ಹಾಸನ : ಸಕಲೇಶಪುರ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಜಿರಳೆಗಳ ಕಾಟದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಘಟನೆ ನಡೆದಿದೆ. KA-18-F-1014 ನೋಂದಣಿ ಸಂಖ್ಯೆಯ ಈ ಬಸ್ ಸಕಲೇಶಪುರದಿಂದ ಬೆಂಗಳೂರಿಗೆ ಸಂಚರಿಸುವ ತಡೆರಹಿತ ಬಸ್ ಆಗಿದೆ. ಬಸ್‌ನೊಳಗೆ ಜಿರಳೆಗಳು ಓಡಾಡುತ್ತಿರುವುದು ಕಂಡುಬಂದಿದ್ದು, ಪ್ರಯಾಣಿಕರ ಆಸನಗಳ ಸುತ್ತ ಹಾಗೂ ಬಸ್‌ನ ವಿವಿಧ ಭಾಗಗಳಲ್ಲಿ ಜಿರಳೆಗಳ ಹಾವಳಿ ಕಂಡುಬಂದಿದೆ. ಕೆಲ ಜಿರಳೆಗಳು ಪ್ರಯಾಣಿಕರ ಮೇಲೆ ಓಡಾಡಿದ್ದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿರಳೆಗಳ ಕಾಟದಿಂದ ಬೇಸತ್ತ ಪ್ರಯಾಣಿಕರು ಬಸ್‌ನೊಳಗೆ ಸೂಕ್ತ ರೀತಿಯಲ್ಲಿ ಔಷಧಿ ಸಿಂಪಡಿಸಿ ಸ್ವಚ್ಛಗೊಳಿಸುವಂತೆ ಚಾಲಕ ಹಾಗೂ ನಿರ್ವಾಹಕರಿಗೆ ಒತ್ತಾಯಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಬಸ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಕೀಟನಾಶಕ ಔಷಧಿ ಸಿಂಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಸಕಲೇಶಪುರ ಘಟಕದ ಬಹುತೇಕ ಬಸ್‌ಗಳಲ್ಲಿಯೂ ಜಿರಳೆಗಳ ಹಾವಳಿ ಇದೆ ಎಂಬ ಆರೋಪ ಕೇಳಿಬಂದಿದ್ದು, ಸಾರಿಗೆ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
