ಸಭೆಯಲ್ಲಿ ದೇಶಾದ್ಯಂತದ ಒಟ್ಟು 484 ಪ್ರಮುಖ ಪ್ರತಿನಿಧಿಗಳು, ಶೈಕ್ಷಣಿಕ ತಜ್ಞರು ಮತ್ತು ವಿದ್ಯಾರ್ಥಿ ನಾಯಕರು ಭಾಗವಹಿಸಲಿದ್ದಾರೆ. ಸಭೆಯ ಮುನ್ನಾದಿನದಂದು ಆಯೋಜಿಸಲಾಗಿರುವ ನಾಗರಿಕ ಸತ್ಕಾರ ಸಮಾರಂಭದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮೇ 27 ರಂದು ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಹಾಗೂ ಮೇ 28 ರಂದು ವಿವಿಧ ಸಾಂಸ್ಥಿಕ ವಿಭಾಗಗಳ ಸಭೆಗಳು ಜರುಗಲಿದ್ದು, ಒಟ್ಟಾರೆ ದೇಶದ ಭದ್ರತೆ, ಶಿಕ್ಷಣ ವ್ಯವಸ್ಥೆ, ಸಾಮಾಜಿಕ-ಆರ್ಥಿಕ ಸವಾಲುಗಳು ಮತ್ತು ಯುವಕರ ಪಾತ್ರದ ಕುರಿತು ಈ ಮೂರು ದಿನಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯಲಿವೆ ಎಂದು ಸೋಲಂಕಿ ವಿವರ ನೀಡಿದರು.

You cannot copy content of this page

Exit mobile version