Home ದೆಹಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ – ಸುಪ್ರೀಂ ತೀವ್ರ ಬೇಸರ ಹಾಗೂ ಕಳವಳ

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ – ಸುಪ್ರೀಂ ತೀವ್ರ ಬೇಸರ ಹಾಗೂ ಕಳವಳ

0

ನವ ದೆಹಲಿ:  ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ (Delhi protest) ಮೇಲೆ ಪೊಲೀಸರು ನಡೆಸಿರುವ ಬಲಪ್ರಯೋಗದ ಘಟನೆಯ ಕುರಿತು ಸುಪ್ರೀಂ ಕೋರ್ಟ್ (Supreme court) ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತೀವ್ರ ಬೇಸರ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ಪೋಲಿಸ್ ಅಧಿಕಾರಿಗಳೇ (Delhi police) ಸ್ವತಃ ನಿಂತು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಕಷ್ಟಕರ ಹಾಗೂ ಖಂಡನೀಯ ದೃಶ್ಯ ಎಂದು ಅವರು ಹೇಳಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರ ‘ಪೋಲೀಸಿಂಗ್ ದಿ ರಿಪಬ್ಲಿಕ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, ಪೋಲಿಸ್ ವ್ಯವಸ್ಥೆಯಲ್ಲಿ ಇರಬೇಕಾದ ನಿಷ್ಪಕ್ಷಪಾತತನ ಮತ್ತು ತಾಳ್ಮೆ ಕ್ರಮೇಣ ಮಾಯವಾಗುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ ಎಂದಿದ್ದಾರೆ. ಪೋಲಿಸ್ ಪಡೆಗಳು ಸಾರ್ವಜನಿಕರ ಹಕ್ಕುಗಳನ್ನು ಉಲ್ಲಂಘಿಸದೆ ಮತ್ತು ಅತಿಯಾದ ಬಲಪ್ರಯೋಗ ಮಾಡದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಾಮಾನ್ಯ ನಾಗರಿಕರಿಗೆ ಬೀದಿಯಲ್ಲಿ ನಿಂತಿರುವ ಪೋಲಿಸ್ ಸಿಬ್ಬಂದಿಯೇ ಸರ್ಕಾರದ ಅಧಿಕಾರದ ಸಂಕೇತವಾಗಿರುತ್ತಾರೆ. ತಮಗೆ ಅನ್ಯಾಯವಾದಾಗ ಜನರು ಪೋಲಿಸರ ಬಳಿಗೆ ಧಾವಿಸುತ್ತಾರೆ, ಆದ್ದರಿಂದ ಪೋಲಿಸ್ ಇಲಾಖೆಯು ತನ್ನ ವಿಶ್ವಸನೀಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಉನ್ನತ ಮಟ್ಟದ ತನಿಖಾ ಸಮಿತಿ ರಚನೆ
ಜುಲೈ 20 ರಂದು ಜಂತರ್ ಮಂತರ್ ಮತ್ತು ಸಂಸತ್ ಭವನದ ಮಾರ್ಚ್ ವೇಳೆ ಸಿಜೆಪಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ದೆಹಲಿ ಪೋಲಿಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆರ್‌ . ಸುಭಾಷ್ ರೆಡ್ಡಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಯು ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್, ಅಶ್ರುವಾಯು, ಪೆಲೆಟ್ ಗನ್ ಹಾಗೂ ಎಲೆಕ್ಟ್ರಾನಿಕ್ ಲಾಠಿಗಳ ಬಳಕೆ ಮತ್ತು ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ಲೈಂಗಿಕ ಕಿರುಕುಳ ಹಾಗೂ ಕಿರುಕುಳದ ಆರೋಪಗಳನ್ನು ಕೂಲಂಕುಷವಾಗಿ ತನಿಖೆ ಮಾಡಲಿದೆ. ಘಟನೆಯ ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ, ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್‌ಗಳನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಕೇವಲ ಕ್ರಿಮಿನಲ್ ಹಿನ್ನೆಲೆ ಇದ್ದವರ ವಿರುದ್ಧ ಮಾತ್ರ ಪರಿಶೀಲನೆಗೆ ಸೂಚಿಸಿದೆ.

ಕಸ್ಟಡಿ ಸಾವು ಮತ್ತು ನಕಲಿ ಎನ್‌ಕೌಂಟರ್ ವಿರುದ್ಧ ವಾಗ್ದಾಳಿ
ಇದೇ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ಕಸ್ಟಡಿ ಕಿರುಕುಳ ಮತ್ತು ಸಾವುಗಳ ಕುರಿತು ಪ್ರಸ್ತಾಪಿಸಿದ ನ್ಯಾಯಮೂರ್ತಿ ಭುಯಾನ್, ಕಾನೂನಿನ ಆಡಳಿತವಿರುವ ನಾಗರಿಕ ಸಮಾಜದಲ್ಲಿ ಕಸ್ಟಡಿ ಸಾವು ಅತ್ಯಂತ ಹೇಯ ಅಪರಾಧ ಎಂದು ಬಣ್ಣಿಸಿದರು. ತನಿಖೆ ಅಥವಾ ವಿಚಾರಣೆಯ ನೆಪದಲ್ಲಿ ನಡೆಯುವ ಯಾವುದೇ ರೀತಿಯ ಹಿಂಸೆ, ಅಮಾನುಷ ಹಾಗೂ ಕ್ರೂರ ನಡವಳಿಕೆಯು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಒಬ್ಬ ನಾಗರಿಕನನ್ನು ಬಂಧಿಸಿದ ತಕ್ಷಣ ಆತನ ಮೂಲಭೂತ ಹಕ್ಕುಗಳು ರದ್ದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರಿ ರಕ್ಷಕರೇ ಕಾನೂನು ಮುರಿಯಲು ತೊಡಗಿದರೆ ಅದು ಇಡೀ ಸಮಾಜದಲ್ಲಿ ಕಾನೂನಿನ ಬಗ್ಗೆ ಅಸಡ್ಡೆ ಮತ್ತು ಅರಾಜಕತೆಯನ್ನು ಸೃಷ್ಟಿಸುತ್ತದೆ. ಯಾವುದೇ ನಾಗರಿಕ ರಾಷ್ಟ್ರ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ನಕಲಿ ಎನ್‌ಕೌಂಟರ್‌ಗಳ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ 2011ರ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದಂತೆ, ನಕಲಿ ಎನ್‌ಕೌಂಟರ್‌ಗಳು ಕಾನೂನಿನ ಆಡಳಿತದ ಮೂಲ ಸತ್ವವನ್ನೇ ನಾಶಪಡಿಸುತ್ತವೆ. ಎನ್‌ಕೌಂಟರ್ ಸಂಸ್ಕೃತಿ ಎಂಬುದು ಒಂದು ಅಪರಾಧ ಮನಸ್ಥಿತಿಯಾಗಿದ್ದು, ಅದು ಎಂದಿಗೂ ಪೋಲಿಸ್ ಕಾರ್ಯವೈಖರಿಯ ಭಾಗವಾಗಲು ಸಾಧ್ಯವಿಲ್ಲ. ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೋಲಿಸ್ ಸಿಬ್ಬಂದಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.

You cannot copy content of this page

Exit mobile version