Home ರಾಜ್ಯ ಬೀದರ್ ಕೆಪಿಎಸ್‌ಸಿ ಅಕ್ರಮ ಹಣದಿಂದ ಕೃಷಿ ಭೂಮಿ ಖರೀದಿಸಿ, ಸುಸಜ್ಜಿತ ಹಾಲಿನ ಡೇರಿ ಸ್ಥಾಪಿಸಿದ – ಆರೋಪಿ

ಕೆಪಿಎಸ್‌ಸಿ ಅಕ್ರಮ ಹಣದಿಂದ ಕೃಷಿ ಭೂಮಿ ಖರೀದಿಸಿ, ಸುಸಜ್ಜಿತ ಹಾಲಿನ ಡೇರಿ ಸ್ಥಾಪಿಸಿದ – ಆರೋಪಿ

0

ಬೀದರ್: ಕೆಪಿಎಸ್‌ಸಿ‌ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದ (Illegal) ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಅಕ್ರಮ ಹಣದಿಂದಲೇ ಭಾಲ್ಕಿಯಲ್ಲಿ (Bhalki) ಕೋಟ್ಯಂತರ ರೂಪಾಯಿ ಮೌಲ್ಯದ ಕೃಷಿ ಭೂಮಿ ಖರೀದಿಸಿ, ಸುಸಜ್ಜಿತ ಹಾಲಿನ ಡೇರಿ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ.

ಕೆಲವೇ ವರ್ಷಗಳ ಹಿಂದೆ ಸಾಮಾನ್ಯ ಮಟ್ಟದಲ್ಲಿದ್ದ ಈತ, ಭಾಲ್ಕಿ-ಭಾತಂಬ್ರಾ ಮುಖ್ಯರಸ್ತೆಯ ಬಳಿ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಎಂಟು ಎಕರೆಗೂ ಅಧಿಕ ಫಲವತ್ತಾದ ಕೃಷಿ ಜಮೀನು ಖರೀದಿಸಿದ್ದಾನೆ. ಅಕ್ರಮವಾಗಿ ಗಳಿಸಿದ ಹಣವನ್ನು ವೈಟ್ ಮಾಡಿಕೊಳ್ಳುವ ಉದ್ದೇಶದಿಂದಲೇ ‘ಭಗವತಿ ಹೈನುಗಾರಿಕೆ’ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನದ ಬೃಹತ್ ಡೇರಿ ಘಟಕ ಸ್ಥಾಪಿಸಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ನೆರೆಯ ಗುಜರಾತ್ ಮತ್ತು ಮಹಾರಾಷ್ಟ್ರಗಳಿಂದ ತಂದ ಮುರ್ರಾ ತಳಿಯ ಎಮ್ಮೆಗಳೊಂದಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಈ ಹೈನುಗಾರಿಕೆ ಘಟಕವನ್ನು ನಿರ್ಮಿಸಲಾಗಿತ್ತು. 2025ರ ಡಿಸೆಂಬರ್ 10ರಂದು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಈ ಡೇರಿಯನ್ನು ಅತ್ಯಂತ ಅದ್ಧೂರಿಯಾಗಿ ಉದ್ಘಾಟಿಸಲಾಗಿತ್ತು. ಪ್ರಸ್ತುತ ಈ ಡೇರಿಯಲ್ಲಿ 25ಕ್ಕೂ ಹೆಚ್ಚು ಮುರ್ರಾ ಎಮ್ಮೆಗಳು, ಒಂದು ಆಕರ್ಷಕ ಕೋಣ, ಎರಡು ದೇಸಿ ಹಸುಗಳು ಹಾಗೂ 10ಕ್ಕೂ ಹೆಚ್ಚು ಕರುಗಳಿವೆ. ಇಲ್ಲಿ ಪ್ರತಿದಿನ 250 ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದ್ದು, ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜಮೀನಿನಲ್ಲಿಯೇ ಹಸಿರು ಮೇವು ಬೆಳೆಯಲಾಗುತ್ತಿದ್ದು, ಈ ಇಡೀ ಡೇರಿಯ ನಿರ್ವಹಣೆಯನ್ನು ಬಸವರಾಜನ ತಂದೆ ನಾಗನಾಥ ನೋಡಿಕೊಳ್ಳುತ್ತಿದ್ದಾರೆ.

ಭಾಲ್ಕಿ ತಾಲೂಕಿನ ಡೋಣಗಾಪುರ ಮೂಲದ ಬಸವರಾಜ ಕನ್ನಾಳೆ ಅವರ ತಂದೆ ಸಮಾಜ ಕಲ್ಯಾಣ ಇಲಾಖೆಯ ನೌಕರರಾಗಿದ್ದರು. ಮನ್ನಾಖೇಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಔರಾದ್‌ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಸವರಾಜ, ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ. ಚಿಕ್ಕಂದಿನಿಂದಲೂ ಓದಿನಲ್ಲಿ ಜಾಣನಾಗಿದ್ದ ಈತ ಬೆಂಗಳೂರಿನಲ್ಲಿ ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಬಳಿಕ ನವದೆಹಲಿಯಲ್ಲಿ ಆರು ತಿಂಗಳು ಐಎಎಸ್ ತರಬೇತಿಯನ್ನೂ ಪಡೆದಿದ್ದ. ನಂತರ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಆಯ್ಕೆಯಾದ ಮೇಲೆ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದ. ಅಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಬೆಳೆಸಿಕೊಂಡ ಬಸವರಾಜ ತೀವ್ರವಾಗಿ ಬೆಳೆಯುತ್ತಾ ಹೋದ. ಆದರೆ, ಆತನ ಈ ಅಕ್ರಮ ವ್ಯವಹಾರಗಳ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲವೆಂದು, ಮಾಧ್ಯಮ ಹಾಗೂ ಟಿವಿ ಸುದ್ಧಿಗಳನ್ನು ನೋಡಿದ ಮೇಲೆಯೇ ಆತನ ಅಸಲಿ ವಿಚಾರ ಗೊತ್ತಾಗಿದ್ದಾಗಿ ತಂದೆ ನಾಗನಾಥ ತಿಳಿಸಿದ್ದಾರೆ.

You cannot copy content of this page

Exit mobile version