ಚನ್ನರಾಯಪಟ್ಟಣ: ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆ ತನ್ನೊಂದಿಗಿರುವ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಸಿದ ಯುವಕನೊಬ್ಬ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ನುಂಗಿಸಿದ್ದ ಆರೋಪದಡಿ ತಾಲ್ಲೂಕಿನ ಹಿರೀಸಾವೆ ಪೊಲೀಸರು ಶನಿವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಿರೀಸಾವೆ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಚಂದ್ರಶೇಖರ (ಮನು) ಎಂಬ ಯುವಕ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಅವಧಿಯಲ್ಲಿ ಅವನು ಬಾಲಕಿಯ ಮೇಲೆ ಹಲವಾರು ಬಾರಿ ಬಲವಂತವಾಗಿ ದೌರ್ಜನ್ಯ ಎಸಗಿದ್ದನು. ಇದರಿಂದ ಆಕೆ ಗರ್ಭಿಣಿಯಾಗಿದ್ದಳು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ಮಾಸಿಕ ಋತುಚಕ್ರ ತಪ್ಪಿದ ಬಗ್ಗೆ ಆರೋಪಿಗೆ ಮಾಹಿತಿ ನೀಡಿದಾಗ ಆತ ಪ್ರೆಗ್ನೆನ್ಸಿ ಕಿಟ್ ತಂದುಕೊಂಡು ಪರೀಕ್ಷೆ ನಡೆಸಲು ಸೂಚಿಸಿದ್ದ. ಪರೀಕ್ಷೆಯಲ್ಲಿ ಬಾಲಕಿ ಗರ್ಭವತಿಯಾಗಿರುವುದು ದೃಢಪಟ್ಟಿದ್ದರಿಂದ ಆತಂಕಗೊಂಡು ಪುನಃ ಆರೋಪಿಗೆ ಮಾಹಿತಿ ನೀಡಿದ್ದಾಳೆ.
ಆಗ ಆರೋಪಿ ತನ್ನ ಸ್ನೇಹಿತ ಚಿನ್ಮಯಿ ಎಂಬವನೊಂದಿಗೆ ವಿಚಾರ ಹಂಚಿಕೊಂಡಿದ್ದಾನೆ. ಇಬ್ಬರೂ ಸೇರಿ ಗರ್ಭಪಾತದ ಮಾತ್ರೆಗಳನ್ನು ಖರೀದಿಸಿ ಬಾಲಕಿಗೆ ಬಲವಂತವಾಗಿ ನುಂಗಿಸಿದ್ದು, ಇದರಿಂದ ಬಾಲಕಿಗೆ ಗರ್ಭಪಾತವಾಗಿತ್ತು ಎಂದು ದೂರಲಾಗಿದೆ.
ಕೆಲವು ದಿನಗಳ ಬಳಿಕ ಬಾಲಕಿಯ ನಡವಳಿಕೆ ಕುರಿತು ತಾಯಿಗೆ ಅನುಮಾನ ಬಂದು, ಆಕೆಯನ್ನು ಬೆಂಗಳೂರಿನ ಸಂಬಂಧಿಯೊಬ್ಬರ ಮನೆಗೆ ಕಳುಹಿಸಿದ್ದರು. ಅಲ್ಲಿ ಆಕೆಯ ಬ್ಯಾಗ್ ಪರಿಶೀಲಿಸಿದ ಸಂಬಂಧಿಗೆ ಗರ್ಭಪಾತದ ಮಾತ್ರೆಗಳು ಪತ್ತೆಯಾಗಿವೆ. ಆಕೆಯನ್ನು ಮನೆಗೆ ಕರೆತಂದು ವಿಚಾರಣೆ ನಡೆಸಿದ ತಾಯಿಗೆ ಮಗಳು ಎಲ್ಲ ವಿಷಯ ತಿಳಿಸಿದ್ದಾಳೆ. ಬಳಿಕ ತಾಯಿ ಹಿರೀಸಾವೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿ ಚಂದ್ರಶೇಖರನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಚಿನ್ಮಯಿ ಪರಾರಿಯಾಗಿದ್ದಾನೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.