ಹಾಸನ : ತಾಲೂಕಿನಲ್ಲಿ ನಡೆದ ಅನಿರೀಕ್ಷಿತ ಅಪಘಾತದ ಘಟನೆಯಿಂದ ಹೃದಯಕ್ಕೆ ನೋವನ್ನುಂಟು ಮಾಡಿದ್ದು, ನಾವು ಕೂಡ ದುಃಖದಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಎರಡು ನಿಮಿಷ ಮೌನ ಆಚರಿಸಿ ಶಾಂತಿ ಕೋರಿದ್ದೇವೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಈ ಕಾರ್ಯಕ್ರಮ ಅನಿವಾರ್ಯವಾಗಿ ಆಚರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೋವಿನಿಂದ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನನ್ನ ಮತ ನನ್ನ ಹಕ್ಕು ಬಗ್ಗೆ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಡೆದ ಭೀಕರ ಅಪಘಾತದಿಂದ ಉಂಟಾದ ದುಃಖದ ನೆರಳಿನಲ್ಲೇ ಈ ಬಾರಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನೆರವೇರಿತು. ಇತ್ತೀಚೆಗೆ ಪುಟಾಣಿ ಮಕ್ಕಳನ್ನು ಬಲಿ ಪಡೆದ ಅನಿರೀಕ್ಷಿತ ಅಪಘಾತದಲ್ಲಿ ಸುಮಾರು ೧೦ ಜನರು ಮೃತಪಟ್ಟಿದ್ದು, ಇಡೀ ಜಿಲ್ಲೆ ದುಃಖದಲ್ಲಿ ಮುಳುಗಿದ ಸಂದರ್ಭದಲ್ಲಿ, “ನನ್ನ ಮತ ನನ್ನ ಹಕ್ಕು” ಎಂಬ ಘೋಷಣೆಯಡಿ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿ ಜರುಗಿದೆ. ಈ ದುರ್ಘಟನೆ ಹೃದಯಕ್ಕೆ ನೋವುಂಟುಮಾಡಿದೆ. ಪುಟಾಣಿ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳ ನೋವು, ನಷ್ಟವನ್ನು ಯಾರೂ ಭರಿಸಲಾಗುವುದಿಲ್ಲ. ಆದರೆ, ನಾವು ಅವರ ದುಃಖದಲ್ಲಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ. ಇಂದು ನಾವು ೨ ನಿಮಿಷ ಮೌನ ಆಚರಿಸಿ ಮೃತರಿಗೆ ಶಾಂತಿ ಕೋರುತ್ತೇವೆ” ಎಂದು ಭಾವಪೂರ್ಣವಾಗಿ ಹೇಳಿದರು. ಸೆಪ್ಟೆಂಬರ್ ೧೫ ಅನ್ನು ವಿಶ್ವದಾದ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ‍್ಯಾಲಿ ಏರ್ಪಡಿಸಲಾಯಿತು. ಆದರೆ ಈ ಬಾರಿಯ ಆಚರಣೆಯು ನೋವಿನಿಂದ ಕೂಡಿತ್ತು. “ಮನಸ್ಸಿನಲ್ಲಿ ಅಗಾದ ನೋವಿನ ನಡುವೆಯೂ ಈ ದಿನವನ್ನು ಆಚರಿಸುವುದು ಅವಶ್ಯಕ. ಜಿಲ್ಲೆಯ ಪ್ರತಿನಿಧಿಗಳು ರಾಜ್ಯ ಮಟ್ಟದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಈ ಕಾರ್ಯಕ್ರಮವನ್ನು ನಿರ್ವಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾಧಿಕಾರಿ ಲತಾಕುಮಾರಿ ಸ್ವತಃ ಬುಲೆಟ್ ಬೈಕ್ ಹತ್ತಿ ಚಾಲನೆ ನೀಡಿ ಎಲ್ಲರ ಗಮನ ಸೆಳೆದರು. ಅಧಿಕಾರಿಗಳ ಈ ಉತ್ಸಾಹದೊಂದಿಗೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಯಿತು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಹಲವಾರು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.