Home ಬ್ರೇಕಿಂಗ್ ಸುದ್ದಿ ವಿದ್ಯುತ್ ತಂತಿಗಳಿಂದ ಮಲೆನಾಡಿನ ಆನೆಗಳ ಜೀವಕ್ಕೆ ಕಂಟಕವಾಗುತ್ತಿದೆ ಶಾಶ್ವತ ಪಡಿಹಾರ ಕೊಡಿ – ಹುರುಡಿ ವಿಕ್ರಮ್

ವಿದ್ಯುತ್ ತಂತಿಗಳಿಂದ ಮಲೆನಾಡಿನ ಆನೆಗಳ ಜೀವಕ್ಕೆ ಕಂಟಕವಾಗುತ್ತಿದೆ ಶಾಶ್ವತ ಪಡಿಹಾರ ಕೊಡಿ – ಹುರುಡಿ ವಿಕ್ರಮ್

0

ಹಾಸನ : ಸಕಲೇಶಪುರ, ಆಲೂರು ಹಾಗೂ ಬೇಲೂರು ಭಾಗಗಳಲ್ಲಿ ಪ್ರತಿವರ್ಷ ನಡೆಯುವ ಆನೆಗಳ ನೈಸರ್ಗಿಕ ವಲಸೆಯ ಮಾರ್ಗವೇ ಇದೀಗ ಅವುಗಳ ಪಾಲಿಗೆ ಮರಣದಂಡನೆಯಾಗುತ್ತಿದೆ. ವಿದ್ಯುತ್ ತಂತಿ, ಕಂಬಗಳು, ಗಣಿಗಾರಿಕೆ ಹಾಗೂ ಕಾರಿಡಾರ್‌ಗಳಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಅಡೆತಡೆಗಳಿಂದ ಆನೆಗಳು ನಿರಂತರವಾಗಿ ಸಾವಿಗೀಡಾಗುತ್ತಿದ್ದರೂ ಅರಣ್ಯ ಮತ್ತು ವಿದ್ಯುತ್ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಕಾಡು ರಕ್ಷಣಾ ಸಂಸ್ಥೆ ಅಧ್ಯಕ್ಷ ಹುರುಡಿ ವಿಕ್ರಮ್ ಅವರು ಆರೋಪಿಸಿದರು. ಪ್ರತಿವರ್ಷ ಸೆಪ್ಟೆಂಬರ್‌ ವೇಳೆಗೆ ಸಕಲೇಶಪುರ–ಆಲೂರು ಭಾಗದಿಂದ ಬೇಲೂರು ಮೂಲಕ ಜಬ್ಬಾರನಹಳ್ಳಿ ಭಾಗಕ್ಕೆ ಆನೆಗಳು ವಲಸೆ ಹೋಗುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ನೈಸರ್ಗಿಕ ಪ್ರಕ್ರಿಯೆ. ಆನೆಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬುದು ಅಧಿಕಾರಿಗಳಿಗೆ ತಿಳಿದಿದ್ದರೂ, ಅವುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದ ಪರಿಣಾಮ ವಿದ್ಯುತ್ ತಂತಿಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ ಎಂದು ದೂರಿದರು.

ಕಳೆದ ಎರಡು–ಮೂರು ವರ್ಷಗಳಲ್ಲಿಯೂ ಸಕಲೇಶಪುರ, ಆಲೂರು, ಮೂಡಿಗೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಹಲವು ಆನೆಗಳು ಮೃತಪಟ್ಟಿವೆ. ಈ ಹಿಂದೆ ತಾಯಿ ಆನೆ ಮೃತಪಟ್ಟ ಬಳಿಕ ಮರಿಯಾನೆಯೂ ಅನಾಥವಾದ ಘಟನೆಗಳೂ ನಡೆದಿವೆ ಎಂದರು. ಆನೆಗಳ ಸಂಚಾರವಿರುವ ಪ್ರದೇಶಗಳಲ್ಲಿ ಕನಿಷ್ಠ 9 ಮೀಟರ್ ಎತ್ತರದ ವಿದ್ಯುತ್ ಕಂಬಗಳನ್ನು ಅಳವಡಿಸಿ, ತಂತಿಗಳು ಆನೆಗಳ ಸೊಂಡಿಲಿಗೂ ತಾಗದಂತೆ ವೈಜ್ಞಾನಿಕ ವ್ಯವಸ್ಥೆ ಮಾಡಬೇಕು. ಆನೆ ಸಾವು ಸಂಭವಿಸಿದ ಪ್ರತಿಯೊಂದು ಪ್ರಕರಣದಲ್ಲೂ ಸಂಬಂಧಪಟ್ಟ ಜೆಇ, ಲೈನ್‌ಮನ್ ಹಾಗೂ ಅರಣ್ಯಾಧಿಕಾರಿಗಳ ಜವಾಬ್ದಾರಿ ನಿಗದಿಪಡಿಸಿ, ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರ ಜೊತೆಗೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು, ಅವುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಸುವುದು ಅಥವಾ ರೈಲ್ವೆ ಮಾದರಿಯ ಬ್ಯಾರಿಕೇಡ್‌ಗಳನ್ನು ನಿರ್ಮಿಸುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆನೆಗಳ ನೈಸರ್ಗಿಕ ವಾಸಸ್ಥಾನ ಮತ್ತು ಕಾರಿಡಾರ್‌ಗಳನ್ನು ಉಳಿಸುವುದೇ ಶಾಶ್ವತ ಪರಿಹಾರ ಎಂದು ಒತ್ತಿ ಹೇಳಿದರು.

ಆನೆಗಳ ಕಾರಿಡಾರ್‌ಗಳಲ್ಲಿ ಗಣಿಗಾರಿಕೆ, ಬಂಡೆ ಸ್ಫೋಟ ಹಾಗೂ ಇತರ ಚಟುವಟಿಕೆಗಳಿಂದ ಅವುಗಳ ನೈಸರ್ಗಿಕ ಸಂಚಾರ ಮಾರ್ಗಗಳು ಹಾಳಾಗುತ್ತಿವೆ. ಆನೆಗಳು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳಗಳೇ ಇಂದು ಅಡೆತಡೆಗಳಿಂದ ಕೂಡಿವೆ. ಆದ್ದರಿಂದ ಆನೆ ಕಾರಿಡಾರ್‌ಗಳಲ್ಲಿ ಇರುವ ಎಲ್ಲ ಅಕ್ರಮ ಹಾಗೂ ಅನಗತ್ಯ ಅಡೆತಡೆಗಳನ್ನು ತೆರವುಗೊಳಿಸಿ, ಅವುಗಳ ನೈಸರ್ಗಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ. ಆನೆಗಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವ ಔಷಧೋಪಚಾರ ಹಾಗೂ ಅರಿವಳಿಕೆ ಪ್ರಕ್ರಿಯೆಗಳ ಬಗ್ಗೆ ತಜ್ಞರಿಂದ ವೈಜ್ಞಾನಿಕ ಅಧ್ಯಯನ ನಡೆಸಬೇಕು. ವಿಶೇಷವಾಗಿ ಗರ್ಭಿಣಿ ಆನೆಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಹಿಂದೆ ಚಿಕಿತ್ಸೆ ಪಡೆದ ಬಳಿಕ ಆನೆಗಳು ಮೃತಪಟ್ಟಿರುವ ಪ್ರಕರಣಗಳನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆನೆಗಳನ್ನು ರಕ್ಷಿಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೇಡಿಯೋ ಕಾಲರ್, ಬ್ಯಾರಿಕೇಡ್‌ಗಳನ್ನು ಅಳವಡಿಸುವುದಕ್ಕಿಂತ ಮೊದಲು ಅವುಗಳ ವಾಸಸ್ಥಾನ ಮತ್ತು ನೈಸರ್ಗಿಕ ಕಾರಿಡಾರ್‌ಗಳನ್ನು ರಕ್ಷಿಸಬೇಕು. ವಿದ್ಯುತ್ ತಂತಿ ಹಾಗೂ ಮಾನವ ನಿರ್ಮಿತ ಅಡೆತಡೆಗಳಿಂದ ಮತ್ತೊಂದು ಆನೆ ಬಲಿಯಾಗುವ ಮುನ್ನ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

You cannot copy content of this page

Exit mobile version