ಹಾಸನ : ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ಸಾಲದ ಹಣ ವಾಪಸ್ ನೀಡುವಂತೆ ಕೇಳಿದ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮನ್ಸೂರ್ ಪಾಷಾ (38) ಕೊಲೆಯಾದ ವ್ಯಕ್ತಿಯಾಗಿದ್ದು, ಸನಾವುಲ್ಲಾ (50) ಹಾಗೂ ಆತನ ಪತ್ನಿ ಜರೀನಾ ಭಾನು (45) ಆರೋಪಿಗಳಾಗಿದ್ದಾರೆ. ಒಂದು ವರ್ಷದ ಹಿಂದೆ ಮನ್ಸೂರ್ ಪಾಷಾ ಬಳಿ ಸನಾವುಲ್ಲಾ ₹40 ಸಾವಿರ ಸಾಲ ಪಡೆದಿದ್ದ ಎನ್ನಲಾಗಿದ್ದು, ಹಣ ವಾಪಸ್ ನೀಡುವಂತೆ ಮನ್ಸೂರ್ ಪಾಷಾ ಒತ್ತಾಯಿಸುತ್ತಿದ್ದರು. ಸಾಲದ ವಿಚಾರವನ್ನು ಕೆಲವರ ಬಳಿ ಹೇಳಿದ್ದಕ್ಕೆ ಸನಾವುಲ್ಲಾ ಮನ್ಸೂರ್ ಪಾಷಾ ಮೇಲೆ ಕೋಪಗೊಂಡಿದ್ದರು.
ಸಂಬಂಧಿಕರ ಮನೆಗೆ ಬಂದಿದ್ದ ಮನ್ಸೂರ್ ಪಾಷಾ ಜೊತೆ ಇದೇ ವಿಚಾರಕ್ಕೆ ಸನಾವುಲ್ಲಾ ಜಗಳ ತೆಗೆದಿದ್ದು, ಬಳಿಕ ಜಗಳ ತಾರಕಕ್ಕೇರಿ ಸನಾವುಲ್ಲಾ ಹಾಗೂ ಜರೀನಾ ಭಾನು ಮನ್ಸೂರ್ ಪಾಷಾ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ಮನ್ಸೂರ್ ಪಾಷಾ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ನಂತರ ಮುಜಾಹಿದ್ ಖಾನ್ ಎಂಬುವವರು ಮನ್ಸೂರ್ ಪಾಷಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸನಾವುಲ್ಲಾ ಹಾಗೂ ಜರೀನಾ ಭಾನು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
